Home / ಕವನ / ಕವಿತೆ / ಆಸ್ತಿಕನಿಗೆ

ಆಸ್ತಿಕನಿಗೆ

ಎಲ್ಲಿಹನೋ ನಿನ್ನ ದೇವ?
ಅದೆಲ್ಲಿಹನೋ ನಿನ್ನ ಕಾವ?
ತಂದೆದುರಿಗೆ ನಿಲ್ಲಿಸೊ!
ಅದುವರೆವಿಗು ಏನೇನನೊ
ಗಳಹುವುದನು ನಿಲ್ಲಿಸೊ!

ಅನಂತನೆಂಬೆ!
ಅಂತವುಳ್ಳ ನೀನವನನು ಕಾಣೆ ಸತತ ಯತ್ನಿಪೆ!
ಅಚಿಂತ್ಯನೆಂಬೆ!
ಅನವರತವು ನಿನ್ನ ಮನದೊಳವನ ಬಿಡದೆ ಚಿಂತಿಪೆ!
ಅಮೇಯನೆಂಬೆ!
ಮೇಯವಾದ ಅವನ ಗುಣಗಳನ್ನು ಸತತ ಹೊಗಳುವೆ!
ಅಜೇಯನೆಂಬೆ!
ಭಕ್ತವಿಜಯಗಳನು ನೆನೆದು ಅದರ ಮುದದಿ ಮುಳುಗುವೆ!

“ಸಂಭವಾಮಿ ಯುಗೇ ಯುಗೇ”
ಎಂಬ ಮಾತನೊರೆಯುವೆ!-
ಅಧರ್ಮ ಜಗದಿ ಹೆಚ್ಚಿದಂದು
ಧರ್ಮದುದ್ಧಾರಕೆಂದು
ಅವತರಿಪನು ದೇವನೆಂದು
ಗೀತೆಯುದ್ಧರಿಸುವೆ!
ಅಂತಾದೊಡೆ ಇಂದಿಗಿಂತ
ಕೆಟ್ಟ ಜಗವು ದೊರೆವುದೆ?
ಇಂಥ ಸಮಯ ಬರುವುದೆ?
ಅಧರ್ಮ ಕಾಡ ಕಿಚ್ಚ ಹೋಲಿ
ಹಬ್ಬಿ, ನಲ್ಮೆಯೆಲ್ಲ ತೇಲಿ
ಮಾಯವಾಗೆ ಯಾವ ಕೇಲಿ-
ಯೊಳಗೆ ದೇವ ಮಗ್ನನೊ!
ಮಾತನಿತ್ತು ಬರದ ದೇವ-
ನೆಂಥ ವಚನ ಭ್ರಷ್ಠನೊ!

ಪಾಪ! ಸೊದೆಯ ಕಡಲ ಸವಿಯ
ಮತ್ತಿನೊಳಗೆ ಈ ಬುವಿಯ
ಗೋಳು ಸೇರದೇನೊ ಕಿವಿಯ!

“ಬುವಿ ಪ್ರಯೋಗಶಾಲೆಯು!
ಇದೆಲ್ಲ ಅವನ ಲೀಲೆಯು!”
ಎಂದು ನುಡಿಯುವೆ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಯುದ್ಧಮಾರಿ ಹರಡುತಿರುವ
ಕಿಚ್ಚು ಇಳೆಯ ದಹಿಸಲಿ!
ಚಽಕ್ರಾಧಿಪತ್ಯವೆನಿತೊ
ನುಚ್ಚು ನೂರಾಗಲಿ!
“ಎಲ್ಲ ಅವನ ಲೀಲೆಯು!”

ಕ್ಷಾಮಾಗ್ನಿಯು ನಾಲಗೆಯನು
ಚಾಚಿ ಜಗವ ನೆಕ್ಕಲಿ!
ಬುವಿಯ ಬಸಿರ ಬಗೆದು `ಲಾವ’
ಎಲ್ಲೆಲ್ಲಿಯು ಉಕ್ಕಲಿ!
“ಎಲ್ಲ ಅವನ ಲೀಲೆಯು!”

ಕಾದ ಗುಳದ ತೆರದಿ ಭಾನು
ಕೂಲಿಗಳನು ಚುಚ್ಚಲಿ!

ಕರಾಳ ಮೇಘ ಮಿಂಚು ಸಿಡಿಲ
ಪೊಟ್ಟಣವನು ಬಿಚ್ಚಲಿ!
“ಎಲ್ಲ ಅನನ ಲೀಲೆಯು!”

ಅನೀತಿ ಜಗದಿ ನೆಲಸಲಿ
ಅಧರ್ಮ ಬಂದು ಕುಣಿಯಲಿ
ಅಶಾಂತಿಯೆಲ್ಲು ಹಬ್ಬಲಿ
ಅಕೃತ್ಯ ಬಿಡದೆ ನಡೆಯಲಿ
ನರನು ನರನ ಸುಲಿಯಲಿ
ಜಗದ ಕೆಟ್ಟುದೆಲ್ಲ ಬಂದು
ಇಲ್ಲೆ ಹೆಪ್ಪುಗಟ್ಟಲಿ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಎಲ್ಲಿಹನೋ ದುರುಳ ದೇವ?
ಅದೆಲ್ಲಿಹನೋ ಜಗವ ‘ಕಾವ’?
ಎಳೆದು ತಾರೊ ಇಲ್ಲಿಗೆ
ಇಂತು ಲೀಲೆಯಾಡುವವನ
ಹಾಕಬೇಕು ಗಲ್ಲಿಗೆ!

ಸಾಕು ಮಾಡೊ! ಒಡ್ಡದಿರೆಲೊ
ಸಗ್ಗದ ಪ್ರಲೋಭನ!
ನರಳಿದರೂ ಇಲ್ಲಿ, ಮುಂ-
ದಿರುವ ಸುಖದ ಕಥನವ!
ಕೊಡನು ಕೈಯೊಳಿರುವ ಕಲ್ಲ!
ಕೊಡುವನೆ ಮುಚ್ಚಿಟ್ಟ ಬೆಲ್ಲ!

ಬುವಿಯ ಗೋಳ ಕಡಿಮೆ ಮಾಡ-
ಲವಗೆ ತ್ರಾಣವಿಲ್ಲವೆ?
ಇಲ್ಲ ಇಚ್ಛೆ ಯಿಲ್ಲವೆ?

ತ್ರಾಣವಿದ್ದು ಇಚ್ಛೆ ಯಿರದ
ಭಂಡನಾತನೆ?
ಇಚ್ಛೆಯಿದ್ದು ತ್ರಾಣವಿರದ
ಷಂಡನಾತನೆ?
ಇಚ್ಛೆ ತ್ರಾಣ ಎರಡುಮಿರದೆ
ಬರಿದೆ ಸೋತನೊ?
ಇಚ್ಛೆ ತ್ರಾಣ ಎರಡುಮಿರಲು
ಏಕೆ ಕೂತನೊ?
* * *

ಇಲ್ಲದಿರುವ ದೇವರನ್ನು
ಸುಮ್ಮನೇಕೆ ಬೈಯಲಿ:
ಬರಿಯೆ ಗಾಳಿಯನ್ನು ಗುದ್ದಿ
ಸುಮ್ಮನೇಕೆ ನೋಯಲಿ!
ವಿಚಾರ ಮಥನ ಮಾಡಿಬಿಡು!
ಇದೊಂದು ಮಾತ ಮನದಿ ನೆಡು:

ನರನ ಬಾಳ ಶಿಲ್ಪಿ ನರನೆ!
ದೇವ ಮನದ ಭಯದ ರಚನೆ!
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...