ಭಲಿರೆ ಬಾಲದಂಡ ಹನುಮ
ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ                    ||ಪ||

ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು
ಬಲದಿ ರಾಮನ ಛಲ ಗೆಲಿಸಿದಿಯೋ
ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು
ಘಟ್ಟಿ ಸೀತೆಗೆ ಮುದ್ರಿಯುಂಗುರ ಕೊಟ್ಟಿಯೋ ಜಗಜಟ್ಟಿಯೋ                ||೧||

ರಮನ ಮಾತಿಗೆ ರಜತ ಪರ್ವತದಿ
ಸಂಜೀವಿನಿಯ ತಂದ ಭಾವನವೊ
ಕೋವಿಧ ಲಕ್ಷ್ಮನ ಉಳುಹಿ ಪಾತಾಳಕ್ಕೆ
ಧಾವಿಸಿದಂಥ ಮಜ್ಜನವೋ                                    ||೨||

ಊರು ಕೇರಿ ಗ್ರಾಮಗಳ ಹೊರಬಾಗಿಲೊಳು
ಸೇರಿದೆಯೋ ಸತ್ಯದೋರಿದೆಯೋ
ಶಿಶುನಾಳ ಸದ್ಗುರುವಿನ ಸೇವಕನಿಗೆ
ವರಸಾರಿದೆಯೋ ಸುಖದೋರಿದೆಯೋ                                ||೩||
*    *    *    *