ನದಿಯು ತನ್ನ ಉಗಮದ ನೆನಪೇ ಇಲ್ಲದೆ ಅನಂತವಾಗಿ ಹರಿಯುತ್ತಿತ್ತು. ತನ್ನಿಂದ ತುಂಬಿ ತುಳುಕುತ್ತಿದ್ದ ಬೆಳ್ಳಿ, ಹಿತ್ತಾಳೆ, ತಾಮ್ರ ಹಾಗೂ ಮಣ್ಣಿನ ಬಿಂದಿಗೆಗಳ ನೆನಪು ತನಗೆ ಒಂದಿಷ್ಟು ಇಲ್ಲ. ಅಷ್ಟೇಕೆ? ಬಾಯಾರಿ ದಾಹತೀರಿಸಲು ಬೊಗಸೆ ಕೈಯನ್ನು ತನ್ನ ಹರಿಯುವ ಒಡಲಿಗೆ ಸೇರಿಸಿ ನೀರು ಕುಡಿದ ಬೊಗಸೆಯ ನೆನಪು ತನಗಿಲ್ಲ. ತನ್ನ ದಾರಿಯುದ್ದಕ್ಕೆ ಸಂಧಿಸಿದ ಗಿಡಮರ, ವೃಕ್ಷಗಳು, ಪಕ್ಷಿ ಪ್ರಾಣಿಗಳು ಎಲ್ಲವೂ ತನ್ನ ಹರಿವ ಜಲದಲ್ಲಿ ಒಂದು ನೆನಪೂ ಬಿಟ್ಟಿಲ್ಲ. ಹರಿದು ಹೋಗುವಾಗ ಅದೊಂದು ಶುಭ್ರತೆಯ ವೇಗ, ಮುಂದೆ ಸಾಗರದ ಮಿಲನ. ಧ್ಯೇಯದ ಧ್ಯಾನದಲ್ಲಿ ಅನಂತತೆಗೆ ಯಾನ ಹಾದಿಯಲ್ಲಿ ಅದೆಷ್ಟು ಬೆಟ್ಟಗಳು, ಅದೆಷ್ಟು ತಿಟ್ಟಗಳು, ಎಲ್ಲವನ್ನೂ ಧುಮುಕಿ ಹರಿಯುವ ವೇಗ. ನಿಲ್ಲದೆ ಸರಸರನೆ ಸುತ್ತಿ ಸುಳಿದು, ಬತ್ತದೆ, ಬಸವಳಿಯದೆ, ಹರಿವ ನದಿಗೆ ಸಾಗರದ ಸಮ್ಮೋಹದಲ್ಲಿ ಅದೆಂತಹ ಸೆಳವು. ಅನಂತತೆಯ ಮಿಲನಕ್ಕೆ ಅನಾದಿಯ ಹಾದಿ. ನದಿ ತನ್ನ ಉಗಮ ಮರೆತಾಗ ಆಗಮ ಸೇರಿತ್ತು. ಹುಟ್ಟಿದ ಕ್ಷಣದಿಂದ ಹರಿಯುವ ನದಿಗೆ ಅನಂತತೆಯ ಅರಿವು ಭರವಾಗಿತ್ತು, ಭರವಸೆಯಾಗಿತ್ತು, ರಭಸವಾಗಿತ್ತು, ರಾಗವಾಗಿತ್ತು, ಅನುರಾಗವಾಗಿತ್ತು, ಕೊನೆಗೆ ಮಿಲನವಾಗಿತ್ತು. ನೆನಪುಗಳನ್ನು ಬಿಟ್ಟು ಹರಿದ ನದಿ ನೇರ ಗುರಿ ಮುಟ್ಟಿತ್ತು. ಗಮನದಲ್ಲಿ ಕೊನೆಯ ನಮನ ಸಲ್ಲಿಸಿತ್ತು.
*****

















