ಮುಗಿಲ ಹಣೆಯಲಿ ಹೊಳೆವ ಅಳಿತಾರೆಗಳು ರವಿಯು
ಹಗಲಿನಲಿ ಹುಟ್ಟುತಿರೆ ಮಾಸಿಹೋಗುವ ತೆರದಿ,
ಭಾವಗಳು, ಬಯಕೆಗಳು, ನೂರಾರು ಚಿಂತೆಗಳು,
ಕನಸು ಮನವಾವರಿಸೆ, ಒಲವ ಸುಂದರ ರವದಿ
ಮಾಯವಾಗುತಲಿಹವು, ಉರುಳಿರುವ ತಾರೆಗಳ
ಗತಿಯ ಕೇಳುವುದೇಕೆ? ಹಗಲಿನೆಳಬಿಸಿಲಿನಲಿ
ಹೊಳೆಯುತ್ತ, ಕುಣಿಯುತ್ತ, ಹುಲ್ಗರಿಕೆ ಮೇಲ್ಕುಳಿತ
ಮಂಜುಹನಿ ಮನವನೇ ಮರೆತಂತೆ ರಂಗಿನಲಿ,
ಕಳೆದ ಕಾಲದ ದುಗುಡದೇಕಾಂತಗಳ ಮರೆತು,
ಒಲವಿನಾನಂದದಲಿ, ನೀ ಬಂದು, ನನ್ನ ಉಷೆ,
ನನ್ನೊಲವನರಳಿಸಲು, ಹಿಗ್ಗಿನಲಿ ನನ್ನೆದೆಯು
ಹಿಂದೆಂದು ಕಾಣದಿಹ ಹೊಸ ಹಾಡ ಸೊಗಸ ಹಸೆ
ಹಾಸುತಿದೆ ! ಇಂದಂತೆ ಮುಂದೆಯೂ ಉಳಿದೀತೆ?
ಸುಂದರ ಉಷಾ ಸ್ಪಪ್ನ ಅಳಿಯದೆಯೆ ಬಾಳೀತೆ?
*****