ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ
ಉಬ್ಬರಿಳಿತ
ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು
ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು
ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು
ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು
ಎಂಥೆಂಥಾ ಚಿತ್ರಗಳಿವು…
ಬೆಳ್ಳಿ ಚೌಕಟ್ಟಿನೊಳಗೆ ಹಾಕಿ
ನೀಲಾಕಾಶದ ಭಿತ್ತಿಗೆ ತೂಗು ಹಾಕಿದೆ.

ಲಾಸ್‌ವೆಗಾಸಿನ ಚಿತ್ರ ಆಕಾಶಕ್ಕೇರಿ
ಝಣಝಣಿಸುವ ಚೀಲಕಂಡು ಹಿಗ್ಗೋ ಹಿಗ್ಗು;
ಛೇ! ಇಲ್ಲೆಲ್ಲಿ ಕೃಷ್ಣನ ಚಕ್ರ
ಧರ್ಮ ನೀತಿಯ ಭಾಷಣ
ಕಾಲರ್‍ ಸರಿಪಡಿಸಿ ಟೈ ಬಿಗಿಯುವ ಮುದುಕರು
ಮಠಮಾನ್ಯ ಮರೆತ ಕಪಟರ
ಕಣ್ಣು, ಬಾಯಿ ಅಲ್ಲ ಇಡೀ ದೇಹವೇ ಚಪಲ
ಚಿತ್ರಗಳೊಂದರ ಮೇಲೊಂದು

ಉರಿವಂಗಳದೊಳಗೇ ಹುಟ್ಟಿ ಬೆಳೆದ
ಮರುಭೂಮಿ ಹುಡುಗಿಯರ
ಹೊಳಪು ಕಣ್ಣು ಖರ್ಜೂರವಾಗಿ ಕಾಣಿಸಿದ
ಕೆಲವೇ ಕ್ಷಣ ಅವರೆದೆಯ ಸುಟ್ಟು ಕರಕಲಾದ
ಗಾಯಗಳು ಮಾಯದೇ ನೋವಿನ ರೂಪಿನ
ಮೋಡಗಳೋ ಕಪ್ಪು ಹೆಬ್ಬಂಡೆಗಳೋ
ನಿಂತಲ್ಲೇ ನಿಂತು ಬಿಟ್ಟ ಚಿತ್ರಗಳು

ಬಾಗ್ದಾದ್ ಬಸ್ರಾದ ತುಂಬೆಲ್ಲ
ಹೆಣಗಳ ರಾಶಿರಾಶಿ, ತೈಲಬಾವಿಗಳ ಬೆಂಕಿ
ಆಕಾಶವೇ ಛಿದ್ರಿಸಿ ನೆಲನಡುಗಿಸುವ
ಯುದ್ಧ ಯುದ್ಧ ಯುದ್ಧ
ಬ್ಯಾಬಿಲಾನ್ ಸುಂದರಿಯರ ಕಣ್ಣೀರು
ಯುಫ್ರೇಟಿಸ್, ಟೈಗ್ರಿಸ್‌ದೊಳಗೆ ಬೆರೆತು
ಆವಿಯಾದ ಸಿಡಿಲು ಚಿತ್ರಗಳು
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)