ಅಂತರಾಳದ ಮಾತುಗಳ
ದನಿಯಾಗುವವರ ಹುಡುಕುತ್ತ
ಬೆಳಕಿಗಾಗಿ ಚಡಪಡಿಸುತ್ತ
ಅರಸುತ್ತಿದ್ದೇವೆ ಜೀವಗಳ ತಡವರಿಸುತ್ತಾ.

ಒಡಲು ಬಿಚ್ಚಿ ಹೂವು ಹಸಿರು
ಚಿಮ್ಮಿ ಚೆಲ್ಲುತ್ತ ಜೀವ ತೇಯುವ
ಸುಡುವ ಸೂರ್ಯನ ಬೆಳಕಲ್ಲಿ
ಕಾಯುತ್ತಿದ್ದೇವೆ ಮಿಡಿಯುವ ಮರ್ಮರಗಳ

ನಡೆಯುತ್ತಿದ್ದೇವೆ ಬಿರಬಿರನೆ
ತಂಪನ್ನು ಅರಸುತ್ತ ಒಡಲ ಉರಿಗೆ
ಸುರಿವ ಮೋಡಗಳ ಜೀವ ಪಲ್ಲಟಗಳ
ಒಳಗೊಳಗೆ ಕಂಪಿಸುವ ಆತ್ಮಗಳ ಚಲಿಸುತ್ತ.

ಕರುಣೆ ಬಸಿದು ಒಡಲೊಳಗೆ
ಅನ್ಯಕ್ಕೆ ಭಾವಗಳ ಸಂತೆ ಜಾತ್ರೆಗಳು
ಅವರಿವರು ಹುಡುಕುವ ನೆಮ್ಮದಿ
ಜೀವಂತ ಭಾವಗಳ ಮೆರವಣಿಗೆಯಲಿ

ಎಲ್ಲ ಜಗದ ಬೆಳಗಿದ ರವಿ
ಮಾಂತ್ರಿಕ ಕೈ ಸೇರಬೇಕು ಕನಸುಗಳು
ಕತ್ತಲೆಯಲ್ಲಿ ಉರಿಯುವ ಬೆಳಕಿನ ಹಣತೆ
ದಾಟಿ ಬಿಡುವ ಬದುಕಿನ ಎಲ್ಲಾ ಹಾಯಿಗಳ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)