ಹೀಗೆ, ಹೀಗೆಯೇ ಇದ್ದೆ
ಒಂದಂಗುಲವೂ ಆಚೀಚೆ
ಹಾರದೆ ದಾಟದೆ
ಯಾರಿಟ್ಟರೋ ಶಾಪ
ಬರಿ ಪರಿತಾಪ
ಒಳಗಿಹುದೆಲ್ಲವೂ ಮಿಥ್ಯೆ
ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ
ಗೆದ್ದರೂ ಗೆಲುವಲ್ಲ
ರಾಘವನದೇ ಪ್ರತೀಕ್ಷೆ
ಯಾವುದೋ ನಿರೀಕ್ಷೆ
ಗತಿತಪ್ಪಿದ ವಿವೇಚನೆ
ಜಮದಗ್ನಿಯ ರೇಣುಕೆ
ಉಳಿದುದೊಂದೇ ಮಾಯದ
ಮಾಸದ ಭಗ್ನಶಿಲೆ
ಚಿತ್ತಚಿತ್ತಾರದ ಕಲೆ
ಏನೂ ಆಗದ, ಆಗಲೂ
ಬಿಡದ ವರ್ಣರಂಜಿತ
ದೂರುದುಮ್ಮಾನಗಳ ಪಾತ್ರ
ಕ್ಷಣಕ್ಷಣಕ್ಕೂ ಚಿತ್ರವಧೆ
ಅರ್ಥವಾಗದ ಮೌನ
ಮತ್ಯಾರಿಗೊ ಸುಮ್ಮಾನ
ಎಂದೊ ಒಮ್ಮೆ
ನೆನಪಿನ ಕದಲಿಕೆ,
ನೆನಪ ಹೂತು
ಗೋರಿಕಟ್ಟುವ ಬಯಕೆ
ಕಟ್ಟುವ ಗೋರಿಯಲ್ಲಿಯೇ ಬಿರುಕು
ಚೇ, ಈ ನೆನಪಿಗೆಂತಹ ಛಳಕು
*****