ಯಾರ ಕಂಡು ಹೆದರಿ ಓಡುವೆ?
ಯಾರ ಹಿಡಿಯಲು ಸರ್‍ರ ಸಾಗುವೆ?
ಒಂದೆ ದಾರಿಯೊಳೆಂದು ನಡೆಯುವೆ-
ಎಲ್ಲಿ ನಿಲ್ಲುವಿ ಹೇಳೆಲೊ?

ಬೆಟ್ಟು ಅಗಲದ ದಾರಿ ಮಧ್ಯದಿ
ಕಡಿದ ಬಯಲಿನ ಹೊಂಡ ನಡುವಲಿ
ಕಂಡ ಕಂಡ ತಗ್ಗು ತಳದಲಿ-
ಎಲ್ಲಿ ಮುಂದಕೆ ಹರಿಯುವೇ?

ಹನಿಯ ಜಿನುಗಿಸಿ ಹುಟ್ಟಿ, ಮುಂದೂ
ಹರಿದು ಹರಿದೂ ತೊರೆಯ ಗಾತ್ರಕೆ
ಮುಂದೆ ಸಾಗಲು ಹೊಳೊಯೆ ಆಗುವೆ-
ಎಲ್ಲಿ ತನಕ ನೀ ಹರಿಯುವೆ?

ಕೊಚ್ಚೆ ಕೊಳಕನು ಪಚ್ಚೆ ಪೈರನು
ಕೊಚ್ಚಿ ಹರಿಯುವೆ ಮಂಡಿ ಮರಗಳ
ಉಗ್ರರೂಪವ ಹೊಂದಿ ಹರಿಯುವಿ
ಹನಿಯ ಮಹಿಮೆಯಿಂದೆಂತುವೊ!

ಕಲ್ಲು ದಾರಿಲಿ ಮೆಲ್ಲೆ ಜಾರುತ
ಹೊಂಡ ತೋರಲು ಕಂಡು ಹಾರುತ
ತಿರುವು ಕಾಣಲು ತೋರಿ ತಾಳ್ಮೆಯ
ಹರಿವ ನೀರದು ನೋಡೆಲೊ!

ತಿರುಗಿ ಮುರುಗಿ ಹಾವಿನಂತೆ ನೀ
ಹಾರಿ ಜಾರೀ ಅಳಿಲ ರೂಪು ನೀ
ಕಾಡು ನಾಡೂ ಮಧ್ಯೆ ಹಾಯುವೆ;
ಯಾರ ಬೆದರದೆ ಸಾಗುವೆ

ಕಾಲಮಾನವ ಎನಿತು ನೋಡೆ ನೀ
ದಿನವು ರಾತ್ರಿಯೊ ಎಲ್ಲ ಸಮವದೊ,
ವಿಶ್ವ ನಿಯಮವ ಮೀರಿ ಹಾಯುವ
ನೀರು-ಮಾಯೆಯ ನೀರೆಯೆ!

ಹರಿದು ಹರಿದೂ ಎಲ್ಲಿ ನಿಲ್ಲುವೆ,
ಸಾಗರವೊ ನಿನ್ನ ಮೋಕ್ಷಲೋಕವು?
ನಂಬಲಾರೆನು;  ಅದನು ಮೀರುವೆ
ಹರಿವ ನೀರೇ ತಿಳಿಸೆಯಾ?

ದೀನ ಮಾನನ ಜಪಿಸಿ ಚೆಲ್ಲಿದ
ಹೂವ ದಂಡೆಯ ಮುಡಿದು ಹರಿಯುವೆ;
ಗಂಗೆ ಪುತ್ರಿಯು ನೀನೆ ಅಲ್ಲವೆ?
ನೀನೆ ಜೀವವು ಲೋಕಕೆ!
*****

Latest posts by ಮುತ್ತಣ್ಣ ಐ ಮಾ (see all)