ಚಿತ್ರ: ದೇವನಾಥ
ಚಿತ್ರ: ದೇವನಾಥ

ಪಾಪದವರು ನಾವು
ಅದೆಶ್ಟೋ ಕೋಪ, ತಾಪದಲಿ,
ಪಾಪದ ಕೊಡ ತುಂಬಿ, ತುಂಬಿ…
ಈ ಊರು, ಕೇರಿ, ಹರಿದಿದೆ!
ಎದುರು ಬಿಸಿಲಿಗೆ, ಕಬ್ಬಿಣದಾ ಅದಿರಾಗಿ, ಕಾದಿದ್ದೇವೆ!
ಹಾದು ಹೋಗುವವರ, ಕಾಲುಗಳ ಕಾದು ಕಾದು…
ಕಣ್ಣುಗುಡ್ಡೆ ಒಡೆದೂ…
ಬಳಲಿ ಬೆಂಡಗಿ, ಕರಕಾಗಿ, ಅಲ್ಲೆ ಕುಂತಿದ್ದೇವೆ!
ಕುಂತಿ ಪುತ್ರರಾಗಿ, ಭರತ, ಶತೃಜ್ಞರಾಗಿ-
ಸೂತಕವಿನ್ನು ಕಳೆದಿಲ್ಲ! ಅಡಿಗೆ ಮನೆಗೆ ಕರೆದಿಲ್ಲ!!
*  *  *

ಕರೆಬಾನಿಲೆದ್ದಿ, ತೊಳೆದ ಕೈಗಳ, ಈ ನೀಸುತನ
ಏಳುಕೆರೆ, ಸಪ್ತ ಸಾಗರದಲೆದ್ದಿ, ತೊಳೆತೊಳ್ದೆರಿನ್ನು ಕಳೆದಿಲ್ಲ!
ದೇಶ ವಿದೇಶದ, ಸುವಾಸನೆಯ ಸುಗಂಧ ದ್ರವ್ಯಲದ್ದಿ ತೀಡಿ, ತಿಕ್ಕಿದರೂ…
ಆ ಜಿಗುಟು, ಕಮಟು, ಮಡ್ಸು ವಾಸನೆಗೆ ವಿಮುಕ್ತಿಯಿಲ್ಲ!
ಶತಶತಮಾನದ ಈ ಶಾಪ, ಯಾವ ಜನ್ಮದಲ್ಲಂಟಿತೋ?!
ಹರಳಯ್ಯನಿಂದಾ ಮೊದಲುಗೊಂಡು,
ರೆಂಪಿಗೆಯಾಡಿಸಿದವರ ಪಾಡು,
ಹಾಡಾಗಿ, ಅರಣ್ಯರೋಧನವಾಗಿ, ಹರಿದಿದೆಯಲ್ಲಾ?!
ಕಲ್ಯಾಣದಣ್ಣಗಳಿರಾ…
ಚಪ್ಪಲಿ ಪೂಜೆ ಯಾಕಂದಿರಾ??
ಹರಳಯ್ಯ, ಕಲ್ಯಾಣಮ್ಮನ, ತೊಡೆ ಚರ್ಮದಿ, ಮಾಡಿದ ಕೆರಗಳಿಗೆ,
ಕರ ಮುಗಿದ, ಅಣ್ಣಬಸವಣ್ಣನವರು!!
ಈ ಮೆಟ್ಟು ಮೆಟ್ಟಿದ ತಪ್ಪಿಗೆ
ಕಾಲುರಿ, ಕಣ್ಣುರಿ, ಅಂಗಾಂಗ ಉರಿ ಉರಿ ಎದ್ದು…
ಕರೆಬಾನಿಲಿ ಮುಳುಗೆದ್ದು,
ಕೆರಗಳಿಗೆ ಮನ ತಂದ ಮಾನವಂತ!!
ಶೀಲವಂತನ ಮದುವೆಗೆ, ದಂಗೆ ಎದ್ದ ಜನ,
ಅದೇ ಕಾಲ್ಮರಿಗೆ, ಶರಣೆಂದದ್ದು ಸರಿಯೇ??
*  *  *

ಊರುಕೇರಿ, ಜಗಲಿ ಮೇಲೆ…
ಸಣ್ಣ, ದೊಡ್ಡವರ, ಕಾಲ ಕೆಳಗೆ, ಕಣ್ಣಸೆಳೆವ,
ಗುಡಿ, ಚರ್ಚು, ಮಸೀದಿ, ಅಡಿಗೆ ಮನೇಲಿ,
ಕಾಲ ಮೇಲೆ ಕಾಲನೇರಿ, ಮೆರೆವ ಕಾಲ್ಮಾರಿಗಳೇ…
ನಾವಿನ್ನೂ ಹೊರಗೇ ಊರ ಹೊರಗೇ…!!
ಕೆರಗಳಿಗೆ, ಕರ ಮುಗಿವ, ಹಿರಿಜನರೇ…
ಈ ಹರಿಜನರ, ಕಡೆಗಣಿಸಿರುವುದು, ಸರಿಯೇ??
ಓ… ಹರಿಯೇ… ಇದು ಸರಿಯೇ?!
ಯುಗ ಯುಗಳೆ ಕಳೆದರೂ…
ಕೆರಗಳ ಪರ್‍ಯಾಯವೆಲ್ಲಿದೆ ಹೇಳಿ??
ಕೆರಗಳ ಮಾಡಿದವರ,
ಕರ ಪಿಡಿದು, ಎತ್ತಿದವರುಂಟೇ??
ಪುರಾಣ, ಪುಣ್ಯಪುರುಷರು ಕೆರಗಳಿಗೆ ಕರಮುಗಿದು,
ಗದ್ದುಗೆ ಮೇಲಿಟ್ಟು, ಪೂಜಿಸಿ ಪುನೀತರಾಗಿದ್ದು ಸುಳ್ಳೇ??
ಕೆರಗಳಿಗೆ ಗುಡಿಕಟ್ಟಿ, ಕರ ಮುಗಿವದು ತಿಳಿಯದೇ?
ಅಣ್ಣ ಬಸವಣ್ಣ, ಕೆರಗಳ ಶಿರದಲಿ ಹೊತ್ತು, ಮೆರೆದಾಡಿದ್ದು ಪುರಾಣವೇ??
ಸಭೆ, ಸಮಾರಂಭ, ವಿಧಾನ ಸೌಧದಲಿ…
ಕೆರಗಳು ಕರದಲ ರಂಗೇರಿ, ಹಾರಾಡಿ, ತೂರಾಡಿದಾಗ,
ಮಾದಿಗರ ಶ್ರಮ ಸಾರ್ಥಕವಾಗಿ, ಧನ್ಯರಾಗಿ…
ಪುಟ್ಟ ಕಂದನ ಎತ್ತಿ, ಮುದ್ದಾಡಿದ ಖುಷಿ ಕೇರಿಗರಿಗೆ!!
*  *  *

ಈ ನಮ್ಮ ಹೊಲಸು ಕೆರಗಳಿಗೆ
ಕಡೆಯಾದ ಬುದ್ಧಿ ಕಂಡು ಕೆರಳಿ, ಇವರ…
ಕಿತ್ತೋದ ಕೆರಗಳೆಂಬೆ!
ಸವಕಲು ಮನಸ್ಸೆಂಬೆ!
ಕಿಲುಬುಗಟ್ಟಿದ ಜನರೆಂಬೆ…
…ಮುಳ್ಳುರೆಂಬೆಯೆಂಬೆ!!
ಮಟ ಮಟ ಮಧ್ಯಾನದ ಮಾದಿರೆಂಬೆ.
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)