ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು
“ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”. ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯೆದ್ದು
“ಎಲೆ ಮೇರುಪರ್ವತವೆ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಚ್ಚಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು.
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
“ಲೇಸಾಯ್ತು ನಿನ್ನ ನುಡಿ! ಮುಸಿಯದೆಯೆ ವಿಸ್ತಾರ
ಸಾಗರದ ಹನಿಗಿನಿಯುಮೆನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು”
ಎಂದಾಗ ಸಾಮರ್ಥ್ಯದುನ್ನತಿಯನಾಡಿತ್ತು.
ಪಂಥಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗಸು
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು. ಆಗ ನಿರ್ದೇಹದಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.

“ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯೆನಗೊಪ್ಪು
ನಕ್ಕ ಮಾನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹನಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದದು
ಆಗಲೇ ಆಗುವುದು.”
*****