ಕಾರಿರುಳ ಜೊತೆ ಸೇರಿ
ಕಣ್ಗೆ ಮಂಕನು ತೂರಿ
ಕಂಡಿತಹ ನನಗೊಂದು ಮಿಂಚುಹುಳುವು.
ಕತ್ತಲಿನ ಕಡಲಿನೊಳು
ತೇಲ್ವ ಕಿರುದೋಣಿಯೊಳು
ಮಂಕಾಗಿ ಮಿನುಗುತಿಹ ಹಣತೆಯೇನೋ
ಇರದು! ಎಂದಿಗುಮಿರದು!
ನಿಶೆಯ ಜಡೆಯೊಳು ಮೆರೆದು
ಹೊಳೆಯುತಿಹ ವಜ್ರದಾಭರಣವೇನೋ.
ನಿಶೆಯು ಹಬ್ಬಿರೆ ಸುತ್ತ
ಬೆಳಕ ಹನಿಯಳುಕುತ್ತ
ಸುಳಿವನೀಯದ ತೆರದಿ ಚಲಿಪುದೇನೋ
ಉಡುವೊಂದು ನೆಲೆ ತಪ್ಪೆ
ಮತ್ತೆ ಗಗನವನಪ್ಪೆ
ತವಕದಿಂ ಕಾತರಿಸುತಿರುವುದೇನೋ
ತನ್ನ ಹಿರಿಮೆಯ ಸಾರೆ
ಆ ಕಾರಿರುಳ ನೀರೆ
ಕಣ್ಣ ಮಿಟುಕಿಸಿ ಮಿಂಚುತಿರುವಳೇನೋ
ಎಲ್ಲಕೂ ಮರುಳಾಗಿ
ಬಾಯ್ಬಿಡುವ ಕವಿಗಾಗಿ
ಮಿಂಚುಹುಳುವಿದನು ವಿಧಿ ಸೃಷ್ಟಿಸಿದನೋ.
*****


















