ಹೇ ಕೃಷ್ಣ ತಂದೆ ಏನುಕಾರ್ಯ
ಹೇಳಿದೆ ಎನಗೆ?
ಮನಸಾಯಿತೆ ನಿನಗೆ ||ಪ||
ಹಡೆದ ಮಕ್ಕಳ ಮೇಲೆ
ಪಿತಗೆ ಹರುವಿಲ್ಲವೋ
ಇದು ಕಠಿಣವಲ್ಲವೋ ||೧||

ಹರನ ಉರಿಯಗಣ್ಣಿನೆದುರು
ನಿಲ್ಲುವರ್‍ಯಾರೋ?
ಆವ ಪುರುಷರ ತೋರೋ ||೨||

ಬೆಂಕಿಯೊಳಗೆ ನೂಕಬಾರದೆ
ಬ್ಯಾಸರವಾದರೆ?
ಪರರು ಕೇಳಿ ಸೈರಿಪರೆ ||೩||

ಲೋಕ ಬಾಂಧವನೆಂದು
ನಿನ್ನ ಲೋಕವೆಂಬುದೋ
ಆವ ನ್ಯಾಯವೋ ಇದು ||೪||

ಪರರ ಮಕ್ಕಳ ನೋವ
ನೋಡಿ ಮಿಡುಕುತಲಿಹರೋ
ದೈವ ಭಾವ ಉಳ್ಳವರೋ ||೫||

ಎನ್ನ ಧೋರಣವೇನು
ತಂದೆ ಪನ್ನಗ ಶಯನ
ಹೆಣೆದ್ಯಾಕೋ ಈ ಹದನ ||೬||

ಹರನು ಮುನಿದ ಮೇಲೆ
ಲೋಕ ಉರಿದು ಹೋಗದೆ
ಅವಕಾಶವಾಗ್ವುದೆ ||೭||

ಶೂರನಾದರೇನು ನಾನು
ಶೂಲಿಗೆ ಎದುರೇ?
ನಾನಾತಗೆ ನದರೇ ||೮||

ಆನೆ ಸಿಂಹ ಕೆಣಕಲದಲಕೆ
ಹಾನಿಯಲ್ಲದೆ
ಪ್ರಾಣ ಬೇರೆ ಉಳಿವದೆ ||೯||

ಏಸುದಿನದಲಿಂದ
ಈಶನ ಕಣ್ಣ ಮುಂದಕೆ
ಹಾಕಬೇಕೆಂಬ ಬಯಕೆ ತೀರಿತೆ ||೧೦||

ನಿನ್ನ ಬಯಕೆ ತೀರಿತೆ
ನಿನ್ನ ಮನಸ್ಸಿನ ಕನಸು ಹೋಯಿತೆ
ಇನ್ನು ಬಾಕಿ ಉಳಿಯಿತೆ ||೧೧||

ಹಡೆದವರು ದುರ್ಬುದ್ಧಿ
ತೋರಿರುವರೆ ಮಕ್ಕಳಿಗೆ
ಕೆಣಕುವರೆ ಜಗದೊಳಗೆ ||೧೨||

ನನ್ನ ದೈವ ನಿನ್ನೊಳು ಹೊಕ್ಕು
ಮಾಡಲೀ ಪರಿಯಾ
ಮಾಡಲೇನು ಶ್ರೀ ಹರಿಯೇ ||೧೩||

ಇನ್ನು ನಿನ್ನ ಪಾದ ಎನಗೆ
ಎರವು ಗೈದೆಯಾ
ಹೇ ರುಕ್ಮಿಣೀ ಪ್ರಿಯಾ ||೧೪||
*****