ಉರಿಯುತಿದೆ ಒಲೆಯೊಂದು. ಕೊರಡೊಂದು ಬೀಳುತಿದೆ.
ಒಂದೆ ಚಣ ಅದರ ಧೃತಿ! ಕಣ್ಣ ಕತ್ತಲಿಪ ಹೊಗೆ!
ಹೊಗೆ-ಬೆಂಕಿ; ಬೆಂಕಿ; ಕೊನೆ ದ್ರವಿಸುತಿದೆ ನೊರೆಯು ಮಿಗೆ;
ಮೈ ಕೆಂಡ-ಗಾಯಗಳ ತವರಾಯ್ತು; ಕಾಣುತಿದೆ
ಬೂದಿ ಬಿಳಿತೊನ್ನಿನೊಲು; ಉಫ್ಫೆನ್ನು ಬರಿ ಧೂಳು!
ಮೊದಲದನು ಕಡಿಯಲ್ಕೆ ಕೊಡಲಿ ಬೇಕಿತ್ತೊಂದು!
ಉಫ್ಫೆನ್ನುವ ಉಸಿರೊಂದೆ ಉರುಳಿಸಲು ಸಾಕಿಂದು!
ಬಾಚಿ ಎಸೆಯಾಚೆಗದಕಿನ್ನು ಗೊಬ್ಬರ-ಬಾಳು!
ಏನು? ಹಿಂದಿನ ನೆನಪೆ? ಈಗದರ ಮಾತೇಕೆ?-
ದಿಟ! ಒಮ್ಮೆ ಇದು ತನ್ನ ಕೆಳೆಯ ಮರಗಳ ಜೊತೆಗೆ
ನಭಕೆ ತಲೆಯೊಡ್ಡಿ, ಬಿರುಗಾಳಿ ಬಡಿಯಲು ತಲೆಗೆ
ನಗುತದನು ಸೆಣಸಿ, ಕೈಯಾಡಿಸುತ್ತೆಡಬಲಕೆ
ಅಳಿಖಗಗಳೊಡನಾಡಿ ಸವಿದ ಸುಖವೆಲ್ಲ ಸತ್ಯ!
ಆದರಿಂದಿನ ಗತಿಯೊ? ಅದುವು “ಸತ್ಯಸ್ಯ ಸತ್ಯ!”
*****








