ಹೊನ್ನ ವಿಷದ ಹಲ್ಲು ಧರಿಸಿ
ಇನ್ನು ಹೆಡೆಯನೆತ್ತಿ ಮೆರೆದ
ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ |

ತನ್ನ ಕಾರ್ಯಕೊಲಿದು ಬಂದು
ಬನ್ನ ಬವಣಿಗಿಳಿಸಿ ಅವರ
ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ ||

ಕಲಿತ ವಿದ್ಯೆಯಿಂದ ಮದಿಸಿ,
ಕಲಿತುಕೊಳದೆ ಉಳಿದ ಜನರ
ಕುಲವೆ ಬೇರೆ ತಮ್ಮದೆಂದು ತಿಳಿದ ಜನರನು |

ಒಲಿಸಿ ತನ್ನ ದೀಕ್ಷೆಯಿತ್ತು
ಬಿಳಿಯ ವೇಷದುಡಿಗೆ ಕೊಟ್ಟು
ಕೊಳೆಯ ಕಳೆವ ಬಿರುದುತೊಟ್ಟ ದೀನಬಂಧುವು || ೨ ||

ಉಚ್ಚ ಧರ್ಮದವರ ಹೆಮ್ಮೆ
ಬಚ್ಚಗೊಳಿಸಿ ಅವರ ಮನಸು
ಅಚ್ಚ ಸೇವೆಗೆಳಸಿ ಪೂರ್ವಕರ್ಮ ಕೆಡಿಸಲು |

ಸ್ವಚ್ಛ ಮಾರ್ಗವನ್ನು ತೋರಿ
ನಿಚ್ಚ ಬಾಳು ಬೆಳಗುವಂತೆ
ಕೃಚ್ಛವ್ರತವ ಹಳಿವ ಹೊಲೆಯ ಕಳೆವತವಸಿಯೆ || ೩ ||

“ರಾಜಕಾರ್ಯ ಮತ್ತೆ ಆ ಸ-
ಮಾಜ ಧರ್ಮಗಳಲ್ಲಿ ತಮಗೆ
ಮೂಜಗದೊಳು ಯಾರುಸರಿಯು” ಎನುವ ಬಿಳಿಯರ |

ತೇಜವಡಗುವಂತೆ ದಿವ್ಯ-
ರಾಜಧರ್ಮ ಮೆರೆಸಿ ವರ ಸ-
ಮಾಜ ಮಾರ್ಗ ತೊಳಗಿಸಿರುವ ಪೂರ್ಣಜೀವಿಯು || ೪ ||
*****

ಸಿಂಪಿ ಲಿಂಗಣ್ಣ

Latest posts by ಸಿಂಪಿ ಲಿಂಗಣ್ಣ (see all)