“ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ
ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ
ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ
ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ
ನೆನವು ಹರಿಸಿದೆ ಇಂದು.”
ಅದು ಹಿಂದೆ, ಬಲು ಹಿಂದೆ,
ಇನ್ನು ಎಳತನದಲ್ಲಿ, ನೆರೆಯ ಹುಡುಗಿಯ ಕೂಡ
ಕಣ್ಣು ಮುಚ್ಚಾಲೆಯನು ಆಡುತಿರೆ, ನಾನೆಂದೆ :
“ನಿನ್ನ ಹಿಡಿದರೆ ನಾನು, ನೀನೆನ್ನ ಎದೆಗೂಡ
ಹಕ್ಕಿಯಾಗುವೆಯೇನು?” ಅದಕೆ ನನ್ನುಷೆ ನಾಚಿ,
ಕಣ್ಗೆ ಕಣ್ಗೂಡಿಸುತ, ಎಳೆಯೊಲವ ಸವಿ ನಗೆಯ
ನಕ್ಕು, ‘ಹೂಂ’ ಎಂದವಳು, ನಾಲಗೆಯ ನಸು ಚಾಚಿ,
ನನ್ನನಣಕಿಸಿ ನುಸುಳಿ, ಅವಿತುಕೊಳ್ಳುವೆನೆನುತ
ಓಡಿದಳು. ಆಕೆ ಅವಿತಿಹಳೆಲ್ಲೊ, ಅದ ಕಾಣೆ!
ಎದೆಗೂಡು ಬರಿದಾಗಿ ಕೂಗುತಿದೆ ಅವಳನೇ!
*****