ಹನಿಗವನ

ಉಮರನ ಒಸಗೆ – ೧೬

ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ. ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ ಮಧು ಗೀತ ಸತಿ ಗತಿಗಳೊಂದನರಿಯದೆಯೆ? *****

ಉಮರನ ಒಸಗೆ – ೧೫

ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; “ನಾಳೆ”ಯೆಂಬೆಯೊ?-ನಾಳೆ ಸೇರುವೆನು ನೂರ್‍ಕೊಟಿ ನಿನ್ನೆಗಳ ಜೊತೆಗೆ. *****

ಉಮರನ ಒಸಗೆ – ೧೪

ಪುಣ್ಯಗಳನಾರ್‍ಜಿಸಿದೆವೆಂಬ ಘನ ಚರಿತರುಂ ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು ಮಾ ಗೋರಿಗಳ ತೆರೆಯರವರ ದರ್‍ಶನಕೆ. *****

ಉಮರನ ಒಸಗೆ – ೧೩

ಮರೆಯದಿರು ; ನಮ್ಮ ಪೂರ್‍ವಿಕರು, ಸಂಮಾನಿತರು, ಕಾಲ ವಿಧಿಗಳವರ್‍ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. *****

ಉಮರನ ಒಸಗೆ – ೧೨

ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ! ಮಲಗಿ ಬೈರಾಮ ವೀರನು ನಿದ್ರಿಸಿರ್‍ಪಲ್ಲಿ ಕಾಡುಕತ್ತೆಗಳವನ ತಲೆಯ ತುಳಿಯುವುವು! *****