ಜೀವದ ಹಕ್ಕಿ ಪಲ್ಲವಿಸುತಿದೆ
ಬಿರಿ ಬಿರಿದ ಕೊರಳಿನಿಂದ,
ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ
ಅನುಪಲ್ಲವಿಗೆ ದೈನ್ಯದಿಂದ ||ಪ||

ಮೌನ ಮೌನದ
ಮಾತಿನ ಮಾತನು ಮೀರಿನಿಂತ ಕೂಗು,
ನಿನದ ನಿನದದ
ಬಾಳ ತರಂಗದ ತಂತುತಂತಿನಾ ಕೊರಗು |

ಚಿಂದಿ ಚಿಂದಿಯ
ಹಸಿರು ವಸನದಾ ತಾಯಗೊರಳ ಕೂಗು,
ಬಸಿರ ಚಗುರಿಗೋ
ಅವನಿಯಾಸೆಯ ಜೀವದುಸಿರ ಕೊರಗು |

ಕಣ್ಣ ಕಾಂತಿಯು
ಮುರುಟಿಸಿ ತಲ್ಲಣಗೊಂಡ ಜೀವದಾ ಕೂಗು,
ಬಣ್ಣದ ಭ್ರಾಂತಿಯ
ಬದುಕಲಿ ಸೋತ ಕಣ್ತೆರೆದು ನಿಂತವರ ಕೊರಗು |

ನಾಳೆ-ನಾಳೆಯ
ಕಣ್ಣ-ಕಣ್ಣುಗಳಲ್ಲಿ ಹೊತ್ತ ಕಂದಗಳ ಕೂಗು,
ಇಂದು-ಇಂದಿನಾ
ಬವಣೆ-ಬವಣೆಗಳ ತೊತ್ತಿನ ಜನಗಳ ಕೊರಗು |
*****