ಪುಟ್ಟನ ಮನೆ ಮುಂದೆ ಇದೇನು ಕೂಟ
ಇಷ್ಟು ಬೆಳಿಗ್ಗೆಯೆ ಊರವರ ಕಾಟ
ಕೆಲವರು ಕುಂತು ಕೆಲವರು ನಿಂತು
ಹಲವರು ಹಣಿಕಿ ಉಳಿದವರಿಣುಕಿ
ಹಾಡುತ್ತಿರುವನು ಪುಟ್ಟನು ಎಂದು
ಜನ ಬಂದಿರುವರು ಕೇಳಲು ಇಂದು
ಪುಟ್ಟನ ಗಾಯನ ಒಂದೇ ಸವನೆ
ನಡೆದಿದೆ ಯಾರದೆ ಪರಿವಿಲ್ಲದೆನೆ
ಮಂದ್ರ ಮಧ್ಯಮ ತಾರಕ ಬಿಂದಿಗೆ
ಎಲ್ಲಾ ಶ್ರುತಿಗಳು ಕೃತಿಗಳು ಒಂದಿಗೆ
ತಲೆದೂಗುತಾರೆ ಕೇಳುವ ಜನಗಳು
ಅದೆಂಥ ಭಾವ ತುಂಬಿದೆ ಇವನೊಳು
ಹರಿದರಿದು ಬರುತಿದೆ ಕಣ್ಣೀರ ಧಾರೆ
ದನಿಯೆಂಥ ದನಿಯಿತು ವ್ಹಾರೆ ವ್ಹಾರೆ
ಬಾಲಪ್ರತಿಭೆಯಿವ ಚೆಂಬೈಗೂ ಸಮ
ಇವನೆದುರು ಇನ್ನೆಲ್ಲರು ಬರೀ ಸರಿಗಮ
ಚರ್ಚೆ ಸುರುವಾಗುವುದು ರಾಗದ ಕುರಿತು
ಒಬ್ಬೊಬ್ಬರು ತಮ್ಮ ಬುದ್ಧಿಯಂತರಿತು
ಒಬ್ಬನೆಂದರೆ ಇದು ಕೇದಾರ ಗೌಳ
ಇನ್ನೊಬ್ಬನ ಹಟ ರೀತಿ ಗೌಳ
ಆಗ ಶುರುವಾಗುವುದು ಭಾರೀ ಜಗಳ
ಯಾಕೆಂದರೆ ಇದು ಮಾಯಾಮಾಳವ ಗೌಳ
ಕೆಲವರಭೇರಿ ಕೆಲವರು ಬಿಲಹರಿ
ದೇವಗಾಂಧಾರಿ ಗೌರಿಮನೋಹರಿ
ಖರಹರಪ್ರಿಯ ನಾಟಿಕುರಂಜಿ
ಆನಂದ ಭೈರವಿ ಪೂರ್ವಕಲ್ಯಾಣಿ
ಮಲಯಮಾರುತ ಪಂತುವರಾಳಿ
ಸಿಂಹೇಂದ್ರಮಧ್ಯಮ ಸಿಂಧುಭೈರವಿ
ಒನ್ಸ್ ಮೋರೆಂದು ಕೂಗಲು ಕೆಲವರು
ಟ್ವೈಸ್ ಮೋರೆಂದು ಇನ್ನೂ ಹಲವರು
ಮೋರ್ ಮೋರೆಂಬ ಗುಂಪೂ ಇತ್ತು
ಈ ಮಧ್ಯೆ ಗಾಯನ ಜೋರಾಗ್ತ ಹೋಯ್ತು
ಆಗಲೆ ಬಂದಳು ಪುಟ್ಪನ ಅಮ್ಮ
ಕೈಯಲಿ ಎತ್ಕೊಂಡು ಅಂಗಡಿ ಸಾಮಾನ್ನ
ಅಯ್ಯೋ ಕಂದಾ ಹಸಿವಾಯ್ತೇನಪ
ಯಾಕಿಂಗಳ್ತೀ ನಂದೇ ತಪ್ಪ
ಕರಕೊಂಡು ಹೋದಳು ಪುಟ್ಟನ ಒಳಕ್ಕೆ
ಕಾಲು ಕಿತ್ತರು ಶ್ರಾವಕರು ಹೊರಕ್ಕೆ
ಇಂತು ಸಂಪನ್ನ ಪುಟ್ಪನ ಕಚೇರಿ
ಹೊಟ್ಟೆಗೆ ಸೇರಲು ಮೂರ್ನಾಲ್ಕು ಪೂರಿ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)