ಮುಂದೆ ಬಂದರೆ ಹಾಯಬೇಡ
ಹಿಂದೆ ಬಂದರೆ ಒದೆಯಬೇಡ
ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು
ಕಂಬನಿಯ ಕೆಚ್ಚಲು ಕರೆಯಬೇಡ
ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ
ನನ್ನ ಭವಿಷ್ಯವ ನೀನೇ ಬರೆಯಬೇಡ

ಹೋಗು ನಿನಗಾಗಿ
ಹಾತೊರೆದ ಹುಲಿಯ ಎದುರೇ ನಿಲ್ಲು
ಒಡ್ಡು ಗುಂಡಿಗೆಯ ರಕ್ತ ಬಿಸಿ
ನನ್ನ ಮಗು ತರಳ ಇನ್ನೂ ಹಸಿ
ಕೊಡು ಅವನಿಗೂ ಸಾವು
ಕೂಡಿ ಬರುವೆವು ನಾವು
ನಿನ್ನ ಜೀವಾರಣ್ಯ ರೋದನದ
ಹಂಬಲ ಕಟ್ಟಿದ ಕೊಟ್ಟಿಗೆಯಲ್ಲಿ
ಉಳಿಯಗೊಡು ನನ್ನ
ಕರುವಿನ ಕಿರಿದೊಗಲು ನೆಕ್ಕಿ ಇಗೋ
ಉಣಿಸುತ್ತೇನೆ ಶ್ವಾಸ-ನಾನೇ ಸತ್ತರೂ
ನನ್ನನ್ನೇ ನಿನಗೇ ಇತ್ತರೂ

ಸಾವು ನಿನ್ನನ್ನು ಕರೆಯುವ ಹೊತ್ತು,
ಈ ರೀತಿ ನನ್ನನ್ನೂ ಹೊತ್ತು
ನಡೆ ಕೂಡಿ ಬದುಕೋಣ ಸಾವಿನಲ್ಲೂ
ಮತ್ತು ಹಾಗೆ ಇಲ್ಲೂ

ಹೆಬ್ಬುಲಿಯ ಬಾಯಲ್ಲಿ
ಬಾಯಾರಿ ನಡೆವಾಗ
ನಿನ್ನ ಕರುವಿನ ಕರುಳು ಕೀಳಬೇಡ
ಹೀಗೆ ಮುಂದೂ ಹಾದು
ಹಿಂದಿಂದಲೂ ಒದೆದು
ನನ್ನ ತಬ್ಬಲಿ ‘ಮಾಡಿ’ ಹೋಗಬೇಡ
*****