ಓ ದೇವ ! ಓ ನಿನ್ನ ಚರಣಕೆನ್ನ ಶರಣು !
ಈ ದೇಹ! ಈ ಪ್ರಾಣ ನಿನಗೆ ಶರಣು !!
ಅದೊ ! ಅಲ್ಲಿ-ಅಗೋ!! ನಾ ಕಂಡೆ ನಿನ್ನ
ಇಗೋ ! ಇಲ್ಲಿ-ಇಗೋ !! ನಾ ಪಡೆದೆ ನಿನ್ನ

ಅಲ್ಲಿ! ಹುಲ್ಲ ಗುಡಿಸಿಲಿನಲಿ ಕಂಡೆ ನಿನ್ನ
ಅಲ್ಲಿ! ಅವರಾಡುವ ಬಡ ಸೊಲ್ಲಿನಲ್ಲಿ!!
ಅಲ್ಲಿ! ಓ ಎಂದು ಕೂಗಿಡುವ ಬಾಯೊಳಲಿ
ಬಸವಳಿಪ ಬಿಸಿಯುಸಿರಿನಲಿ ಕಂಡೆ ನಿನ್ನ

ದಿನದಿನದಿ ದುಡಿ ದುಡಿದು ಬಳಲುತಿಹ
ದೀನರಾ ಹೀನ ಕರುಳಿನಲಿ ಕಂಡೆ ನಿನ್ನ
“ಆ”! ಎಂದು ತಾ ರಾಗವಿಡಿದಾಡುತಿಹ
ಬಡಮನದ ಬಡ ಶಿಶುವಿನಲ್ಲಿ ನಿನ್ನ !

ಅನ್ನ ವಿಲ್ಲದ ಹೊಟ್ಟೆಯೊಳು ನಾ ನಿನ್ನ
ಚನ್ನವಿಲ್ಲದಿಹ ಬಟ್ಟೆಯೊಳು ನಿನ್ನನ್ನ
ಉನ್ನತವಲ್ಲದ ಮುರುಕು ಗುಡಿಸಿಲಿನೊಳು ನಿನ್ನ
ಮುನ್ನಾಗಿ ಕಂಡೆ ನಾ, ದಲಿತ ರೂಪಿ ನಿನ್ನ

ದೀನರಾ ಸವಿನಾಲಿಗೆಯಲಿ, ದಾನಿಗಳಾ
ದಾನಕರದಲಿ, ಸತ್ಯದಾ ಕರುಳಿನಲಿ
ನಡುಗುತಿಹ ಕಡುಬಡ ದೇಹದಲಿ
ಕರುಣೆಯಾ ಮನದಲಿ ಕಂಡೆ ನಿನ್ನ !
*****