ಮರುಭೂಮಿಗೆ ಬಾಯಾರಿಕೆ ಇಲ್ಲ
ಮೋಡ ಮಳೆಗೆ
ವಸಂತವಾದೀತೆಂದುಕೊಂಡಿದ್ದೆ-
ಉಗ್ರ ಸೂರ್ಯನ ಹಪಹಪಿಗೆ
ಮಳೆ ಇಳಿದು ಹಳ್ಳ ಹೊಳೆಯಾಗಿ ಹರಿದು
ತೃಷೆ ಹಿಂಗಿಸಬಹುದೆಂದುಕೊಂಡಿದ್ದೆ-
ಕೆರೆ ಹಳ್ಳ ಪಳ್ಳ ಕೊಳ್ಳಗಳಲ್ಲಿ
ಒಂಟೆಗಳು ಖುಷಿಯಾಗಿ
ರಾಡಿಯಲಿ ಮಿಜಿ ಮಿಜಿ
ಹೊರಳಾಡಬಹುದೆಂದು ಕೊಂಡಿದ್ದೆ-
ಆದರೆ-
ಮಳೆಯಾದರೂ ನೀರು ಕುಡಿಯದ
ಮೊಂಡು ಹೆಣ್ಣು
ಈ ಮರುಭೂಮಿ
ಪ್ರೀತಿ ಒಡಲಾಳಕ್ಕಿಳಿಸಿಕೊಳ್ಳದ
ರಬ್ ಆಲ್ ಖಾಲಿ, (ಮಹಾ ಮರುಭೂಮಿ)
ಧಗ ಧಗಿಸುವ ಸೂರ್ಯ,
ತನ್ನ ಧಗೆಯಲ್ಲಿ ತಾನೂ ಸುಟ್ಟು
ಇವಳನ್ನೂ ಸುಡಿಸಿ
ಹಿಪ್ಪೆಯಾಗಿಸಿ ಹೋಗುತ್ತಾನೆ.
ಹಿಪ್ಪೆಗೆ
ಮಳೆಯಾದರೇನು ; ಬಿಸಿಲಾದರೇನು?
*****
ಪುಸ್ತಕ: ಗಾಂಜಾ ಡಾಲಿ