ನನ್ನ ಹೊರಗಿನ ಜೀವಿತದಲ್ಲಿ
ಹೆರರ ಮುಖವಾಡಗಳ ನೆರಳು
ನನ್ನೊಳಗಿನ ಜೀವಿತದಲ್ಲಿ
ನನ್ನದೇ ಮುಖವಾಡಗಳ ನೆರಳು.
ಸೋಮವಾರಕ್ಕೆ ಬೂದು ಮುಖವಾಡ
ಶನಿವಾರಕ್ಕೆ ಕಪ್ಪು ಮುಖವಾಡ
ಆದಿತ್ಯವಾರವೋ ರಂಗು ರಂಗಿನ ಮುಖವಾಡ
ಬನ್ನಿ ನಿಮ್ಮ ಮುಖಕ್ಕೂ ಬೇಕು
ಒಂದು ಆವರಣ
ಕಣ್ಣಿಗೆ ಗಾಗಲ್ಸ್
ಕೈಗೆ ಗ್ಲೌಸು
ಕೆನ್ನೆಗೆ ತಿಳಿಯಾದ ಪೌಡರು
ಬೇರೆ ಬೇರೇ ಸಂದರ್ಭಕ್ಕೆ
ಬೇರೆ ಬೇರೇ ಬಣ್ಣದ್ದು
ಕೊಳ್ಳಿರಿ ಇಲ್ಲಿಂದ ಒಂದು ಮುಗುಳುನಗೆ
ಕೊಳ್ಳಿರಿ ಇಲ್ಲಿಂದ ಒಂದು ಪ್ರೇಮದೃಷ್ಟಿ
ನಿಮ್ಮ ಪ್ರಿಯತಮರಿಗಾಗಿ
ಕೊಳ್ಳಿರಿ ಇಲ್ಲಿಂದ ಒಂದು ಅನುಕಂಪನೆಯ ತುಟಿ
ನಿಮ್ಮ ಬಂಧುಗಳಿಗಾಗಿ
ಅವರ ಜನನಕ್ಕಾಗಿ
ಮರಣಕ್ಕಾಗಿ
ಹೊಚ್ಚ ಹೊಸತಯ್ಯ
ವಿಲಾಯಿತಿಯಿಂದ ತರಿಸಿದ್ದು
ನಿಮ್ಮಂಥವರಿಗೆ ಬೇಕಾಗಿ
ಇಲ್ಲಿವೆ ದುಬಾರಿ ಅದ್ದೂರಿ :
ಈವ್ ನಿಂಗ್ ಇನ್ ಪ್ಯಾರಿಸ್
ಇದು ಮಿಯಾಮಿ
ಇದು ಹವಾಯಿ
ಇದು ಮನಿಲಾ
ಇದು ವಿಶ್ವಸುಂದರಿಯರಿಗೆ
ಕೊಳ್ಳಿರಿ ಒಂದು ಡಜನು
ಆಗುತ್ತದೆ ನಿಮ್ಮ ವ್ಯವಹಾರಕ್ಕೆ
ಮುಖವಿಲ್ಲದವರಿಗೆ
ಇದ್ದರೂ ಕಾಣಿಸಲಾರದವರಿಗೆ
ಬೇಕಲ್ಲ ಮುಖಕ್ಕೂ ಒಂದು ಕಾಚ
ರಂಗು ರಂಗಿನ ಕೌಪೀನ.
*****