ಕನಸು ಕಾಣದ, ನಾಚಿ ತುಟಿ ಕಚ್ಚಿಕೊಳ್ಳವ
ಹಸಿರಕ್ತದ ಬಿಸಿಮಾಂಸದ
ಬೆಡಗಿಯೆರು ನಿಲ್ಲುತ್ತಾರೆ
ಆರೆಬೆತ್ತಲಾಗಿ ನಗುತ್ತಾರೆ ಮುದಿಗಳೂ
ಹೊರಳಿ ನೋಡುವಂತೆ
ಹದ್ದುಗಳು ಎರಗುತ್ತವೆ ಮುಗಿಬೀಳುತ್ತವೆ
ಕಾಮದ ಹಸಿವಿಗಾಗಿ
ದೂರದ ಆಫ್ರಿಕ ಏಷಿಯಾದ
ಮುಸುರೆ ತೊಟ್ಟಿಗೆ
ಭಿಕ್ಷುಕರು ಮುಗಿಬಿದ್ದಂತೆ
ಅಲ್ಲಿಮುಸುರೆ; ಇಲ್ಲಿ ಮಾಂಸ
ಹೆಕ್ಕುತ್ತವೆ ಅವೇ ರಕ್ತ ಕಣಗಳ
ಹೊತ್ತ ಜೀವಿಗಳು
ಹಸಿರಕ್ತ ಕಹಿಯಾದರೂ
ಇರಲಿ ಸಿಹಿಯಾದರೂ ಇರಲಿ
ದೇಹ ಹಿಂಜರಿದರೂ ಬಿರಿದ
ಎದೆ ತೊಡೆಗಳನ್ನೆಲ್ಲ ಬಿಡದೇ
ದಿನೇ ದಿನೇ ಹೆಕ್ಕಿ ತಿನ್ನಲು
ಹದ್ದುಗಳು ಬೇಟೆಯಾಡುತ್ತಲೇ ಇರುತ್ತವೆ
ಬಿಸಿ ಮಾಂಸದ ದೇಹದಲ್ಲಿ
ತಾಯಿ ಅಕ್ಕ ಹೆಂಡತಿ ಕಾಣದೇ
ಅದೇ ರಕ್ತದ ಮಡುವಿನಲ್ಲಿ
ಮುಳುಗುತ್ತ ತೆಕ್ಕೆಯೊಳಗೆ ನಲಗಿಸುತ್ತ
ಸರಿಯುತ್ತವೆ
ಜಾರಿಬಿದ್ದ ಬೆಡಗಿಯರಿಗೆ ಅಳುವಿಲ್ಲ
ಏಳುತ್ತಾರೆ
ಇನ್ನೂ ಇನ್ನೂ ಬೆತ್ತಲಾಗುತ್ತ
ನೇಸರಿಳಿಯುವುದು ಕಾಯುತ್ತ
ರಸಿಕರಿಗೆ ರಂಗೇರಿಸಲು
ಬಣ್ಣ ಬಣ್ಣಗಳ ದೀಪಗಳಡಿ
ಮತ್ತೆ ಮತ್ತೆ ಸುಟ್ಟುಕೊಳ್ಳಲು ನಿಲ್ಲುತ್ತಾರೆ.
(ಪ್ಯಾರಿಸ್ಲಿನ Red light area)
*****