ಒಮ್ಮೆ ನೂರು ಮಂದಿ ಮನುಷ್ಯರು ಸಿಕ್ಕಿಬಿದ್ದರು
ಒಂದು ದ್ವೀಪದಲ್ಲಿ. ಮೊದಲು ಅವರು ಅಲ್ಲಿನ
ಸಸ್ಯಗಳನ್ನು ತಿಂದರು. ನಂತರ ಅಲ್ಲಿನ ಪ್ರಾಣಿಗಳನ್ನು
ಮುಗಿಸಿದರು. ನಂತರ ತಮ್ಮಲೊಬ್ಬರನ್ನು
ವಾರಕ್ಕೊಂದರಂತೆ ತಿಂದರು. ಕೊನೆಗುಳಿದವನು
ಒಬ್ಬನೇ ಒಬ್ಬ. ಅವನು ಮೊದಲು ತನ್ನ ಪಾದದ
ಬೆರಳುಗಳನ್ನು ತಿಂದ. ನಂತರ ಪಾದಗಳನ್ನು ತಿಂದ.
ನಂತರ ಕೈಬೆರಳುಗಳನ್ನು ತಿಂದ. ನಂತರ
ಕೈಗಳನ್ನು ತಿಂದ. ನಂತರ ಕಣ್ಣು ಕಿವಿ ಮೂಗುಗಳನ್ನು
ಒಂದೊಂದಾಗಿ ತಿಂದ. ಕೊನೆಗೆ ತನ್ನ ತಲೆಯನ್ನೇ
ತಿನ್ನತೂಡಗಿದ! ಅರೆ! ಇದು ಹೇಗೆ ಸಾಧ್ಯವೆಂದು
ಕೇಳದಿರಿ. ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ
ಈಗ ಇಂಥ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.
*****