ಜಟಕಾ ಹೊಡೆಯುವ ಕೆಲಸವ ಬಿಟ್ಟು,
ಹೆಂಡಿರ ಮಕ್ಕಳ ಎಲ್ಲರ ಬಿಟ್ಟು
ತಟ್ಟನೆ ಬಲು ವೈರಾಗ್ಯವ ತೊಟ್ಟು
ನಡೆದೇ ನಡೆದನು ಜಟಕಾ ಸಾಬಿ
ಸಾಬಿಯ ಜನರಲಿ ರಂಗು ಗುಲಾಬಿ.

ಹೆಂಡಿರು ಮಕ್ಕಳು ಹುಡುಕಾಡಿದರು
ಪೇಟೆಯ ಸಾಬಿಗಳಲೆದಾಡಿದರು.
“ಅಯ್ಯೋ ! ಹೋದನೆ ನಮ್ಮಯ ಸಾಬಿ !
ಎಲ್ಲರ ಮೆಚ್ಚಿನ ಜಟಕಾ ಸಾಬಿ !
ಬೀಡಿಯ ಕುಡಿಯದ ಒಳ್ಳೆಯ ಸಾಬಿ !”
ಎಂದೆಲ್ಲಾ ಜನ ಹಲುಬುತ್ತಿರಲು
ಊರೇ ಸಾಬಿಯ ಮಾತಾಗಿರಲು
ಕಣ್ಮರೆಯಾದನು ಜಟಕಾ ಸಾಬಿ
ಸಾಬಿಯ ಜನರಲಿ ರಂಗು ಗುಲಾಬಿ.

ತಾರಾಗಡಣದಿ ಬಲು ಹುಡುಕುತ್ತ
ಭೂಮಿಯು ಸುತ್ತಿತು ಸೂರ್ಯನ ಸುತ್ತ
ಹುಡುಕೇ ಹುಡುಕಿತು ಸುತ್ತ ಸುತ್ತಿತು
ಒಂದೆರಡಾಯಿತು, ನಾಲ್ಕೂ ಆಯಿತು,
ಮಡಿಲೊಳಗಿರುವಾ ಕುಲದೀಪಕನ
ಬಾಳ್ಕೆಯ ಕಡಲಿನ ಸುಖ ಚಂದ್ರಮನ
ಕಡುದುಕ್ಕದಿ ಊರೆಲ್ಲಾ ತೊಳಲಿ

ಹುಡುಕುವ ಮಾತೆಯ ರೀತಿಯಲಿ.
ಕಾಣದೆ ಹೋದನು ನಾಲ್ಕೇ ವರ್ಷ
ಬಂದಾಗುಕ್ಕಿತು ಎಲ್ಲರ ಹರ್ಷ.
ಎಲ್ಲಡಗಿದ್ದನೋ ! ಏಕಡಗಿದ್ದನೋ !
ಬಲ್ಲವರುಂಟೇ ಸಾಬಿಯ ಮರ್ಮ.
ಒಂದಾಗಿದ್ದುದು ಬಲು ಕಸಿಮಾಡಿ
ಚಂದದಿ ಬೆಳಸಿದ ಮೊಳದಾ ದಾಡಿ
ಮೈಮೇಲಿದ್ದುದು ಕಾವಿಯ ಬಟ್ಟೆ
ಕೈಯಲ್ಲಿದ್ದುದು ಭಿಕ್ಷದ ತಟ್ಟೆ
ಕೊರಳಲಿ ಮಣಿಗಿಣಿಗಳು ಏನಿಲ್ಲ
ಬೂಟಾಟದ ಚಿಹ್ನೆಗಳೇನಿಲ್ಲ
ಸಂಸಾರದ ಜಂಜಾಟವ ಹೊಲ್ಲ
ಹೊನ್ನನು ಹೆಣ್ಣನು ಮಣ್ಣನು ಒಲ್ಲ
ಕುಹಕ ಕುವಾಕ್ಯಗಳೊಂದೂ ಸಲ್ಲ
ಶಾಂತಿಯ ಕಾಂತಿಯ ಮೂರುತಿಯವನು
ಸಾತ್ವಿಕ ಸಾಕಾರದ ಘನನವನು
ದಾರಿಯ ತೋರ್ಪಾ ಜ್ಯೋತಿರ್ಲತೆಯು
ಹೊನ್ನನು ಮಾಳ್ಪಾ ಪರುಷದ ಮಣಿಯು.

ತತ್ವನ ಹೇಳಲು ಚೌಕದಿ ನಿಂತ
ಹೊಳೆದವು ತತ್ವದ ಸಾಲಿನ ದಂತ
“ಇವನೊಬ್ಬನು ಹೊಸಬನು ಮೌಲಾನ
ಉತ್ತರ ದೇಶದ ಘನ ಮೌಲಾನ
ಬಾಯಿಗೆ ಬರುವುದು ಎಲ್ಲ ಕುರಾನ
ಜಗದೊಳಗಿನ ಸಿದ್ಧಾಂತಗಳೆಲ್ಲ
ಈತನ ಕೈಯಲಿ ಸಕ್ಕರೆ ಬೆಲ್ಲ;
ಕನ್ನಡ ಬಲ್ಲನು ಕನ್ನಡ ಜಾಣ
ಇವನೇ ಕುಮತ ದ್ವಂಸಕ ಬಾಣ
ಇಸ್ಲಾಮಿನ ಸಂತಸ ಸುಮಬಾಣ”
ಎಂದೆಲ್ಲಾ ಜನ ಬಳಿ ಸೇರಿದರು
ನೆರೆ ಕಿಕ್ಕಿರಿಯುತ ಗುಡಿ ಕಟ್ಟಿದರು
ಬಿಡುಗಣ್ಣಿಂದವನಂ ನೋಡಿದರು
ನಾಲಗೆ ತಣಿವನ್ನ೦ ಹೊಗಳಿದರು.

ಕಣ್ಣದು ತಿಳಿವಿನ ಮಣಿಯಂತಿಹುದು
ಮುಖವದು ಮೋಕ್ಷದ ಫಲದಂತಿಹುದು
ದಾಡಿಯೆ ತತ್ವದ ಮಳೆಯಂತಿಹುದು
ನುಡಿಯಾನಂದದ ಹೊನಲಂತಿಹುದು
ಶಾಂತಿಯ ದಾಂತಿಯ ಮೃದುವಾಣಿಯಲಿ
ಸರಸ ಸುಗೀತದ ನುಡಿ ಜಾಣೆಯಲಿ
ತತ್ವಜ್ಞಾನಿಯು ಹೇಳುತ ನಿಂತ
ತತ್ವವ ಹೇಳುತ ಚೌಕದಿ ನಿಂತ.
“ಘನತರ ತತ್ವವ ಹೇಳುವೆ ನಿಮಗೆ
ಅಲ್ಲಾ ಕೊಡುವನು ಸೌಖ್ಯವ ನಿಮಗೆ
ಬೀದಿಯ ಮಾತೆಂದರಿಯಲು ಬೇಡಿ
ಘನ ತಾತ್ವಾಮೃತ, ಸವಿಯನು ನೋಡಿ,
ಹಿಂದಿನ ಕತೆಯನು ಹೇಳುವೆ ನಿಮಗೆ
ಇಂದಿನ ಗತಿಯದು ತಿಳಿವುದು ನಿಮಗೆ
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಜಗವನು ಉಳಿಸುವ ಉನ್ನತ ಧರ್ಮ.
ಕಡಿದಾಡುವ ಬಡಿದಾಡುವ ಜನರ
ಮಕ್ಕಳ ಹೆಣ್ಗಳ ಕೊಲ್ಲುವ ಜನರ
ಕಲ್ಲೂ ಮಣ್ಣೂ ಪೂಜಿಪ ಜನರ
ಸಭ್ಯರ ಮಾಡಲು ಒಟ್ಟಿಗೆ ಮಾಡಲು
ದೇವರು ಯೋಚಿಸಿ ಹೊರಟನು ಮುಂದೆ
ಒಡನೆಯೆ ಸೈತಾನ್ ಹೊರಟನು ಹಿಂದೆ
ದೇವರು ಸಂಕಲ್ಪಿಸಿ ಹೊರಟಿರಲು
ಬೆನ್ನಲಿ ಸೈತಾನನು ಬರುತಿರಲು
ದೇವರು ಕೇಳಿದ ಚೋದ್ಯವಪಟ್ಟು
ಮನದಲಿ ಕರುಣವ ಸಂಕಟಪಟ್ಟು
‘ಎಲ್ಲಿಗೆ ಪಯಣವು ? ಏನುದ್ದೇಶ ?
ಆರಿಗೆ ಹೂಡಿದೆ ಸರ್ವ ವಿನಾಶ ?’
ಸೈತಾನ್ ಎಂದನು ನಗೆ ಸೂಸುತ್ತ
ವಕ್ರದ ನೋಟವ ನೆರೆ ಬೀರುತ್ತ
‘ನಿನ್ನಯ ಕೆಲಸಕೆ ಅರಬೀಸ್ಥಾನ
ಎನ್ನಯ ಕೆಲಸಕೆ ಹಿಂದೂಸ್ಥಾನ’
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ.”

ಈ ಮಾತನ್ನು ಕೇಳಿದ ಕೆಲ ಜನರು
“ಇವನೊಬ್ಬನು ಹೆದ್ದಾಡಿಯ ಸಾಬಿ
ದಾಡಿಯು ಬೆಳೆದರೆ ಬೆಳೆವುದೆ ಬುದ್ದಿ
ಸಾಬಿಯ ಬುದ್ದಿ, ಕತ್ತೆಯ ಲದ್ದಿ”
ಎಂದೆಲ್ಲಾ ಕೋಪದಿ ಕೂಗಿದರು.
ಆದುದು ಗಜಬಿಜಿಯಾಗುಂಪಿನಲಿ
ಜ್ಞಾನಿಯು ಹೇಳಿದ ಸಂತೋಷದಲಿ
“ದಾಡಿಯ ಹಳಿಯದೆ ಬೆಳೆಯಿಸಿರಣ್ಣ
ದಾಡಿಯೆ ಮೋಕ್ಷಕೆ ಒಯ್ಯುವುದಣ್ಣ
ದಾಡಿಯೆ ತತ್ವಜ್ಞಾನಿಯ ಗುರುತು
ದಾಡಿಯ ವೀರರ ಧೀರರ ಗುರುತು
ದಾಡಿಯ ಪೆಣ್ಗಳ ಮೆಚ್ಚಿಪ ಗುರುತು
ದಾಡಿಯೆ ಏಕಚ್ಛತ್ರದ ಗುರುತು ;
ಮೀಸೆಯ ಬೋಳಿಸಿ ಗಡ್ಡವ ಬೋಳಿಸಿ
ಶೌರ್ಯವ ಧೈರವ ಎಲ್ಲಾ ಬೋಳಿಸಿ
ಮಿಣಮಿಣ ಮೆರೆಯುವ ಹೇಡಿಗಳನ್ನು
ನಮ್ಮಲಿ ಕೂಡರು ಗೊಂಬೆಗಳನ್ನು.
ಕೇಳಿರಿ, ನಿಮ್ಮಯ ಪೂರ್ವದ ಜನಗಳು
ವೇದವ್ಯಾಸರು ವಾಲ್ಮೀಕಿಗಳು
ದಾಡಿಯ ಬೆಳೆಯಿಸೆ ಕವಿತೆಯು ಬಂತು
ಕವಿತೆಯ ಜತೆಯಲಿ ಘನತೆಯು ಬಂತು
ಕವಿತೆಯು, ಘನತೆಯು ಲೋಕದಿ ನಿಂತು
ಇಂದೂ ಮನ್ನಣೆ ಪಡೆಯುತ್ತಿಹುದು
ಎಂದೆಂದೂ ಮನ್ನಣೆ ಪಡೆಯುವುದು.
ಹಿಂದಿನ ಋಷಿಗಳು ವನವಾಸಿಗಳು
ದಾಡಿಯ ಬೆಳೆಯಿಸೆ ಮಾತಪಸಿಗಳು
ದಾಡಿಗೆ ಈಗಲು ಬೆಲೆಯುಂಟಣ್ಣ
ದಾಡಿಯೆ ಶೀಲದ ಧ್ವಜಪಟವಣ್ಣ
ದಾಡಿಯ ಹಳಿಯದೆ ಬೆಳೆಯಿಸಿರಣ್ಣ
ದಾಡಿಯೆ ಮೋಕ್ಷಕೆ ಒಯ್ಯುವುದಣ್ಣ.”

ಈ ಮಾತನು ಕೇಳಿದ ಕೆಲ ಜನರು
ಆ ಜ್ಞಾನಿಯ ದುರ ದುರ ನೋಡಿದರು
ಹುಲ್ಲೆಗಳೆಲ್ಲಾ ಹುಲಿಯನ್ನು ತಿನ್ನಲು
ಗಿಳಿಗಳ ಬಳಗವು ಗಿಡುಗನ ತಿನ್ನಲು
ಹವಣಿಸ ತೆರದಲಿ ನೋಡಿದರವರು.
“ಇವನೇ ಆಗಿನ ಜಟಕಾ ಸಾಬಿ
ಅವನೇ ಈಗಿನ ತತ್ವಜ್ಞಾನಿ.
ಜಟಕಾ ಹೊಡೆಯಲು ಹೋಗೆಲೋ ಸಾಬಿ
ನೀನೇ ಲೋಕದಿ ಬಲು ಅಜ್ಞಾನಿ”
ಎಂದಾ ದುರುಳರು ಕೂಗಾಡಿದರು.

ಶಾಂತಿಯ ಸತ್ಯದ ನಸುನಗೆಯಲ್ಲಿ
ತಮದ ತುರಂಗವನೋಡಿಸುತಲ್ಲಿ
ಎಲ್ಲರ ಮೆಚ್ಚಿದ ಒಳ್ನುಡಿಯಲ್ಲಿ
ಆ ಜ್ಞಾನಿಯು ಉತ್ತರ ಹೇಳಿದನು
ತಿಳಿವಿನ ಹೊನಲನು ನೆರೆ ಹರಿಸಿದನು.
“ಹಗಲಿರುಳೆನ್ನದೆ ದುಡಿದೂ ದುಡಿದು
ಹೆಂಡಿರ ಮಕ್ಕಳ ಸಾಕುವನರಿದು
ಜಟಕಾ ಸಾಬಿಯ ಮಾತೇಕಣ್ಣ
ತಿಳಿಯದೆ ಮಾತನು ಆಡುವಿರಣ್ಣ.
ಜಟಕಾ ಹೊಡೆಯುವ ಸಾಬಿಯೆ ರಾಜ
ಆರಿಗು ಸಗ್ಗದ ಸಾಬಿಯೆ ಸಾಜ
ಹಂಗಿಲ್ಲದ ಬಾಳ್ಕೆಯೆ ಬಲು ತಾಜ
ತೇಜಿಯ ಹೂಡುವ ತೇಜದಿ ಬಾಳುವ
ರಾಜನ ಪದವಿಯ ಬದಿಗೊತ್ತಾಳುವ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ.
ಪಾಸನು ಮಾಡಿದ ಜಾಣರು ನೀವು
ಹಂಗಿನ ಭಿಕ್ಷವ ಬೇಡುವ ನೀವು
ಮಾನವ ತಿಳಿಯದೆ ಮಾನವ ತೊರೆದು
ಬಣ್ಣನೆ ಮಾತನು ಕಲಿತಾಡುವಿರಿ
ಸಾಜನ ರಾಜನ ಬರಿದೇಳಿಸಿರಿ.
ದುಡಿವುದೆ ಮಾನವು ಬೇಡಪಮಾನ
ಒಮ್ಮನದಿಂ ದುಡಿದವ ಸುಲ್ತಾನ
ಸುಮ್ಮನೆ ಕುಳಿತರೆ ಬರಿಯಪಮಾನ
ಅವರನ್ನು ಹಿಡಿದುಂಬುವ ಸೈತಾನ.
ಜಟಕಾ ಚಕ್ರವ ಸಾಬಿಯು ಹಿಡಿದು
ಸೈತಾನನ ಸೋಮಾರಿಯ ಕಡಿದು
ಅಲ್ಲಾ ಮೆಚ್ಚಲು ಸೈ, ಸೈ ಎನಲು
ತಾನದಿ ಗಾನದಿ ನೆರೆ ಬದುಕೆನಲು
ಬದುಕುವ ಜಟಕಾ ಹೊಡೆಯುವ ಸಾಬಿ
ಮೆಚ್ಚುವಳವನನು ಕಮಲದ ಬೀಬಿ.
ತುರುಕರ ಮಾತಿಗೆ ಸೈತಾನ್ ಬಾರ
ಅವರೊಲುಮೆಗೆ ಕೊಡುವನು ಬಂಗಾರ
ಬಾಳಿನ ನಾಡಿನ ಮೇಲಧಿಕಾರ
ನಿಮಗೇನಿರುವುದು ಬರಿಯಂಗಾರ!
ಹಿಂದಿನ ಜಟಕಾ ಹೊಡೆಯುವ ಸಾಬಿ
ಇಂದಿನ ಉತ್ತಮ ತತ್ವಜ್ಞಾನಿ;
ಜಟಕಾ ಹೊಡೆದವ ಸುಲ್ತಾನಾಗುವ
ಸುಮ್ಮನೆ ಕುಳಿತವ ಅವನಾಳಾಗುವ.
ಓದಿದ ಜಾಣರು ! ಹೇಳುವುದೇನು
ಓದಿತು ಗಿಳಿ ನೀವೋದಿದರೇನು ?
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ.
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ.
ಒಂದೇ ದೇವರು, ಒಂದೇ ಮತವು
ಸರ್ವ ಸಮರ್ಪಕ ತುರುಕರ ಮತವು
ನೀವೇ ಸೇರಿರಿ ತುರುಕರ ಮತಕೆ
ಈ ಮತ ಬರುವುದು ನಿಮ್ಮಭಿಮತಕೆ.”
ಗುಂಪಿನ ತುಂಟರು ಆರೋ ಕೆಲರು
“ಹೆಂಡಿರ ಮಕ್ಕಳ ಬಿಟ್ಟೋಡಿದವ!
ತತ್ವವ ಹೇಳುವ ಬಲು ಭಂಟನಿವ!
ತತ್ವವ ಕೇಳುವ ಹೆಡ್ಡರು ನಾವು
ನಡಯಿರೊ ಕೆಲಸಕೆ ಹೋಗುವ ನಾವು”
ಎಂದಾ ಜ್ಞಾನಿಯ ಜರಿದಾಡಿದರು.

ಶಾಂತಿಯ ಸತ್ಯದ ನಸುನಗೆಯಲ್ಲಿ
ಮನಸನು ಸೆಳೆಯುವ ಪೊಸ ಬಗೆಯಲ್ಲಿ
ಅವರನು ಕರೆದನು ತತ್ವಜ್ಞಾನಿ
ಸೈರಣೆ ಸಮತಾ ಭಾವದ ಮಾನಿ.
“ಉತ್ತರ ಹೇಳುವೆ ಹೋಗದಿರಣ್ಣ
ಆಡಿದ ಮಾತಿಗೆ ಮುನಿಸಿಲ್ಲಣ್ಣ
ತತ್ವಜ್ಞಾನಿಗೆ ಮುನಿಸೇಕಣ್ಣ?
ಇದ್ದರೆ ಆಗದು ನಮ್ಮಯ ಕೆಲಸ.
ಲೋಕವ ಗೆಲ್ಲುವ ಧರ್ಮದ ಕೆಲಸ.
ಹೋಗುವ ಹೋದರೆ ಹೋಗದು ಗಾಡಿ
ಹೊಟ್ಟೆಗೆ ಹಾಕುವ ಜಟಕಾ ಗಾಡಿ
ಹಿರಿಮಗ ದುಡಿವನು ಕಾಸನು ತರುವನು
ಅಮ್ಮನ ತಮ್ಮನ ನೆರೆ ಪೋಷಿಪನು
ನೀ ಹೋದರೆ ಉಳಿಯುವುದೇನಣ್ಣ?
ಜಟಕಾ ಸಾಬಿಯ ಜರಿಯದಿರಣ್ಣ
ಜಟಕಾ ಸಾಬಿಯು ಹುರುಪಿನ ಟಗರು
ಜಗವನು ಗೆಲ್ಲುವ ಕಾಳಗ ಟಗರು
ಅವನನು ಏಳಿಸಿ ಫಲವೇನಣ್ಣ
ಬದುಕುವ ಮಾತನ್ನು ಹೇಳುವೆನಣ್ಣ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ.”

“ತತ್ವದ ಮಾತನು ಹೇಳುತಲಿದ್ದೆ
ಸೈತಾನ್ ಹೊರಟುದ ಹೇಳುತಲಿದ್ದೆ.
ಕೋಪವ ಮಾಡದೆ ಕೇಳಿರಿ ನೀವು
ಸತ್ಯಕೆ ತಾಳ್ಮೆಯ ತಾಳಿರಿ ನೀವು
ದೇವರು ಅರಬೀಸ್ನಾನಕೆ ಹೋಗಲು
ಸೈತಾನ್ ಬಂದನು ಇಲ್ಲಿಯೇ ನೆಲಸಲು
ಬೂದಿಯನೆರಚುತ ಬಣ್ಣವ ಬಳಿಯುತ
ಮಟ್ಟಿಯ ತಳೆಯುತ ಸೈತಾನ್ ಊದಲು
ಮಂತ್ರವ ಹೇಳುತ ಬಳಗವ ಕೂಗಲು
ತೆಗೆದರು ಶಿವದಾರವ ಜನಿವಾರ
ಹೊರಟರು ಸೈತಾನಿನ ಪರಿವಾರ
ಕಲ್ಲನು ಮಣ್ಣನು ಹೂಡಿದರಿಲ್ಲಿ
ಬರಿ ಜಗಳವ ತಂದಿಕ್ಕಿದರಿಲ್ಲಿ
ಇಲ್ಲದ ಭೇದವ ಮಾಡಿದರಿಲ್ಲಿ
ನಿಮ್ಮಯ ಸತ್ವವ ಹೀರಿದರಿಲ್ಲಿ
ಬೆಂಡನು ಹೆಣವನ್ನು ತೋರಿದರಿಲ್ಲಿ
ಪರಮಾತ್ಮನ ಮರೆಮಾಡಿದರಿಲ್ಲಿ
ಸೈತಾನ್ ಮಾಡಿದ ಮೋಸವ ತಿಳಿದು
ನಿಮ್ಮಯ ಮನದಾ ಮೋಹನ ಕಳೆದು”
ಎಂದಾ ಜ್ಞಾನಿಯು ಹೇಳುತ್ತಿರಲು
ಜನರೆಲ್ಲಾ ರೇಗುತ ಕೂಗಿಡಲು
ಹಿಡಿದರು ಅವನನ್ನು ಪೊಲೀಸ್ ಜನರು-
ನ್ಯಾಯಸ್ಥಾನಕೆ ಎಳೆದಾಡಿದರು.

ನ್ಯಾಯಾಧೀಶನ ಸಮ್ಮುಖದಲ್ಲಿ
ತತ್ವಜ್ಞಾನಿಯು ಕುಳಿತಿಹನಲ್ಲಿ
ಏನೇನೆಂದರು ಮಾತಾಡದೆಯೆ
ಆರೇನೆಂದರು ತಾ ಕೇಳದೆಯೆ
ಕುಳಿತಿರುವನು ಗಾಢ ಸಮಾಧಿಯಲಿ
ಸಾತ್ವಿಕ ಕಳೆಯನ್ನು ನೆರೆ ಬೀರುತಲಿ.
ಹೇಳುವ ಮಾತನು ಪೋಲೀಸ್ ಜನರು
ದೂರುವ ಮಾತನು ಗುಂಪಿನ ಜನರು
ನ್ಯಾಯಾಧೀಶನು ಕೇಳುತಲಾಗ
ಕೊಟ್ಟನು ತಿಂಗಳು ಶಿಕ್ಷೆಯನಾಗ.
ತತ್ವಜ್ಞಾನಿಯು ಕಣ್ಣನು ತೆರೆದು
ಜ್ಞಾನದ ಬೆಳಕಿನ ತೆರೆಯನು ತೆರೆದು
ಹೊರಡಲು, ಧರ್ಮದ ಮೂರುತಿ ಎಂದನು
“ತಿಂಗಳು ಶಿಕ್ಷೆಯ ಕೊಟ್ಟಿಹೆನೀಗ
ಹೇಳುವ ಮಾತನು ಕೇಳುವನೀಗ
ಆಡುವುದಿದ್ದರೆ ನೀನಾಡುವುದು.”

ತತ್ವಜ್ಞಾನಿಯು ನಸುನಗುತೆಂದನು
“ಧರ್ಮದ ಮೂರುತಿ ! ನಾನೇನೆಂಬೆನು
ಸತ್ಯವ ನುಡಿದರೆ ಜೈಲಿಗೆ ಹಾಕಿ
ಮಿಥ್ಯವ ನುಡಿದರೆ ಬಿರುದನ್ನು ಹಾಕಿ ;
ಲೋಕವೆ ಕೆಟ್ಟಿತು ಬಲು ದುಷ್ಕಾಲ
ಧರ್ಮಕೆ ಬಂದುದು ಬಲು ಬರಗಾಲ.
ಸತ್ಯದ ಮಾತಿಗೆ ಶಿಕ್ಷೆಯದುಂಟೆ ?
ಸತ್ಯವ ತಡೆಯುವ ಗೋಡೆಗಳುಂಟೆ ?
ಸತ್ಯವ ಬಿಗಿಯುವ ಸರಳುಗಳುಂಟೆ ?
ಸತ್ಯವ ಸೋಲಿಪ ಧೀರರದುಂಟೆ ?
ಲೋಕವೆ ದೊಡ್ಡದು ಬಂದೀಖಾನೆ
ಸೈತಾನ್ ಮಾಡಿದ ಬಂದೀಖಾನೆ.
ತತ್ವವ ತಿಳಿದರೆ ಗೋಡೆಗಳುರುಳಿ
ಪಂಚೇಂದ್ರಿಯ ಬಂಧನ ತಾನುರುಳಿ
ಮನಸಿನ ಮದಗಜ ನೆಲದಲಿ ಹೊರಳಿ
ಬಿಗಿಸಿದ ಸರಳದು ಸುತ್ತಲು ಅರಳಿ
ಮೋಕ್ಷವೆ ಎದುರಿಗೆ ನಿಂದಿಹುದಣ್ಣ
ತುರುಕರ ಮತವೇ ಶಾಶ್ವತವಣ್ಣ;
ಒಂದೇ ದೇವರು, ಒಂದೇ ಮತವು
ಸರ್ವಸಮರ್ಪಕ ತುರುಕರ ಮತವು.
ಬದುಕುವ ಮಾತನ್ನು ಹೇಳುವೆನಣ್ಣ
ತುರುಕನು ಹೇಳಲು ಕೇಡೇನಣ್ಣ
ಸತ್ಯವೆ ದೇವರು ಸತ್ಯವ ಹೇಳುವೆ
ಸತ್ಯಕೆ ಜಾತಿಯ ಏತಕೆ ನೋಡುವೆ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ.
ಹೆಚ್ಚೂ ಕಡಮೇ ಎಂಬುದ ಕಳೆದು
ಸರ್ವರು ಸಮವಾಗಿಹುದನು ತಿಳಿದು
ಮೂರ್ತಿಯ ಹಂಗನು ನೆಟ್ಟನೆ ತೊರೆದು
ದೇವರನೊಲಿಸುವ ಜಟಕಾ ಸಾಬಿ
ನಿಲುಕದು ಅಲ್ಲಿಗೆ ನಿಮ್ಮಯ ಬುದ್ದಿ.
ಇರುವುದೆ ನರಕವು ಜಟಕಾ ಸಾಬಿಗೆ ?
ಇರುವುದೆ ಮುಕ್ತಿಯು ನಿಮಗೊಬ್ಬರಿಗೆ?
ಅವನನು ಏಳಿಸಿ ಮೆರೆಯುವ ನೀವು
ಬಾಳನು ತಿಳಿಯದ ಹೆಡ್ಡರು ನೀವು
ಧರ್ಮವನರಿಯದ ಕುರುಡರು ನೀವು
ಕಲ್ಲನು ಮಣ್ಣನು ಉಂಬಿರಿ ನೀವು.
ಜಾಣರ ಮತವೇ ಒಡೆದಿಹ ಮಡಕೆ !
ಜಾಣರ ಜಾತಿಯೆ ಬಿಚ್ಚಿದ ಪೊರಕೆ !
ಮೋಕ್ಷಾಮೃತವದು ತುಂಬುವುದುಂಟೆ ?
ಕರ್ಮದ ಕಸವನು ಗುಡಿಸುವುದುಂಟೆ ?
ಧ್ಯಾನಿಸಿ ವನದಲ್ಲಿ ಸಾಧಿಸಿ ತಿಳಿದರು
ಉತ್ತಮ ತತ್ವವ ಹಿಂದಿನ ಜನರು
ಇಸ್ಲಾಂ ತತ್ವವ ಬಿತ್ತಿದರವರು
ನಿಜದಲಿ ಬೆರೆಯುತ ಮುಕ್ತಿಯ ಪಡೆದರು
ತಿಳಿವನು ಜಗಕೆಲ್ಲಾ ಹರಡಿದರು.
ಕತ್ತಲೆಗೂಡಿದ ದೇಗುಲದಲ್ಲಿ
ಗೊಬ್ಬರ ತುಂಬಿದ ಕಗ್ಗವಿಯಲ್ಲಿ
ಕೊರಳನು ಬಿಗಿಯುವ ಸೆರೆಮನೆಯಲ್ಲಿ
ಮನಸಿನ ಕತ್ತಲೆ ಹರಿಯುವುದೆಲ್ಲಿ ?
ಉನ್ನತ ಭಾವಗಳೇರುವುದೆಲ್ಲಿ ?
ನೆಲಸಮ ಮಾಡಿರಿ ಕತ್ತಲೆ ಗೂಡನು
ಜಗಳವ ಬೆಳಸುವ ಭೇದದ ಬೀಡನು
ಕೂಡಲೆ ಹರಿವುದು ಬೆಳಕಿನ ಕಡಲು
ದಾಹವ ನೀಗುವ ಮುಕ್ತಿಯ ಕಡಲು
ವಿಶ್ವವ ಬೆಳಗುವ ದಿವ್ಯ ಜ್ಯೋತಿ
ಐಕ್ಯದ ಮಾರ್ಗವ ಬೆಳಗುವ ದೀಪ್ತಿ ;
ಒಂದೇ ಜಾತಿಯು ಒಂದೇ ಮತವು
ಶಕ್ತಿಯ ಗಳಿಸುವ ನಚ್ಚಿನ ಮತವು ;
ಒಂದೇ ದೇವರ ಮಕ್ಕಳು ನೀವು
ಸೋದರಭಾವದಿ ಕಲೆವುದು ನೀವು;
ಸೈತಾನ್ ಮಾಡಿದ ಮೋಸವ ತಿಳಿಯಿರಿ
ಒಟ್ಟಿಗೆ ಬದುಕುವ ಬುದಿಯ ತಳೆಯಿರಿ
ಒಟ್ಟಿಗೆ ಕಲೆತರೆ ತುರುಕರು ನೀವು
ಮೋಕ್ಷವ ಪಡೆಯುವ ವೀರರು ನೀವು
ಬಿಡಿ ಬಿಡಿ ನಿಂತರೆ ತುರು, ಕರು, ನೀವು
ಸೈತಾನ್ ಹುಲಿಗಳ ಬಾಯಿಗೆ ನೀವು”
ಎಂದೀ ಪರಿಯಲಿ ತತ್ವಜ್ಞಾನಿ
ನುಡಿಯಲು, ಕೇಳಿದ ಮಹದಭಿಮಾನಿ
ನ್ಯಾಯಾಧೀಶನು ಖಾತಿಯಲಾಗ
“ವರ್ಷದ ಶಿಕ್ಷೆಯ ಕೊಟ್ಟಿಹೆನೀಗ
ಶಾಂತಿಯ ರಕ್ಷಣೆ ಮಾಡಲೆ ಬೇಕು
ಕ್ರಾಂತಿಯ ಮೊಳಕೆಯ ತುಳಿಯಲೆ ಬೇಕು
ಜೈಲಲ್ಲಿದ್ದರೆ ಹುಚ್ಚಿಳಿಯುವುದು
ಕುದಿಯುವ ಮೆದುಳದು ತಂಪಾಗುವುದು”
ಎಂದಾಡುತ ಮುಂದಕೆ ತೆರಳಿದನು
ತತ್ವಜ್ಞಾನಿಯು ನಗೆಸೂಸಿದನು.

ಆದುದು ತತ್ವಜ್ಞಾನಿಗೆ ಶಿಕ್ಷೆ
ಶಾಂತಿಯ ಬದುಕಿಗೆ ಕಟ್ಟಿದ ರಕ್ಷೆ.
ಅವನನು ತಂದರು ಜೈಲಿನ ಮನೆಗೆ
ಬಿಗಿದರು ಬೀಗವ ಕಿರುಬಾಗಿಲಿಗೆ.
ಹಿಗ್ಗಿದ ಜನರೊಡನೆಯೆ ಕುಗ್ಗಿದರು
ಕಣ್ಣೀರಿಕ್ಕುತ ಮನೆ ಸೇರಿದರು.

ನ್ಯಾಯಾಧೀಶನು ಮಲಗುವ ಮನೆಯಲಿ
ನಿದ್ದೆಯ ಮಾಡುತ ನಟ್ಟಿರುಳಿನಲಿ
ಬೆಚ್ಚುತ ಬೆದರುತ ಕಂಪಿಸುತಾಗ
ನೀನಾರೆನ್ನುತ ಕೂಗಿದನಾಗ
“ಕಲ್ಲಿನ ಗೋಡೆಯು ಕಬ್ಬಿಣ ಬಾಗಿಲು
ಮೀರಿಹೆಯೆಂತೋ ಕಟ್ಟಿನ ಕಾವಲು !”
ತತ್ವಜ್ಞಾನಿಯು ನಸುನಗುತೆಂದನು
“ನಾನೇ ಬಂದಿಹೆ ಅಂಜಿಕೆಯೇನು ?
ಅಂಗೈ ಹಣ್ಣಿಗೆ ಕನ್ನಡಿಯುಂಟೆ ?
ಕ್ರಾಂತಿಯ ಉದ್ಗಮ ತಡೆಯುವರುಂಟೆ ?
ಕಾಲಜ್ಞಾನಿಗೆ ಗೋಡೆಗಳುಂಟೆ ?”
ಎಂದಾ ಕಿಟಿಕಿಯ ಬಾಗಿಲು ತೆರೆದನು
ನಸುನಗುತಲ್ಲಿಂ ಮೆಲ್ಲಗೆ ನಡೆದನು.
ತತ್ವಜ್ಞಾನಿಯು ಜೈಲಲ್ಲಿರುವನು
ಊರಲ್ಲಿರುವನು ನಾಡಲ್ಲಿರುವನು
ಮನೆ ಮನೆಯಲ್ಲೂ ಅವನೇ ಇರುವನು
ದೇಶದ ತುಂಬಾ ಅವನೇ ಇರುವನು.
ಸತ್ಯವ ತಡೆಯುವ ಗೋಡೆಗಳುಂಟೆ ?
ಜ್ಞಾನಿಯ ತಡೆಯುವ ಸರಳುಗಳುಂಟೆ ?
*****