ತಂಗಾಳಿ ಸೂಸಿ ಹಾಡಿದ ಜೋಗುಳ
ನಿಶ್ಶಬ್ದ ರಾತ್ರಿಯಲಿ ಜುಳು ಜುಳು
ನದಿಯೊಡಲ ತುಂಬ ಅವನ ಧ್ಯಾನ
ಬಾನ ಬುಡದಲಿ ಚಂದಿರನ ಬೆಳಕು
ಅವಳು ಕಾದಳು ಅವನ ಕೊಳಲನಾದಕ್ಕಾಗಿ.
ಹೂವಿನ ಪಕಳೆ ತುಂಬ ಗಂಧ
ವಲಸೆ ಹೋದ ಹಕ್ಕಿಗಳ ನೆರಳು
ತೆನೆ ತೂಗಿದ ಬಯಲ ಆಲಯ
ಮೌನವರಿಸಿದೆ ಕನವರಿಸಿದ ಕನಸುಗಳು
ಅವಳು ಕಾದಳು ಅವನ ಬಾಹು ಬಂಧನಕೆ.
ಮರೆಯದ ನೆನಪಿನ ಜಾಲ
ಬಳ್ಳಿಯಲಿ ಅರಳಿದ ದುಂಡು ಮಲ್ಲಿಗೆ
ದುಂಬಿಯ ಹಾರಾಟಕೆ ಮುದ
ಹೂ ತೋಟದ ತುಂಬ ಏಕಾಂತ ಸಂಜೆ
ಅವಳು ಕಾದಳು ಸಖ್ಯ ಸಖ್ಯ ಅನುಪಮದಲಿ.
ಅಂತರಾತ್ಮದ ಪಿಸುಗುಡುವ ಹಾಡು
ಅಂತರ್ಯವ ಕಲುಕಿ ಕರಗಿ
ಕಪ್ಪಿನ ಮೌನ ಕತ್ತಲೆ ರಾತ್ರಿ ಸರಿದು
ಸೂರ್ಯ ಉದಯಿಸಿದ ಉನ್ಮಾದದಲಿ
ಅವಳು ಕಾದಳು ಮನ್ವಂತರದ ಮರುಸೃಷ್ಟಿಗೆ.
*****