ಮುತ್ತಿನ ಹನಿಯ ಮಂಜು
ಮರ್ಮರದ ಗಾಳಿ ಬೀಸಿ
ಚಳಿಗಾಲದ ನೀಲ ಆಕಾಶ ಖಾಲಿ
ಒಡಲೊಳಗಿನ ಏಕಾಂತದ ಮೌನಕೆ
ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ.

ಕವಿತೆ ಹಾಡುವದಿಲ್ಲ. ಆಕಾಶದ
ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ
ಹೊತ್ತ ಕಂಬಳಿಯಡಿ ಹೊರಳಾಡಿವೆ
ಈ ನೆಲದ ಹಂಗು ಹಾಗೂ ನಿನ್ನ ನೆನಪು
ಚಳಿ ಎಲ್ಲವನ್ನೂ ಮುಕ್ಕಿಬಿಟ್ಟಿದೆ ಹಲ್ಲು ಕಟಗರಿಸುತ್ತ.

ಮಾತನಾಡುವರಿಲ್ಲ ಎದೆ ತೆರೆದು
ಇನ್ನೂ ಪ್ರಿಯವಾಗುವ ಸಂಗತಿಗಳಿಗಾಗಿ
ವರ್ತಮಾನದ ಹೇಳಿಕೆ ಯಾರಿಗೂ ಹಿತ
ಕೊಡುವದಿಲ್ಲ. ಎಲ್ಲರೂ ಅವರವರ
ನಿಲ್ದಾಣದಲಿ ಸುಮ್ಮನೆ ಇಳಿದು ಹೋಗಿದ್ದಾರೆ.

ಗಾಳಿಗೆ ನಿಲ್ಲಲು ಬರುವದಿಲ್ಲ ಚಳಿ
ನರನರಗಳಲಿ ಇಳಿದು ಕಂಪನ
ಸಹ್ಯ ಎಲ್ಲವೂ ಅಸಹ್ಯ ಎಲ್ಲೆಡೆ ಶೀತಲನೋಟ
ಶೂಲ ಶಿಲುಬೆಗೇರಿಸಿದ ತಾತ್ವಿಕ ನಿಲುವು
ಸರಿ ಎನಿಸುವದಿಲ್ಲ ಈ ಮಾಗಿಯ ಚಳಿಯಲಿ.
*****