ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು
ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ. ಅದನ್ನೆಲ್ಲ ಎದುರಿಸಲು ಮಾನಸಿಕವಾಗಿ
ಸಿದ್ಧವಾಗಿಟ್ಟಿದ್ದೇನೆ. ಆತ್ಮವಿಶ್ವಾಸದಿಂದ ಹೇಳಿದ.
ಅವಳ ಮನೆಗೆ ಎಲ್ಲಾ ವಿಚಾರ ಗೊತ್ತಾದ್ರೆ ಏನ್ಮಾಡ್ತಿಯ ಅಭಿಮನ್ಯು? ನನ್ಗೆ ನಿನ್ನ ನೆನಸ್ಕೊಂಡ್ರೆ ಭಯ ಆಗ್ತಾ ಇದೆ
ನೀನು ಆತಂಕ ಪಡುವಷ್ಟೇನು ಪರಿಸ್ಥಿತಿ ಬಿಗಡಾಯಿಸಿಲ್ಲ ಬಿಡು. ಅವಳ ಮನೆಯವರಿಗೇನು ನಮ್ಮ ಪ್ರೀತಿಯ ವಿಷಯ ಗೊತ್ತಾಗಿಲ್ಲ. ಗೊತ್ತಾಗಿದ್ರೆ ಅವರು ನಡ್ಕೊಳ್ಳೋ ರೀತಿನೇ ಬೇರೆ ತರ ಇತಾ ಇತ್ತು. ಮೊನ್ನೆ ಮೊನ್ನೆತಾನೇ ಅವರ ಅಮ್ಮ ಮನೆಗೆ ಔತಣಕೂಟಕ್ಕೆ ಆಹ್ವಾನಿಸಿದ್ರು. ನಾನು ಇಲ್ಲದ ನೆಪ ಹೇಳಿ ಜಾರಿಕೊಂಡೆ. ಔತಣಕೂಟಕ್ಕೆ ಹೋಗುವ ಮನಸ್ಸಿತ್ತು. ಆದರೆ ಒಂದಲ್ಲಾ ಒಂದು ದಿನ ಅವಳನ್ನ ಆರಿಸಿಕೊಂಡು ಹೋಗೋದು ನಿಶ್ಚಿತ. ಆ ಸಂದರ್ಭ ‘ಉಪ್ಪು ತಿಂದ ಮನೆಗೆ ಎರಡು ಬಗೆದ ಎಂಬ ಮಾತಿನಿಂದ ತಪ್ಪಿಸಿಕೊಳ್ಳೋದಕ್ಕೆ ನಾನು ಔತಣಕೂಟಕ್ಕೆ ಹೋಗ್ಲಿಲ್ಲ. ಪ್ರೀತಿಯನ್ನು ಎಲ್ಲಾ ಕಾಲಕ್ಕೂ ಬಚ್ಚಿಡಲು ಸಾಧ್ಯವಿಲ್ಲ ಬಿಡು. ಒಂದಲ್ಲಾ ಒಂದು ದಿನ ಅವರ ಮನೆಗೆ ಖಂಡಿತ ಗೊತ್ತಾಗುತ್ತೆ. ಅದನ್ನ ತಪ್ಪಿಸೋದಕ್ಕೆ ಯಾರಿಂದ ಸಾಧ್ಯ ಹೇಳು? ಬರುವ ಸವಾಲುಗಳನ್ನು ಎದುರಿಸಬೇಕಷ್ಟೆ ಅಂದ ಅಭಿಮನ್ಯು ಹೊರಡಲು ಅಣಿಯಾಗಿ ನಿಂತ.
ಮನೆಗೆ ಬಂದು ಅರ್ಧ ಗಂಟೆ ಕೂಡ ಆಗಿಲ್ಲ. ಅಷ್ಟೊಂದು ಬೇಗ ಅಭಿಮನ್ಯುವನ್ನು ಕಳುಹಿಸಿಕೊಡಲು ಭಾಗ್ಯಳಿಗೆ ಮನಸ್ಸಾಗಲಿಲ್ಲ. ಸ್ವಲ್ಪ ಹೊತ್ತು ಇದ್ದು ಹೋಗು, ಅಷ್ಟೊಂದು ಅವಸರ ಏನು? ಅಯ್ಯೋ…! ಮಾತಾಡ್ತಾ, ಮಾತಾಡ್ತಾ ನಿನ್ಗೆ ಕಾಫಿ ಕೊಡೋದನ್ನೇ ಮರೆತು ಬಿಟ್ಟೆ. ಒಂದೈದು ನಿಮಿಷ ಇರು, ಕಾಫಿ ರೆಡಿ ಮಾಡ್ಕೊಂಡು ತತೇನೆ. ನಿನ್ಗೆ ಮನೆಯಲ್ಲಿ ಹೋಗಿ ಮಾಡೋದಕ್ಕೇನು ಕೆಲ್ಸ ಇಲ್ಲ ಅಂತ ನನ್ಗೆ ಚೆನ್ನಾಗಿ ಗೊತ್ತು. ಕಾಫಿ ಕುಡಿಯದೆ ಹಾಗೆ ಹೋದ್ರೆ ನನ್ಗೆ ಬೇಸರ ಆಗುತ್ತೆ. ನೀನು ಅಕ್ಷರಳ ಮನೆಯ ಆತಿಥ್ಯ ಸ್ವೀಕಾರ ಮಾಡದಿರಲು ಪ್ರೀತಿ ಅಡ್ಡ ಬಂತು. ಆದ್ರೆ, ನನ್ನ ಮನೆಯ ಆತಿಥ್ಯ ಸ್ವೀಕಾರ ಮಾಡೋದಕ್ಕೆ ಯಾವುದಾದರು ಅಡ್ಡಿ ಉಂಟಾ? ಸುಮ್ನೆ ಏನು ಮಾತಾಡದೆ ಕೂತ್ಕೊ, ಕಾಫಿ ತತೇನೆ ಅಂದ ಭಾಗ್ಯ ಅಭಿಮನ್ಯು ಏನೋ ಮಾತಾಡಲು ಮುಂದಾಗುವಷ್ಟರಲ್ಲಿ ಅವನ ಮಾತು ಕೇಳಿಸಿಕೊಳ್ಳದೆ ಕಾಫಿ ತರಲು ಮನೆಯೊಳಗೆ ನಡೆದಳು.
ತರಾತುರಿಯಲ್ಲಿ ಎರಡು ಕಪ್ ಕಾಫಿ ತಯಾರು ಮಾಡಿ ತಂದ ಭಾಗ್ಯ ಒಂದು ಕಪ್ ಅಭಿಮನ್ಯುವಿನ ಕೈಗಿತ್ತು ಕಾಫಿ ಕುಡಿಯುತ್ತಾ ಮಾತು ಶುರು ಮಾಡಿಕೊಂಡಳು. ನನ್ಗೆ ಮನೆಯಲ್ಲಿ ಇದ್ದೂ ಇದ್ದು ಬೋರ್ ಹೊಡಿಯ್ತಾ ಇದೆ. ಫ್ರೆಂಡ್ಸ್ ಯಾರಾದ್ರು ಬಂದ್ರೆ ಒಂದಷ್ಟು ಸಮಯ ಕಳೆಯಬಹುದು. ಇವತ್ತು ನೀನು ಬಂದಿರೋದು ನನ್ಗೆ ತುಂಬನೇ ಖುಷಿಯಾಯ್ತು ಅಂದಳು.
ಅಭಿಮನ್ಯು ಕಾಫಿ ಕುಡಿದು ಹೊರಡಲು ಎದ್ದು ನಿಂತ. ಭಾಗ್ಯ ಮನೆಯ ಗೇಟ್‌ವರೆಗೆ ಬಂದು ಅಭಿಮನ್ಯುವನ್ನು ಬೀಳ್ಕೊಟ್ಟಳು.
ಕೋತಿ ಆಗಿಂದಾಗೆ ಬತಾ ಇರೋ. ಇಲ್ದಿದ್ರೆ ಒದೆ ಬೀಳುತ್ತೆ ನೋಡು. ಈ ದಾರಿನ ಮರೆತು ಬಿಡ್ಬೇಡ ಅಕ್ಕರೆಯಿಂದ ಹೇಳಿ ದಳು.
* * *
ಇಲ್ಲ ಇನ್ನು ಮುಂದೆ ಹಾಗಾಗೋದಿಲ್ಲ. ಆಗಿಂದಾಗೆ ಬತನೇ ಇತೇನೆ ಅಂದ ಅಭಿಮನ್ಯು ಮನೆಯ ಕಡೆಗೆ ನಡಿಗೆ ಹಾಕಿದ. ಮನೆಯಲ್ಲಿ ವಾತ್ಸಲ್ಯ ಕೋಪದಿಂದ ಕುದಿಯುತ್ತಿದ್ದರು. ಅದ್ಯಾಕೋ ಯಾವತ್ತೂ ಕಾಣದ ಸಿಟ್ಟನ್ನು ಅಮ್ಮನ ಮೊಗದಲ್ಲಿ ಮೊದಲ ಬಾರಿಗೆ ಕಂಡ ಅಭಿಮನ್ಯುವಿನ ಮನದಲ್ಲಿ ಭಯ ಆವರಿಸಿಕೊಂಡಿತು. ಕೋಪದಿಂದ ವಾತ್ಸಲ್ಯ ಮಗನ ಕಡೆಗೆ ಕೆಂಗಣ್ಣು ಬೀರಿದರು.
ಇತ್ತೀಚೆಗೆ ನೀನು ತುಳಿಯ್ತಾ ಇರೋ ಹಾದಿ ನನ್ಗೆ ಸರಿ ಕಾಣಿಸ್ತಾ ಇಲ್ಲ. ಮನುಷ್ಯ ಯಾವತ್ತೂ ನೆಲದ ಮೇಲೆ ನಡಿಬೇಕು. ಆಕಾಶದಲ್ಲಿ ನಡೆದಾಡೋಕ್ಕೆ ಪ್ರಯತ್ನ ಪಡ್ಬಾದು. ಆ ರಾಜಶೇಖರ್ ಮಗಳೊಂದಿಗೆ ನಿನ್ಗೆ ಅದೇನು ಅಷ್ಟೊಂದು ಸಲುಗೆ? ದಿನಬೆಳಗಾದ್ರೆ ಸಾಕು ಇಬ್ರು ಒಟ್ಟಿಗೆ ಓಡಾಡ್ತಾ ಇತೀರ ಅಂತ ಜನ ಮಾತಾಡ್ಕೊಳ್ತಾ ಇದ್ದಾರೆ. ನಿನ್ಗೆ ಮಾಡ್ಲಿಕ್ಕೆ ಬೇರೆ ಏನು ಕೆಲ್ಸ ಇಲ್ವ? ಮೊದಲ ಬಾರಿಗೆ ಮಗನ ವಿರುದ್ಧ ಗುಡುಗಿದರು.
ಪ್ರೀತಿಯ ವಿಚಾರ ಮನೆ ತನಕ ಬಂದು ತಲುಪಿದೆ. ಒಂದಷ್ಟು ಸುಳ್ಳು ಹೇಳಿ ಜಾರಿಕೊಳ್ಳದೆ ಇದ್ದರೆ ಮನೆಯಲ್ಲಿ ದೊಡ್ಡ ರಾಮಾಯಣವೇ ನಡೆದು ಹೋಗುತ್ತದೆ ಎಂದು ಅಂದುಕೊಂಡ ಅಭಿಮನ್ಯು ಅಮ್ಮನ ಮನವೊಲಿಸುವ ಕಾರ್ಯಕ್ಕೆ ಇಳಿದ.
ಅಮ್ಮ ನೀನಂದುಕೊಂಡಂತೇನು ನಾವಿಲ್ಲ. ನನ್ನ ವ್ಯಾಪಾರ ವಹಿವಾಟಿಗೆ ಸಹಕಾರ ನೀಡದವಳೇ ಅವಳು. ಅವಳಿಂದಾಗಿ ಈ ಮನೆಯಲ್ಲಿ ನಗು ಕಾಣುವಂತಾಗಿದೆ. ಅವಳಿಲ್ಲದೆ ಇದ್ದಿದ್ರೆ ನಾನು ಇಷ್ಟೊತ್ತಿಗಾಗಲೇ ಆತ್ಮಹತ್ಯೆ ಮಾಡ್ಕೊಳ್ತಾ ಇದ್ದೆ ಏನೋ…? ಅವಳು ಮಾಡಿದ ಉಪಕಾರಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯ್ತಾ ಇಲ್ಲ. ನಾವಿಬ್ರು ಒಟ್ಟಿಗೆ ಓಡಾಡಿದ್ರೆ ಜನ ಅದನ್ನ ಯಾಕೆ ಪ್ರೀತಿ ಅಂಥ ತಿಳ್ಕೋಬೇಕು? ದಿನನಿತ್ಯ ನಾನು ನೂರಾರು ಹುಡ್ಗಿರ ಜೊತೆ ಓಡಾಡಿದ್ರೆ ಅವರನ್ನೆಲ್ಲ ನನ್ನ ಲವ್ವಸ್ ಅಂಥ ಕರೆಯೋದಕ್ಕೆ ಸಾಧ್ಯನಾ…? ಹಾದಿ ಬೀದಿಯಲ್ಲಿ ಹೋಗುವವರ ಮಾತು ಕೇಳಿ ತಲೆ ಕೆಡಿಸಿಕೊಳ್ಬೇಡ. ಒಂದ್ವೇಳೆ ಅವಳನ್ನ ನಾನು ಪ್ರೀತಿಸೋದಕ್ಕೆ ಪ್ರಾರಂಭ ಮಾಡಿದ್ರೆ ಅದರಲ್ಲಿ ತಪ್ಪೇನಿದೆ? ಆಕೆಯ ಮೇಲೆ ಪ್ರೀತಿಯೇ ಹುಟ್ಟಿಕೊಂಡಿಲ್ಲ ಎಂಬಂತೆ ಮಾತನಾಡಿದ.
ಪ್ರೀತಿಸೋದ್ರಲ್ಲಿ ತಪ್ಪೇನು ಇಲ್ಲ ಮಗ. ಆದ್ರೆ, ನಮ್ಮ ಅಂತಸ್ತಿಗೆ ತಕ್ಕಂತ ಹುಡ್ಗಿನ ನೋಡಿ ಪ್ರೀತಿಸ್ಬೇಕು. ದೊಡ್ಡವರ ಮನೆಯ ಹುಡುಗಿಯರನ್ನ ಪ್ರೀತಿಸೋ ವಿಚಾರ ಗೊತ್ತಾದ್ರೆ ಅವರು ಸುಮ್ನೆ ಇತಾರಾ ಹೇಳು? ನಮ್ಮನ್ನ ಈ ಊರಿಂದಲ್ಲೇ ಓಡಿಸಿಬಿಡ್ತಾರೆ.
ದೊಡ್ಡವರ ಸಹವಾಸ ನಮ್ಗೆ ಯಾಕೆ ಬೇಕು ಹೇಳು? ಶ್ರೀಮಂತರ ಮನೆಯ ಹುಡುಗಿಯರು ಪ್ರೀತಿ-ಪ್ರೀತಿ ಅಂತ ಪ್ರಾರಂಭದಲ್ಲಿ ಕನವರಿಸ್ತಾರೆ. ಮದ್ವೆ ವಿಚಾರ ಬಂದಾಗ ಅವರ ಆಸ್ತಿ ಅಂತಸ್ತಿಗೆ ತಕ್ಕಂತವರನ್ನ ಹುಡ್ಕೊಂಡು ಹೊರಟೋಗ್ತಾರೆ. ಇಲ್ಲಿ ತನ್ಕ ಚೆನ್ನಾಗಿಯೇ ಇದ್ದೆಯಲ್ವೋ? ಇವಾಗ ಯಾಕೆ ಪ್ರೀತಿಗೋಸ್ಕರ ಅವಳ ಹಿಂದೆ ಬಿದ್ದಿದ್ದೀಯ?
ಮಾತು ಒಂದು ಅಂತಿಮ ಘಟ್ಟಕ್ಕೆ ತಲುಪುವುದು ನಿಶ್ಚಿತವಾಗುತ್ತಿದ್ದಂತೆ ಮಾತಿಗೆ ಅರ್ಧದಲ್ಲಿಯೇ ವಿರಾಮ ಹಾಡಿ ಬಿಡಲು ನಿರ್ಧರಿಸಿದ ಅಭಿಮನ್ಯು ಗಂಭೀರವಾದ ಧ್ವನಿಯಲ್ಲಿ: ಸುಮ್ನೆ ಇರಮ್ಮ. ಪುನಃ ಪುನಃ ಅದೇ ವಿಚಾರ ಕೆದಕ್ಬೇಡ. ನಾನು ಸುಮ್ನೆ ಖುಷಿಗೆ ಅವಳ ಜೊತೆ ಸುತ್ತಾಡ್ತಾ ಇತಿನಿ. ಆ ವಿಚಾರ ಅವರ ಮನೆಗೂ ಕೂಡ ಗೊತ್ತಿದೆ. ನಿನ್ಗೆ ಈಗತಾನೆ ಗೊತ್ತಾಗಿದೆ ಅಷ್ಟೆ. ಅಕ್ಷರ ದಿನಾ ಮನೆಗೆ ತಿಳಿಸಿಯೇ ನನ್ನ ಭೇಟಿಯಾಗೋದು. ನಿನ್ನ ಮಾತು ಕೇಳ್ತಾ ಇದ್ರೆ ಅವಳನ್ನ ಪ್ರೀತಿಸ್ಬೇಕೂಂತ ಮನಸ್ಸು ಹೇಳ್ತಾ ಇದೆ. ಅವಳನ್ನೆಲ್ಲಾದ್ರು ಪ್ರೀತಿಸೋದಕ್ಕೆ ಪ್ರಾರಂಭ ಮಾಡಿದ್ರೆ ಅದಕ್ಕೆ ನೀನೇ ಕಾರಣಕರ್ತಳಾಗ್ತಿಯ ನೋಡು ಏರಿದ ಧ್ವನಿಯಲ್ಲಿ ಮಾತನಾಡಿ ಅಮ್ಮನ ಬಾಯಿ ಮುಚ್ಚಿಸಲು ಮುಂದಾದ.
ಮಗನ ಮಾತು ಕೇಳಿ ವಾತ್ಸಲ್ಯಳಿಗೆ ಸ್ವಲ್ಪ ಸಮಾಧಾನ ಆದಂತಾಯ್ತು. ಸದ್ಯ ಮಗ ಪ್ರೀತಿಯ ಬಲೆಗೆ ಬಿದ್ದಿಲ್ಲ ಎಂಬ ತೃಪ್ತಿ ಅವರ ಮನದಲ್ಲಿ ಮೂಡಿತು. ಅಬ್ಬಾ…, ನನ್ಗೆ ಈಗ ತೃಪ್ತಿಯಾಯ್ತು ಮಗ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಜನರು ಆಡುತ್ತಿದ್ದ ಮಾತು ಆಕೆಯ ಕಿವಿಗೆ ಬಿದ್ದಿತು. ಮಗ ಹಾದಿ ತಪ್ಪಿಹೋಗಿದ್ದಾನೆ ಎಂಬ ಕಳವಳಕ್ಕೆ ಒಳಗಾಗಿದ್ದರು. ಆಕೆಗೆ ಆಸರೆಯಾಗಿರುವವನು ಅಭಿಮನ್ಯುವೊಬ್ಬನೆ. ಅವನನ್ನೇ ಕಳೆದುಕೊಂಡರೆ ಬದುಕಿ ಏನು ಸುಖವಿದೆ. ಮಗನ ಮೇಲೆ ಎಲ್ಲಿಲ್ಲದ ಮಮಕಾರ, ನಂಬಿಕೆ ಆಕೆಗಿತ್ತು. ಆದರೆ, ಅವನ ವಯಸ್ಸಿನ ಮೇಲೆ ಆಕೆಗೆ ನಂಬಿಕೆ ಇರಲಿಲ್ಲ. ಆ ವಯಸ್ಸೇ ಅಂತಹದ್ದು. ಮೆಲ್ಲನೆ ಪ್ರೀತಿಯ ಕಡೆಗೆ ಸೆಳೆದುಬಿಡುತ್ತದೆ. ಆದಷ್ಟು ಬೇಗ ಮಗನ ಮದುವೆ ಮಾಡಿ ಮುಗಿಸಿಬಿಡಬೇಕು. ಇಲ್ಲವಾದರೆ ಇಂಥಹ ಜನ ಆಡುವ ನೂರಾರು ಮಾತುಗಳನ್ನು ಕೇಳಿ ದಿನಾ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ ಅಂದುಕೊಂಡರು.
ಒಂದುವಾರದ ಹಿಂದಷ್ಟೇ ಆಕೆಯ ಅಣ್ಣ ಗೋಪಿನಾಥ್ ಅಭಿಮನ್ಯುವಿನ ಮದುವೆಯ ವಿಷಯ ಪ್ರಸ್ತಾಪ ಮಾಡಿ ಮೈಸೂರಿ ನಲ್ಲಿ ಅಭಿಮನ್ಯುವಿಗೆ ಹುಡುಗಿ ನೋಡಿಟ್ಟಿದ್ದೇನೆಂದು ಹೇಳಿದ ಮಾತನ್ನು ನೆನೆಸಿಕೊಂಡ ವಾತ್ಸಲ್ಯ ಮಗಾ, ನಿನ್ಗೆ ದೊಡ್ಡಪ್ಪ ಮೈಸೂರಿನಲ್ಲಿ ಒಂದು ಒಳ್ಳೆಯ ಹುಡ್ಗಿನ ನೋಡಿದ್ದಾರಂತೆ. ಹುಡ್ಗಿ ತುಂಬಾ ಲಕ್ಷಣವಾಗಿ ಇದ್ದಾಳಂತೆ. ಅಲ್ಲೇ ಯಾವುದೋ ಸ್ಕೂಲ್‌ನಲ್ಲಿ ಟೀಚರ್ ಆಗಿದ್ದಾಳಂತೆ, ಕೈ ತುಂಬ ಸಂಬಳ ತಗೋತ್ತಾಳೆ. ನಿನ್ಗೆ ಖುಷಿ ಇದ್ರೆ ಒಂದ್ಸಲ ಹೋಗಿ ನೋಡ್ಕೊಂಡು ಬಾ ಮದುವೆಯ ವಿಚಾರ ಮುಂದಿಟ್ಟು ಉತ್ತರಕ್ಕಾಗಿ ಮಗನ ಕಡೆಗೆ ದೃಷ್ಟಿನೆಟ್ಟರು.
ಅಭಿಮನ್ಯುವಿಗೆ ಅಮ್ಮನ ಮಾತು ಕೇಳಿ ಸಿಟ್ಟು ಬಂತಾದರೂ ಸಹಿಸಿಕೊಂಡ. ಅಮ್ಮನ ಆಸೆ, ಒತ್ತಾಯಕ್ಕೆ ಮಣಿದು ಹುಡುಗಿ ಯನ್ನು ನೋಡೋದಕ್ಕೆ ಹೋದರೆ ಅಕ್ಷರ ಆತ್ಮಹತ್ಯೆ ಮಾಡಿಕೊಳ್ಳೋದು ನಿಶ್ಚಿತ. ಮದುವೆಯ ವಿಚಾರವನ್ನು ಅಮ್ಮನ ತಲೆಯಿಂದ ಕಿತ್ತೊಗೆಯುವುದೇ ಒಳ್ಳೆಯದೆಂದು ಅಂದುಕೊಂಡ.
ಅಮ್ಮ ಸ್ವಲ್ಪ ನನ್ನ ನೆಮ್ಮದಿಯಾಗಿ ಇರೋದಕ್ಕೆ ಬಿಡು. ಈಗ್ಲೇ ಮದ್ವೆಗಿದ್ವೆ ಅಂತ ತಲೆ ತಿನ್ಬೇಡ. ನನ್ಗೆ ಮದ್ವೆಯಾಗೋ ಮನಸ್ಸಾದಾಗ ನಾನೇ ಬಂದು ಹೇಳ್ತೇನೆ. ಆವಾಗ ಹುಡುಗಿ ಹುಡುಕುವ ಕೆಲಸ ಮಾಡಿದರೆ ಸಾಕು. ಅಲ್ಲಿ ತನ್ಕ ನೀನು ಸುಮ್ನೆ ಇರೋದೇ ವಾಸಿ. ಅಮ್ಮನ ಕೋರಿಕೆಗೆ ಅಸಂತೃಪ್ತಿ ವ್ಯಕ್ತಪಡಿಸಿದ.
ವಯಸ್ಸಿಗೆ ಬಂದ ಮಗನಿಗೆ ಆದಷ್ಟು ಬೇಗ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಮದುವೆ ಮಾಡಿಸುವ ಆಸೆ ಆಕೆಯ ಮನದೊಳಗೆ ಚಿಗುರೊಡೆದು ಹಲವು ಸಮಯಗಳು ಕಳೆದಿದ್ದವು. ಇರೋದು ಒಬ್ಬನೇ ಮಗ. ವಯಸ್ಸಿಗೆ ಸರಿಯಾಗಿ ಮದುವೆ ಮಾಡಿಸದಿದ್ದರೆ ಹಾದಿ ಬೀದಿ ಸುತ್ತಿ ಹಾಳಾಗಿ ಹೋಗುತ್ತಾನೆ ಎಂಬ ಆತಂಕ ಆಕೆಯದ್ದು. ಹಾಗಾಗಿ ಅಭಿಮನ್ಯು ಮದುವೆಯ ಪ್ರಸ್ತಾಪ ತಳ್ಳಿ ಹಾಕಿದರೂ ವಾತ್ಸಲ್ಯ ಮಗನ ಮನವೊಲಿಸಲು ಮುಂದಾದರು.
ನಿನ್ನ ಮದ್ವೆ ಬಗ್ಗೆ ನಾನು ತಲೆಕೆಡಿಸಿಕೊಳ್ಳದೆ ಇನ್ಯಾರು ತಲೆಕೆಡಿಸಿಕೊಳ್ಳೋದಕ್ಕೆ ಸಾಧ್ಯ ಹೇಳು? ನಿಮ್ಮಪ್ಪ ಇದ್ದಿದ್ರೆ ನಾನು ಇಷ್ಟೊಂದು ಕಷ್ಟ ಪಡೋ ಅವಶ್ಯಕತೆ ಇತಾ ಇಲಿಲ್ಲ. ಎಲ್ಲ ಅವರೇ ಮುಂದೆ ನಿಂತು ಮಾಡಿಸ್ತಾ ಇದ್ರು. ಆದರೆ ಏನ್ಮಾಡೋ ದು ನಮ್ಮಿಬ್ಬರನ್ನು ಇಲ್ಲೇ ಬಿಟ್ಟು ಶಿವನಪಾದ ಸೇಕೊಂಡ್ರು. ಅವರಿಗೆ ಮಗನ ಮದ್ವೆ ನೋಡೋ ಭಾಗ್ಯ ಇಲ್ಲ. ನಾನು ಸಾಯೋದ್ರೊಳಗಾದ್ರು ನೀನು ಮದ್ವೆ ಮಾಡಿಕೊಳ್ಳುವ ಮನಸ್ಸು ಮಾಡು. ಜೀವನದಲ್ಲಿ ನನಗದೊಂದೇ ಆಸೆ ಉಳಿದಿರೋದು ಅಂದ ವಾತ್ಸಲ್ಯ ಅವರ ಕಣ್ಗಳು ತುಂಬಿಕೊಂಡಿತು.
ಅಮ್ಮ ಯಾಕೆ ಸಣ್ಣ ವಿಷಯಕ್ಕೆಲ್ಲ ಅಳ್ತಾ ಕೂತಿತಿಯ. ನಾನೇನು ಈಗ ಮದ್ವೆಯಾಗೊಲ್ಲ ಅಂತ ಹೇಳಿದ್ನ? ಸುಮ್ನೆ ಯಾಕೆ ಏನೋನೋ ಕಲ್ಪನೆ ಮಾಡ್ಕೊಂಡು ಅಳ್ತಿಯ. ನಾಲ್ಕೈದು ವರ್ಷ ಕಳೆದ ನಂತರ ಮದ್ವೆಯಾಗ್ತಿನಿ. ಬ್ರಹ್ಮಚಾರಿಯಾಗಿಯಂತು ಇರೋದಿಲ್ಲ. ನೀನು ಇವತ್ತು ರಾತ್ರಿ ಪೂರ ಮಾತಿನಲ್ಲೇ ಕಳಿಯ್ತಿಯೋ ಅಥವಾ ನನ್ಗೆ ಊಟ ಹಾಕ್ತಿಯೋ. ನನ್ಗಂತೂ ಇವತ್ತು ತುಂಬಾನೇ ಸುಸ್ತಾಗಿ ಬಿಟ್ಟಿದೆ. ಊಟ ಮಾಡಿ ಮಲ್ಕೊಂಡ್ರೆ ಸಾಕು ಅನ್ನಿಸ್ತಾ ಇದೆ ಎಂದು ವಿಷಯಾಂತರ ಮಾಡಿದ.
ತುಂಬಾ ಹೊಟ್ಟೆ ಹಸಿತ್ತಾ ಇದೆಯಾ ಮಗ. ನಿನ್ಗೋಸ್ಕರ ರುಚಿಯಾದ ಅಡುಗೆ ಮಾಡಿಟ್ಟಿದ್ದೀನಿ. ಹಾಳಾದ ತಲೆಗೆ ಮರುವು ಜಾಸ್ತಿ. ಒಂದ್ನಿಮಿಷ ಇರು ಊಟ ತತೇನೆ ಅಂದ ವಾತ್ಸಲ್ಯ ಎದ್ದು ಅಡುಗೆ ಕೊಠಡಿಗೆ ತೆರಳಿದರು. ಪ್ರೀತಿಯಿಂದ ಮಾಡಿಟ್ಟ ಅಡುಗೆಯನ್ನು ಅಕ್ಕರೆಯಿಂದ ಮಗನಿಗೆ ಬಡಿಸಿದರು. ಮಗನೊಂದಿಗೆ ತಾನು ಒಂದು ತಟ್ಟೆಯಲ್ಲಿ ಅನ್ನ, ಸಾಂಬಾರು ಹಾಕಿಕ್ಕೊಂಡು ಊಟ ಮುಗಿಸಿ ನಿದ್ರೆಗೆ ಜಾರಿದರು. ಬೆಳಗ್ಗಿನಿಂದ ಸಂಜೆ ತನಕ ಸುತ್ತಾಡಿ ಸುಸ್ತಾಗಿದ್ದ ಅಭಿಮನ್ಯು ಬೇಗನೆ ನಿದ್ರೆಗೆ ಜಾರಿದ.
ಅಭಿಮನ್ಯು ಸಾಗುತ್ತಿರುವ ಹಾದಿಯ ಬಗ್ಗೆ ಅನುಮಾನಗೊಂಡ ವಾತ್ಸಲ್ಯಳ ಮನದಲ್ಲಿ ಮುಂದೇನು ನಡೆಯುವುದಕ್ಕಿದೆಯೋ ಎಂಬ ಆತಂಕ ಮನೆಮಾಡಿಕೊಂಡಿತು. ಒಬ್ಬನೇ ಮಗ, ಕಷ್ಟ ಸುಖವೇನಿದ್ದರೂ ಅವನೊಬ್ಬನೊಂದಿಗೆ ಮಾತ್ರ ಹಂಚಿಕೊಳ್ಳೋದಕ್ಕೆ ಸಾಧ್ಯ. ಅವನೇ ಹೊರಟು ಹೋದರೆ! ಬದುಕೇ ಮುಗಿದಂತೆ. ಪ್ರೀತಿಯಲ್ಲಿ ಮಗ ಕಳೆದು ಹೋಗುವುದು ಆಕೆಗೆ ಇಷ್ಟವಿಲ್ಲ. ಆದಷ್ಟು ಬೇಗ ಅವನಿಗೊಂದು ಮದುವೆಯೆಂಬ ಮೂಗುದಾರ ತೊಡಿಸಬೇಕೆಂದು ನಿರ್ಧರಿಸಿದಳು. ಮದುವೆಗೆ ಆದಷ್ಟು ಬೇಗ ಮನವೊಲಿಸಬೇಕೆಂಬ ನಿರ್ಧಾರದೊಂದಿಗೆ ಆಕೆ ಮೆಲ್ಲನೆ ಮಗನೆದುರು ಮದುವೆಯ ವಿಚಾರ ಮುಂದಿಟ್ಟಾಗ ಅಭಿಮನ್ಯು ಸಿಡುಕಿದ್ದನ್ನು ಕಂಡು ಮಗ ಪ್ರೀತಿಯ ಬಾಲ ಹಿಡಿದು ಹೊರಟು ನಿಂತಿದ್ದಾನೆಂಬುದು ಆಕೆಗೆ ಸ್ಪಷ್ಟವಾಯಿತು.
ಅಭಿಮನ್ಯುವಿಗಾದರು ಯಾರು ಇದ್ದಾರೆ? ಅಮ್ಮನನ್ನು ಬಿಟ್ಟು. ಅವನಿಗಿರುವುದು ಅಮ್ಮ ಮತ್ತು ಮನೆ ಎರಡನೇ ಆಸ್ತಿ. ಅದಕ್ಕಿಂತ ಹೆಚ್ಚೇನು ಇಲ್ಲ. ಅವನ ಪಾಲಿಗಂತು ಪ್ರೀತಿ ಹೆಚ್ಚು ಕಾಲ ಬಾಳಲಿಲ್ಲ. ಪ್ರೀತಿಗಾಗಿ ಹಂಬಲಿಸಿ ಅವನ ಬಳಿ ಬಂದ ಹುಡುಗಿಯರಿಗೆ ಲೆಕ್ಕವಿಲ್ಲ. ಅವರ ಪೈಕಿ ಯಾರಾದರೊಬ್ಬಳು ಕೈ ಹಿಡಿದಿದ್ದರೆ ಇಷ್ಟೊತ್ತಿಗಾಗಲೇ ಅಭಿಮನ್ಯು ಅಪ್ಪನ ಪಟ್ಟ ಅಲಂಕರಿಸಿಬಿಡುತ್ತಿದ್ದ. ಕಂಡ ಕನಸುಗಳೆಲ್ಲ ಕೈಗೂಡಲೇ ಇಲ್ಲ.
* * *
ನೇಸರ ಬಾನಂಗಳದಿಂದ ಆಗತಾನೇ ಭುವಿಯ ಕಡೆಗೆ ತನ್ನ ಹೊನ್ನ ಕಿರಣ ಸೂಸಿ ಕತ್ತಲನ್ನು ದೂರ ಸರಿಸುವ ತನ್ನ ಎಂದಿನ ಕಾಯಕದಲ್ಲಿ ತೊಡಗಿದ್ದ. ಸುತ್ತಮುತ್ತಲಿನ ಪರಿಸರ ನಿಶಬ್ಧವಾಗಿತ್ತು. ಅಭಿಮನ್ಯುವಿನ ಮೊಬೈಲ್ ಬಡಿದುಕೊಳ್ಳಲು ಪ್ರಾರಂಭಿಸಿ ಬೆಳಗ್ಗಿನ ನೀರವತೆಯನ್ನು ದೂರ ಮಾಡಿತು.
ಯಾರಪ್ಪ ಇಷ್ಟೊಂದು ಬೆಳಗ್ಗೆ ಫೋನ್ ಮಾಡ್ತಾ ಇರೋದು? ಎಂದು ಅಭಿಮನ್ಯು ಕಣ್ಣುಜ್ಜಿಕೊಂಡು ಮೊಬೈಲ್ ಕೈಗೆತ್ತಿಕೊಂಡ.
ಅಭಿ, ನೀನಿನ್ನೂ ಮಲ್ಕೊಂಡೇ ಇದ್ದೀಯ? ಅತ್ತಿಂದ ಅಕ್ಷರಳ ಧ್ವನಿ ಕೇಳಿಸಿತು.
ಗಂಟೆ ಆರಾಯ್ತು, ನಿನ್ಗೆ ಅವತ್ತೇ ಹೇಳಿಲ್ವ? ಬೆಳಗ್ಗೆ ಆರು ಗಂಟೆಯೊಳಗೆ ಎದ್ದಿರಬೇಕೂಂತ. ಆರು ಗಂಟೆಯೊಳಗೆ ಎದ್ದೇಳ್ದೆ ಇದ್ರೆ ನಾನೇ ನಿನ್ಗೆ ಅಲ್ರಾಂ ಆಗ್ತೇನೆ ಅಂತ ಹೇಳಿದ ಮಾತನ್ನ ಇಷ್ಟೊಂದು ಬೇಗ ಮತು ಬಿಟ್ಟಿದ್ದೀಯ? ನೀನು ಸೋಂಬೇರಿ ತರ ಮಲ್ಕೊಂಡಿತಿಯ ಅಂತನೇ ನಾನು ನಿನ್ಗೆ ಫೋನ್ ಮಾಡಿದ್ದು. ನಾನು ನೋಡು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ರೆಡಿಯಾಗಿ ಕಾಫಿ ಕುಡ್ಕೊಂಡು ಪೇಪರ್ ಓದ್ತಾ ಕೂತಿದ್ದೀನಿ. ಹೆಚ್ಚು ಹೊತ್ತು ಮಲ್ಕೊಂಡಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೇಗ ಎದ್ದು ರೆಡಿಯಾಗು ಆದೇಶಿಸಿದಳು.
ಇನ್ನೊಂದೆರಡು ತಾಸು ನಿದ್ರೆ ಬಾಕಿ ಇತ್ತು. ಇಷ್ಟು ಬೇಗ ಫೋನಾಯಿಸಿ ಹಿಂಸೆ ಕೊಡ್ತಾ ಇದ್ದಾಳಲ್ಲ? ಇನ್ನು ಮುಂದೆ ಮೊಬೈಲ್ ಸ್ವಿಚ್‌ಆಫ್ ಮಾಡಿ ಮಲ್ಕೋಳ್ಳೋದೇ ವಾಸಿ ಅಂದುಕೊಂಡ.
ಸಾಕು ಸುಮ್ನಿರು, ನನ್ಗಂತೂ ನಿದ್ರೆ ಬಿಡ್ತಾ ಇಲ್ಲ. ದಿನಾಪೂರ್ತಿ ನಡ್ದು ಸಾಕಾಗಿದೆ. ಬೆಳಗ್ಗೆನೇ ಫೋನ್ ಮಾಡಿ ತಲೆ ತಿನ್ಬೇಡ. ಅಂದ ಅಭಿಮನ್ಯು ಕಂಬ್ಬಳಿ ಹೊದ್ದು ಮಲಗಲು ಅಣಿಯಾದ.
ಬೇಗ ಎಬ್ಬಿಸಿದ್ರೆ ನನ್ಗೆನೇ ಬೈಯ್ತಿಯ? ಇರು ಅಮ್ಮನಿಗೆ ಹೇಳಿ ನಿನ್ನ ನಿದ್ರೆ ಎಲ್ಲಾ ಬಿಡಿಸ್ತಿನಿ ಅಂದ ಆಕೆ ಸ್ವಲ್ಪ ಹೊತ್ತಿನ ಬಳಿಕ ಏನೋ ಜ್ಞಾಪಿಸಿಕೊಂಡಂತೆ ಅಭಿ, ಯಾವಾಗ ನನ್ನ ಮನೆಗೆ ಕಕೊಂಡೋಗ್ತಿಯ? ನನ್ಗಂತೂ ನಿನ್ನತ್ರ ಕೇಳಿ ಕೇಳಿ ಸಾಕಾಗಿ ಹೋಗಿದೆ. ಇದು ಕಡೆಯ ಸಲ ಕೇಳ್ತಾ ಇದ್ದೇನೆ. ಇಷ್ಟ ಇದ್ರೆ ಕಕೊಂಡೋಗು ತುಸು ಕೋಪದಿಂದು ಹೇಳಿದಳು.
ಈಗಾಗಲೇ ಮನೆಯಲ್ಲಿ ಆಕೆಯ ವಿಚಾರದಲ್ಲೇ ರಾದ್ಧಾಂತ ನಡೆಯುವುದನ್ನು ತಪ್ಪಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಭಿಮನ್ಯು ವಿಗೆ ಅಕ್ಷರ ಮನೆಗೆ ಬರುತ್ತೇನೆ ಅಂತ ಹೇಳುತ್ತಿರುವ ವಿಚಾರ ಮೈಗೆ ಚೇಳು ಬಿಟ್ಟ ಅನುಭವವಾಯಿತು. ಆಕೆಯನ್ನು ಮನೆಗೆ ಕರೆತರುವುದಕ್ಕೆ ಇದು ಸಕಾಲವಲ್ಲವೆಂದು ಅಂದುಕೊಂಡ.
ನೀನು ಮನೆಗೆ ಬರೋದಲ್ಲ…, ಇತ್ತ ತಲೆ ಕೂಡ ಹಾಕಿ ನೋಡ್ಬೇಡ. ಈಗ ತಾನೇ ನಮ್ಮಿಬ್ಬರ ಪ್ರೀತಿಯ ಬಗ್ಗೆ ಅಲ್ಲಲ್ಲಿ ಗುಸುಗುಸು ಮಾತು ಪ್ರಾರಂಭವಾಗಿದೆ. ಅದು ಮನೆ ಬಾಗಿಲಿಗೆ ಬಂದು ತಲುಪಾಯ್ತು. ನಿನ್ನ ಕಕೊಂಡು ಬಂದ್ರಂತೂ ಗುಸು, ಗುಸು ಸುದ್ದಿ ಖಾತ್ರಿಯಾಗಿ ಬಿಡುತ್ತೆ. ಸಂಜೆ ರಾಜಾಸೀಟ್‌ನಲ್ಲಿ ಭೇಟಿಯಾಗುವ. ಅಲ್ಲಿ ಎಲ್ಲಾ ವಿಚಾರ ಹೇಳ್ತೇನೆ ಅಂದ ಅಭಿಮನ್ಯು ಆಕೆಯ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದ.
* * *
ಅಭಿಮನ್ಯುವಿನ ಮನೆಯಲ್ಲಿ ಪ್ರೀತಿಯ ವಿಚಾರದಲ್ಲಿ ಏನಾದರು ರಾದ್ಧಾಂತ ನಡೆದಿದೆಯೇ? ಎಂಬ ಆತಂಕದಲ್ಲಿ ಕಚೇರಿಯಿಂದ ಸಂಜೆ ಸ್ವಲ್ಪ ಬೇಗನೆ ಹೊರಟ ಅಕ್ಷರ ನೇರ ಅಭಿಮನ್ಯುವಿನೆಡೆಗೆ ನಡೆದಳು. ಮೊಗದಲ್ಲಿ ಸಣ್ಣನೆಯ ಆತಂಕ ಕವಿದುಕೊಂಡಿತ್ತು.
ಅಭಿಮನ್ಯುವನ್ನು ಕಂಡೊಂಡನೆ ಅಭಿ, ಮನೆಯಲ್ಲೇನಾದ್ರು…!?
ಮನೆಯಲ್ಲಿ ರಾತ್ರಿ ನಡೆದ ಚರ್ಚೆಯನ್ನು ತಲೆಗೆ ಹಚ್ಚಿಕೊಳ್ಳದ ಅಭಿಮನ್ಯುವಿಗೆ ಅಕ್ಷರ ಇಂತಹ ಪ್ರಶ್ನೆ ಯಾಕಾದರು ಕೇಳ್ತಾ ಇದ್ದಾಳೋ ಅನ್ನಿಸಿತು. ಮನೆಯಲ್ಲಿ ಏನು ಆಗಿಲ್ಲ. ಅಮ್ಮ ಚೆನ್ನಾಗಿದ್ದಾರೆ, ನಾನು ನಿನ್ನ ಮುಂದೆ ಗುಂಡುಕಲ್ಲಿನಂತೆ ಕೂತ್ಕೊಂಡಿದ್ದೀನಿ. ನನ್ಗೂ ಕೂಡ ಏನಾಗಿಲ್ಲ ಅಂದ.
ಅಭಿಮನ್ಯುವಿನ ಮೊಗದಲ್ಲಿ ಯಾವುದೇ ಆತಂಕ ಇಲ್ಲದಿರುವುದನ್ನು ಗಮನಿಸಿದ ಅಕ್ಷರ ಪ್ರೀತಿಯ ವಿಚಾರದಲ್ಲಿ ಮನೆಯಲ್ಲಿ ದೊಡ್ಡ ರಾದ್ಧಾಂತವೇನು ನಡೆದಿಲ್ಲವೆಂದು ಅಂದುಕೊಂಡು ಸಂತೃಪ್ತಿ ಪಟ್ಟುಕೊಂಡಳು. ಆ ಸಂತಸದಲ್ಲಿ ಎಂದಿನಂತೆ ರಾಜಾಸೀಟ್‌ಗೆ ತೆರಳುವುದಕ್ಕೆ ಅಣಿಯಾದಳು.
ಇಲ್ಲಿ ಕೂತ್ಕೊಂಡು ಮಾತಾಡೋದು ಬೇಡ. ನಡಿ, ರಾಜಾಸೀಟ್‌ಗೆ ಹೋಗೋಣ ಅಭಿಮನ್ಯುವನ್ನು ಹೊರಡಿಸಿದಳು.
ಆ ರಾಜಾಸೀಟ್ ಮುಂಭಾಗದ ಪಶ್ಚಿಮಘಟ್ಟ ಸಾಲಿನಲ್ಲಿ ಸೂರ್ಯ ಎಂದಿನಂತೆ ಮುಳುಗೋದನ್ನು ಮರೆಯಬಹುದು. ಆದರೆ ಅವರಿಬ್ಬರು ರಾಜಾಸೀಟ್‌ಗೆ ದಿನನಿತ್ಯ ತಪ್ಪದೆ ಭೇಟಿ ನೀಡೋದಕ್ಕೆ ಮಾತ್ರ ಮರೆಯುತ್ತಿರಲಿಲ್ಲ. ರಾಜಾಸೀಟ್‌ಗೆ ಹೋಗುವುದಕ್ಕಿಂತ ಮುಂಚೆ ಹೋಟೆಲ್‌ಗೆ ಹೋಗಿ ಏನಾದರು ತಿನ್ನುತ್ತಾ ಹರಟೆ ಹೊಡೆಯಬೇಕೆಂದು ನಿರ್ಧರಿಸಿದ ಅಭಿಮನ್ಯು ಆಕೆಯನ್ನು ಹೋಟೆಲ್‌ಗೆ ಕರೆದೊಯ್ದ.
ಅಕ್ಷರ ಅಭಿಮನ್ಯುವಿನೊಂದಿಗೆ ಹೆಜ್ಜೆ ಇಡುತ್ತಾ ಹೋಟೆಲ್‌ನೆಡೆಗೆ ನಡಿಗೆಹಾಕಿದಳು. ಹೋಟೆಲ್‌ನಲ್ಲಿ ಇಬ್ಬರು ಒಟ್ಟಿಗೆ ಅಂಟಿಕೊಂಡು ಕುಳಿತರು. ಅವರೆಡೆಗೆ ಆಗಮಿಸಿದ ಮಾಣಿ ಏನು ಬೇಕು? ವಿನಯದಿಂದ ಕೇಳಿದ.
ಎರಡು ಮಸಾಲೆ ದೋಸೆ, ಬೈಟು ಕಾಫಿ ಆರ್ಡರ್ ಮಾಡಿದ ಅಭಿಮನ್ಯು.
ಮಾಣಿ ತಂದಿಟ್ಟ ಮಸಾಲೆ ದೋಸೆ ತಿನ್ನುತ್ತಾ ಅಕ್ಷರ ಮಾತು ಪ್ರಾರಂಭಿಸಿದಳು. ಬೆಳಗ್ಗಿನಿಂದ ಮನಸ್ಸಿಗೆ ನೆಮ್ಮದಿನೇ ಇಲ್ಲ. ಏನಾಯ್ತು ಮನೆಯಲ್ಲಿ. ಏನಾದರು ಕಿರಿಕಿರಿ ಆಯ್ತ್ತಾ? ಮನದೊಳಗೆ ಮತ್ತೆ ಮತ್ತೆ ಕಾಡಲು ಪ್ರಾರಂಭಿಸಿದ ಆತಂಕ ಪರಿಹರಿಸಿಕೊಳ್ಳಲು ಕೇಳಿದಳು.
ಮನೆಯಲ್ಲಿ ರಾದ್ಧಾಂತವಾಗಿ ಎಲ್ಲಿ ಪ್ರೀತಿ ಕಡಿದುಹೋಗುತ್ತದೆಯೋ ಎಂಬ ಆತಂಕ ಆಕೆಯದ್ದು. ದಿನವಿಡೀ ಆಕೆಗೆ ನೆಮ್ಮದಿ ಎಂಬುದು ಬಳಿ ಸುಳಿಯಲೇ ಇಲ್ಲ. ಕಚೇರಿಗೆ ಬಂದವರೊಡನೆ ವಿನಾಕಾರಣ ರೇಗಾಡಿದಳು. ಯಾರೊಂದಿಗೂ ಮಾತಾಡುವ ಉತ್ಸಾಹ ತೋರಲಿಲ್ಲ. ಪ್ರೀತಿ ಪ್ರಾರಂಭವಾದಲ್ಲಿಂದ ಮನದೊಳಗೇನೋ ಒಂದು ತರಹ ಆತಂಕ. ಒಟ್ಟಿಗೆ ಕೂತು ಒಂದಷ್ಟು ಹರಟೆ ಹೊಡೆಯುವ ತನಕ ಮಾತ್ರ ನೆಮ್ಮದಿ. ಮತ್ತೆ ಎಲ್ಲಿ ಸಂಬಂಧ ಕಳಚಿ ಬೀಳುತ್ತದೆಯೋ ಎಂಬ ಆತಂಕ. ಅತಿಯಾದ ಪ್ರೀತಿ ಹೀಗೆ ಮಾಡಿಸಿಬಿಡುತ್ತದೆಯೋ ಏನೋ!?
ಅಭಿಮನ್ಯುವಿನಿಂದ ಮನೆಯಲ್ಲಿ ನಡೆದ ಪ್ರತಿಯೊಂದು ವಿಚಾರ ತಿಳಿದುಕೊಂಡ ನಂತರ ನೆಮ್ಮದಿಯಿಂದ ಉಸಿರಾಡಿಕೊಂಡಳು. ಗಂಭೀರವಾದ ವಿಚಾರವೇನು ನಡೆಯಲಿಲ್ಲ. ದೇವರು ದೊಡ್ಡವನು ಅಂದುಕೊಂಡಳು.
ಏನೋ ಚಿಂತೆಯಲ್ಲಿ ಮುಳುಗಿಹೋದವನಂತೆ ಕಂಡುಬಂದ ಅಭಿಮನ್ಯುವಿನ ಕೈ ಹಿಡಿದ ಅಕ್ಷರ ಅಭಿ, ಏನ್ ಯೋಚ್ನೆ ಮಾಡ್ತಾ ಇದ್ದೀಯ? ನನ್ನೊಂದಿಗೆ ಇರುವಾಗಲೂ ಚಿಂತೆಯಲ್ಲಿ ಮುಳುಗುವ ಅವಶ್ಯಕತೆಯಾದರು ಏನು? ದೇಹದ ಕೊನೆಯುಸಿರು ಇರೋವರೆಗೂ ನಿನ್ನೊಂದಿಗೆ ಇತೇನೆ. ಇದು ಸತ್ಯ ಪ್ರೀತಿ ತುಂಬಿದ ವಿಶ್ವಾಸದ ನುಡಿಗಳ್ನಾಡಿದಳು.
ಅವರಿಬ್ಬರ ಪ್ರೀತಿ ಅದಾಗಲೇ ಹತ್ತಾರು ಜನರ ಕಿವಿಗೆ ಬಿದ್ದು ಚರ್ಚೆಗೆ ಒಂದು ವಸ್ತುವಾಯಿತು. ಸಂಜೆಯಾಗುತ್ತಿದ್ದಂತೆ ಇಬ್ಬರು ಒಟ್ಟಿಗೆ ಓಡಾಡುತ್ತಿದ್ದರು. ಮಾತಾಡಿಕೊಳ್ಳುವವರಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಾಗಿರಲಿಲ್ಲ. ಪ್ರಪಂಚವನ್ನೇ ಮರೆತಹಾಗೆ ಅವರಿಬ್ಬರು ಒಟ್ಟಿಗೆ ಅಂಟಿಕೊಂಡು ಸತಿ-ಪತಿಯರಂತೆ ತಿರುಗಾಡುತ್ತಿದ್ದರು. ಅಭಿಮನ್ಯುವಿಗೆ ಈ ಓಡಾಟ ಅತಿಯಾಗುತ್ತಿದೆ ಅನ್ನಿಸದೆ ಇರಲಿಲ್ಲ. ಇದು ಆಕೆಯ ಮನೆಯವರೆಗೆ ಹೋಗಿ ತಲುಪಲು ಇನ್ನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ಸತ್ಯ ಅರಿವಾಗುತ್ತಿದ್ದಂತೆ ಆತಂಕಕ್ಕೆ ಒಳಗಾದ. ಇದ್ದಕ್ಕಿದ್ದಂತೆ ಮೌನ ಮುರಿದು
ಸ್ವಲ್ಪ ದಿನ ದೂರ ಇದ್ದು ಬಿಡುವ. ಜನ ನೂರಾರು ತರ ಮಾತಾಡ್ಕೊಳ್ತಾ ಇದ್ದಾರೆ ಅಂದುಬಿಟ್ಟ.
ಪ್ರೀತಿಯನ್ನು ಬೇಲಿ ಹಾಕಿ ಬಂಧಿಸಿಡೋದಕ್ಕೆ ಯಾರಿಂದ ತಾನೇ ಸಾಧ್ಯ? ದೂರ ಎಂಬ ಮಾತು ಪ್ರೀತಿಸುವ ಹೃದಯಗಳಿಗೆ ಒಗ್ಗದ ಮಾತು. ಪ್ರೀತಿ ಯಾವತ್ತೂ ಸ್ವತಂತ್ರವಾಗಿಯೇ ಇರಲು ಬಯಸುತ್ತದೆ. ಕೆಲ ಸಮಯ ಜನರ ಮಾತಿನಿಂದ ತಪ್ಪಿಸಿಕೊಳ್ಳುವುದಕೋಸ್ಕರ ದೂರ ಉಳಿಯುವುದು ಮತ್ತೆ ಒಂದಾಗುವುದು, ಮತ್ತೆ ಜನರ ಮಾತು ಕೇಳಿ ಮತ್ತೆ ದೂರ ಉಳಿಯುವುದು. ಇದೆಲ್ಲ ಆಕೆಗೆ ಸರಿ ಕಾಣಿಸಲಿಲ್ಲ. ಏನೇ ಸಮಸ್ಯೆ ಬಂದರೂ ಎದುರಿಸಬೇಕು. ನೈಜ ಪ್ರೀತಿ ಅಂದರೆ ಅದೊಂದು ರೀತಿಯ ಸವಾಲು ಇದ್ದಂತೆ. ಆ ಸವಾಲನ್ನು ಮನಪೂರ್ವಕವಾಗಿ ಸ್ವೀಕರಿಸಿ ಮೆಟ್ಟಿನಿಲ್ಲಬೇಕು. ಆದರೆ, ಅಭಿಮನ್ಯು ಸವಾಲಿಗೆ ಹೆದರಿ ಹಿಂದೆ ಸರಿಯುತ್ತಿರುವುದು ಆಕೆಗೆ ಸರಿಕಾಣಲಿಲ್ಲ.
ಸ್ವಲ್ಪ ದಿನ ದೂರ ಉಳಿಯುವ ಅಂತ ನಿರ್ಧರಿಸಿ ಶಾಶ್ವತವಾಗಿ ನನ್ನಿಂದ ದೂರ ಉಳಿಯುವ ನಿರ್ಧಾರ ಕೈಗೊಳ್ತಾ ಇದ್ದೀಯಾ?. ಯಾರೇನು ಬೇಕಾದ್ರು ಅನ್ಲಿ. ಜನರಾಡೋ ಮಾತನ್ನ ತಡೆ ಹಿಡಿಯೋದಕ್ಕೆ ಸಾಧ್ಯವಿಲ್ಲ. ಅದರ ಬಗ್ಗೆ ನನ್ಗೆ ಚಿಂತೆ ಇಲ್ಲ. ನೀನು ನನ್ನಿಂದ ದೂರ ಆಗುವ ಮಾತು ಆಡಿದ್ರೆ ನನ್ನಿಂದ ಸಹಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ನಾನು ಆಗಿಂದಾಗೆ ನಿನ್ಗೆ ಹೇಳ್ತಾ ಇರೋದು. ನನ್ನ ಕುತ್ತಿಗೆಗೆ ಮೂರು ಗಂಟು ಹಾಕಿ ಬಿಡು. ಆ ನಂಟನ್ನು ಯಾರಿಂದಲೂ ಕಸಿದುಕೊಳ್ಳೋದಕ್ಕೆ ಸಾಧ್ಯವಿಲ್ಲ ಅಂತ. ನೀನೆಲ್ಲಿ ಮನಸ್ಸು ಮಾಡ್ತಿಯ ಹೇಳು? ನಾನು ಮುದ್ಕಿಯಾದ ನಂತರ ಮದ್ವೆಯಾಗ್ತಿಯ ಏನೋ..? ಕೋಪ ತೋರ್ಪಡಿಸಿದಳು.
ಅಕ್ಷರ ಅಂದುಕೊಂಡಂತೆ ಮದುವೆ ಮಾಡಿ ಮುಗಿಸಿಬಿಡಬಹುದು. ಅದು ಅವನಿಗೆ ದೊಡ್ಡ ವಿಷಯವಲ್ಲ. ಅದರೆ ಮುಂದಿನ ವೈವಾಹಿಕ ಜೀವನದ ಮುಂದೆ ಆತನಿಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದ್ದು ಕಾಣುತಿತ್ತು. ಈಗತಾನೆ ಆರ್ಥಿಕವಾಗಿ ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾನೆ. ಅಕ್ಷರ ಸುಪದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ. ಆಕೆ ತನ್ನ ಮನೆಗೆ ಕಾಲಿಡುವಾಗ ಆಕೆಯ ಮನೆಯಲ್ಲಿ ಸಿಗುತ್ತಿದ್ದ ಸಂತೋಷದ ಪೈಕಿ ಶೇಕಡ ಹತ್ತು ಭಾಗವಾದರೂ ಸಿಗುವಂತಾಗಬೇಕು. ಪ್ರೀತಿಸಿದವರು ಇಂತಹ ಸುಖ, ಸಂತೋಷಗಳನ್ನು ನಿರೀಕ್ಷೆ ಮಾಡದೆ ಇರಬಹುದು. ಆದರೆ ಆಕೆಯನ್ನು ಸಂತೋಷವಾಗಿಡುವುದು ತನ್ನ ಪಾಲಿನ ಕರ್ತವ್ಯವಾಗಬೇಕೆಂಬ ನಿರ್ಧಾರವನ್ನು ಅವನು ಎಂದೋ ಕೈಗೊಂಡಾಗಿತ್ತು. ಅದಕೋಸ್ಕರ ಒಂದಷ್ಟು ಹಣ ಕೂಡಿಡುವ ಕಾಯಕದಲ್ಲಿ ನಿರತನಾಗಿ ಮದುವೆಯನ್ನು ಮುಂದೂಡುತ್ತಾ ಬರುತ್ತಿದ್ದ. ಸುಪದ ಸುಪ್ಪತ್ತಿಗೆಯಲ್ಲಿ ಬೆಳೆದವಳನ್ನು ಕರೆತಂದು ಸಂಕಷ್ಟದ ಸಂಕೋಲೆಯಲ್ಲಿ ಬಂಧಿಸಿಡಲು ಯಾರಿಗೆ ತಾನೇ ಮನಸ್ಸಾಗುತ್ತದೆ? ಜೀವನಪೂರ್ತಿ ದುಡಿದರೂ ಆಕೆಯ ಅಪ್ಪ ಕೂಡಿಟ್ಟಷ್ಟು ಆಸ್ತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವೆಂಬ ಅರಿವು ಅವನಿಗಿತ್ತು. ಆದರೆ, ಆಕೆಗೆ ಅವರ ಮನೆಯಲ್ಲಿ ಸಿಗುತ್ತಿರುವ ಸಂತೋಷ ತನ್ನ ಮನೆಯಲ್ಲಿಯೂ ಕೂಡ ಸಿಗುವಂತಾಗಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳುವವರೆಗೆ ಮದುವೆ ಯೆಂಬ ಪ್ರಶ್ನೆಯನ್ನೇ ಮನದೊಳಗೆ ನುಸುಳಲು ಅವಕಾಶ ನೀಡಬಾರದೆಂದು ನಿರ್ಧರಿಸಿದ.
ಅಕ್ಷರ, ನಾನು ಈಗ ಮದುವೆಯಾಗೋ ಪರಿಸ್ಥಿತಿಯಲಿಲ್ಲ. ನೀನು ನನ್ನೊಂದಿಗೆ ಸಪ್ತಪದಿ ತುಳಿಯುವ ಕ್ಷಣದಿಂದ ನಿನ್ನ ಬದುಕು ಮತ್ತಷ್ಟು ಸುಂದರವಾಗಬೇಕು. ಆ ಸುಂದರವಾದ ಬದುಕಿಗೋಸ್ಕರ ದುಡಿಯುತ್ತಾ ಇದ್ದೇನೆ. ಅಂಥಹ ಒಂದು ಸುಂದರ ಬದುಕನ್ನು ನಿನಗೋಸ್ಕರ ಕಟ್ಟಿಕೊಡೋದಕ್ಕೆ ನನ್ನಿಂದ ಸಾಧ್ಯ ಎಂಬ ಭರವಸೆ ನನ್ನಲ್ಲಿ ಹುಟ್ಟಿದ ಕ್ಷಣದಲ್ಲಿಯೇ ನಮ್ಮಿಬ್ಬರ ಮದುವೆ
ಅಭಿಮನ್ಯು ಏಕಾಗಿ ಹೀಗೆಲ್ಲ ಆಲೋಚನೆ ಮಾಡುತ್ತಾ ಇದ್ದಾನೆ? ಹಣವೊಂದು ಇದ್ದರೆ ಮಾತ್ರ ಬದುಕಾ?. ಜೀವನ ನಿರ್ವಹಣೆಗೆ ಹಣ ಅನಿವಾರ್ಯ. ಆದರೆ, ಹಣ, ಆಸ್ತಿ, ಅಂತಸ್ತಿಗೆ ಹೊರತಾದ ಮತ್ತೊಂದು ಜೀವನ ಇದೆಯಲ್ಲ? ಅದರ ಬಗ್ಗೆ ಏಕೆ ಆಲೋಚನೆ ಮಾಡುತ್ತಿಲ್ಲ. ಹಣವೊಂದರಿಂದಲೇ ಎಲ್ಲವನ್ನು ಕೊಂಡುಕೊಳ್ಳಲು ಸಾಧ್ಯ ಅನ್ನುವುದಾಗಿದ್ದರೆ ಪ್ರಪಂಚದಲ್ಲಿ ಶ್ರೀಮಂತರು ಮಾತ್ರ ಸುಖಿಗಳಾಗಿರುತ್ತಿದ್ದರು. ಆದರೆ, ಶ್ರೀಮಂತರಿಗಿಂತ ಬಡವರೇ ಹೆಚ್ಚು ಸುಖಿಗಳಾಗಿದ್ದಾರೆಂದು ಅಂದುಕೊಂಡರು. ಸುಪದ ಸುಪ್ಪತ್ತಿಗೆಯಲ್ಲಿ ಬೆಳೆದ ಆಕೆಗೆ ಹಣ, ಆಸ್ತಿ ಜೀವನದಲ್ಲಿ ಮುಖ್ಯ ಅನ್ನಿಸುತ್ತಿಲ್ಲ. ರ್ರುಜೀವನದಲ್ಲಿ ಸುಖವಾಗಿರಬೇಕಾದರೆ ಇರುವ ವ್ಯವಸ್ಥೆಯಲ್ಲಿಯೇ ಸಂತೋಷಪಡುತ್ತಾ ಬದುಕನ್ನು ಪ್ರೀತಿಸುವ ಕಲೆ ಬೆಳೆಸಿಕೊಳ್ಳಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿನಂತೆ. ಆ ಗಾದೆ ಮಾತಿನಂತೆ ಆಕೆ ತನ್ನ ಬದುಕನ್ನು ರೂಪಿಸಿಕೊಂಡಿದ್ದಾಳೆ.
ಅಭಿ, ನನ್ಗೆ ಹಣ, ಆಸ್ತಿ, ಅಂತಸ್ತು ಮುಖ್ಯವಲ್ಲ. ನಿನ್ನ ಪ್ರೀತಿ ಮುಖ್ಯ. ಅದೊಂದಿದ್ದರೆ ಸಾಕು. ಅದೇ ನನ್ನ ಪಾಲಿನ ಸ್ವರ್ಗ. ಹೆಣ್ಣಾದವಳು ಬಯಸುವುದು ಅದನ್ನೇ ತಾನೇ. ನಿನ್ನ ಮನೆಗೆ ಕಾಲಿಟ್ಟ ನಂತರ ಅದಿಲ್ಲ-ಇದಿಲ್ಲ ಎಂದು ಕೊರಗೋದಿಲ್ಲ. ಆದರೆ, ನಿನ್ನಿಂದ ಪ್ರೀತಿ ಸಿಗದಿದ್ರೆ ಕೊರಗೋದು ನಿಶ್ಚಿತ
ಪ್ರೀತಿಯಲ್ಲಿ ಕೊರತೆ ಎಂದಿಗೂ ಮಾಡೋದಿಲ್ಲ ಬಿಡು. ಅದ್ಕ್ಕೆ ನನ್ನ ಮನಸ್ಸು ಕೂಡ ಒಪ್ಪುವುದಿಲ್ಲ. ನಿನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೇನೆ. ಪ್ರೀತಿಸೋ ವಿಚಾರ ಬಿಟ್ಟರೆ ಬೇರೇನು ನನ್ಗೆ ಗೊತ್ತಿಲ್ಲ ಅಭಿಮನ್ಯುವಿನ ಮಾತಿಗೆ ಪ್ರತಿಯಾಗಿ
ಅಷ್ಟಿದ್ದರೆ ಸಾಕು ಬಿಡು ಎಂದು ಮುಗುಳ್ನಗೆ ಬೀರಿ ಹೋಟೆಲ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯೋದು ಬೇಡವೆಂದು ನಿರ್ಧರಿಸಿ ರಾಜಾಸೀಟ್‌ಗೆ ಹೋಗೋಣ್ವ? ಅಂದಳು.
ಏನೇ ಆದರೂ ರಾಜಾಸೀಟ್‌ಗೆ ಹೋಗೋ ಹುಚ್ಚು ನಿನ್ಗೆ ಇನ್ನೂ ಬಿಟ್ಟಂತೆ ಕಾಣ್ತಾ ಇಲ್ಲ. ನಮ್ಮ ಮದ್ವೆ ಕೂಡ ರಾಜಾಸೀಟ್‌ನಲ್ಲಿ ನಡಿಯೋ ಹಾಗೆ ಮಾಡಿ ಬಿಡ್ತಿಯ ಎಂದು ಅಭಿಮನ್ಯು ವಿನೋದವಾಡಿದ.
ಸಂಜೆಯಾಗುತ್ತಿದ್ದಂತೆ ರಾಜಾಸೀಟ್ ಉದ್ಯಾನವನಕ್ಕೆ ವಿಶೇಷ ಕಳೆ ಬಂದು ಬಿಡುತ್ತದೆ. ಸೂರ್ಯಾಸ್ತಮ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಾಜಾಸೀಟ್‌ಗೆ ಆಗಮಿಸಿದ ಪುಟಾಣಿ ಮಕ್ಕಳು ಉದ್ಯಾನವನದಲ್ಲಿ ಆಟವಾಡುತ್ತಾ, ಅತ್ತಿಂದಿತ್ತ ಓಡಾಡುತ್ತಾ ಸಂಭ್ರಮಿಸುತ್ತಿದ್ದರು. ಹೊರಗಿನಿಂದ ಬಂದ ಪ್ರೇಮಿಗಳು, ವಿವಾಹಿತರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಅತ್ತಿಂದಿತ್ತ ಸಂಭ್ರಮದಿಂದ ನಡೆದಾಡುತ್ತಿದ್ದರು. ರಾಜಾಸೀಟ್ ಮುಂಭಾಗದಲ್ಲಿ ಸಾಕಷ್ಟು ಜನ ನೆರೆದಿದ್ದ ಹಿನ್ನೆಲೆಯಲ್ಲಿ ಇಬ್ಬರು ಎಡ ಭಾಗದಲ್ಲಿರುವ ಗುಡ್ಡದ ಕಡೆಗೆ ತೆರಳಿದರು.
ಪ್ರಶಾಂತವಾದ ವಾತಾವರಣದಲ್ಲಿ ಸುಯ್ಯೆಂದು ಬೀಸುತ್ತಿದ್ದ ತಂಗಾಳಿ ಮೈಸೋಕಿ ಮನಸ್ಸಿಗೆ ಮುದ ನೀಡುತಿತ್ತು. ಸಂಜೆಯಾಗುತ್ತಿದ್ದಂತೆ ಬೆಟ್ಟಗಳ ನಡುವೆ ಭಾಸ್ಕರ ಕಣ್ಮರೆಯಾಗಲು ಅಣಿಯಾಗುತ್ತಿದ್ದ. ಆ ಅಪೂರ್ವ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು.
ಏನೋ ಅಭಿ, ಹಾಗೆ ನೋಡ್ತಾ ಇದ್ದೀಯ?
ಏನಿಲ್ಲ, ನಿನ್ನ ನೋಡ್ತನೇ ಕೂತ್ಬಿಡ್ಬೇಕೂಂತ ಅನ್ನಿಸಿತು ಅಷ್ಟೆ.
ಫಸ್ಟ್‌ಟೈಮ್ ಹೃದಯದಲ್ಲಿ ಹುಟ್ಟೋ ಪ್ರೀತಿ ಯಾವತ್ತೂ ಸಿಹಿಯಾಗಿರುತ್ತೆ ಕಣೋ. ಅದಕ್ಕೆ ಹೀಗೆಲ್ಲ ಅನ್ನಿಸ್ತದೆ ಅಂದಳು. ಫಸ್ಟ್‌ಲವ್ ಬೆಸ್ಟ್ ಲವ್ ಅಂತ ಎಲ್ಲಾ ಹೇಳುತ್ತಾರೆ. ಆದರೆ, ಅಭಿಮನ್ಯುವಿನ ಪಾಲಿಗೆ ಲಾಸ್ಟ್ ಲವ್ ಬೆಸ್ಟ್ ಲವ್ ಅನ್ನೋ ಪರಿಸ್ಥಿತಿ. ಅಕ್ಷರಳೊಂದಿಗೆ ಕಳೆದ ದಿನಗಳು ಮಾತ್ರ ಅವನಿಗೆ ಅತ್ಯಂತ ಸಿಹಿಯಾಗಿದೆ. ಆಕೆ ತೋರಿಸುವ ಪ್ರೀತಿ ಆತನ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ಎಲ್ಲರ ಹೃದಯವನ್ನು ಗೆಲ್ಲುವ ಶಕ್ತಿ ಪ್ರೀತಿಗಿದೆ. ನಿರ್ಮಲವಾದ ಪ್ರೀತಿ ಯಾವತ್ತೂ ಕೂಡ ಸಂತೋಷದಿಂದ ಕೂಡಿರುತ್ತದೆ. ಅಭಿಮನ್ಯುವಿನೊಂದಿಗೆ ಕಾಲ ಕಳೆಯೋದೆಂದರೆ ಆಕೆಗೆ ಎಲ್ಲಿಲ್ಲದ ಸಂತೋಷ. ಸಣ್ಣ ಮಗುವಿನಂತೆ ಆತ ಮುದ್ದು ಮಾಡು ತ್ತಾನೆ. ಮನಸ್ಸಿಗೆ ನೋವಾದಗಲೆಲ್ಲ ಭರವಸೆಯ ಮತುಗಳಿಂದ ಸಂತೈಸುತ್ತಾನೆ. ಇಂಥಹ ಪ್ರೀತಿ ಬೇರೆ ಯಾರಿಗೆ ತಾನೆ ಸಿಗೋದಕ್ಕೆ ಸಾಧ್ಯ? ಅಂದುಕೊಂಡಳು.
ಸಂಜೆಗತ್ತಲು ಆವರಿಸುತ್ತಿದ್ದಂತೆ ಇಬ್ಬರು ಮನೆಯ ಕಡೆಗೆ ನಡೆದರು. ಅಕ್ಷರ ಮನೆ ತಲುಪುವುದರೊಳಗೆ ಹಿತವಾದ ಕತ್ತಲು ಆವರಿಸಿಕೊಳ್ಳಲು ಪ್ರಾರಂಭಿಸಿತು. ಮನೆಯಲ್ಲಿ ಅಪ್ಪ, ಅಮ್ಮ ಆಕೆಗಾಗಿ ಕಾದು ಕುಳಿತ್ತಿದ್ದರು. ಈ ಹುಡುಗಿ ಬರುಬರುತ್ತಾ ಹುಡುಗರ ತರ ಹೊತ್ತಲ್ಲದ ಹೊತ್ತಿಗೆ ಮನೆಗೆ ಬಂದು ಸೇತಾ ಇದ್ದಾಳಲ್ಲ!? ಎಂದು ರಾಜಶೇಖರ್, ಲೀಲಾವತಿ ಕಳವಳಕ್ಕೊಳಗಾದರು.
ಅಕ್ಷರ.., ಕೆಲ್ಸ ಮುಗಿಸಿ ಇಷ್ಟೊತ್ತು ಎಲ್ಲೋಗಿದ್ದೆ? ಹೊತ್ತಿಗೆ ಸರಿಯಾಗಿ ಮನೆ ಸೇಕೋ ಬಾದ? ನೀನು ಸರಿಯಾದ ಹೊತ್ತಿಗೆ ಮನೆಗೆ ಬರದಿದ್ರೆ ನಮ್ಗೆ ದೇಹದಲ್ಲಿ ಉಸಿರೇ ನಿಂತು ಹೋದಂತಾಗುತ್ತೆ ಅಂದ ರಾಜಶೇಖರ್, ಮಗಳು ತುಳಿಯುತ್ತಿರುವ ಹಾದಿ ಸರಿ ಇಲ್ಲ ಎಂದು ನೇರವಾಗಿ ಹೇಳುವ ಬದಲು ಪ್ರೀತಿ ತುಂಬಿದ ಮಾತಿನಲ್ಲಿ ಇನ್ನು ಮುಂದೆ ಹೊತ್ತಿಗೆ ಸರಿಯಾಗಿ ಮನೆ ಸೇರಿಕೊಳ್ಳಬೇಕೆಂಬ ಆದೇಶ ಅಡಗಿತ್ತು.
ಅದ್ಯಾಕೆ ಅಷ್ಟೊಂದು ಭಯ ಪಡ್ತಿರ? ಅಭಿಮನ್ಯು ಜೊತೆ ರಾಜಾಸೀಟ್‌ಗೆ ಹೋಗಿದ್ದೆ. ಬರುವಾಗ ಸ್ವಲ್ಪ ತಡ ಆಯ್ತು. ಇನ್ನು ಮುಂದೆ ಹಾಗಾಗೋದಿಲ್ಲ. ಬೇಸರ ಮಾಡ್ಕೋಬೇಡಿ. ಎಂದು ಅಪ್ಪನನ್ನು ಮೆಚ್ಚಿಸುವ ಪ್ರಯತ್ನ ಮಾಡಿದಳು.
ಅಭಿಮನ್ಯು ಎಲ್ಲಿ ಮನೆಗೆ ಹೋದ್ನ. ಪಾಪ, ಒಳ್ಳೆಯ ಹುಡ್ಗ. ತುಂಬಾ ಕಷ್ಟದಲ್ಲಿ ಬೆಳೆದು ಬಂದು ಇಂದು ತನ್ನ ಸ್ವಂತ ಕಾಲ ಮೇಲೆ ನಿಂತ್ಕೊಂಡಿದ್ದಾನೆ. ನನ್ಗಂತು ಅವನನ್ನ ಕಂಡ್ರೆ ತುಂಬಾನೇ ಖುಷಿ. ಅವನ ಗಿಫ್ಟ್‌ಸೆಂಟರ್‌ಗೆ ಅವಗವಾಗ ಹೋಗ್ತಾ ಇತೇನೆ. ಬಂದವರೊಂದಿಗೆಲ್ಲ ತುಂಬಾ ಖುಷಿಯಿಂದ ಮಾತಾಡ್ತಾನೆ. ಅವನ ಒಳ್ಳೆಯ ಗುಣಗಳಿಂದಲೇ ಅವನು ಜೀವನದಲ್ಲಿ ಮುಂದೆ ಬಂದಿರೋದು ರಾಜಶೇಖರ್ ಅಭಿಮನ್ಯುವಿನ ಗುಣಗಾನದಲ್ಲಿ ತೊಡಗಿದರು.
ಚೆನ್ನಾಗಿ ಮಾತಾಡದೆ ಇನ್ನೇನು ತಾನೇ ಮಾಡ್ತಾನೆ. ಮಾವನಾಗಬೇಕಾಗಿರುವವರ ಜೊತೆ ಪ್ರೀತಿಯಿಂದ ಮಾತಾಡದೆ ಇದ್ರೆ ನಾಳೆ ದಿನ ಹೆಣ್ಣು ಕೊಡೊಲ್ಲ ಅಂತ ಅಭಿಮನ್ಯುವಿಗೆ ಚೆನ್ನಾಗಿ ಗೊತ್ತು. ದೊಡ್ಡ ಕಿಲಾಡಿ ಅವನು. ಅಪ್ಪನಿಗೆ ನೈಜ ವಿಚಾರ ಗೊತ್ತಿಲ್ಲ. ಏನೇ ಆಗಲಿ, ಅಭಿಮನ್ಯುವಿನ ಬಗ್ಗೆ ಅಪ್ಪ ಒಳ್ಳೆಯ ಅಭಿಪ್ರಾಯವನ್ನೇ ಇಟ್ಕೊಂಡಿದ್ದಾರೆ. ಇದು ಕೊನೆತನಕವೂ ಇರಲಿ ದೇವರೇ ಎಂದು ಮನದಲ್ಲಿಯೇ ದೇವರನ್ನು ನೆನೆಯುತ್ತಾ ಪ್ರಾರ್ಥಿಸಿಕೊಂಡಳು.
ಏನು ಯೋಚ್ನೆ ಮಾಡ್ತಾ ಇದ್ದೀಯಾ? ಕೇಳಿದರ ರಾಜಶೇಖರ್.
ಏನಿಲ್ಲ ಅಪ್ಪ, ಇವತ್ತು ರಾಜಾಸೀಟ್‌ಗೆ ಹೋಗಿ ಅಲ್ಲಿ ಕಳೆದ ಕ್ಷಣಗಳು ನೆನಪಿಗೆ ಬಂತು. ಸಂಜೆ ರಾಜಾಸೀಟ್‌ನಲ್ಲಿ ಅದೆಷ್ಟೊಂದು ಜನ ತುಂಬಿಕೊಳ್ತಾರೆ ಗೊತ್ತಾ!? ನಿಂತ್ಕೊಳ್ಲಿಕ್ಕೂ ಜಾಗ ಇರೋದಿಲ್ಲ. ಅದಕ್ಕೆ ನಾವಿಬ್ರು ಎಡಗಡೆ ಗುಡ್ಡ ಇದೆಯಲ್ಲ… ಅಲ್ಲಿಗೆ ಹೋಗಿ ಸೂರ್ಯಾಸ್ತಮ ನೋಡ್ಕೊಂಡು ಬಂದ್ವಿ. ಅಲ್ಲಿ ನಿಂತ್ಕೊಂಡು ಸೂರ್ಯಾಸ್ತಮ ನೋಡ್ತಾ ಇದ್ರೆ ಮನಸ್ಸಿನಲ್ಲಿರುವ ದುಗುಡವೆಲ್ಲ ದೂರವಾಗಿ ಬಿಡುತ್ತೆ. ನೀವು ಒಂದು ದಿನ ಕೂಡ ನನ್ನ ಅಲ್ಲಿಗೆ ಕಕೊಂಡು ಹೋಗ್ಲೇ ಇಲ್ಲ. ಬರೀ ಕಂಜೂಸು ಬೇಕಂತಲೇ ಸಿಡುಕಿದಳು.
ಆಕೆಯ ಮಾತು ಕೇಳಿ ರಾಜಶೇಖರ್‌ಗೆ ನಗು ಬಂತು. ಯಾವ ವಿಚಾರದಲ್ಲೂ ಒಂದಿಷ್ಟು ಕೊರತೆ ಆಗದಂತೆ ಬೆಳೆಸಿದ್ದೇವೆ. ಆದರೆ, ಇಂದು ಅಪ್ಪ ಕಂಜೂಸ್ ಅಂತಿದ್ದಾಳೆ. ಅದೂ ಪಕ್ಕದಲ್ಲಿಯೇ ಇರುವ ರಾಜಾಸೀಟ್‌ಗೆ ಕಕೊಂಡು ಹೋಗಿಲ್ಲ ಎಂಬ ಒಂದೇ ಕಾರಣಕ್ಕೆ. ತುಂಟಿ ಹುಡುಗಿ ಅಂದುಕೊಂಡು ಮನದೊಳಗೆ ನಕ್ಕರು.
ನೋಡೇ.., ಲೀಲಾವತಿ ನಿನ್ನ ಮಗಳು ನನ್ನ ಕಂಜೂಸ್ ಅಂತಿದ್ದಾಳೆ. ಇನ್ನು ದಿನಾ ಇವಳನ್ನ ಅಭಿಮನ್ಯುವಿನ ಜೊತೆ ರಾಜಾಸೀಟ್‌ಗೆ ಕಳ್ಸೋದು ಬೇಡ. ನಾವೇ ಕಕೊಂಡು ಹೋಗುವ. ಇಲ್ದಿದ್ರೆ ದಿನಾ ನಮ್ಮನ್ನ ಕಂಜೂಸ್ ಅಂತ ಕರೆಯೋದಕ್ಕೆ ಶುರು ಮಾಡಿಬಿಡ್ತಾಳೆ
ಮಾತಾಡಿ, ಮಾತಾಡಿ ಮನೆ ಹಾಳಾಗೋಯ್ತು ಅಂದುಕೊಂಡಳು. ಒಂದ್ವೇಳೆ ಅಪ್ಪ, ಅಮ್ಮ ದಿನಾ ರಾಜಾಸೀಟ್‌ಗೆ ಬರೋದಕ್ಕೆ ಪ್ರಾರಂಭ ಮಾಡಿಬಿಟ್ಟರೆ ಅಭಿಮನ್ಯುವಿನೊಂದಿಗೆ ಸರಸ, ಸಲ್ಲಾಪಕ್ಕೆ ಬ್ರೇಕ್ ಹಾಕಿದಂತೆಯೇ ಸರಿ. ಅವನೊಂದಿಗೆ ಭೇಟಿಯಾಗಿ ಮಾತಾಡೋದಕ್ಕೆ ಸಿಗುವ ಸಮಯವೇ ಅತ್ಯಲ್ಪ. ಅದೂ ಹಾಳಾಗಿ ಹೋದರೆ ಏನು ಗತಿ? ತಳಮಳಗೊಂಡ ಅಕ್ಷರ, ಅಪ್ಪನ ಆಸೆ ಕೈಗೂಡದಂತೆ ಮಾಡಬೇಕೆಂದು ನಿರ್ಧರಿಸಿದಳು.
ನೀವು ನನ್ನೊಂದಿಗೆ ರಾಜಾಸೀಟ್‌ಗೆ ಬರುವ ಅವಶ್ಯಕತೆ ಇಲ್ಲ. ಇದುವರೆಗೂ ಒಂದೇ ಒಂದು ದಿನ ಕೂಡ ನನ್ನ ರಾಜಾಸೀಟ್‌ಗೆ ಕಕೊಂಡು ಹೋಗುವುದಕ್ಕೆ ಮನಸ್ಸು ಮಾಡದವರು ಇದೀಗ ಅಲ್ಲಿಗೆ ಬಂದು ನನ್ನ ತಲೆ ಹಾಳು ಮಾಡೋದಕ್ಕಿಂತ ಮನೆಯಲ್ಲಿರುವುದೇ ವಾಸಿ. ನಾನು ಅಭಿಮನ್ಯುವಿನ ಜೊತೆ ಹೋಗ್ತೇನೆ. ನೀವೇನು ಬರುವ ಅವಶ್ಯಕತೆ ಇಲ್ಲ ಎಂದು ಅಪ್ಪ ರಾಜಾಸೀಟ್‌ಗೆ ಬರುವುದನ್ನು ತಡೆಯಲು ನಯವಾದ ತಿರಸ್ಕಾರದ ಮಾತುಗಳನ್ನಾಡಿದಳು.
ಪಾಪ, ಆ ಹುಡುಗನ್ನ ದಿನಾ ರಾಜಾಸೀಟ್‌ಗೆ ಕಕೊಂಡೋಗಿ ಅವನ ತಲೆ ಯಾಕೆ ಹಾಳು ಮಾಡ್ತಾ ಇದ್ದೀಯ. ಮೊದ್ಲೇ ನೀನು ಬಾಯಿ ಬಡ್ಕಿ. ನಿನ್ನ ಮಾತೆಲ್ಲ ಹೇಗೆ ಸಹಿಸಿಕೊಂಡು ಇತಾನೋ ಆ ದೇವರೊಬ್ಬನಿಗೆ ಮಾತ್ರ ಗೊತ್ತು. ನಿನ್ಗಂತು ಮಾಡ್ಲಿಕ್ಕೆ ಕೆಲ್ಸ ಇಲ್ಲ. ಆ ಹುಡುಗನನ್ನೂ ಕೆಲ್ಸ ಮಾಡೋದಕ್ಕೆ ಬಿಡೋದಿಲ್ಲ. ಬಡ ಹುಡುಗ. ಸಣ್ಣ ವಯಸ್ಸಿನಲ್ಲಿ ದುಡಿದು ಒಂದಷ್ಟು ಸಂಪಾದನೆ ಮಾಡ್ಲಿ ಬಿಡು. ನೀನು ಅವನೊಂದಿಗೆ ಸುತ್ತಾಡುವುದನ್ನು ಜನ ನೋಡಿದ್ರೆ ಏನಂದುಕೊಳ್ಳೋದಿಲ್ಲ!? ಒಂದ್ಸಲ ಜನರ ಬಾಯಿಗೆ ಬಿದ್ರೆ ಇನ್ನು ದೇವರೇ ಕಾಪಾಡ್ಬೇಕು. ನೀವಿಬ್ಬರು ಒಳ್ಳೆಯ ಸ್ನೇಹಿತರು ಅಂತ ನಮ್ಗೆ ಗೊತ್ತು. ಆದರೆ, ಸಮಾಜ ಹಾಗೆ ನೋಡೋದಿಲ್ಲ. ಇದರಿಂದ ಇಬ್ಬರ ಭವಿಷ್ಯನೂ ಕೂಡ ಹಾಳಾಗುತ್ತೆ. ಇಬ್ರು ದಿನಾ ರಾಜಾಸೀಟ್‌ಗೆ ಹೋಗದೆ ಇರೋದೇ ವಾಸಿ. ಹಾಗೊಂದ್ವೇಳೆ ಹೋಗ್ಬೇಕೂಂತ ಅನ್ನಿಸಿದ್ರೆ ಅಪ್ಪನೊಂದಿಗೆ ಹೋಗು ಅಭಿಮನ್ಯುವನ್ನು ದಿನಾ ರಾಜಾಸೀಟ್‌ನಲ್ಲಿ ಭೇಟಿಯಾಗುವುದಕ್ಕೆ ಸಂಬಂಧಿಸಿದಂತೆ ಮನದೊಳಗಿದ್ದ ಅತೃಪ್ತಿಯನ್ನು ಮೊದಲ ಬಾರಿಗೆ ಹೊರಗೆಡವಿದರು ಲೀಲಾವತಿ.
ಅಮ್ಮನ ಮಾತು ಕೇಳಿ ಒಂದು ಕ್ಷಣ ಕಳವಳಗೊಂಡಳು. ಪ್ರೀತಿಯ ತೇರನ್ನೇರಿ ಹೊರಟವರಿಗೆ ಇಂತಹ ಮಾತು ರುಚಿಸುವುದಾದರೂ ಹೇಗೆ? ಸಾವು ಬಂದು ಕದವ ತಟ್ಟಿದರೂ ಕೂಡ ನಿಂತ್ಕೋ ನಮ್ಮಿಬ್ಬರ ಪ್ರೀತಿ ಇನ್ನೂ ಪೂರ್ಣಗೊಂಡಿಲ್ಲ ಅನ್ನುವಷ್ಟು ಎದೆಗಾರಿಕೆ ಇರುವ ವಯಸ್ಸು. ಇನ್ನು ಸಣ್ಣಪುಟ್ಟ ಸಲಹೆಗಳನ್ನು ಒಪ್ಪಿಕೊಳ್ಳಲು, ಸಣ್ಣಪುಟ್ಟ ಬೆದರಿಕೆಗಳಿಗೆ ಅಂಜಲು ಮನಸ್ಸು ಸುತರಾಂ ಸಿದ್ಧವಿಲ್ಲ. ಈಗ ಏನಿದ್ದರು ಕೇಳುವುದು ಕೇವಲ ಹೃದಯದ ಭಾಷೆಯನ್ನಷ್ಟೆ. ಹೃದಯದಿಂದ ಹೊರ ಹೊಮ್ಮುವ ಪಿಸುಮಾತು, ಕಣ್ಣಲ್ಲಿ ಕಣ್ಣಿಟ್ಟು ಆಡುವ ಭಾಷೆಗೆ ಮಾತ್ರ ಅಲ್ಲಿ ಅವಕಾಶ. ಉಳಿದ ವಿಚಾರಗಳಿಗೆಲ್ಲ ಅಪ್ಪಣೆ ಇಲ್ಲದೆ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ಆಕೆ ಎಂದೋ ಮನದೊಳಗೆ ಅಳವಡಿಸಿಕೊಂಡಿದ್ದಳು.
ಅಪ್ಪನೇ ಸ್ವಲ್ಪವಾಸಿ. ಆಧುನಿಕ ಪ್ರಪಂಚಕ್ಕೆ ಹೊಂದಿಕೊಂಡಿದ್ದಾರೆ. ಅಮ್ಮ ಹಳ್ಳಿ ಗುಗ್ಗು. ಒಂದು ಹುಡುಗನೊಂದಿಗೆ ಒಂದು ಹುಡುಗಿ ಸುತ್ತಾಡಿಬಿಟ್ರೆ ಏನ್ ಮಹಾ ನಡೆಯಬಾರದ್ದು ನಡೆದು ಹೋಗುತ್ತೆ? ಆ ಕಾಲದಲ್ಲಿ ಅಪ್ಪ, ಅಮ್ಮನನ್ನ ಹೇಗೆ ತಾನೇ ಪ್ರೀತಿ ಮಾಡಿ ಮದ್ವೆಯಾದ್ರೋ… ಆ ದೇವರೊಬ್ಬನಿಗೆ ಮಾತ್ರ ಗೊತ್ತು. ಒಂದು ಕಿಲೋಮೀಟರ್ ದೂರದಲ್ಲಿ ಕೂತ್ಕೊಂಡು ಲವ್ ಮಾಡಿಬೊಹುದು ಎಂದು ಮನದೊಳಗೆ ಮಾತನಾಡಿಕೊಂಡು ನಕ್ಕಳು.
ಅಪ್ಪ ನೀವಾದ್ರೂ ಸ್ವಲ್ಪ ಅಮ್ಮನಿಗೆ ಬುದ್ಧಿ ಹೇಳ್ಬಾದಾ? ಎಂದು ಮಾತು ಶುರು ಮಾಡಿದ ಅಕ್ಷರ ದೊಡ್ಡ ಭಾಷಣ ಬಿಗಿಯಲು ಅಣಿಯಾದವಳಂತೆ ಸೋಫಾದಿಂದ ಮೇಲೆದ್ದು ನಿಂತಳು.
ಅಮ್ಮ, ನಾನು ಹಾದಿ ಬೀದಿಯಲ್ಲಿ ಹೋಗೋ ಹುಡುಗರ ಜೊತೆ ರಾಜಾಸೀಟ್‌ಗೆ ಹೋಗ್ತಾ ಇಲ್ಲ. ಅಭಿಮನ್ಯು ಎಂತಹ ಹುಡುಗ ಅಂತ ಅಪ್ಪನಿಗೆ ಗೊತ್ತಿದೆ. ಈಗತಾನೇ ಅಭಿಮನ್ಯುವನ್ನು ಹೊಗಳಿಗೆ ಅಪ್ಪ ಭಾಷಣ ಬಿಗಿದಿದ್ದಾರೆ. ಅವನ ಮೇಲೆ ನನ್ಗೆ ನಂಬಿಕೆ ಇದೆ. ಅವನೊಂದಿಗೆ ಮಾತ್ರ ರಾಜಾಸೀಟ್‌ಗೆ ಹೋಗ್ತೇನೆ. ಸ್ವಲ್ಪ ಹೊತ್ತು ನನ್ನೊಂದಿಗೆ ರಾಜಾಸೀಟ್‌ನಲ್ಲಿ ಕಾಲ ಕಳೆದರೆ ಅವನ ವ್ಯಾಪಾರ ವಹಿವಾಟಿಗೇನು ತೊಂದರೆ ಆಗೋದಿಲ್ಲ. ಅಂಗಡಿ ನೋಡ್ಕೊಳ್ಳೋದಕ್ಕೆ ಹುಡುಗರು ಇದ್ದಾರೆ. ಅವನಿಗೇನು ಅಲ್ಲಿ ಕೆಲ್ಸ ಇಲ್ಲ. ಯಾವುದೇ ವ್ಯಕ್ತಿ ಜಾಸ್ತಿ ಹಣ ಮಾಡ್ಲಿಕ್ಕೆ ಹೋಗ್ಬಾರದ್ದು. ಹಣದ ಮದ ತಲೆಗೇರಿದೊಡನೆ ಮಾನವೀಯತೆ ಮರೆಯಾಗಿ ಬಿಡುತ್ತೆ. ಅದ್ಕೆ ನನ್ಗೆ ಅಭಿಮನ್ಯು ಶ್ರೀಮಂತನಾಗೋದು ಇಷ್ಟವಿಲ್ಲ. ಇವತ್ತು ಪ್ರೀತಿ, ವಾತ್ಸಲ್ಯಗಳೇನಾದ್ರು ಉಳಿದಿದ್ರೆ ಅದು ಬಡ ಮತ್ತು ಮಧ್ಯಮ ವರ್ಗದವರಲ್ಲಿ ಮಾತ್ರ. ಪ್ರೀತಿ, ವಿಶ್ವಾಸಗಳೆಲ್ಲ ಶ್ರೀಮಂತರ ಮನೆಯ ಹೊಸ್ತಿಲು ದಾಟಿ ಹೋಗಿ ಬಿಟ್ಟಿದೆ. ಶ್ರೀಮಂತರು ಎಷ್ಟೇ ದುಡಿದು ಸಂಪಾದಿಸಿಟ್ಟರೂ ಅವರಿಗೆ ನೆಮ್ಮದಿ ಇರೋದಿಲ್ಲ. ಆದರೆ ಒಬ್ಬ ಬಡವ ಶ್ರೀಮಂತರ ಹೊಲದಲ್ಲಿ ದುಡಿದು ದಣಿದು ಬಂದು ರಾತ್ರಿ ಒಂದಷ್ಟು ಗಂಜಿ ಕುಡಿದು ಸುಖನಿದ್ರೆ ಮಾಡ್ತಾನೆ. ಆದರೆ ಅಂಥಹ ಸುಖ ನಿದ್ರೆ ಶ್ರೀಮಂತರಿಗೆ ಬರೋದಿಲ್ಲ. ಅದಕ್ಕೂ ನಿದ್ರೆ ಮಾತ್ರೆ ಬೇಕು. ಹೇಳೋದಕ್ಕೆ ಇಂಥಹ ನೂರಾರು ವಿಚಾರಗಳಿವೆ. ಆದರೆ ಅದನ್ನೆಲ್ಲ ಹೇಳೋದಕ್ಕೆ ನನ್ಗೆ ತಾಳ್ಮೆ, ಸಮಯ ಎರಡೂ ಇಲ್ಲ. ನನ್ಗೆ ತುಂಬನೇ ಹೊಟ್ಟೆ ಹಸಿತ್ತಾ ಇದೆ. ಬೇಗ ಊಟ ಕೊಡು ರಾಜಾಸೀಟ್ ಭೇಟಿಯನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ಅಮ್ಮನ ಮನಸ್ಸನ್ನು ಬೇರೊಂದು ವಿಷಯದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದಳು.
ಮೊದ್ಲು ಸ್ನಾನ ಮಾಡ್ಕೊಂಡು ಬಾ, ಹಾದಿ ಬೀದಿ ಸುತ್ಕೊಂಡು ಮೈಯೆಲ್ಲಾ ಮಣ್ಣು ಮಾಡ್ಕೊಂಡು ಬಂದಿದ್ದೀಯ. ಸ್ನಾನ ಮಾಡ್ಕೊಂಡು ಬಂದ ನಂತರ ಅಪ್ಪನೊಂದಿಗೆ ಕೂತ್ಕೊಂಡು ಊಟ ಮಾಡು ಅಂದ ಲೀಲಾವತಿ ಅಡುಗೆ ಮನೆಯ ಕಡೆಗೆ ನಡೆದರು.
ಸ್ನಾನ ಮುಗಿಸಿಕೊಂಡು ಬಂದ ಅಕ್ಷರ ಅಪ್ಪನೊಂದಿಗೆ ಊಟಕ್ಕೆ ಕುಳಿತುಕೊಂಡಳು. ಅಮ್ಮ ನೀನು ಮಾಡಿರೋ ಅಡುಗೆ ತುಂಬಾನೇ ರುಚಿಯಾಗಿದೆ. ಹೋದ ಜನ್ಮದಲ್ಲಿ ಯಾವುದಾದ್ರು ಫೈಸ್ಟಾರ್ ಹೋಟೆಲ್‌ನಲ್ಲಿ ಕುಕ್ಕ್‌ಆಗಿ ಕೆಲಸ ಮಾಡಿಬೇಕು. ಅದ್ಕೆ ಇಷ್ಟೊಂದು ಶುಚಿ, ರುಚಿಯಾಗಿ ಅಡುಗೆ ತಯಾರು ಮಾಡ್ತಿಯ ಎಂದು ವಿನೋದವಾಡಿದಳು.
ಮಗಳೊಂದಿಗೆ ಮದುವೆ ವಿಚಾರ ಪ್ರಸ್ತಾಪಿಸಲು ಇದೇ ಸರಿಯಾದ ಸಮಯ. ಮದುವೆಯ ವಿಚಾರವನ್ನು ಮೆಲ್ಲನೆ ಅವಳ ಮುಂದೆ ತೆರೆದಿಟ್ಟು ಒಪ್ಪಿಗೆ ಪಡೆಯೋದು ಸೂಕ್ತ. ಇನ್ನು ಹೆಚ್ಚು ಕಾಲ ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ. ವಯಸ್ಸು ಮೀರುತ್ತಿದೆ. ಈಗ ಬರುತ್ತಿರುವ ಆಫರ್‌ಗಳಲ್ಲಿ ಒಳ್ಳೆಯ ಹುಡುಗನನ್ನು ನೋಡಿ ಮಂಗಳವಾದ್ಯ ಊದಿಸಿಬಿಡಬೇಕೆಂದು ರಾಜಶೇಖರ್ ನಿರ್ಧರಿಸಿದರು.
ಅಕ್ಷರ, ನೀನು ಅಡುಗೆ ಮಾಡೋದನ್ನ ಕಲ್ತುಕೊಂಡ್ರೆ ಅಮ್ಮನ ಹೊರೆಯೂ ಕಡಿಮೆಯಾಗುತ್ತೆ. ನೀನಿವಾಗ ಅಡುಗೆ ಮಾಡ್ಲಿಕ್ಕೆ ಕಲಿಯದೆ ಇದ್ರೆ ಗಂಡನ ಮನೆಗೆ ಹೋಗುವಾಗ ಕಷ್ಟ ಎದುರಿಸ್ತಿಯ ಅಷ್ಟೆ ಮಗಳಿಗೆ ಉಪದೇಶ ನೀಡಿದರು.
ಸಾಕು ನಿಲ್ಸಪ್ಪ ನಿಮ್ಮ ಉಪದೇಶ. ನನ್ಗೆ ಸಿಗೋ ಗಂಡ ಒಳ್ಳೆಯವನಾಗಿತಾನೆ. ಅವನು ನನ್ಗೆ ಯಾವುದೇ ಕಷ್ಟ ಕೊಡೋದಿಲ್ಲ. ಹಾಗಂತ ನನ್ನ ಮನಸ್ಸು ಹೇಳ್ತಾ ಇದೆ. ಅದು ಸತ್ಯವೂ ಕೂಡ ಆಗುತ್ತೆ. ನೀವು ನೋಡ್ತಾ ಇರಿ. ಎಂದು ತುಂಬಾ ವಿಶ್ವಾಸ ದಿಂದ ಬೀಗಿದಳು.
ದೇವರು ನೀನಂದುಕೊಂಡಂತೆ ನಡೆಸಿಕೊಟ್ರೆ ನಮ್ಗೆಲ್ಲ ಸಂತೋಷ. ಅಪ್ಪ, ಅಮ್ಮ ಆದವರು ಮಕ್ಕಳ ಸುಖವನ್ನಲ್ಲದೆ ಬೇರೇನು ತಾನೇ ಬಯಸೋದಕ್ಕೆ ಸಾಧ್ಯ ಹೇಳು? ನಿನ್ಗೆ ಒಂದೊಳ್ಳೆಯ ಹುಡುಗನನ್ನು ನೋಡಿ ಮದ್ವೆ ಮಾಡೋದಕ್ಕೆ ಅಲ್ಲಿ ಇಲ್ಲಿ ಸಾಕಷ್ಟು ವಿಚಾರಿಸ್ತಾ ಇದ್ದೇವೆ. ಆದ್ರೆ, ಒಳ್ಳೆಯ ಹುಡುಗರು ಸಿಕ್ಕಿದ್ರೂ ಅವರ ಜಾತಕ ನಿನ್ನ ಜಾತಕದೊಂದಿಗೆ ಹೊಂದಿಕೆಯಾಗ್ತಾ ಇಲ್ಲ. ಇನ್ನು ಕೆಲವರು ನಮ್ಮ ಆಸ್ತಿ, ಅಂತಸ್ತಿಗೆ ಹೊಂದಾಣಿಕೆಯಾಗ್ತಾ ಇಲ್ಲ. ಏನ್ಮಾಡೋದೆಂಬ ಚಿಂತೆ ಕಾಡ್ತಾ ಇದೆ. ರಾಜಶೇಖರ್ ತುಂಬಾ ದುಃಖಿತರಾದವರಂತೆ ನಟಿಸಿದರು.
ಮದುವೆ ಎಂಬ ಮೂರಕ್ಷರ ಸದ್ಯಕ್ಕಂತೂ ಕೇಳೋದಕ್ಕೆ ಆಕೆಗೆ ಸುತಾರಂ ಇಷ್ಟವಿಲ್ಲ. ಅಭಿಮನ್ಯು ಎಂಬ ಮುದ್ದಾದ ಹುಡುಗನನ್ನು ಮನದೊಳಗೆ ಬೆಚ್ಚಗೆ ಬಚ್ಚಿಟ್ಟುಕೊಂಡಿರುವುದೇ ಅದಕ್ಕೆ ಕಾರಣ. ಆ ವಿಚಾರವನ್ನು ಅಪ್ಪ, ಅಮ್ಮನ ಮುಂದೆ ತೆರೆದಿಡುವುದಾದರೂ ಹೇಗೆ? ಗೊಂದಲದಲ್ಲಿ ತೊಳಲಾಡಿದಳು.
ನನ್ಗಂತೂ ಸದ್ಯಕ್ಕೆ ಯಾವುದೇ ಹುಡುಗರ ಜಾತಕ ಹೊಂದಾಣಿಕೆ ಆಗದಿದ್ರೆ ಸಾಕು. ಈಗ ನನ್ಗೆ ಮದ್ವೆಯಾಗೋ ಮನಸ್ಸಿಲ್ಲ. ಸ್ವಲ್ಪ ವರ್ಷ ಈ ಮನೆಯಲ್ಲಿಯೇ ಹಾಯಾಗಿ ಇತೇನೆ. ಅದು ನಿಮ್ಗೆ ಇಷ್ಟ ಇಲ್ಲ ಅಂದ್ರೆ ಈಗ್ಲೇ ಹೇಳಿ ಬಿಡಿ ಎಲ್ಲಿಗಾದ್ರು ಹೊರಟೋಗ್ತಿನಿ ಅಂದ ಅಕ್ಷರಳ ಕಣ್ಗಳಲ್ಲಿ ನೀರು ತುಂಬಿಕೊಂಡಿತು.
ಮಗಳ ದುಃಖವನ್ನು ಕಂಡು ಇಬ್ಬರು ಕಳವಳಗೊಂಡು ಆಕೆಯನ್ನು ಸಂತೈಸಲು ಮುಂದಾದರು. ಇಷ್ಟೊಂದು ಸಣ್ಣ ವಿಷಯಕ್ಕೆಲ್ಲ ಯಾರಾದ್ರು ಅಳ್ತಾರಾ? ನೀನು ಈ ಮನೆಯಲ್ಲಿ ಇಬಾದು ಅಂತ ನಾವ್ಯಾರು ಹೇಳ್ಲಿಲ್ಲ. ನೀನು ಈ ಮನೆಯಲ್ಲಿ ಸದಾ ನಗು ನಗುತ್ತಾ ಇಬೇಕು. ಅದೇ ನಮ್ಮ ಆಸೆ ಕೂಡ. ಆದರೆ, ಒಂದಲ್ಲಾ ಒಂದು ದಿನ ನೀನು ಮದ್ವೆ ಆಗ್ಲೇ ಬೇಕಲ್ಲ. ಜೀವನ ಪರ್ಯಂತ ಹೀಗೆನೇ ಕಾಲ ಕಳೆಯೋದಕ್ಕೆ ಸಾಧ್ಯನಾ ಹೇಳು? ನೀನು ಮದ್ವೆ ವಿಚಾರದಲ್ಲಿ ಬೇಸರ ಮಾಡ್ಕೋ ಬೇಡ. ನಿನ್ಗೆ ಯಾವತ್ತು ಇಷ್ಟವಾಗುತ್ತೋ ಆವಾಗ ಬಂದು ಹೇಳು. ಮದ್ವೆ ಮಾಡಿಸ್ತೇವೆ. ಈಗ ಚೆನ್ನಾಗಿ ಊಟ ಮಾಡು ಎಂದು ಲೀಲಾವತಿ ಮಗಳನ್ನು ಸಂತೈಸಿದರು.
ನನ್ಗೆ ನೀವು ಬೇಡ, ನಿಮ್ಮ ಊಟನೂ ಬೇಡ. ನನ್ನ ಒಬ್ಬೊಂಟಿಯಾಗಿಲಿಕ್ಕೆ ಬಿಡಿ ಎಂದು ಸಿಡುಕಿ ಊಟವನ್ನು ಅರ್ಧದಲ್ಲಿಯೇ ಬಿಟ್ಟು ಸಿಡುಕುತ್ತಲೇ ಕೈತೊಳೆದುಕೊಂಡು ಬೆಡ್‌ರೂಂ ಕಡೆಗೆ ನಡೆದಳು.
ಮನದಲ್ಲಿ ಮೆಲ್ಲನೆ ಆತಂಕ ಕವಿದುಕೊಳ್ಳಲು ಪ್ರಾರಂಭಿಸಿತು. ತುಟಿಗಳು ಕಂಪಿಸತೊಡಗಿತು, ಹಣೆಯಲ್ಲಿ ಮೆಲ್ಲನೆ ಬೆವರ ಹನಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಆಗಾಗ್ಗೆ ಮುಖ ಒರೆಸಿಕೊಳ್ಳುತ್ತಾ ನನಗೇನು ಆಗಿಲ್ಲವೆಂದು ಇದ್ದು ಬಿಡಲು ಪ್ರಯತ್ನಿಸುತ್ತಿದ್ದಳು.
ಆದರೆ, ಪರಿಸ್ಥಿತಿ ಆಕೆಯನ್ನು ಮತ್ತಷ್ಟು ಆತಂಕಕ್ಕೆ ದೂಡುವ ಪ್ರಯತ್ನ ಮಾಡುತ್ತಲೇ ಇತ್ತು. ಪ್ರೀತಿ ಎಲ್ಲಿ ಕೈ ಜಾರಿ ಹೋಗಿ ಬಿಡುತ್ತದೆಯೋ. ಬಲ್ಲವರಾರು? ಎಂದು ಮನಸ್ಸು ಅಂದುಕೊಳ್ಳುತ್ತಿತ್ತು. ಕ್ಷಣ ಮಾತ್ರದಲ್ಲಿ ಮನಸ್ಸು ಬದಲಾಯಿಸಿಕೊಂಡು ಇಲ್ಲ ಹಾಗಾಗಲು ಬಿಡಬಾರದೆಂದು ಶಪಥ ಕೈಗೊಳ್ಳುತ್ತಿದ್ದಳು.
ಹಾಗೊಂದ್ವೇಳೆ ಅಪ್ಪ, ಅಮ್ಮ ಬಲವಂತ ಮಾಡಿ ಮದ್ವೆ ಮಾಡಿಸಿ ಬಿಟ್ರೆ…? ಮತ್ತೆ ಮತ್ತೆ ಮನದೊಳಗೆ ಪ್ರಶ್ನೆಗಳು ಕಾಡತೊಡಗಿದವು. ಅಭಿಮನ್ಯು ನಾಲ್ಕೈದು ವರ್ಷ ಮದ್ವೆಯ ಮಾತೇ ಆಡ್ಬೇಡ ಅಂತಿದ್ದಾನೆ. ಮದ್ವೆ.. ಮದ್ವೆ… ಅಂತ ಅಪ್ಪ, ಅಮ್ಮ ಬಾಯಿಬಡ್ಕೊಳ್ತಾ ಇದ್ದಾರೆ. ಒಂದ್ವೇಳೆ ಪ್ರೀತಿ ಕೈ ಜಾರಿ ಹೋದರೆ? ಮತ್ತದೇ ಪ್ರಶ್ನೆ ಮನದೊಳಗಿಂದ ತೂರಿಬಂತು. ಯಾರಿಗೂ ಕೇಳಿಸದಂತೆ ಸದ್ದುಮಾಡದೆ ಅಳತೊಡಗಿದಳು. ನೋವು ನುಂಗಿಕೊಂಡೇ ರಾತ್ರಿ ಪೂರ ಕಳೆದಳು.
ರಾತ್ರಿಪೂರ ನಿದ್ರೆ ಇಲ್ಲದೆ ಕಣ್ಣು ಕೆಂಪಾಗಿತ್ತು. ಏನೋ ಕಳೆದುಕೊಳ್ಳುತ್ತೇನೆ ಎಂಬಂಥಹ ಮುಖಭಾವ. ಮೊಗದಲ್ಲಿ ನಗು ಮಾಯವಾಗಿ ದುಃಖ ಮಡುಗಟ್ಟಿ ನಿಂತಿತು. ಬೆಳಗ್ಗಿನ ಸೂರ್ಯನ ಹೊಂಗಿರಣ ಮನೆಯ ಹೊಸ್ತಿಲು ತುಳಿದರೂ ಆಕೆಗೆ ಮಂಚದಿಂದ ಮೇಲೇಳಲು ಮನಸ್ಸಾಗಲಿಲ್ಲ. ಸೂರ್ಯ ಬೆಳದಿಂಗಳನ್ನು ಸರಿಸುವ ಮೊದಲೇ ಎದ್ದು ಶುಚಿಯಾಗಿ ಲವಲವಿಕೆ ಯಿಂದ ಓಡಾಡುತ್ತಿದ್ದ ಆಕೆಯಲ್ಲಿಂದು ಆತಂಕ ತುಂಬಿಕೊಂಡಿದೆ. ಮುಂದೇನು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಂಚದಿಂದ ಮೇಲೇಳದೆ ಅಂಗಾತ ಮಲಗಿ ಯೋಚನೆಯಲ್ಲಿ ಮುಳುಗಿದಳು.
ಬೆಳಗ್ಗೆ ಸಾಕಷ್ಟು ಸಮಯ ಕಳೆದರೂ ಕೊಠಡಿಯಿಂದ ಅಕ್ಷರ ಹೊರ ಬಾರದನ್ನು ಕಂಡು ಲೀಲಾವತಿ ಕಂಗಾಲಾದರು. ಏನಾದರು ಅನಾಹುತ ಮಾಡಿಕೊಂಡು ಬಿಟ್ಟಳೋ ಎಂಬ ಆತಂಕದೊಂದಿಗೆ ದಡಬಡಾಯಿಸುತ್ತಾ ಕೊಠಡಿಯ ಕಡೆಗೆ ನಡೆದರು.
ಅಕ್ಷರ ಇನ್ನೂ ಮಲಗಿಯೇ ಇದ್ದಳು. ಮಂಚದ ಒಂದು ಬದಿಯಲ್ಲಿ ಕುಳಿತುಕೊಂಡ ಲೀಲಾವತಿ ಪ್ರೀತಿಯಿಂದ ಮಗಳ ಹಣೆಗೊಂದು ಮುತ್ತು ನೀಡಿ ನಿದ್ರೆ ಮಾಡಿದ್ದು ಸಾಕಿನ್ನು, ಬೇಗ ಎದ್ದು ರೆಡಿಯಾಗು. ಹೆಣ್ಮಕ್ಕಳು ಇಷ್ಟೊತ್ತು ಮಲ್ಕೊಂಡು ಇಬಾದು. ಬೇಗ ಎದ್ದೇಳು. ಕಚೇರಿಗೆ ಹೋಗೋ ಹೊತ್ತಾಯ್ತು. ನಿನ್ಗೆ ಇಷ್ಟವಾದ ಅಕ್ಕಿ ರೊಟ್ಟಿ ಮಾಡಿಟ್ಟಿದ್ದೇನೆ. ಹೊತ್ತು ಕಳೆದು ಹೋದರೆ ರುಚಿ ಇರೋದಿಲ್ಲವೆಂದು ಮಗಳನ್ನು ಎಬ್ಬಿಸಲು ಪ್ರಯತ್ನಿಸಿದರು.
ಜೀವನದ ರುಚಿಯೆಲ್ಲ ಕಳೆದು ಹೋಗುವ ಹೊತ್ತಿನಲ್ಲಿ ತಿಂಡಿಯ ರುಚಿ ಕಳೆದು ಹೋದರೇನಂತೆ ಎಂದು ಅಕ್ಷರ ಮಂಚ ಬಿಟ್ಟು ಮೇಲೇಳಲು ಮನಸ್ಸು ತೋರಲಿಲ್ಲ. ನನ್ಗೇನು ಬೇಡ. ಸ್ವಲ್ಪ ಸಮಯ ಒಬ್ಬೊಂಟಿಯಾಗಿ ಇರೋದಕ್ಕೆ ಬಿಡಿ. ಯಾಕೋ ಮನಸ್ಸೇ ಸರಿಯಿಲ್ಲ. ನಾನು ಇವತ್ತು ಕಚೇರಿಗೆ ಹೋಗೊಲ್ಲ. ಸ್ವಲ್ಪ ಹೊತ್ತು ಮಲ್ಕೋತ್ತಿನಿ ಎಂದು ಮುಖಕ್ಕೆ ಕಂಬಳಿ ಹೊದ್ದುಕೊಂಡಳು.
ಹುಚ್ಚುಡ್ಗಿ ಮದ್ವೆ ಅಂದ ತಕ್ಷಣ ಮುಖ ಊದಿಸಿಕೊಂಡು ಕೂತಿದ್ದೀಯಲ್ಲ. ಮದ್ವೆ ಅಂದ ತಕ್ಷಣ ಪ್ರಾರಂಭದಲ್ಲಿ ಆತಂಕ, ನಾಚಿಕೆ ಇದ್ದೇ ಇರುತ್ತೆ. ಅದು ಕೆಲ ಸಮಯದ ನಂತರ ಮಾಯವಾಗಿ ಬಿಡುತ್ತೆ. ನೀನೇನು ಚಿಂತೆ ಮಾಡ್ಬೇಡ. ನಿನ್ನ ಮನಸ್ಸಿಗೆ ಹಿಡಿಸಿದ ಹುಡುಗನನ್ನೇ ನೋಡಿ ಮದ್ವೆ ಮಾಡಿಸ್ತೇವೆ. ನಿನ್ನ ಒಪ್ಪಿಗೆ ಇಲ್ಲದೆ ಮದ್ವೆ ಮಾಡೋದಕ್ಕೆ ಸಾಧ್ಯನಾ ಹೇಳು? ಲೀಲಾವತಿ ಹಿತವಾದ ಮಾತುಗಳಿಂದ ಮಗಳ ಮನಸ್ಸು ಗೆಲ್ಲುವ ಪ್ರಯತ್ನ ನಡೆಸುತ್ತಿರುವಾಗ ಮನೆಯ ಬಾಗಿಲನ್ನು ಯಾರೋ ಬಡಿದಂತಾಯಿತು.
ಅಮ್ಮವ್ರೇ…. ಹೊರಗಿನಿಂದ ಮನೆಯ ಆಳು ಕರಿಯನ ಧ್ವನಿ ಕೇಳಿಸಿತು. ಅಕ್ಷರ ಎದ್ದು ಹೋಗಿ ಬಾಗಿಲು ತೆರೆದು ಏನು ಬೇಕೆಂದು ವಿಚಾರಿಸಿದಳು.
ಅಮ್ಮಾವ್ರೇ ಯಜಮಾನ್ರು ಇಲ್ವ…?
ಇದ್ದಾರೆ ಅಂದ ಅಕ್ಷರ ಅಪ್ಪನನ್ನು ಕೂಗಿ ಕರೆದಳು.
ಮನೆಯೊಳಗೆ ಕಾಫಿ ಹೀರುತ್ತಾ, ದಿನ ಪತ್ರಿಕೆ ಓದುತ್ತಾ ಕುಳಿತ್ತಿದ್ದ ರಾಜಶೇಖರ್ ಮಗಳ ಕರೆ ಕೇಳಿ ಬಂದರು. ಮನೆಯ ಹೊಸ್ತಿಲ ಬಳಿ ಕರಿಯ ನಿಂತಿದ್ದ.
ಏನ್ ಕರಿಯ, ಬೆಳಗ್ಗೆ ಬೆಳಗ್ಗೆನೇ ಮನೆ ಕಡೆ ಬಂದು ಬಿಟ್ಟಿದ್ದೀಯ? ಮನೆಗೆ ಬಂದ ವಿಚಾರ ಕೇಳಿದರು ರಾಜಶೇಖರ್.
ಕರಿಯ ಸಂಕೋಚದಿಂದ ಏನಿಲ್ಲ ಯಜಮಾನ್ರೇ… ನಿನ್ನೆ ಮಗಳನ್ನ ನೋಡೋದಕ್ಕೆ ಹುಡುಗನ ಕಡೆಯವರು ಬಂದಿದ್ರು. ಎರಡು ಕಡೆ ಒಪ್ಪಿಗೆ ಆಯ್ತು. ಮುಂದಿನ ತಿಂಗಳೊಳಗೆ ಮದ್ವೆ ಮಾಡಿಕೊಡ್ಬೇಕೂಂತ ಗಂಡಿನ ಕಡೆಯವರು ಕೇಳ್ಕೊಂಡಿದ್ದಾರೆ. ಏನೋ ಒಂದಷ್ಟು ನಿಮ್ಮ ಹೊಲದಲ್ಲಿ ದುಡಿದು ಮಗಳ ಮದ್ವೆಗೆ ಕಾಸು ಕೂಡಿಟ್ಟಿದ್ದೇನೆ. ಅದು ಮಗಳಿಗೆ ಒಡವೆ ಕೊಂಡ್ಕೊಳ್ಳೋದಕ್ಕೆ ಸಾಕಾಗುತ್ತೆ. ಒಡವೆ ಕೊಂಡುಕೊಂಡ್ರೆ ಮದ್ವೆ ನಡೆಸೋದಕ್ಕೆ ಹಣ ಸಾಕಾಗೋದಿಲ್ಲ. ಇರೋ ಒಬ್ಬಳೇ ಮಗಳನ್ನ ಬರಿಗೈಯಲ್ಲಿ ಕಳಿಸೋದಕ್ಕೆ ಮನಸಾಗ್ತಾ ಇಲ್ಲ. ಅದಕ್ಕೆ ನೀವು ದೊಡ್ಡ ಮನಸ್ಸು ಮಾಡಿ ಮದ್ವೆಗೆ ಒಂದೈವತ್ತು ಸಾವಿರ ರೂಪಾಯಿ ಕೊಟ್ಟರೆ ದೊಡ್ಡ ಉಪಕಾರ ಆದಿತ್ತು ವಿನಯದಿಂದ ಕೇಳಿಕೊಂಡ.
ಕರಿಯನ ಮಾತು ರಾಜಶೇಖರ್‌ಗೆ ರುಚಿಸಲಿಲ್ಲ. ಬಡವ ಇಷ್ಟೊಂದು ದೊಡ್ಡ ಮಟ್ಟಕ್ಕೆ ಯೋಚಿಸಬಾರದು. ಏನೋ ಇರುವ ವ್ಯವಸ್ಥೆಯಲ್ಲಿ ಮದುವೆ ಮಾಡಿ ಮುಗಿಸೋದು ಬಿಟ್ಟು ಸಾಲ ಕೇಳೋದಕ್ಕೆ ಬಂದಿದ್ದಾನೆ. ಸಾಲ ಕೊಟ್ಟರೆ ಅದು ವಾಪಾಸಾಗುವುದು ಅಷ್ಟಕಷ್ಟೆ. ಈಗಾಗಲೇ ಕೊಟ್ಟ ಸಾಲ ಬೆಟ್ಟದಷ್ಟು ಬೆಳೆದಿದೆ. ಇನ್ನು ಅದರ ಮೇಲೆ ಸಾಲಕೊಟ್ಟರೆ ನಷ್ಟವೇ ಹೆಚ್ಚು ಎಂದು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸ್ವಲ್ಪ ಹೊತ್ತು ತೊಡಗಿದ ನಂತರ ಕರಿಯನಿಗೆ ಒಂದಷ್ಟು ಬುದ್ಧಿವಾದ ಹೇಳಿ ಕಳುಹಿಸುವುದೇ ಒಳ್ಳೆಯದೆಂಬ ನಿರ್ಧಾರಕ್ಕೆ ಬಂದರು.
ನೋಡು ಕರಿಯ, ಬಡವ ಯಾವತ್ತೂ ಅವನ ಯೋಗ್ಯತೆಗೆ ತಕ್ಕಂತೆ ಯೋಚ್ನೆ ಮಾಡ್ಬೇಕು. ಗಂಡಿನ ಕಡೆಯವರ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ಸಾಧ್ಯನಾ ಹೇಳು? ಅಷ್ಟೊಂದು ದುಡ್ಡು ಖರ್ಚು ಮಾಡಿ ಮದ್ವೆ ಮಾಡೋ ಅವಶ್ಯಕತೆಯಾದ್ರೂ ಏನು? ಐವತ್ತು ಸಾವಿರ ಅಂದ್ರೆ ಏನು ಮಕ್ಕಳಾಟ ಅಂತ ತಿಳ್ಕೊಂಡಿದ್ದೀಯ? ಸಾಯೋವರೆಗೂ ನಿನ್ನ ಸಂಸಾರ ದುಡಿದರೂ ಅಷ್ಟೊಂದು ಹಣ ಸಂಪಾದಿಸೋದಕ್ಕೆ ಸಾಧ್ಯವಿಲ್ಲ ಬಿಡು. ಇನ್ನು ನಾನು ನಿನ್ಗೆ ಹಣ ಕೊಟ್ರೆ ನನ್ಗೆ ಮೂರು ನಾಮನೇ ಗತಿ. ನನ್ನ ಹತ್ರ ಈಗ ಅಷ್ಟೊಂದು ಹಣ ಇಲ್ಲ. ಏನೋ ಬಾಯಿ ಬಿಟ್ಟು ಕೇಳಿದ್ಯಾ ಅಂತ ಒಂದೈದು ಸಾವಿರ ಕೊಡ್ತೇನೆ. ತಗೊಂಡು ಹೋಗು ಕರಿಯನನ್ನು ದುರುಗುಟ್ಟಿ ನೋಡುತ್ತಾ ಹೇಳಿದರು.
ಒಡೆಯನಿಂದ ಇಂತಹ ಒಂದು ಮಾತನ್ನು ಕರಿಯ ನಿರೀಕ್ಷೆ ಮಾಡಿರಲಿಲ್ಲ. ಒಡೆಯ ಎಂದಿಗೂ ತನ್ನ ಕೈ ಬಿಡುವುದಿಲ್ಲವೆಂಬ ನಂಬಿಕೆ ಆತನಲ್ಲಿತ್ತು. ಆದರೆ, ಅವರ ಮಾತು ಕೇಳಿ ಆಕಾಶವೇ ತಲೆಮೇಲೆ ಕಳಚಿ ಬಿದ್ದ ಅನುಭವ. ಆದರೂ ಒಡೆಯ ಮನಸ್ಸು ಬದಲಾಯಿಸಿ ಕೇಳಿದಷ್ಟು ಹಣ ಕೊಟ್ಟರೂ ಕೊಡಬಹುದೆಂಬ ಸಣ್ಣದೊಂದು ನಿರೀಕ್ಷೆ ಆತನ ಮನದಲ್ಲಿ ಜೀವಂತವಾಗಿತ್ತು.
ಯಜಮಾನ್ರೇ ಹಾಗನ್ಬೇಡಿ. ನಾನು ನಿಮ್ಮಲ್ಲಿ ಕೂಲಿ ಮಾಡೋನು. ನಿಮ್ಮಲ್ಲಿ ಸಾಲ ಕೇಳದೆ ಇನ್ಯಾರಲ್ಲಿ ಕೇಳ್ಲಿ ಹೇಳಿ? ನಿಮ್ಮಲ್ಲಿ ಕೆಲಸ ಮಾಡುವಾಗ ಬೇರೆ ಸಹುಕಾರ್ರು ನನ್ಗೆ ಸಾಲ ಕೊಡೊಲ್ಲ. ದೊಡ್ಡ ಮನಸ್ಸು ಮಾಡಿ ಐವತ್ತು ಸಾವಿರ ಇಲ್ಲದಿದ್ರು ಒಂದಿಪ್ಪತ್ತೈದು ಸಾವಿರನಾದ್ರೂ ಕೊಡಿ. ನಿಮ್ಮ ಉಪಕಾರನ ಸಾಯೋ ತನಕ ಮರೆಯೋದಿಲ್ಲ. ಹೆಂಡ್ತಿ, ಮಕ್ಕಳು ನಿಮ್ಮ ಹೊಲದಲ್ಲಿ ದುಡಿದು ಸಾಲ ತೀರಿಸ್ತೇವೆ. ಇಲ್ಲ ಅನ್ಬೇಡಿ ಯಜಮಾನ್ರೇ… ತಲೆಕೆರೆದುಕೊಳ್ಳುತ್ತಾ ಅತ್ಯಂತ ವಿನಯದಿಂದ ಕೇಳಿಕೊಂಡು ಒಡೆಯನ ಮುಖವನ್ನೇ ನೋಡುತ್ತಾ ಬೆನ್ನುಬಾಗಿಸಿ ಕೈ ಕಟ್ಟಿಕೊಂಡು ಉತ್ತರಕ್ಕಾಗಿ ಒಡೆಯನ ಮೊಗವನ್ನೇ ನೋಡುತ್ತಾ ನಿಂತುಬಿಟ್ಟ.
ಕೂಲಿ ಮಾಡಿ ಜೀವನ ಸಾಗಿಸುವವರನ್ನು ನಂಬುವುದಾದರೂ ಹೇಗೆ? ಇಂದು ನಮ್ಮ ಮನೆಯ ಬಗ್ಗೆ ನಿಷ್ಠೆ ತೋರಿ ದುಡಿಯುತ್ತಾರೆ. ನಾಳೆ ದಿನ ಕೂಲಿ ಹೆಚ್ಚು ಸಿಗುವ ಕಡೆಗೆ ಹೋಗಿ ಬಿಡುತ್ತಾರೆ. ಮಗಳ ಮದುವೆಯ ಹೆಸರಿನಲ್ಲಿ ಐವತ್ತು ಸಾವಿರ ಪಡೆದು ಕರಿಯ ಜಾಗ ಖಾಲಿ ಮಾಡಬಹುದೆಂಬ ಸಂಶಯ ರಾಜಶೇಖರ್ ಮನದೊಳಗೆ ಮೊಳಕೆಯೊಡೆದುಕೊಂಡಿತು.
ನೋಡು ಕರಿಯ, ಒಂದು ವಿಚಾರದ ಬಗ್ಗೆ ನನ್ಗೆ ಪದೇ ಪದೇ ಹೇಳೋದಕ್ಕೆ ಇಷ್ಟ ಇಲ್ಲ. ನನ್ನಹತ್ರ ಅಷ್ಟೊಂದು ಹಣ ಇಲ್ಲ. ಬೆಳಗ್ಗೆ ಬೆಳಗ್ಗೆನೇ ಬಂದು ತಲೆ ಹಾಳು ಮಾಡ್ಬೇಡ. ಐದು ಸಾವಿರಕ್ಕೆ ಇನ್ನೊಂದು ಐದು ಸಾವಿರ ಸೇರಿಸಿಕೊಡ್ತೇನೆ. ಅದಕ್ಕಿಂತ ಹೆಚ್ಚಿಗೆ ಕೇಳ್ಬೇಡ. ನಿನ್ನಂತೆ ಉಳಿದವರೂ ಕೂಡ ಇದೇ ರೀತಿ ಸಾಲ ಕೇಳ್ಕೊಂಡು ಬಂದ್ರೆ ನಾನು ತಿರುಪೆ ಎತ್ತಬೇಕಷ್ಟೆ. ಕೊಟ್ಟಷ್ಟು ತಗೊಂಡೋಗೋದನ್ನು ಕಲ್ತ್ಕೊ ಕೆಂಗಣ್ಣು ಬೀರುತ್ತಾ ಗುಡುಗಿದರು ರಾಜಶೇಖರ್. ಇಬ್ಬರ ಮಾತನ್ನು ಒಂದೆಡೆ ಕುಳಿತು ಶಾಂತಚಿತ್ತತೆಯಿಂದ ಆಲಿಸುತ್ತಿದ್ದ ಅಕ್ಷರಳಿಗೆ ಅಪ್ಪನ ವರ್ತನೆ ಸ್ವಲ್ಪನೂ ಹಿಡಿಸಲಿಲ್ಲ. ಕೆಲಸದವರನ್ನು ನೋಡಿಕೊಳ್ಳುವ ರೀತಿನಾ ಇದು? ಮನದಲ್ಲಿ ಪ್ರಶ್ನೆ ಕಾಡಿತು.
ಅಪ್ಪ, ಕರಿಯ ನಮ್ಮಲ್ಲಿ ಸಾಕಷ್ಟು ವರ್ಷಗಳಿಂದ ನಿಷ್ಠೆಯಿಂದ ದುಡಿಯ್ತಾ ಇದ್ದಾನೆ. ಅವನು ದುಡಿಯದೆ ಹೋಗಿದ್ರೆ ನಾವಿಂದು ಸುಪದ ಸುಪ್ಪತ್ತಿಗೆಯಲ್ಲಿ ಮೆರೆಯೋದಕ್ಕೆ ಸಾಧ್ಯವಾಗ್ತಾ ಇಲಿಲ್ಲ. ನಮ್ಮ ಸುಖ, ಸಂತೋಷಕ್ಕೆ ನಮ್ಮಲ್ಲಿ ದುಡಿಯ್ತಾ ಇರೋ ಕಾರ್ಮಿಕರೇ ಕಾರಣ. ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಸಂಪಾದಿಸಿಟ್ಟುಕೊಂಡಿದ್ದೀರ. ಅಂತೂ ನಿಮ್ಮ ಆಸೆಗೆ ಕೊನೆಯಿಲ್ಲ. ಅವನೇನು ದಿನಾ ನಿಮ್ಮತ್ರ ಸಾಲ ಕೇಳ್ಕೊಂಡು ಬತಾನಾ? ಮಗಳ ಮದ್ವೆಯನ್ನು ಎಲ್ಲರ ಮನಸ್ಸಿಗೂ ತೃಪ್ತಿಯಾಗೋ ರೀತಿಯಲ್ಲಿ ನಡೆಸುವ ಆಸೆ ಇಟ್ಟುಕೊಂಡಿದ್ದಾನೆ. ಅದು ಅವನ ತಪ್ಪಾ? ಪ್ರತಿಯೊಬ್ಬ ಮನುಷ್ಯನಿಗೂ ಆಸೆ, ಆಕಾಂಕ್ಷೆಗಳು ಇದ್ದೇ ಇರುತ್ತೆ. ಬಡವ ಅಂದ ಮಾತ್ರಕ್ಕೆ ಆಸೆಗಳನ್ನೆಲ್ಲ ಮೂಟೆ ಕಟ್ಟಿ ಮೂಲೆಗೆಸೆಯಬೇಕಾ? ಮಗಳಾಗಿರುವ ನನ್ನನ್ನು ನೀವು ಬರಿಗೈಯಲ್ಲಿ ಗಂಡನ ಮನೆಗೆ ಕಳುಹಿಸೋದಕ್ಕೆ ಇಷ್ಟ ಪಡುವುದಾದರೆ ನೀವು ಹೇಳಿದಂತೆ ಕರಿಯನಿಗೆ ಹತ್ತು ಸಾವಿರ ಕೊಟ್ಟು ಕಳುಹಿಸಿ. ಆದರೆ, ನನ್ನ ಬರಿಗೈಯಲ್ಲಿ ಕಳುಹಿಸೋದಕ್ಕೆ ನಿಮ್ಮ ಮನಸ್ಸು ಒಪ್ಪುವುದಿಲ್ಲ. ಅದೇ ರೀತಿ ತಂದೆ ಸ್ಥಾನದಲ್ಲಿರುವ ಕರಿಯ ತನ್ನ ಮಗಳನ್ನ ಬರಿಗೈಯಲ್ಲಿ ಕಳುಹಿಸೋದಕ್ಕೆ ಇಷ್ಟ ಪಡೋದಿಲ್ಲ. ನೀವು ಸಾಲ ಕೊಡದೆ ಹೋದ್ರೆ ಅವನಿಗೇನು ನಷ್ಟವಿಲ್ಲ. ಅವನು ಬೇರೊಂದು ಸಹುಕಾರನ ಮನೆಗೆ ಹೋಗಿ ಸೇಕೊಂಡು ಸಾಲ ಪಡ್ಕೊಂಡು ಮಗಳ ಮದ್ವೆ ಮಾಡಿ ಮುಗಿಸ್ತಾನೆ. ಆವಾಗ ಕಾರ್ಮಿಕರಿಲ್ಲದೆ ಸಮಸ್ಯೆ ಎದುರಿಸೋದು ನೀವೆ. ನೀವೇನಿವಾಗ ಕರಿಯನಿಗೆ ಐವತ್ತು ಸಾವಿರ ಕೊಡ್ತಿರೋ ಇಲ್ವೋ? ಕೊಡೊಲ್ಲ ಅಂದ್ರೆ ನನ್ನ ಹತ್ರ ಇರೋ ಐವತ್ತು ಸಾವಿರ ರೂಪಾಯಿಯನ್ನು ಅವನಿಗೆ ಕೊಡ್ತೇನೆ ಎಂದು ಹೇಳಿ ಹಣ ತರಲು ತನ್ನ ಬೆಡ್‌ರೂಂ ಕಡೆಗೆ ಹೊರಟ ಅಕ್ಷರಳನ್ನು ರಾಜಶೇಖರ್ ತಡೆದು ನಿಲ್ಲಿಸಿದರು.
ಯಾಕೆ ಇಷ್ಟೊಂದು ಕೋಪ ಮಾಡ್ಕೋತ್ತಿಯ? ಆಯ್ತು, ನಿನ್ನಿಷ್ಟದಂತೆ ಕರಿಯನಿಗೆ ಐವತ್ತು ಸಾವಿರ ರೂಪಾಯಿ ಕೊಡ್ತೇನೆ ಮಗಳ ಸಂತೋಷಕ್ಕಿಂತ ಹೆಚ್ಚೇನು ಬೇಕಾಗಿಲ್ಲ ನನ್ಗೆ ಅಂದ ರಾಜಶೇಖರ್, ಕರಿಯನ ಕಡೆಗೆ ನೋಟ ಬೀರಿ ಕರಿಯ, ನೀನು ಮಧ್ಯಾಹ್ನ ಮನೆಗೊಂದ್ಸಲ ಬಂದು ಹೋಗು. ಬ್ಯಾಂಕಿನಿಂದ ಹಣ ತಂದಿಟ್ಟಿತೇನೆ. ಅಮ್ಮವ್ರ ಕೈಯಿಂದ ಕೇಳ್ಕೊಂಡು ಹೋಗು ಎಂದು ಕರಿಯನನ್ನು ಕಳುಹಿಸಿದರು.
ಕರಿಯ ಹಿರಿಹಿಗ್ಗಿ ಧನ್ಯತಾಭಾವದೊಂದಿಗೆ ಕೈ ಮುಗಿದು ಮನೆಯ ಕಡೆಗೆ ನಡೆದ. ಕರಿಯನ ಮೊಗದಲ್ಲಿ ಸಂತೋಷದಿಂದ ಅರಳಿ ನಿಂತ ನಗುವನ್ನು ಕಂಡು ಅಕ್ಷರ ಸಂತಸಗೊಂಡಳು. ಆದರೆ, ರಾತ್ರಿ ಅಪ್ಪ ಪ್ರಸ್ತಾಪ ಮಾಡಿದ ಮದುವೆಯ ವಿಚಾರ ಮತ್ತೆ ತಲೆಯೊಳಗೆ ಹೊಕ್ಕು ಸಂತೋಷವೆಲ್ಲ ದೂರ ಸರಿಯಿತು.
ರಾಜಶೇಖರ್ ತಮ್ಮ ನಿರ್ಧಾರವನ್ನು ಏಕಾಏಕಿ ಬದಲಾಯಿಸಿಕೊಳ್ಳಲು ಎರಡು ಪ್ರಮುಖ ಕಾರಣಗಳಿದ್ದವು. ಒಂದು ಮಗಳ ಮನಸ್ಸನ್ನು ಗೆದ್ದು ಆಕೆಗೆ ಒಳ್ಳೆಯ ಮನೆತನದ ಹುಡುಗನೊಂದಿಗೆ ವಿವಾಹ ಮಾಡಿಸುವುದು. ಮತ್ತೊಂದು ಮಗಳು ಹೇಳಿದಂತೆ ಇತ್ತೀಚಿನ ವರ್ಷಗಳಲ್ಲಿ ಕೂಲಿ ಕಾರ್ಮಿಕರು ಸಿಗುವುದೇ ಅಪರೂಪ. ಇರುವ ಒಂದು ಕೂಲಿ ಕಾರ್ಮಿಕನ ಕುಟುಂಬವನ್ನು ಕಳೆದುಕೊಂಡರೆ ತೋಟದ ಕೆಲಸ ಕಾರ್ಯಗಳಿಗೆ ದೊಡ್ಡ ಹೊಡೆತ ಬಿದ್ದಂತೆಯೇ ಸರಿ. ಕರಿಯ ಎಲ್ಲಾದರು ಕೈಕೊಟ್ಟು ಕುಟುಂಬದೊಂದಿಗೆ ಪಕ್ಕದ ಮಾಲೀಕರ ತೋಟಕ್ಕೆ ವಲಸೆ ಹೋಗಿಬಿಟ್ಟರೆ ಇನ್ನು ಕೂಲಿ ಕಾರ್ಮಿಕರಿಗಾಗಿ ಮೂಡಲಸೀಮೆಗೆ ಆಗಿಂದಾಗೆ ಎಡತಾಕುವ ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ ಎಂದು ಅರಿವಾದಂತೆ ಕರಿಯ ಕೇಳಿದಂತೆ ಐವತ್ತು ಸಾವಿರ ಕೊಡಲು ಒಪ್ಪಿ, ಜೀವನ ಪರ್ಯಂತ ಕಡಿಮೆ ಸಂಬಳಕ್ಕೆ ಅವನ ಕುಟುಂಬದವರಿಂದ ದುಡಿಸಿಕೊಳ್ಳುವ ನಿರ್ಧಾರ ಕೈಗೊಂಡು ತೋಟದ ಕಡೆಗೆ ನಡೆದರು.
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಿನ್ನೆ ನಡೆದ ಮಾತುಕತೆಯಿಂದ ಬೇಸರಗೊಂಡ ಅಕ್ಷರಳಿಗೆ ಕಚೇರಿಗೆ ಹೋಗುವ ಮನಸ್ಸಾಗಲಿಲ್ಲ. ಭಾಗ್ಯಳ ಮನೆಗೆ ಹೋಗದೆ ಹಲವು ವರ್ಷಗಳೇ ಸರಿದುಹೋಗಿತ್ತು. ಇವತ್ತು ಕಚೇರಿಗೆ ರಜೆ ಹಾಕಿ ಭಾಗ್ಯಳ ಮನೆಗೆ ಹೋಗಿ ಒಂದಷ್ಟುಹೊತ್ತು ಮನಬಿಚ್ಚಿ ಮಾತಾಡಿ ಮನಸ್ಸಿನ ದುಗುಡವನ್ನೆಲ್ಲ ದೂರ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಬೆಳಗ್ಗಿನ ಉಪಹಾರ ಮುಗಿಸಿಕೊಂಡು ಭಾಗ್ಯಳ ಮನೆಯ ಹಾದಿಹಿಡಿದಳು.
ಅಕ್ಷರ ಮನೆಗೆ ಬರುವ ನಿರೀಕ್ಷೆಯೇ ಭಾಗ್ಯಳಿಗೆ ಇರಲಿಲ್ಲ. ಆಕೆಯನ್ನು ನೋಡಿ ಒಂದೆಡೆ ಆಶ್ಚರ್ಯ, ಮತ್ತೊಂದೆಡೆ ಸಂತೋಷ ಎರಡೂ ಒಟ್ಟಿಗೆ ಆವರಿಸಿಕೊಂಡಿತು. ಆಕೆಯನ್ನು ಮನೆಯ ಅಂಗಳದಿಂದ ಮನೆಯವರೆಗೂ ಪುಟ್ಟ ಮಗುವಿನಂತೆ ಕೈ ಹಿಡಿದು ಕರೆದೊಯ್ದಳು. ಕಾಲೇಜು ಬಿಟ್ಟ ನಂತರ ಇಬ್ಬರು ಭೇಟಿಯಾಗಿರಲಿಲ್ಲ.
ಅಂತೂ ಕೊನೆಗೂ ನಮ್ಮ ಮನೆಗೆ ಬಂದ್ಯಲ್ಲಾ! ತುಂಬನೇ ಸಂತೋಷ ಆಗ್ತಾ ಇದೆ. ಎಷ್ಟು ವರ್ಷಗಳಾಯ್ತು ನಿನ್ನ ನೋಡದೆ. ಒಂದು ಫೋನ್ ಕೂಡ ಮಾಡೋ ಮನಸ್ಸಾಗಲಿಲ್ವ? ಅಭಿಮನ್ಯು ಸಿಕ್ಕ ನಂತರವಂತೂ ನಿನ್ಗೆ ಬಿಡುವೇ ಇಲ್ಲ ಅಂತ ಕಾಣುತ್ತೆ ಅಕ್ಷರಳನ್ನು ಕೆಣಕಲೆಂದೇ ಕೇಳಿದಳು.
ತುಂಬಾ ದಿನದಿಂದ ನಿನ್ನ ನೋಡ್ಬೇಕು, ಒಂದಷ್ಟು ಹೊತ್ತು ಮನಬಿಚ್ಚಿ ಮಾತಾಡ್ಬೇಕು, ಹಳೆಯ ನೆನಪಿನ ಮೂಟೆಯನ್ನೆಲ್ಲ ನಿನ್ನೆದುರು ಬಿಚ್ಚಿಡಬೇಕೂಂತ ಮನಸ್ಸು ತುಡಿಯ್ತಾ ಇತ್ತು. ಆದರೆ, ಬಿಡುವೇ ಸಿಗೋದಿಲ್ಲ ನೋಡು. ಅದ್ಕೆ ಇವತ್ತು ಕಚೇರಿಗೆ ರಜೆ ಹಾಕಿ ಬಂದ್ಬಿಟ್ಟೆ. ಅಭಿಮನ್ಯು ನಿನ್ನ ಬಗ್ಗೆ ಆಗಿಂದಾಗೆ ಹೇಳ್ತನೇ ಇತಾನೆ. ನಿನ್ನ ಮನೆಗೆ ನಾನು ಬಂದಿರೋ ವಿಚಾರ ಅವನಿಗೇನಾದ್ರು ಗೊತ್ತಾದ್ರೆ ಎಷ್ಟೊಂದು ಖುಷಿ ಪಡ್ತಾನೆ ಗೊತ್ತಾ? ಸಂತೋಷದಿಂದ ಮುಖ ಅರಳಿಸಿಕೊಂಡು ಹೇಳಿದಳು.
ಅಕ್ಷರ, ನೀನು ತುಂಬಾ ಪುಣ್ಯವಂತೆ ಕಣೆ. ಅಭಿಮನ್ಯು ತುಂಬನೇ ಒಳ್ಳೆಯ ಹುಡುಗ. ಅವನಿಗೆ ಮೋಸ ಮಾಡೋದಕ್ಕೆ ಮಾತ್ರ ಹೋಗ್ಬೇಡ. ಹಾಗೊಂದ್ವೇಳೆ ಏನಾದ್ರು ಮಾಡಿದ್ರೆ ನನ್ನಿಂದ ನಿನ್ಗೆ ಒದೆ ಬೀಳುತ್ತೆ ಅಷ್ಟೆ. ಪ್ರೀತಿಗೆ ಸಮಾಜದ ವಿರೋಧ ಇದ್ದದ್ದೇ ಬಿಡು. ಎಷ್ಟೇ ಕಷ್ಟ ಎದುರಾದರೂ ನೀನು ಅವನ ಕೈ ಬಿಡುವ ಮನಸ್ಸು ಮಾತ್ರ ಮಾಡ್ಬೇಡ. ಇದೊಂದನ್ನು ಮಾತ್ರ ನಿನ್ನಲ್ಲಿ ಕೇಳಿಕೊಳ್ಳೋದಕ್ಕೆ ಇಷ್ಟಪಡ್ತೇನೆ. ಅವನಿಂದ ನಿನ್ಗೆ ಎಂದಿಗೂ ಮೋಸ ಆಗೋದಿಲ್ಲ ಮುಂದಿನ ಜೀವನದ ಬಗ್ಗೆ ಅಕ್ಷರಳಲ್ಲಿ ಭರವಸೆ ಮೂಡಿಸುವ ಮಾತುಗಳನ್ನಾಡಿದಳು.
ಯಾರೇನೇ ಅಂದರೂ ಅಭಿಮನ್ಯುವನ್ನು ಕೈ ಬಿಡೋ ಪ್ರಶ್ನೆಯೇ ಇಲ್ಲ. ಆದರೆ, ಅಪ್ಪ, ಅಮ್ಮ ತುಳಿಯುತ್ತಿರುವ ಹಾದಿ ನೋಡಿ ಯಾಕೋ ಭಯ ಆಗ್ತಾ ಇದೆ. ನಿನ್ನೆ ಮನೆಯಲ್ಲಿ ನನ್ನ ಮದ್ವೆ ಬಗ್ಗೆ ಚರ್ಚೆ ನಡೆಯಿತು. ಅಪ್ಪ, ಅಮ್ಮ ಹುಡುಗನ ಹುಡುಕಾಟದಲ್ಲಿದ್ದಾರೆ. ನಿನ್ನೆಯಿಂದ ಸರಿಯಾಗಿ ಯಾರೊಂದಿಗೂ ಮಾತಾಡಿಲ್ಲ. ಒಂದ್ವೇಳೆ ನಮ್ಮಿಬ್ಬರ ಪ್ರೀತಿಗೆ ಒಪ್ಪದೆ ಬಲವಂತವಾಗಿ ಮದ್ವೆ ಮಾಡಿಸಿದ್ರೆ ಏನ್ಮಾಡ್ಲಿ? ಆತಂಕಗೊಂಡು ಕೇಳಿದಳು.
ಅದ್ಕೆ ಯಾಕೆ ಅಷ್ಟೊಂದು ತಲೆ ಬಿಸಿ ಮಾಡ್ಕೋತ್ತಿಯ? ಅಂತಹ ಪರಿಸ್ಥಿತಿ ಏನಾದ್ರು ಎದುರಾದ್ರೆ ರಿಜಿಸ್ಟಡ್ ಮ್ಯಾರೇಜ್ ಆದ್ರೆ ಆಯ್ತು. ಹೇಗಿದ್ದರೂ ನಾಲ್ಕೈದು ಸ್ನೇಹಿತರಾದ್ರು ಮದ್ವೆಗೆ ಬಂದೇ ಬತಾರೆ. ನಾನಂತೂ ಖಂಡಿತ ಬಂದೇ ಬತಿನಿ. ನಿಮ್ಮ ಮದ್ವೆಯನ್ನಂತೂ ಕಣ್ತುಂಬ ನೋಡ್ಬೇಕು ಭಾಗ್ಯ ತನ್ನ ಮನದ ಬಯಕೆ ತೋಡಿಕೊಂಡು ಮದುವೆಯ ಚಿತ್ರಣವನ್ನು ಕಣ್ಣಮುಂದೆ ತಂದುಕೊಂಡು ಸಂತಸಪಟ್ಟಳು.
ಪ್ರೀತಿಸಿ ವಿವಾಹವಾದವರ ವೈವಾಹಿಕ ಜೀವನ ಸುಗಮವಾಗಿ ಸಾಗೋದಿಲ್ಲ ಅಂತ ಜನ ಆಡ್ಕೊಳ್ತಾರಲ್ಲ. ಆ ಮಾತಲ್ಲೇನಾದ್ರು ನಿನ್ಗೆ ಸತ್ಯಾಂಶ ಇದೆ ಅಂತ ಅನ್ನಿಸ್ತದಾ? ದಿಢೀರಾಗಿ ಪ್ರಶ್ನೆ ಮುಂದಿಟ್ಟ ಅಕ್ಷರ ಮದುವೆಗೆ ಮಾನಸಿಕವಾಗಿ ತಯಾರಾಗುವಂತೆ ಕಂಡಳು.
ದಿಢೀರಾಗಿ ಎದುರಾದ ಪ್ರಶ್ನೆಗೆ ಯಾವ ರೀತಿಯಲ್ಲಿ ಉತ್ತರಿಸಬೇಕೆಂದೇ ಭಾಗ್ಯಳಿಗೆ ತೋಚದಾಯಿತು. ಅಕ್ಷರ ಅಭಿಮನ್ಯು ವಿನಿಂದ ದೂರವಾಗಲು ಯತ್ನಿಸುತ್ತಿದ್ದಾಳಾ? ಇತ್ತೀಚೆಗೆ ಅಭಿಮನ್ಯು ಕೂಡ ಮದ್ವೆ ಬಗ್ಗೆ ಚರ್ಚೆ ಮಾಡಿ ಹೋಗಿದ್ದ. ಪ್ರೀತಿಯ ವಿಚಾರ ಮನೆಯವರೆಗೂ ತಲುಪಿ ಏನಾದ್ರು ಎಡವಟ್ಟಾಯ್ತಾ?
ಅಕ್ಷರ ಯಾಕೆ ಹೀಗೆಲ್ಲ ಯೋಚನೆ ಮಾಡುತ್ತಾ ಇದ್ದಾಳೆ? ಪ್ರಶ್ನೆಗಳು ಮನದೊಳಗೆ ಉದ್ಭವಿಸುತ್ತಲೇ ಇತ್ತು.
ಅಕ್ಷರ, ನೀನು ಪ್ರೀತಿ ಮಾಡೋ ವಿಚಾರದಲ್ಲಿ ತುಂಬನೇ ಹೆದಕೊಂಡಿದ್ದೀಯ ಅಂತ ನನ್ಗೆ ಅನ್ನಿಸ್ತಾ ಇದೆ. ಯಾವುದಕ್ಕೂ ಭಯಪಡ್ಬೇಡ. ನಂಬಿದ ದೇವರು ಯಾವತ್ತೂ ಕೈ ಬಿಡೋದಿಲ್ಲ. ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದ್ವೆ ಮಾಡ್ಕೊಂಡವರೆಲ್ಲ ಸುಖವಾಗಿಲ್ಲ. ಸಮಾಜದ ವಿರೋಧ ಕಟ್ಟಿಕೊಂಡು ವಿವಾಹವಾದವರ ಮೇಲೆ ಸಮಾಜದ ಹದ್ದಿನ ಕಣ್ಣು ಇದ್ದೇ ಇರುತ್ತೆ. ಪ್ರೀತಿಸಿ ಮದ್ವೆಯಾದವರ ನಡುವೆ ಸ್ವಲ್ಪ ವಿರಸವಾದರೂ ಸಾಕು ಅದನ್ನೇ ದೊಡ್ಡ ಸುದ್ದಿ ಮಾಡ್ತಾರೆ. ಅಪ್ಪ, ಅಮ್ಮನ ಆಶೀರ್ವಾದ ಇಲ್ಲದೆ ಮದ್ವೆಯಾದವರ ಗತಿ ಇದೇ ತರ ಆಗುತ್ತೆ ಎಂದು ಆಡಿಕೊಳ್ಳುತ್ತಾರೆ. ಎಲ್ಲರ ಒಪ್ಪಿಗೆಯಂತೆ ವಿವಾಹವಾದ ಅದೆಷ್ಟೋ ಮಂದಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದ್ರೆ ಅದರ ಬಗ್ಗೆ ಸಮಾಜ ಚರ್ಚಿಸುವ ಗೋಜಿಗೆ ಹೋಗೋದಿಲ್ಲ. ಗಂಡ, ಹೆಂಡತಿ ಹೊಂದಾಣಿಕೆಯಿಂದ ಇದ್ದರೆ ಯಾವುದೇ ಸಮಸ್ಯೆ ತಲೆದೂರೂವುದಿಲ್ಲ. ಮದುವೆಯಾದ ಒಂದು ವರ್ಷದ ಅವಧಿ ತುಂಬಾ ಸುಖಮಯ. ಆ ಸಂದರ್ಭ ಗಂಡನಾದವನು ಹೆಂಡ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾನೆ. ವರ್ಷಗಳು ಉರುಳಿದಂತೆ ಸಂಸಾರದ ನೌಕೆ ನಡೆಸೋದು ಕಷ್ಟವಾಗಿ ಪ್ರೀತಿ ತೋರುವುದರಲ್ಲಿ ಸ್ವಲ್ಪ ಏರಿಳಿತಗಳು ಆಗ್ಬೊಹುದು. ಅದನ್ನೇ ದೊಡ್ಡದ್ದು ಮಾಡ್ಕೊಳ್ಳೋದಕ್ಕೆ ಹೋಗ್ಬಾದು. ಮದುವೆಯಾದ ಪ್ರಾರಂಭದಲ್ಲಿ ಪತ್ನಿಯ ಕಾಲಿಗೇನಾದ್ರು ಸಣ್ಣ ಮುಳ್ಳು ಚುಚ್ಚಿದರೆ ‘ನೊಡಿ ನಡಿಯಿಬಾದಾ ಚಿನ್ನ? ಎಂದು ಗಂಡ ಅಕ್ಕರೆಯಿಂದ ಆಕೆಯ ಕಾಲಿಗೆ ಚುಚ್ಚಿದ ಮುಳ್ಳನ್ನು ತೆಗೆಯುತ್ತಾನೆ. ಕೆಲ ವರ್ಷಗಳು ಸರಿದ ನಂತರ ಇಂತಹ ಪ್ರಸಂಗವೇನಾದರು ಎದುರಾದರೆ ‘ನೀನೇನು ಆಕಾಶ ನೋಡ್ಕೊಂಡು ನಡಿಯ್ತಾ ಇದ್ದೀಯ? ಎಂದು ಗದರಿಸುತ್ತಾನೆ. ಇದೆಲ್ಲಾ ವೈವಾಹಿಕ ಜೀವನದಲ್ಲಿ ಸಾಮಾನ್ಯ. ಅದರ ಬಗ್ಗೆ ಯೋಚ್ನೆ ಮಾಡಿ ತಲೆ ಹಾಳು ಮಾಡಿಕೊಳ್ಬೇಡ. ಜೀವನದಲ್ಲಿ ಸಮರಸವಿದ್ದರೆ ಸಂಸಾರ ಸರಾಗವಾಗಿ ಸಾಗುತ್ತೆ. ಸಮರಸ ಮನೆಯ ಹೊಸ್ತಿಲು ದಾಟಿ ಹೋಗದಂತೆ ನೋಡಿಕೊಂಡರೆ ಮನೆ ನಂದನವನವಾಗುತ್ತೆ ವೈವಾಹಿಕ ಜೀವನದ ಬಗ್ಗೆ ಅಕ್ಷರಳ ಮನದಲ್ಲಿ ಮೂಡಿದ್ದ ಆತಂಕವನ್ನೆಲ್ಲ ದೂರ ಮಾಡಲು ಭಾಗ್ಯ ಸಾಕಷ್ಟು ಹೆಣಗಿದಳು.
ಅಭಿಮನ್ಯು ನನ್ಗೆ ಪ್ರೀತಿಯಲ್ಲಿ ಯಾವುದೇ ರೀತಿಯಲ್ಲೂ ಕೊರತೆ ಉಂಟು ಮಾಡೋದಿಲ್ಲವೆಂಬ ಭರವಸೆ ನನ್ಗೆ ಇದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾನೆ. ಸ್ವಲ್ಪ ಮುಂಗೋಪಿ ಅಷ್ಟೆ. ಅವನಿಗೆ ಕೋಪ ಬಂದಾಗ ಮೆತ್ತಗಿದ್ರೆ ಸಾಕು. ಅವನು ಕೂಲಾಗಿರುವಾಗ ನಾನೇನು ಬೈಯ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನನ್ನ ಮತ್ತೆ ಮತ್ತೆ ಮುದ್ದು ಮಾಡ್ತಾನೆ. ಹಾಗಾಗಿ ನಮ್ಮ ಜೀವನದಲ್ಲಿ ಪ್ರೀತಿಗೆ ಯಾವುದೇ ಕೊರತೆ ಇರೋದಿಲ್ಲ. ನಾವಿಬ್ರು ಆದರ್ಶಯುತ ಜೀವನ ನಡೆಸುವ ಭರವಸೆ ನನ್ಗೆ ಇದೆ. ಆದರ್ಶ ಕುಟುಂಬದ ಚರ್ಚೆಯೇನಾದ್ರು ಜನರ ನಡುವೆ ನಡೆದರೆ ಜನ ನಮ್ಮೆಡೆಗೆ ಕೈ ತೋರಿಸುವ ರೀತಿಯಲ್ಲಿ ಬದುಕು ನಡೆಸ್ತೇವೆ. ಅದೊಂದೇ ನನ್ನ ಜೀವನದ ದೊಡ್ಡ ಕನಸು ಅಂದಳು.
ಅಕ್ಷರ ಭಾಗ್ಯಳೊಂದಿಗೆ ಸಾಕಷ್ಟು ಹೊತ್ತು ಹರಟೆಯಲ್ಲಿ ತಲ್ಲೀನಳಾಗಿ ಹೊರಡಲು ಅಣಿಯಾಗಿ ನಿಂತಳು. ಯಾಕೋ ಗೊತ್ತಿಲ್ಲ ಭಾಗ್ಯ. ನನ್ಗೆ ಈಗಿಂದೀಗ್ಲೆ ಅಭಿಮನ್ಯುವನ್ನು ನೋಡ್ಬೇಕೂಂತ ಅನ್ನಿಸ್ತಾ ಇದೆ. ನಾನಿನ್ನು ಹೊರಡ್ತೇನೆ ಎಂದು ಹೊರಟು ನಿಂತ ಅಕ್ಷರಳನ್ನು ಭಾಗ್ಯ ಎಳೆದು ಸೋಫಾದ ಮೇಲೆ ಕೂರಿಸಿದಳು.
ಅಭಿಮನ್ಯುವನ್ನು ನೋಡೋದಕ್ಕೆ ಅಷ್ಟೊಂದು ದೂರ ಯಾಕೆ ಹೋಗ್ತಾ ಇದ್ದೀಯ? ಕರೆದರೆ ಅವನೇ ಇಲ್ಲಿಗೆ ಬಂದು ಬಿಡ್ತಾನೆ.
ನೀನು ಇಲ್ಲಿದ್ದೀಯ ಅಂದ ಮೇಲೆ ಅವನು ಬಲೇ ಬೇಕಲ್ವ? ಅಂದ ಭಾಗ್ಯ ದೂರವಾಣಿ ಕರೆ ಮಾಡಿ ಮನೆಗೆ ಬರುವಂತೆ ಅಭಿಮನ್ಯುವಿನಲ್ಲಿ ಕೋರಿಕೊಂಡಳು.
ಅರ್ಧ ತಾಸು ಕಳೆದ ಬಳಿಕ ಅಭಿಮನ್ಯುವಿನ ಆಗಮನವಾಯಿತು. ಭಾಗ್ಯಳ ಮನೆಯಲ್ಲಿ ಅಕ್ಷರಳನ್ನು ಕಂಡ ಅಭಿಮನ್ಯುವಿಗೆ ಆಶ್ಚರ್ಯವೋ ಆಶ್ಚರ್ಯ. ಅಕ್ಷರ ಮನೆಯಲ್ಲಿ ಇರೋ ವಿಚಾರ ಮೊದ್ಲೇ ಹೇಳಿದ್ರೆ ಐದೇ ನಿಮಿಷದಲ್ಲಿ ಬಂದು ತಲುಪಿ ಬಿಡ್ತಿದ್ದೆ. ಅವಳಿಲ್ಲಿರುವ ವಿಚಾರ ಯಾಕೆ ಬಚ್ಚಿಟ್ಟೆ? ಭಾಗ್ಯಳನ್ನು ಕೇಳಿದ.
ನಾನು ಕರೆದಾಗ ಬತಿಯೋ ಇಲ್ವೋ ಅಂತ ತಿಳ್ಕೊಳ್ಳೋದಕೋಸ್ಕರ ಅಕ್ಷರ ಇಲ್ಲಿರುವ ವಿಚಾರ ಹೇಳ್ಲಿಲ್ಲ. ನಿನ್ಗೆ ಮನಸ್ಸಾದಾಗ ವರ್ಷಕ್ಕೊಮ್ಮೆ ಮನೆ ಕಡೆ ತಲೆ ಹಾಕ್ತಿಯ. ಸದ್ಯ ನಾನು ಕರೆದಾಗ ಬಂದೆ ಅಲ್ವ ಅದೇ ನನ್ಗೆ ಸಂತೋಷ. ನೀವಿಬ್ಬರು ಮಾತಾಡ್ತಾ ಇರಿ ನಾನೋಗಿ ಕಾಫಿ ತಗೊಂಡು ಬತೇನೆ ಅಂದ ಭಾಗ್ಯ ಅಡುಗೆ ಮನೆಯ ಕಡೆಗೆ ತೆರಳಿದಳು.
ಅಕ್ಷರ, ಯಾಕೆ ಒಂಥರಾ ಡಲ್ಲಾಗಿದ್ದೀಯ? ನನ್ಮೇಲೆ ಕೋಪನಾ? ಕೋಪ ಹೋಗೋದಕ್ಕೆ ನನ್ನ ಬಳಿ ಮದ್ದಿದೆ ಎಂದು ಆಕೆಯನ್ನು ಬರಸೆಳೆದು ಮುತ್ತಿನ ಮಳೆ ಸುರಿಸಿದ.
ಅಭಿಮನ್ಯುವಿನ ತೋಳಿನ ತೆಕ್ಕೆಯಿಂದ ಬಿಡಿಸಿಕೊಂಡು ಸಾಕು ಸುಮ್ನೆ ಇರು. ಭಾಗ್ಯ ಏನಾದ್ರು ನೋಡಿದ್ರೇ..! ಮುದ್ದಿಸಿದ್ದು ಸಾಕು. ನಿನ್ನ ಫ್ರೀಯಾಗಿ ಬಿಟ್ಟಿದ್ದೇ ನನ್ನ ದೊಡ್ಡ ತಪ್ಪು. ನನ್ನ ಮರೆತೇ ಬಿಟ್ಟಿದ್ದೀಯ ಅನ್ನಿಸ್ತಾ ಇದೆ. ನೀನಾಯ್ತು ನಿನ್ನ ಸ್ನೇಹಿತರಾಯ್ತು. ಅಷ್ಟು ಬಿಟ್ಟು ಬೇರೆ ಪ್ರಪಂಚನೇ ನಿನ್ಗೆ ಗೊತ್ತಿಲ್ಲ. ಸದಾ ಅವರೊಂದಿಗೆ ಕಾಲ ಕಳೆದು ಬಿಡ್ತಿಯ. ಅದರ ನಡುವೆ ನನ್ನ ಯೋಚ್ನೆ ಎಲ್ಲಿ ಬಬೇಕು ಹೇಳು? ನೀನು ಯಾವತ್ತಾದ್ರು ಒಂದು ದಿನ, ಒಂದೇ ಒಂದು ದಿನ ನಮ್ಮಿಬ್ಬರ ಮದ್ವೆ ವಿಚಾರದ ಬಗ್ಗೆ ಮಾತಾಡಿದ್ದು ಉಂಟಾ? ನಿನ್ನ ಆಟ ನೋಡ್ತಾ ಇದ್ರೆ ಕೊನೆಗೊಂದು ದಿನ ನನ್ಗೆ ಕೈ ಕೊಡೋದ್ರಲ್ಲಿ ಸಂಶಯನೇ ಇಲ್ಲವೆಂದು ಹುಸಿಮುನಿಸು ತೋರಿದಳು.
ಹುಡುಗ ಯಾವತ್ತಾದರೊಂದು ದಿನ ಕೈ ಕೊಡ್ತಾನೆ ಅಂತ ಗೊತ್ತಿದ್ರೂ ಕೂಡ ನನ್ನ ಇಷ್ಟೊಂದು ಪ್ರೀತಿಸ್ತಾ ಇದ್ದೀಯಲ್ಲ. ನಿನ್ನ ನಿಜಕ್ಕೂ ಮೆಚ್ಲೇ ಬೇಕು. ನಾನು ನಿನ್ಗೆ ಕೈ ಕೊಟ್ಟ ನಂತರ ಮುಂದೇನು ಮಾಡ್ತಿಯ!? ಆಕೆಯನ್ನು ಕೆಣಕುವ ಪ್ರಯತ್ನ ಮಾಡಿದ.
ನೀನಂದುಕೊಂಡಂತೆ ಏನಾದ್ರು ಆದ್ರೆ ಕೆರೆನೋ, ಬಾವಿನೋ ನೋಡ್ಕೋತ್ತಿನಿ. ನಿನ್ಗೆ ಆಗ ತೃಪ್ತಿಯಾಗ್ಬೊಹುದು. ನಿನ್ಗಂತು ಅದರ ಬಗ್ಗೆ ಯಾವುದೇ ಚಿಂತೆ ಕೂಡ ಇಲ್ವಲ್ಲ? ನಾನು ಸತ್ತ ನಂತರ ನಿನ್ಗೆ ಇಷ್ಟವಾದವಳ ಜೊತೆ ಮದ್ವೆಯಾಗಿ ಹಾಯಾಗಿರು. ಪ್ರತಿ ಸಲ ಮದ್ವೆ ವಿಚಾರ ಮಾತಾಡಿದಾಗ ತಮಾಷಿ ಮಾಡ್ತಾ ಕಾಲ ಕಳೆದು ಬಿಡ್ತಿಯ. ಗಂಭೀರವಾಗಿ ಒಂದ್ಸಲನೂ ಯೋಚ್ನೆ ಮಾಡಿಲ್ಲ. ನನ್ಗಂತು ಸಾಕಾಗಿ ಹೋಗಿದೆ ಎಂದು ಅಕ್ಷರ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಅಭಿಮನ್ಯುವಿನ ಕಡೆಗೆ ಕೆಂಗಣ್ಣು ಬೀರಿದಳು.
ಅಕ್ಷರ, ಇಷ್ಟೊಂದು ಸಣ್ಣ ವಿಷಯಕ್ಕೆಲ್ಲ ಕೋಪ ಮಾಡ್ಕೊಂಡ್ರೆ ಹೇಗೆ. ನನ್ನ ಬಂಗಾರ ಅಲ್ವ ನೀನು? ನೀನೇನು ಚಿಂತೆ ಮಾಡ್ಕೋಬೇಡ. ನಾಳೆನೇ ಮದ್ವೆಯಾಗೋಣ. ಈಗ್ಲೇ ಹೊರಟು ಬಿಡುವ, ತುಂಬಾ ತಡವಾಯ್ತು. ಸಾಕಷ್ಟು ಸ್ನೇಹಿತರನ್ನು ಮದ್ವೆಗೆ ಕರೆಯೋದಕ್ಕೆ ಬಾಕಿ ಇದೆ ಎಂದು ಮತ್ತೆ ಆಕೆಯನ್ನು ಕೆಣಕುವ ಪ್ರಯತ್ನ ಮಾಡಿದ.
ಅಕ್ಷರಳಿಗೆ ಏನು ಹೇಳಬೇಕೆಂದು ತೋಚದೆ ಅಭಿಮನ್ಯುವನ್ನು ನೆಲದಲ್ಲಿ ಕೆಡವಿ ಅವನ ಬೆನ್ನ ಮೇಲೆ ಕುಳಿತು ಬೆನ್ನಿಗೆ ಗುದ್ದಲು ಪ್ರಾರಂಭಿಸಿದಳು. ನಾಯಿ ನೀನು. ನಿನ್ಗೆ ಎಷ್ಟು ಹೇಳಿದ್ರು ಬುದ್ಧಿ ಬರೋದಿಲ್ಲ ಎಂದು ಅಭಿಮನ್ಯುವಿನ ತಲೆಗೂದಲು ಹಿಡಿದು ಎಳೆದಾಡಿದಳು. ಇಬ್ಬರು ಕಚ್ಚಾಡುತ್ತಿರುವಾಗಲೇ ಭಾಗ್ಯ ಕಾಫಿಯೊಂದಿಗೆ ಆಗಮಿಸಿದಳು. ಕಾಫಿ ತುಂಬಿದ ಲೋಟಗಳನ್ನು ಟೇಬಲ್ ಮೇಲಿಟ್ಟು ಅಭಿಮನ್ಯುವಿನ ಬೆನ್ನಮೇಲೆ ಕುಳಿತು ಕುಸ್ತಿಯಲ್ಲಿ ನಿರತಳಾಗಿದ್ದ ಅಕ್ಷರಳನ್ನು ಮೇಲೆಬ್ಬಿಸಿದಳು.
ಇಬ್ಬರು ಕಚ್ಚಾಡಿದ್ದು ಸಾಕು, ಕಾಫಿ ಕುಡಿಯಿರಿ. ಜಗಳವೇನಿದ್ದರೂ ಮದ್ವೆಯಾದ ನಂತರ ಬೆಡ್‌ರೂಂನಲ್ಲಿ ಇಟ್ಕೊಳ್ಳಿ ಅಂದಳು.
ನೊಡು ಭಾಗ್ಯ, ಇವ್ನು ಹೇಳಿದ ಒಂದು ಮಾತು ಕೂಡ ಕೇಳ್ತಾ ಇಲ್ಲ. ಏನು ಹೇಳಿದ್ರೂ ತಮಾಷಿ ಮಾಡ್ತಾನೆ. ಇವ್ನಿಗೆ ಯಾವಾಗ ದೇವರು ಬುದ್ಧಿ ಕೊಡ್ತಾನೋ! ಇವ್ನು ನಿನ್ನ ಬೆಸ್ಟ್‌ಫ್ರೆಂಡ್ ಅಂತ ಹೇಳ್ತಾ ಇತಿಯ ಅಲ್ವ!? ನೀನಾದ್ರು ಬುದ್ಧಿ ಹೇಳು. ನಿನ್ನ ಮಾತಾದ್ರು ಕೇಳ್ತಾನೋ ನೋಡ್ತಿನಿ ಸಿಡುಕಿದಳು.
ಬಿಸಿ ಬಿಸಿಯಾದ ಕಾಫಿಯನ್ನು ಅಕ್ಷರ ಹಾಗೂ ಅಭಿಮನ್ಯುವಿನ ಕೈಗಿತ್ತು, ತಾನು ಒಂದು ಲೋಟ ಕಾಫಿ ಹೀರುತ್ತಾ ಇಬ್ಬರ ಜಗಳ ನೋಡುತ್ತಾ ಕುಳಿತಳು. ಕಾಫಿ ಕುಡಿದು ಮುಗಿಯುವವರೆಗೂ ಇಬ್ಬರ ನಡುವೆ ವಾಗ್ವಾದ ಮುಂದುವರೆಯುತ್ತಲೇ ಇತ್ತು.
ಅದ್ಯಾಕೆ ಅವನ ಮೇಲೆ ಸುಮ್‌ಸುಮ್ನೆ ರೇಗಾಡ್ತಿಯ? ಈಗ ತಾನೆ ನಾವಿಬ್ರು ಆದರ್ಶಯುತ ಜೀವನ ನಡೆಸ್ತೇವೆ ಅಂತ ಭಾಷಣ ಬಿಗಿಯ್ತಾ ಇದ್ದೆ. ಅವನ ಮುಖ ನೋಡಿದ ತಕ್ಷಣ ಕಾಲು ಕೆರೆದು ಜಗಳಕ್ಕೆ ನಿಂತು ಬಿಟ್ಟಿದ್ದೀಯ. ಮದ್ವೆಯಾಗೋ ತನಕವಾದ್ರು ಅವನನ್ನ ಫ್ರೀಯಾಗಿ ಇರೋದಕ್ಕೆ ಬಿಟ್ಬಿಡು. ಪಾಪದ ಹುಡುಗ ಅವನು ಭಾಗ್ಯ ಅಭಿಮನ್ಯುವಿನ ಬೆಂಬಲಕ್ಕೆ ನಿಂತಳು.
ನಿಮ್ಮಿಬ್ರಿಗೂ ಇನ್ನೂ ಮಕ್ಕಳಾಟ ಬಿಟ್ಟಿಲ್ಲ. ತಮಾಷೆ ಮಾಡ್ಕೊಂಡೇ ಕಾಲ ಕಳೆದು ಬಿಡ್ತಿರ. ನಾನಿಲ್ಲಿ ದಿನಾ ಕೊರಗುತ್ತಾ ಸಾಯ್ತಾ ಇದ್ದೀನಿ. ಮನೇಲಿ ನನ್ಗೆ ಹುಡ್ಗ ಹುಡುಕುತ್ತಾ ಇದ್ದಾರೆ. ಏನ್ಮಾಡ್ಬೇಕು ಅಂತ ಒಂದೂ ತೋಚುತ್ತಿಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಳು.
ಅದ್ಕೆ ಯಾಕೆ ತಲೆ ಕೆಡಿಸಿಕೊಳ್ತಾ ಇದ್ದೀಯ? ಮಗಳಿಗೆ ಹುಡುಗನನ್ನು ಹುಡುಕೋದು ಅಪ್ಪ, ಅಮ್ಮಂದಿರ ಕರ್ತವ್ಯ. ಅವರ ಕರ್ತವ್ಯ ಅವರು ಮಾಡ್ತಾ ಇದ್ದಾರೆ. ಅದರಲ್ಲಿ ತಪ್ಪೇನಿದೆ? ಅಪ್ಪ, ಅಮ್ಮ ತೋರಿಸುವ ಹುಡುಗನನ್ನೇ ಮದ್ವೆಯಾಗಬೇಕೆಂಬ ನಿಯಮವೇನು ಇಲ್ಲ. ಒಂದ್ವೇಳೆ ಮನೆಯವರಿಗೆ ಒಪ್ಪಿಗೆಯಾದ್ರೆ ನೀನು ಮಾತ್ರ ಒಪ್ಪಿಕೊಳ್ಬೇಡ. ಹುಡುಗ ನೋಡೋದಕ್ಕೆ ಚೆನ್ನಾಗಿಲ್ಲ, ನನ್ಗೆ ಇಷ್ಟವಾಗಿಲ್ಲ ಅಂತ ಕುಂಟುನೆಪ ಹೇಳಿ ಜಾರಿಕೊಂಡ್ರೆ ಆಯ್ತು. ಮತ್ತೆ ನಾವಿಬ್ರು ನಿಶ್ಚಿಂತೆಯಿಂದ ಮದ್ವೆಯಾಗ್ಬೊಹುದು
ಅಭಿಮನ್ಯುವಿನ ಮಾತು ಆಕೆಗೆ ಕೋಪ ತರಿಸದೆ ಇರಲಿಲ್ಲ. ನಿನ್ಗೆ ಅದೆಲ್ಲ ಅರ್ಥವಾಗೋದಿಲ್ಲ ಎಂದು ಸಿಡುಕಿ ಸ್ವಲ್ಪ ಹೊತ್ತು ಸುಮ್ಮನಾಗಿ ಹುಡುಗಿಯರ ಕಷ್ಟ ನಿನ್ಗೇನು ಗೊತ್ತು? ನೀನು ಹೇಳಿದಂತೆ ಹುಡುಗನ ಕಣ್ಣು ಸರಿಯಿಲ್ಲ, ಕಿವಿ ಸರಿಯಿಲ್ಲ ಅಂತ ಒಂದೆರೆಡು ಆಫರ್‌ಗಳನ್ನು ತಿರಸ್ಕರಿಸಬಹುದು. ಆದ್ರೆ ಎಲ್ಲಾ ಆಫರ್‌ಗಳನ್ನ ತಿರಸ್ಕರಿಸ್ತಾ ಹೋದ್ರೆ ಕೊನೆಗೊಂದು ದಿನ ಯಾವನೋ ಒಬ್ಬನೊಂದಿಗೆ ಬಲವಂತವಾಗಿ ಗಂಟು ಹಾಕಿ ಕಳುಹಿಸಿಬಿಡ್ತಾರೆ ನೊಂದು ನುಡಿದಳು.
ಅಕ್ಷರ ಸಾಕಷ್ಟು ನೊಂದು ಕೊಂಡಿದ್ದಾಳೆ. ಆಕೆಗೊಂದಿಷ್ಟು ಸಾಂತ್ವನ ಹೇಳಲೇಬೇಕೆಂಬ ನಿರ್ಧಾರವನ್ನು ಕೊನೆಗೂ ಕೈಗೊಂಡ ಅಭಿಮನ್ಯು, ಆಕೆಯ ಪಕ್ಕದಲ್ಲಿ ಕೂತು ಅಕ್ಷರ, ನೀನು ಕೋಪ ಮಾಡ್ಕೋಬೇಡ. ಅಂತಹ ಪರಿಸ್ಥಿಯೇನು ನಿರ್ಮಾಣ ವಾಗೋದಿಲ್ಲ. ಒಂದ್ವೇಳೆ ಆದರೆ ತರಾತುರಿಯಲ್ಲಿ ಇಬ್ಬರು ಮದ್ವೆಯಾಗಿ ಬಿಡುವ. ಅದ್ಧೂರಿಯಾಗಿ ಮದ್ವೆ ಮಾಡಿಕೊಳ್ಳುವಷ್ಟು ಶಕ್ತಿ ನನ್ಗಂತೂ ಇಲ್ಲ. ಸರಳ ವಿವಾಹ ಆಗಿಬಿಡುವ. ನಿನ್ಗೆ ಏನೇ ಸಮಸ್ಯೆ ಎದುರಾದರೂ ಜೊತೆಗಿದ್ದು ಪರಿಹರಿಸ್ತೇನೆ ವಿನಃ ಪಲಾಯನವಾದ ನನ್ನಲಿಲ್ಲ ಎಂದು ಆಕೆಯ ಕೈ ಹಿಡಿದು ಭರವಸೆ ತುಂಬುವ ಪ್ರಯತ್ನ ಮಾಡಿದ.
ಇಬ್ಬರ ಮಾತಿನ ನಡುವೆ ಮಧ್ಯ ಪ್ರವೇಶಿಸಿದ ಭಾಗ್ಯ, ಅಭಿಮನ್ಯು, ನಿನ್ನ ಬಗ್ಗೆ ಅವಳಿಗೇನು ಕೋಪ ಇಲ್ಲ. ಸುಮ್ನೆ ನಾಟಕ ಆಡುತ್ತಿದ್ಧಳೆ ಅಷ್ಟೆ. ಈಗತಾನೇ ನಿನ್ನ ನೋಡ್ಲಿಕ್ಕೆ ಹೊರಟ್ಟಿದ್ಲು. ನಾನೇ ತಡೆದು ನಿಲ್ಲಿಸಿ ನಿನ್ನ ಕರೆಯಿಸಿಕೊಂಡೆ. ಎಷ್ಟೇ ಕೋಪ ಮಾಡ್ಕೊಂಡ್ರೂ ನಿನ್ನ ಬಗ್ಗೆ ಇರುವ ಪ್ರೀತಿಯಲ್ಲಿ ಒಂದು ಚೂರು ಕೂಡ ಕಡಿಮೆಯಾಗಿಲ್ಲ. ಮನೆಯಲ್ಲಿ ಮದ್ವೆ ವಿಚಾರ ಕೆದಕ್ಕಿದ್ದಕ್ಕೆ ಸ್ವಲ್ಪ ತಲೆ ಕೆಡಿಸಿಕೊಂಡಿದ್ದಾಳೆ. ಅದ್ಕೋಸ್ಕರ ಇವತ್ತು ಕಚೇರಿಗೂ ಕೂಡ ಹೋಗದೆ ನೇರ ಇಲ್ಲಿಗೆ ಬಂದ್ಬಿಟ್ಟಿದ್ದಾಳೆ ಹುಚ್ಚುಡ್ಗಿ. ಒಂದೆರಡು ದಿನ ಅಷ್ಟೆ, ನಂತರ ಎಲ್ಲಾ ಸರಿಹೋಗುತ್ತೆ ಎಂದು ಇಬ್ಬರ ಮನದಲ್ಲಿ ಸಣ್ಣದಾಗಿ ಕವಿದಿದ್ದ ಚಿಂತೆಯನ್ನು ದೂರಮಾಡುವ ಪ್ರಯತ್ನ ಮಾಡಿದಳು.
ಭಾಗ್ಯ, ನಾವಿನ್ನು ಹೊರಡ್ತೇವೆ. ಬಂದು ಸಾಕಷ್ಟು ಹೊತ್ತಾಯ್ತು ಅಭಿಮನ್ಯು ಅಕ್ಷರಳೊಂದಿಗೆ ಹೊರಡಲು ಅಣಿಯಾಗಿ ನಿಂತ.
ಅಭಿಮನ್ಯು, ನೀನು ಹೊರಡು, ಅಕ್ಷರ ಇಲ್ಲೇ ಇಲಿ. ಅವಳು ಸಂಜೆ ಹೋದ್ರೆ ಸಾಕು. ಹೇಗಿದ್ರೂ ಇವತ್ತು ಕಚೇರಿಗೆ ರಜೆ ಹಾಕಿದ್ದು ಇದ್ದೇ ಇದೆಯಲ್ಲ. ಮನೆಯಲ್ಲೇನು ಅವಳಿಗೆ ಮಾಡೋದಕ್ಕೆ ಕೆಲ್ಸ ಇಲ್ಲ ಭಾಗ್ಯ ಅಕ್ಷರಳನ್ನು ತಡೆದು ನಿಲ್ಲಿಸಿದಳು.
ಅಭಿಮನ್ಯುವಿಗೆ ಹೊರಡುವ ಆತುರ. ಆದರೆ, ಅಕ್ಷರಳನ್ನು ಬಿಟ್ಟು ಹೋಗುವ ಮನಸ್ಸಿಲ್ಲದೆ ತೊಳಲಾಟಕ್ಕೆ ಸಿಲುಕಿದ. ಅದೆಲ್ಲ ಸಾಧ್ಯವಿಲ್ಲ. ಹೆಂಡ್ತಿಯನ್ನು ಬಿಟ್ಟು ಹೋಗ್ಲಿಕ್ಕೆ ಗಂಡನಿಗೆ ಹೇಗೆ ತಾನೇ ಮನಸ್ಸು ಬರುತ್ತೆ? ಅವಳನ್ನ ಜೊತೆಗೆ ಕಕೊಂಡೋಗ್ತಿನಿ ಹಟ ಹಿಡಿದು ಕುಳಿತ.
ಓಹೋ…, ಮದ್ವೆಗೂ ಮುಂಚೆನೇ ಇಬ್ರು ಗಂಡ-ಹೆಂಡತಿಯಾಗಿಬಿಟ್ರಾ? ನಗುಮೊಗದಿಂದ ಕೇಳಿದಳು ಭಾಗ್ಯ.
ಇಬ್ಬರ ಸಂಭಾಷಣೆಯ ನಡುವೆ ಅಕ್ಷರ ಮಧ್ಯಪ್ರವೇಶಿಸಿ ಭಾಗ್ಯ ನಾವಿಬ್ರು ಇನ್ನು ಅಧಿಕೃತವಾಗಿ ಗಂಡ-ಹೆಂಡತಿ ಆಗಿಲ್ಲದಿರಬಹುದು. ಆದ್ರೂ ಕೂಡ ನಾವಿಬ್ರು ಒಂಥರಾ ಗಂಡ-ಹೆಂಡತಿ ಇದ್ದ ಹಾಗೆಯೇ. ನಿನ್ಗೆ ಅದೆಲ್ಲ ಅರ್ಥ ಆಗೊಲ್ಲ ಬಿಡು ಅಭಿಮನ್ಯುವಿನೊಂದಿಗೆ ಹೊರಡಲು ಅಣಿಯಾದ ಅಕ್ಷರ ಆತನ ಭುಜದ ಮೇಲೆ ತನ್ನೆರಡು ಕೈಗಳನ್ನು ಇಟ್ಟು ಫೋಸು ನೀಡಿದಳು.
ಹೌದು ನನ್ಗೂ ಕೂಡ ಹಾಗೇ ಅನ್ನಿಸ್ತಾ ಇದೆ. ಇಷ್ಟೊತ್ತು ಜಗಳ ಆಡ್ತಾ ಇದ್ದೋಳು ದಿಢೀರಾಗಿ ಅಭಿಮನ್ಯವಿನ ಭುಜದ ಮೇಲೆ ಕೈ ಇಟ್ಟು ಮದ್ವೆ ಮನೆಯಲ್ಲಿ ಫೋಟೋಗ್ರಾಫರ್‌ಗೆ ಫೋಸ್ ನೀಡುವ ವಧುವಿನಂತೆ ನಿಂತುಬಿಟ್ಟಿದ್ದಾಳೆ. ‘ಗಂಡ- ಹೆಂಡಿರ ಜಗಳ ಉಂಡು ಮಲಗೋ ತನಕ ಅಂತ ಹಿರಿಯರು ಹೇಳಿದ ಗಾದೆ ಮಾತು ನೆನಪಾಗ್ತಾ ಇದೆ. ನಿಮ್ಮನ್ನ ನೋಡಿದಾಗ ಆ ಗಾದೆ ಮಾತು ನಿಜ ಅನ್ನಿಸ್ತಾ ಇದೆ. ಹಾಗಂತ ದಿನಾ ಜಗಳ ಆಡೋದಕ್ಕೆ ಹೋಗ್ಬೇಡಿ ಎಂದು ಭಾಗ್ಯ ಇಬ್ಬರನ್ನು ಸಂತೋಷದಿಂದ ಬೀಳ್ಕೊಟ್ಟಳು.
ಭಾಗ್ಯಳ ಮನೆಯಿಂದ ಕಾಲ್ತೆಗೆಯುವ ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದು ನಿಂತಿದ್ದ. ಪ್ರಖರವಾದ ಬಿಸಿಲಿಗೆ ಮೈ ಸುಡುವ ಅನುಭವ. ಅಕ್ಷರ, ಛತ್ರಿ ತಲಿಲ್ವ? ಎಲ್ಲಾ ಹುಡುಗಿಯರು ಸೂರ್ಯನ ಶಾಖಕ್ಕೆ ಎಲ್ಲಿ ಮುಖ ಕಪ್ಪಾಗಿ ಬಿಡುತ್ತದೆಯೋ ಎಂಬ ಭಯದಿಂದ ವರ್ಷದ ಮುನ್ನೂರ ಅವತ್ತೈದು ದಿನ ಕೂಡ ಛತ್ರಿಯನ್ನ ಒಟ್ಟಿಗೆ ಇಟ್ಟುಕೊಂಡಿತಾರೆ. ಆದರೆ, ನಿನ್ಗೆ ಆ ಬಗ್ಗೆ ಆಸಕ್ತಿನೇ ಇಲ್ವ ಕೇಳಿದ.
….. ಮುಂದುವರೆಯುವುದು
ಕಾದಂಬರಿ ಪುಟ ೫೧-೭೦