ಇತಿಯೋಪಿಯಾದಲ್ಲಿ ಕ್ಷಾಮ ಬಂದು
ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು
ಬೆಳಗ್ಗಿನ ಕಾಫಿ ಹೀರುತ್ತ
ಪತ್ರಿಕೆಯಲ್ಲಿ ಓದಿ

ಕೇಳಿದೆಯೇನೆ ಸುದ್ದಿ
ಎಂದು ಉದ್ಗರಿಸಲಿಲ್ಲ.
ದೇವರಿಗೆ ದೀಪ ಹಚ್ಚಿ ನೀನು
ಪ್ರಾರ್ಥಿಸುತ್ತಿದ್ದುದು ಏನು
ಎಂದು ಕೇಳಲಿಲ್ಲ.

ಮನೆಯೆದುರಿನ ಆಲದ ಮರದಿಂದ ಕಾಗೆಗಳು
ಹಾರಿ ಹೋದುವು ಸದ್ದಿಲ್ಲದೆ.
ಇದು ಸಂಶೋಧಕರ ಗಮನಕ್ಕೆ ಬಂದಾಗ
ಯಾರೂ ಬದುಕಿರಲಿಲ್ಲ.

ಈ ಗ್ರಾಮ ನೀರಿಲ್ಲದೆ ಸತ್ತಿತು.
ನೀರಿಗಾಗಿ ಹೋದವರು
ದಾರಿಯಲ್ಲಿ ಬಿದ್ದರು.  ಕೊಡಗಳ ಚೂರು
ಅಲ್ಲಲ್ಲಿ ಒಂದೆರಡು ಎಲುಬುಗಳ ತುಂಡು
ಮತ್ತೆ ಇವರ ಕಣ್ಣುಗಳೇನಾದವೋ
ಯಾರಿಗೂ ತಿಳಿಯದು.

ಸೂರ್ಯಕಾಂತಿಗೆ ಮಣ್ಣುನೀರುಬೇಕು
ಅಳುವುದಕ್ಕಾದರೂ ಕಣ್ಣುಬೇಕು
ಬೆಂಗಾಡಿನಲ್ಲೇನು ಸಾವುನೋವು
ಸತ್ತಮೇಲೇನು ಮತ್ತೆ ಸಾವು

ಇದು ಮೊತ್ತಮೊದಲು ವಿಮಾನಪ್ರಯಾಣಿಕರ ದೃಷ್ಟಿಗೆ ಬಿತ್ತು
ಕೆಳಗೆ ಹದ್ದುಗಳು ಎರಗುವುದನ್ನು ಇವರು ಗಮನಿಸಿದರು
ಮರಣದ ವಾಸನೆ ಎಷ್ಟು ದೂರ ಹೊಡೆದೀತು
ಇಡೀ ಗ್ರಾಮವೇ ನಾಶವಾದಮೇಲೆ

ಮುಸುಲೊನಿಯೂ ಒಮ್ಮೆ ಹೀಗೆ ಎರಗಿದ್ದನಲ್ಲ
ಅದೊಂದು ಇತಿಹಾಸ.  ಇದು
ಅದರ ಪರಿಹಾಸ.  ಹೀಗೆ
ಕುರುಡು ರಾಜ್ಯದ ಕಣ್ಣುಗುಂಡಿಗಳಲ್ಲಿ
ಕಂಡುಕಾಣದ ಕತೆಗಳು
ಮರುಕಳಿಸುವ ವ್ಯಥೆಗಳು

ಆದರೆ ಇದೀಗ ಬಿಸಿಲ ಬೇಗೆ ನನ್ನ ಮುಖಕ್ಕೇ ಹೊಡೆಯುತ್ತಿದೆ
ನೋಡಲಾರೆ ಹೊರಕ್ಕೆ
ಹೊರಟಿದ್ದಾಳೆ ಈಕೆ ನೀರಿಗೆಂದು
ದೂರದ ಬಾವಿಗೆ
*****