Home / ಕವನ / ಕವಿತೆ / ಹಿಮಾಗಮನ

ಹಿಮಾಗಮನ

ಮೆಯ್ಯಲಿಹ ರಕ್ತವನೆ ಹೆಸ್ಪುಗಟ್ಟಿಸುವಂಥ
ಚಳಿ ಬಂತು, ಜನಜಾತ್ರೆಯೋಡಿಸಿತು, ಕೊನೆಗೊಮ್ಮೆ
ಬರಿದಾದ ಬೀದಿಯಲಿ ನಿಂತ ಹೊಗೆಕಿಂಡೆಯಲಿ
ಭೌಂವೆಂದು ಬೀಸುತ್ತ ಚಳಿಗಾಳಿಯದು ಬಂತು,-
ಅಸಮವಾಗಿಹ ಹಿಮದ ಬರವ ಸಾರಿ!

ಸದ್ದಿಲ್ಲ, ಸುಳಿವಿಲ್ಲ, ಮೊಳಗಿನಬ್ಬರವಿಲ್ಲ;
ಹಿಮಕಣವ ತಡೆಹಿಡಿದ ಗಿಡಗಂಟಿಯಡಿಗೆರಗಿ
ಹುಳವನರಸುವ ಹಕ್ಕಿಗಳ ದನಿಯೆ ಎದ್ದಿಲ್ಲ:
ಮಸಣವಟ್ಟೆಯನಾಳುವಂಥ ಮೌನವ ಹಿಡಿದು
ತೆರಪಿಲ್ಲ, ತಡೆಯಿಲ್ಲ, ಬೀಳುತಿದೆ ಹಿಮವು!

ಮುಗಿಲೆ ಕಳಚಿರುವಂತೆ, ಬೂದಿಬಣ್ಣದ ಮೋಡ
ಉದುರಿ ಹೂವಾದಂತೆ, ದಿಕ್ಕುಗಳ ಕಣ್ಣೆಲ್ಲ
ಬೆಳ್ಳಗಾಗಿರುವಂತೆ; ವಿಸ್ಮಯವಿದೇನೆಲವೊ!
ಭಸ್ಮಾಸುರನ ಬೂದಿ ದಿಕ್ಕುಪಾಲೆಂಬಂತೆ
ಉದುರುತಿದೆ, ಚದರುತಿದೆ ನೋಡು ಹಿಮವು!

ಬೀದಿಯಾಗಿತ್ತಾಗ ಹಿಮಕಣರಣಾಂಗಣವು!
ತಿರುಗುತಿವೆ ಕುಡುಕರಂದದಿ ಮತ್ತೆ ಬೀಳುತಿವೆ
ಕೋಟಿ ಕಣಗಳು ಕೋಟಿ ಯುದ್ಧಗಳನಾಡುತ್ತ
ಬ್ರಹ್ಮಾಂಡವನೆ ವ್ಯಾಪಿಸಿವೆ, ಕೋಪಿಸಿವೆ ನೋಡು
ಭಣಗುಟ್ಟುವಂತೆ ಭೂಮಿ!

ಅಲ್ಲ, ಹಿಮವಲ್ಲವಿದು: ಘನಮಹಿಮನಾ ಮಹಿಮೆ:
ಮುಗಿಲಿನೊಳಗಿಂದುದುರುತಿಹ ಪಾರಿಜಾತಗಳು
ಹಿಮಕಣಗಳಿವು. ನೋಡಿದಲ್ಲೆಲ್ಲ ಧವಲ. ಮನೆ-
ಗಿತ್ತು ಬೆಳ್ಳಿಯ ಹೊದಿಕೆ, ಮರಕೆ ಮಂಜಿನ ಮುಸುಕು,
ನೆಲಕೆ ಬೆಳ್ಳನ್ನ ಮುಡಿಪು!

ಇಲ್ಲಿದ್ದವಾಗ ಹಸಿರೆದ್ದ ಹೊಲಗಳು; ಈಗ
ತುಂಬಿ ತುಳುಕದ ಬೆಳ್ಳಿ ಬಿದ್ದ ಕೊಳವಾಗಿಹವು!
ಮಾರುದ್ದ ಹಿಮ ಬಿದ್ದು ಮುಚ್ಚಿಹೋಗಿದೆ ದಾರಿ.
ಎಲೆಯುದುರಿ ಕೊಂಬೆ ಮಣಿದಿರುವ ಮರಗಳು ಮಾತ್ರ
ನಿಂತಿಹವು ದೇವ್ವವಾಗಿ!

ಇಂಥ ಹಿಮದಲ್ಲಿ ಸಹ ಹುಡುಗರಿಗೆ ಚೆಂಡಾಟ;
ಹಿಮದಿಳಿವು ನಿಂತಾಗ ಮತ್ತೆ ರಾತ್ರಿಯು ಬಂದು
ಮೋಡವಿನಿಸಿಲ್ಲದಾ ಮುಗಿಲಟ್ಟದಲಿ ನಿಂದು
ಬಿದ್ದ ಬೆಳ್ಳಿಯ ತೋರಿ ಮಂದಮೌನಸ್ಮಿತದಿ
ತಾರೆಗಳನಾಡಿಸುವಳು!
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...