ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ
ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು
ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ
ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು
ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ!
ಮೌನ ಮಸಣದಲೆನ್ನ ಮನದಳಲ ಮಣ್ಣಿಟ್ಟು,
ಬಾಳಿನುಷೆಯನು ಬಲಿಯಕೊಂಡ ಕ್ರೂರತೆ ಮುದ್ದೆ
ದೈವವನು ಮರೆಯುವೆನು, ನೆಲದಲ್ಲಿ ಹೂಳಿಟ್ಟು!
ಎಂದು ಚಿಂತಿಸುತಾನು ಸಾಗುತಿರಲಾ ಎಡೆಗೆ
ಸಂಜೆಯಾಗಸದಲ್ಲಿ ಒಂದೆ ತಾರಕೆಯರಳಿ,
ಮುಗಿಲ ಮೋಡದ ಹಣೆಗೆ ಬಾಸಿಂಗವಿಟ್ಟಂತೆ
ಹೊಳೆಯುತಿರೆ, ಹೃದಯದಲಿ ನಿನ್ನ ಕನಸೇ ಕೆರಳಿ
ಮನವನಳಲಿಸುತಿಹುದು. ಹೃದಯದೊಲವಿನ ಆಸೆ
ನಿಟ್ಟುಸಿರೊಳುಸುರುತಿದೆ- ಇನ್ನೆಲ್ಲಿ ಬಾಳಿನುಷೆ?
*****