ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು
ಹೊಡೆಮರಳಿ ಕಾಡುವವು ಯಾಕೋ?
ಸಮೃದ್ಧ ಸಂಸಾರ ಎಂದುಕೊಂಡರೂ
ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ?
ಬಿಗಿವ ಬಿಗಿಸುವ ಬಗಿವ ಬಗ್ಗಿಸುವ
ಸಂಬಂಧ ಅನುಬಂಧಗಳು
ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ?
ಜನನ ಮರಣದ ಗುಟ್ಟು
ಬೀಜ ವೃಕ್ಷದ ನ್ಯಾಯ
ಇಂಚಿಂಚು ಹಿರಿದು ಅರೆದು
ಹಿಂಜ ಹೊರಟರೂ ಹಾಗೆ ಗಹನ
ಅಗಮ್ಯವಾಗುವುದು ಯಾಕೋ?
ಇನ್ನಿಲ್ಲವೆಂದು ಕೊಂಡ ಇಂಬು
ಒಳಗಣ ಹಾದಿಯಲಿ ಸಜ್ಜಿಕೆಯ ಹಾಸುವುದು ಯಾಕೋ?
ಸುಖ ದುಃಖಗಳ ಪ್ರತಿಹತಗಳ ಪ್ರತಿಮೆ
ಕರಿಮೋಡದಂಚಿಗೆ ಬೆಳ್ಳಿ ಜರಿ ಸಿಂಗಾರ
ಬದುಕು ಚಮತ್ಕಾರ
*****