ಭವನುತ್ಸವಾಗ್ರದೊಳು ಮೆರೆವ ಗಣದುರವಣೆಯ
ಹೋಲಿ ಭೋರಿಡುತಿಹುದು ಅಷಾಢದೀ ಗಾಳಿ
ಓಲಾಡೆ ಗರಿಕೆದರುತಾವೇಶದೊಳು ತೆಂಗು
ತವಕದೊಳು ಹುಯ್ಯಲಿಡೆ ಬೀಳವೊಲು ಬಿಗಿಹಿಡಿದ
ಮರದ ಮಮತೆಯ ಗೂಢ ರಕ್ಷೆಯೊಳು ರೆಂಬೆಯೆಲೆ.
ಬಾನ ತುಂಬಿಹ ಗಾಳಿಯಾಲಿಸುತ ತಣಿಯದಿದೆ
ಧ್ಯಾನಗೊಂಡೀ ಚಿತ್ತ, ಹರನ ಮೊಗವಾಡದೊಳು
ಸರಿವ ಶಿವದೀ ಗಹನನಾಟ್ಯಾರ್ಥಗಳ ನೆನೆದು.
ಎಲರ ವೈಹಾಳಿಯೊಳು ಮಳೆಯಿಳಿದು ಬೆಳೆ ಬೆಳೆದು
ಜೀವವುಜ್ಜೀವಿಸುವ ಋದ್ಧಿ ಋತವನು ನಡೆಸಿ
ಕಾವ ಕರ ಮತ್ತೊಂದು ಹಸ್ತದೊಳು ತಲೆಯೋಡ
ತಳೆದು ಬೇಡುತಲಿಹುದೊ ಕರಣಾರ್ಥವಿರತಿಯನು?
ಈ ಬಹುದಭೋಗ ಭಿಕ್ಷುರವ್ರತರೆಮ್ಮ ಬಳಿಗೆ
ಬಂದು ಬರಿಗೈಯೊಳಗೆ ಮರಳಲೇನುಗತಿಯೆಮಗೆ.
*****

















