ಸಂಸಾರವೆಂಬ ಸಾಗರದಲ್ಲಿ
ಸಮಾಧಾನಿಯಾಗಿರಬೇಕು|
ಸಾಗರದಲೆಯ ಎದುರಿಸಿ ದೋಣಿ
ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು||
ಸಂಸಾರದಾಳವ ನೆನೆದು
ಭಯವನು ಬೀಳದೆ
ಸಂಯಮದೊಳಿರಬೇಕು|
ಸಂಸಾರ ತೀರವ ಸೇರುವ ತವಕದಿ
ಸದಾ ಕುತೂಹಲದಿಂದಿರಬೇಕು||
ಕೈಲಾಗುವಷ್ಟು, ಹಾಸಿಗೆ ಇರುವಷ್ಟು
ಕಾಲುಚಾಚುವುದೇ ಉತ್ತಮ|
ದುಸ್ಸಾಹಸ, ದುರಾಲೋಚನೆ ಸಲ್ಲದು
ಸದ್ಬುದ್ಧಿ, ಸದಾಚಾರ, ಸಹೃದಯತೆ
ಎತ್ತರೆತ್ತರಕ್ಕೆ ಕರೆದೊಯ್ಯುವುದು||
ಏನೇ ಕಷ್ಟ ಬಂದರೂ
ಹರಿಯನು ನಂಬಲುಬೇಕು|
ಧೃಡ ಮನದಿ ಭಜಿಸೆ ಹರಿ ನಿನ್ನ
ಭಯದೂರ ಮಾಡುವನು|
ಈಜಿ ಈ ಸಂಸಾರ ದಡವನು
ಸೇರಲು ಧೈರ್‍ಯವ ನೀಡುವನು||
*****