ಮಸಿ ಬಟ್ಟೆ ಆ ಹುಡುಗ
ಆ ಹುಡುಗ ಮಸಿ ಬಟ್ಟೆ
ಬರಿಗಾಲಲಿ
ಬೀದಿ ಬೀದಿ ಸುತ್ತುತ್ತಾ
‘ಸಾಕು’
ಎಂದೆಸೆದದ್ದ
ಎತ್ತಿಕೊಳ್ಳುತ್ತಾನೆ ಹುಡುಕಿ
ತುತ್ತಿನಂತೆ

ಕುಡಿದು ಬಿಸುಟ ಖಾಲಿ
ಬಾಟಲು
ಕತ್ತರಿಸಿ ಒಗೆದ ‘ಡೈರಿ’
ಹಾಲಿನ ಪಾಕೆಟ್ಟು
ತುಕ್ಕು ಹಿಡಿದ ಸೈಕಲ್ಲಿನ
‘ಮಡ್‌ಗಾರ್ಡು’
ಒಡೆದು ಹೋದ ‘ಪ್ಲಾಸ್ಪಿಕ್ಕು
ಜಗ್ಗು ಬಕೆಟ್ಟು’
ಆಡಿ ಎಸೆದ ಮುರಿದ
ಗೊಂಬೆಗಳು
ರಟ್ಟಿನ ಡಬ್ಬಿ
ಹಿಟ್ಟಿನ ಪುಟ್ಟಿ
ಸುದ್ದಿ ಹೇಳುವ ಹಾಳೆ…
ಅವನ ಹಸಿದ
ಹರಕು
ಜೋಳಿಗೆಗೆ ಅಂದು ಮೃಷ್ಟಾನ್ನ

ವಿಷಣ್ಣ ವದನದ ಎರಡು
ಸೋಡಾ ಗೋಲಿಯಲಿ
ಆಟೋಗೆ ಜೋತು ಬಿದ್ದು
ತೂಗುವ
ಅಮ್ಮನ ಕಿರುಬೆರಳು ಹಿಡಿದು
ಜಗ್ಗುವ
ಸ್ಕೂಟರನೇರಿ ಬೆನ್ನು ಬಳಸಿ
ಕುಳಿತ
ಗೆಳೆಯರ ಕೈ ಹಿಡಿದು
ಹಾರಿ ಬರುವ
ಹಿಂಡು ಗುಬ್ಬಿಗಳ
ಬೆನ್ನ ಮೇಲೆ
ಕನಸು
ತುಂಬಿದ ಪಾಟಿ ಚೀಲ.

ಅರೆಕ್ಷಣ ಮೈ ಮರೆತು
ನಿಂತಲ್ಲೇ
ನಿಟ್ಟುಸಿರೊಂದು ಹಾದು
ಕಣ್ಣು ಕೊಳವಾಗುವದು

ನಿಂತರೆ ಕೆಡುವುದು ಕೆಲಸ
ನಡೆ
ನಾಲ್ಕು ಬೈಗಳು
ಇರಿವ ಕಣ್ಣೋಟಗಳ ನಡುವೆ
ಹುಡುಕು
ಸಂದಿಗೊಂದಿಯ ತಿರುಗು
ಮನೆಯ ಹಿತ್ತಲಲಿ ಚೂರು
ಕಬ್ಬಿಣ
ಮುರುಕು ತಗಡು
ಹರಕು ಚಪಲಿ
ಬಾಯೊಳಗೊಂದು ಬಳಸಿದ
ಕಾಂಡೋಮ್
ಉಬ್ಬಿದ ಬಲೂನಿನ ತುದಿಗೆ
ತುಣುಕು ಸೂರ್ಯ
ಒಣಗಿದ ಗಂಟಲಿಗೆ ಬೊಗಸೆ ನೀರು
ಸೋತ ಕಾಲ್ಗಳಿಗೆ ಬೀದಿ ಬದಿಯ
‘ಗುಲ್ಮೊಹರ್’ ನೆರಳು

ಕತ್ತಲಾಗುವ ಮುನ್ನ
ಪುಟ್ಟ
ಗುಡಿಸಲ ಮಿಣುಕು ದೀಪ
ಹಚ್ಚಬೇಕು ಒಲೆ
ತಣಿಸಬೇಕು ಹಸಿದ ಒಡಲು

ಮರುದಿನ
ಸೂರ್ಯ
ಹರಿದ ಜೋಳಿಗೆ
ಹೆಕ್ಕಿ ತುಂಬಬೇಕು ಕನಸುಗಳ…