ಬಟ್ಟೆಗಳ ಕಳಚಿನಿಂತ ಭಂಗಿ
ಕೆಳಗಡೆ ಹುಡುಕಿ ಕಾಣದುದು
ಮೇಲಿದೆಯೇನೋ ಎಂದು
ತದೇಕವಾಗಿ ಆಗಸದಲ್ಲಿ ಕೀಲಿಸಿ ಕಣ್ಣ
ಬೆಳಕಿಗೆ ಮುಖಮಾಡಿ
ಕೇಳದ ಧ್ವನಿಯೆಡೆಗೆ ಕಿವಿಮಾಡಿ
ತುಡಿಯದ ಸ್ಪಂದನಕ್ಕೆದೆ ತುಡಿತವ
ತೆರೆದಿಟ್ಟು ಗೆಜ್ಜೆ ತಾಳಲಯದಲ್ಲಿ
ಏಕತಾರಿಯ ಏಕನಾದದಲ್ಲಿ
ಗಾನ ದೇಣಿಯನೇರಿಯೇರಿ ಹೋಗಿ
ಅದನ್ನು ಕೂಡಿ ಸೇರಿ ಒಂದಾಗುವ ಹಂಬಲ
ಹಣ್ಣಾಗುವುದೋ ಅಥವಾ
ಕೈಕೊರಳುಗಳನಲಂಕರಿಸುವ
ಒಣ ರುದ್ರಾಕ್ಷಿ ಕಾಯಿಯಾಗುವುದೋ?
(೧೩-೩-೭೮)
*****