ನೀರಿಲ್ಲ ನೆರಳಿಲ್ಲ
ಹೊರಗೆ ಕಾಲಿಡುವಂತಿಲ್ಲ
ಅಂಥ ಕಡು ಬೇಸಗೆಯಲ್ಲಿ
ಹಿಮಾಲಯದಿಂದೊಬ್ಬ ಹಿಮ ಮಾನವ
ಹೈದರಾಬಾದಿಗೆ ಬಂದು ಕುಳಿತನು
ಒಂದು ದೊಡ್ಡ ಬಂಡೆಯ ಮೇಲೆ

ಅದೇನು ವಿಚಿತ್ರ!
ತಣ್ಣಗಾಯಿತು ಹವೆ ಒಮ್ಮೆಲೆ
ಹುಲ್ಲು ಕಮರಿದಲ್ಲಿ
ನೆಲ ಬಿರಿದಲ್ಲಿ
ಎದ್ದವು ನೀರ ಬುಗ್ಗೆಗಳು
ತುಂಬಿತು ಕೆರೆ ಹಳ್ಳ
ಒದ್ದೆಯಾಯಿತು ರಸ್ತೆ

ಇನ್ನೇನು ಪರವಾಯಿಲ್ಲಿವೆಂದು
ಜನ ನಿಟ್ಟುಸಿರು ಬಿಟ್ಟರು

ಇತ್ತ ಹಿಮಮಾನವ ಮಾತ್ರ
ನೆಟ್ಟ ದೃಷ್ಟಿಯಲಿ ಕುಳಿತಿದ್ದವನು
ಕರಗುತ್ತಲೇ ಇದ್ದನು
ಮೊದಲವನ ಕೈಕಾಲುಗಳು ಕರಗಿದುವು
ಕಣ್ಣುಗಳು ಕರಗಿದುವು
ತಲೆ ಕರಗಿತು ಹೊಟ್ಟೆ ಕರಗಿತು

ಶಿಶ್ನ ಕರಗಿತು
ಕೊನೆಗುಳಿಯಿತೊಂದು ಬರ್ಫದ ತುಂಡು
ಆಮೇಲೆ ಅದೂ ಕರಗಿತು

ಬಂಡೆಯೊಂದೇ ಉಳಿದುದು
ಖೈರತಾಬಾದಿನಲಿ ಕರಗದೆ
ಇನ್ನೊಂದು ಬೇಸಿಗೆಗೆ
ಇನ್ನೊಬ್ಬ ಹಿಮಮಾನವನು
ಬರುವನೇ ಬಾರನೆ
ಕವಿಯೇ ಹೇಳು!
*****