ಪ್ರತಿದಿನ ಬೆಳಗ್ಗೆ
ಕನ್ನಡಿಯೊಳಗೆ ನನ್ನದೆ ದರ್ಶನ
ಹೊರಡುವ ಅವಸರ
ಒಂದಿಷ್ಟು ಕ್ರೀಮುಬಳಿದು
ಲ್ಯಾಕ್ಮೆ ಹಚ್ಚುವಷ್ಟರಲ್ಲಿ
ಸಮಯ ಒಂಬತ್ತು
ಬಿಂದಿ ಇಡುವ ಹೊತ್ತು
ಗಳಿಗೆ ತಟಸ್ಥ ಕೈ
ಬಿಂದಿ ಇಡದೆ
ಮುಗಿಯದು ಸಿಂಗಾರ
ದೊಡ್ಡ ಬಿಂದಿ, ಚಿಕ್ಕ ಬಿಂದಿ
ನಕ್ಷತ್ರ ಬಿಂದಿ, ಉದ್ದ ಬಿಂದಿ
ಚಿತ್ತಚಿತ್ತಾರದ ಬಿಂದಿಗಳ ಕ್ಯೂ
ಯಾವುದಿಡಬೇಕೆನ್ನುವ ದ್ವಂದ್ವ
ಯಾವುದೋ ಒಂದು ಎನುವ
ನಿರ್ಲಿಪ್ತ ಮನ, ಕೊನೆಗೆತ್ತಿ
ಇಟ್ಟದ್ದೆ ದೊಡ್ಡ ಬಿಂದಿ
ಹೆಣ್ತನದ ಸಿಂಬಲ್ಲೆ,
ಗೆಳೆಯರ ಕುಚೋದ್ಯ
ನೆನಪಾಗಿ, ಕಿತ್ತು
ಮತ್ತೊಂದು, ಮಗದೊಂದು
ಮತ್ತೂ ಸ್ಥಾನಪಲ್ಲಟ
ಸ್ತ್ರೀತನದ ಸಂಕೇತವೋ
ದಾಸ್ಯದ ಪ್ರತೀಕವೋ
ಬಂಡೇಳುವ ಮನದ ಪ್ರಶ್ನೆ
ನೊಸಲಿಗಿಡುವ ಬೊಟ್ಟಿಗೇಕೆ
ಇಷ್ಟೆಲ್ಲಾ ವ್ಯಾಖ್ಯೆ
ಛೇ, ಇಂದು ಬಸ್ಸು ಮಿಸ್ಸು
*****