ದಿನಗಳು ಉರಿಬಿಸಿಲಿನ
ಸ್ನಿಗ್ಧದಿಂದಲೇ ಶುರುವಾಗುವುವು
ಕನಸುಗಳು ಕಟ್ಟಿಕೊಳ್ಳುತ್ತಿದ್ದಂತೆಯೇ
ಸ್ನಿಗ್ಧದಲ್ಲಿ ತೊಳೆದುಕೊಂಡೂ ಬಿಡುತ್ತವೆ.
ಚುರು ಚುರುಗುಡುವ ರಸ್ತೆಯ
ಡಾಂಬರೂ ಸುಸ್ತಾಗಿ ಸರೆಯುತ್ತದೆ.
ಬಿರಿದ ನೆಲ ಮಳೆಗೆ ಹಪಹಪಿಸಿ
ಬಿಸಿಲಿನ ಬೆವರಿಗೆ
ಸಂತೃಪ್ತಿ ಪಟ್ಟುಕೊಂಡಿದೆ.
ಇಲ್ಲಿ ಕವಿಯುವುದಿಲ್ಲ ದಟ್ಟ ಮೋಡಗಳು
ತೊಟ್ಟು ಹನಿಗಾಗಿ ಕಾಯುವುದೂ ಇಲ್ಲ ಗಿಡಬಳ್ಳಿಗಳು
ಬಿದ್ದಿವೆ ಉಸಿರಾಟವಿಲ್ಲದ ಬೆಟ್ಟಕಂದರಗಳು
ಉರಿಬಿಸಿಲಿನಡಿ
ಸುಡುವ ಮರುಭೂಮಿಯಲ್ಲಿ
ಬಿಸಿಲ್ಗುದುರೆಯದೇ ಸಾಮ್ರಾಜ್ಯ
ಕಟ್ಟಿ ಹಾಕಲು ಅಲೆ ಅಲೆದಾಡಿದ
ಅಲೆಮಾರಿಗಳು (ನೊಮ್ಯಾಡ್ಸ್) ಸೋಮಾರಿಗಳು.
ಒಂಟೆಗಳೂ ಸುಸ್ತು ಹೊಡೆದಿವೆ
ಹನಿ ಹನಿ ನೀರಿಗೆ ಬೆನ್ನು ಹತ್ತಿ
ಓಯಾಸಿಸ್ ದಂಡೆಗುಂಟ
ಬೀಡುಬಿಟ್ಟ ಬುಡ್‌ವಿನ್‌ಗಳ
ಮುಖದಲ್ಲಿ ನಗುವಿಲ್ಲ
ಹೆಕ್ಕಿ ಹೆಕ್ಕಿ ತೆಗದಷ್ಟೂ
ಮರಳುಗಾಡಿನಲ್ಲಿ ಹೆಜ್ಜೆ ಹೂಳುತ್ತವೆ
ಮಾತುಗಳು ಮೌನವಾಗುತ್ತವೆ
ಬತ್ತಿದ ಬೆವರಿದ ಮುಖಗಳಿಗೆ
ತೂರುವ ಬಿಸಿಗಾಳಿಯೇ
ನೆಮ್ಮದಿ ಉಸಿರಾಟ
ಛಿದ್ರಿಸಿದ ಉಸುಕಿಗೆ ಹಟ
ಸ್ನಿಗ್ಧತೆಗೆ ಚೆಲ್ಲಾಟ
*****

ಪುಸ್ತಕ: ಗಾಂಜಾ ಡಾಲಿ

Latest posts by ಲತಾ ಗುತ್ತಿ (see all)