ಅಧ್ಯಾಯ ಹದಿಮೂರು
ಮರುವಿನ ರಾಜಸಭೆಯಲ್ಲಿ ಚಿನ್ನಾಸಾನಿಯ ಕಚೇರಿ. ಜಯದೇವನ ಕವಿಯ ಅಷ್ಪಪದಿಗಳನ್ನು ಅಭಿನಯಿಸುತ್ತಾಳೆ. ಆದಿನ ಮಧ್ಯಾಹ್ನವೇ ಸುಲ್ತಾನರಿಗೆ ಗೋಪಾಲರಾಯರು ಗೀತಗೋವಿಂದನನ್ನು ವಿವರಿಸಿದ್ದಾರೆ. ಅವರಿಗಂತೂ ಆ ಪ್ರಾಸಾದಿಕವಾಣಿಯನ್ನು ಕೇಳುತ್ತಿದ್ದ ಹಾಗೆಯೇ ಸಂತೋಷವು ತಾನೇ ತಾನಾಗಿ ಎದೆಯುಬ್ಬುತ್ತದೆ. “ಇಂತಹ ಅಮರವಾಣಿ ಇನ್ನುಂಟೆ ? ಎಲ್ಲಿ ಇನ್ನೊಂದು ಸಲ ಹೇಳಿ, ಮತ್ತೊಂದು ಸಲ ಹೇಳಿ” ಎಂದು ಒಂದೊಂದು ಅಷ್ಟಪದಿಯನ್ನು ಎರಡು ಸಲ ಮೂರು ಸಲ ಹೇಳಿಸಿ ಕೇಳಿ ಹೇಳಿ ಸಂತೋಷಪಟ್ಟಿದ್ದಾರೆ. ಗೋಪಾಲರಾಯರು ಸರಸವಾಗಿ, ಸುಖ ವಾಗಿ ಅಷ್ಟಪದಿಗಳನ್ನು ಹಾಡುತ್ತ, ಅದರ ಭಾವಗಳನ್ನು ವಿವರಿಸುತ್ತಿದ್ದರೆ ಸುಲ್ತಾನರು ಪರವಶರಾಗುತ್ತಾರೆ. ಎಲ್ಲವೂ ಆದಮೇಲೆ ಅವರಿಗೊಂದು ಸಂದೇಹವು ಬಂತು. ಮಗ್ಗುಲಲ್ಲಿದ್ದ ಭಕ್ಷಿಯವರನ್ನು ಕರೆದು, “ನಮ್ಮ ದರ್ಬಾರಿಗಳಿಗೆ ಸಂಗೀತ ಗೊತ್ತು: ಅಭಿನಯ ಗೊತ್ತು; ಆದರೆ ಸಂಸ್ಕೃತವೂ ಗೊತ್ತೇನು? ಈ ಅಷ್ಟಪದಿಗಳ ಅರ್ಥ ತಿಳಿದರೆ, ಸಂತೋಷ ಹೆಚ್ಚುತ್ತದೆ ಅಲ್ಲವೆ ? ಅದರಿಂದ, ತಮ್ಮ ದರ್ಬಾರಿನ ಕಾಯಿದೆಗಳಿಗೆ ಭಂಗವಿಲ್ಲ ಎನ್ನುವ ಹಾಗಿದ್ದರೆ, ಮೊದಲು ರಾಯರು ಅಷ್ಟಪದಿಯನ್ನು ಓದಿ ಅದರ ಅರ್ಥ ಹೇಳಿಬಿಡಲಿ. ಅನಂತರ ಅಭಿನಯ ಆಗಲಿ. ಏನೆನ್ನುತ್ತೀರಿ ಎಂದು ಕೇಳಿದರು.
ಭಕ್ಷಿಯವರು “ಖಾವಂದ್‌ರ ಹುಕುಂ ಆದ ಹಾಗೆ. ಆದರೆ, ನಿನ್ನೆಯ ದಿನ ಆಚಾರ್ಯರೂ ಉಪವಾಸಮಾಡಿದ್ದಾರೆ ; ರಾತ್ರಿಯೆಲ್ಲ ಭಜನೆಮಾಡಿದ್ದಾರೆ. ಖಾವಂದ್‌ರ ಹುಕುಂ ಮೇರೆ ಆದರೆ, ಮೊನ್ನೆಯ ಹಾಗೆ ರಾತ್ರಿಯೆಲ್ಲ ಆಗುತ್ತದೆ. ಇದರ ಮೇಲೆ ಹುಜೂರ್‌ನಲ್ಲಿ ಏನು ಹುಕುಂ ಆದರೆ ಅದೇ ಸರಿ” ಎಂದು ಕೈಮುಗಿದರು.
ಸುಲ್ತಾನರು ಯೋಚಿಸಿದರು. “ಹಾಗಾದರೆ ಇವೊತ್ತು ಅರ್ಧ ಆಗಲಿ. ನಾಳೆ ಅರ್ಧ ಆಗಲಿ. ನಾವು ಹೇಳಿದಂತೆ ಮೊದಲು ನಮ್ಮ ರಾಯರು ಹೇಳಿ ಅರ್ಥ ಹೇಳಬೇಕು. ಆಮೇಲೆ ಅವರದು ಅಭಿನಯ. ರಾವ್‌ಸಾಹೇಬ್, ತಾವು ಈಗ ನಮ್ಮ ಹತ್ತಿರ ಹೇಗೆ ರಾಗವಾಗಿ ಹಾಗೆ ಹೀಗೆ ಭಾವವಾಗಿ ಹೇಳಿದಿರಿ ಹಾಗೆಯೇ ದರ್ಬಾರಿನಲ್ಲೂ ಹೇಳಬೇಕು. ನಮಗೆ ಆದ ಆನಂದ ನಮ್ಮ ದರ್ಬಾರಿಗಳಿಗೂ ಆಗಬೇಕು. ತಾವೂ ಅಭಿನಯದಲ್ಲಿ ಬಹಳ ನುರಿತಿದ್ದೀರಿ. ಇಲ್ಲದಿದ್ದರೆ ಪಾಚ್ಛಾ ಸಾಹೇಬರು ತಮಗೆ ಬಿರುದು ಕೊಡು ತ್ರಿದ್ದರೆ? ತಾವು, ತಮ್ಮ ಉಸ್ತಾದರು, ತಮ್ಮ ದೋಸ್ತ್‌ಗಳು, ಎಲ್ಲರೂ ಬಂದುದು ನಮ್ಮ ನಸೀಬ್. ನಮ್ಮ ಷಹರಿನ ನಸೀಬ್, ದಿನವೂ ಹೀಗೇ, ಅಲ್ಲಿ ಚಿನ್ನಾಸಾನಿಯವರು ಅಭಿನಯಮಾಡುವ ದಿವಸ ತಾವು ಮಧ್ಯಾಹ್ನ ಬರಬೇಕು ನಮಗೆ ಸುಲಾವಣೆ ಮಾಡಿಸಬೇಕು. ಆಗಬಹುದೋ ?”ಎಂದು ಹೇಳಿದರು.
ಸುಲ್ತಾನರ ಸಂತೋಷ. ಅಕೃತ್ರಿಮವಾದ ವಿಶ್ವಾಸ, ಸಹಜ ಸರಳತೆ ಗಳಿಗೆ ವಶರಾಗಿ ರಾಯರೂ ಒಪ್ಪಿಕೊಂಡರು.
ರಾತ್ರಿ ಎಂದಿನಂತೆ ಮೊದಲನೆಯ ಝಾವದ ಕೊನೆಯಲ್ಲಿ ಕಚೇರಿಯು ಆರಂಭವಾಯಿತು. ಸುಲ್ತಾನರ ಎದುರಿನಲ್ಲಿ ಒಂದು ರಂಗಮಂಟಪದ ರಚನೆ ಯಾಗಿದೆ. ಕಿಂಕಾಪಿನ ತೆರೆಗಳು ಮೇಲಿನಿಂದ ಇಳಿದು ಇಂದಿನ ಸಂತೋಷ ಹೀಗೆ ತೆರೆತೆರೆಯಾಗಿ ಮೇಲೆಮೇಲಕ್ಕೆದ್ದು ಮುಗಿಲು ಮುಟ್ಟುವುದು ಎಂದು ತೋರಿಸುವುವೋ ಎಂಬಂತೆ ಗಾಳಿಗೆ ಅಲೆಯುತ್ತಾ, ತಮ್ಮ ನೆರಿಗಳನ್ನು ಮೇಲಿನವರೆಗೂ ಕಾಣಿಸುತ್ತಿವೆ.
ಮೊದಲನೆಯ ತೆರೆಯು ತೆಗೆಯಿತು. ಸುಲ್ತಾನರ ದರ್ಬಾರಿನಲ್ಲಿ ಮಂಜುಳವಾದ ಘಂಟಾರವವು ಕೇಳಿಸಿತು. ಜಯದೇವ ಕವಿಯಂತೆ ವೇಷ ವನ್ನು ಅಳವಡಿಸಿಕೊಂಡಿದ್ದ ಗೋಪಾಲರಾಯರು ಮರ್ಯಾದ ಮಂಟಪದಲ್ಲಿ ಕುಳಿತು ಮಂಗಳ ಶ್ಲೋಕಗಳನ್ನು ಹೇಳಿ, ಸಭೆಯನ್ನು ಪ್ರಾರ್ಥಿಸಿದರು.
ಯದಿ, ಹರಿಸ್ಮರಣೇ ಸರಸಂ ಮನೋ
ಯದಿ ವಿಲಾಸ ಕಲಾಸು ಕುತೂಹಲಂ
ಮಧುರ ಕೋಮಲ ಕಾಂತ ಪದಾವಳೀಂ
ಶೃಣು ತದಾ ಜಯದೇವ ಸರಸ್ವತೀಂ
– ಎಂಬ ಶ್ಲೋಕವನ್ನು ಹೇಳಿ ಮೃದುವಾಗಿ “ಸಭಿಕರೆ, ಶ್ರೀಹರಿಸ್ಮರಣವನ್ನು ಕೋರುವಿರಾ? ವಿಲಾಸ ಸಕಲೆಗಳನ್ನು ನೋಡಬೇಕೆನ್ನುವಿರಾ? ಹಾಗಾ ದರೆ ಸಂಗೀತ ಸಾಹಿತ್ಯಗಳ ಸಮ್ಮೇಳನ ಸ್ಥಾನವೋ ಎಂಬಂತಿರುವ ಮಧುರ, ಕೋಮಲ, ಪದಗಳಿಂದ ವಿರಚಿತವಾಗಿ ರಾಧಾಮಾಧವರ ರಹಸ್ಯ ಕೇಳಿಗಳನ್ನು ಚಿತ್ರಿಸುವ ಜಯದೇವ ಮಹಾಕವಿಯ ಕಾವ್ಯಪ್ರವಾಹವನ್ನು ಕೇಳಿ”ಎಂದು ವಿವರಿಸಿದರು. ಮೊದಲನೆಯ ದಶಾವತಾರದ ಅ ಅಷ್ಟಪದಿಯನ್ನು ಬೇಕೆಂದು ಬಿಟ್ಟು ಎರಡನೆಯ ಅಷ್ಟಸದಿಯಿಂದ ಆರಂಭಿಸಿದರು.
ವಿಹರತಿ ಹರಿರಿವ ಸರಸವಸಂತೇ ನೃತ್ಯತಿ
ಯುವತಿ ಜನೇನ ಸಮಂ ಸಖಿ ವಿರಹಜನಸ್ಯದುರಂತೇ
– ಎಂಬ ಪಲ್ಲವಿಯಿಂದ ಆರಂಭಿಸಿ ನುಡಿನುಡಿಯನ್ನೂ ಸಭಿಕರಿಗೆ ಸಾಹಿತ್ಯಾನಂದದ ಮಳೆಗರೆದರು. ಜಯದೇವ ಮಂಟಪವು ಹಿಂದಕ್ಕೆ ಹೋಯಿತು. ಹಿಂದಿನ ತೆರೆಯು ಮುಂದೆ ಬಂದು ತನ್ನ ಸ್ಥಾನದಲ್ಲಿ ನಿಲ್ಲುತ್ತಿರು ವಂತೆಯೇ ಮಂಗಳವಾದ್ಯಗಳು ಮೊದಲಾದವು. ವಿರಹಪೀಡಿತೆಯಾದ ರಾಧೆಯು ಸಖಿಯೊಡನೆ ರಂಗಮಂಟಪಕ್ಕೆ ಬಂದಳು.
ಅವಳೊಮ್ಮೆ ಹಾಡುವಳು. ಹಾಡಿದ ಹಾಡಿನ ಅರ್ಥವನ್ನು ಅಭಿನಯಿ ಸುವಳು. ಮತ್ತೊಮ್ಮೆ ಸಾಭಿನಯವಾಗಿ ಹಾಡುವಳು. ಆದು ಮುಗಿದ ಮೇಲೆ ಧ್ರುವವನ್ನು ಕುಣಿಯುವಳು. ಹೀಗೆ ಭಾವ, ರಾಗ, ತಾಳ ಸಮೇತ ವಾಗಿ ನಡೆದ ಅಭಿನಯವು ರಸಿಕರನ್ನು ಆನಂದಸಾಗರದಲ್ಲಿ ಮುಳುಗಿಸಿ, ಅವರನ್ನು ಎಲ್ಲಿಗೋ ಯಾವುದೋ ಲೋಕಕ್ಕೆ ಕರೆದೊಯ್ಯವುದು. ಅವರು ಇಹಲೋಕವನ್ನು ಮರೆತು ಯಾವುದೋ ದಿವ್ಯದೇಶದಲ್ಲಿ ಯಾವುದೋ ದಿವ್ಯ ಕಾಲದಲ್ಲಿ, ಯಾವುದೋ ದಿವ್ಯ ಸನ್ನಿಧಾನದಲ್ಲಿ, ಆ ದಿವ್ಯ ಪ್ರೇಮಿಗಳ ದಿವ್ಯ ಪ್ರೇಮದ ದಿವ್ಯ ಕಥೆಯಲ್ಲಿ ಮಗ್ನರಾಗಿ, ಯಾವುದೋ ದಿವ್ಯಭಾವಾಪನ್ನರಾಗಿ ದಿವ್ಯ ರಸಾನುಭವವನ್ನು ಪಡೆಯುವರು.
ಹೀಗೆಯೇ ಆ ರಾತ್ರಿಯೆಲ್ಲ ನಡೆಯಿತು. ಯಾರಿಗೂ ಕಾಲದ ಅರಿವು ಉಳಿದಿರಲಿಲ್ಲ.
“ಧೀರ ಸಮೀರೇ ಯಮುನಾತೀರೇ ವಸತಿ ವನೇ ವನಮಾಲೀ
ಗೋಪೀಪೀನಪಯೋಧರ ಮರ್ದನ ಚಂಚಲಕರಯುಗಶಾಲೀ॥”
ಎಂಬ ಅಷ್ಟಪದಿಯು ಮುಗಿದಿದೆ. ಆ ಅಷ್ಟಪದಿಯನ್ನು ಅಭಿನಯಿಸಿದಾಗಲಂತೂ ರಾಧಾ ಹೃದಯದ ವಿರಹದ ಭಾರ, ಸಖಿಯ ಉಪದೇಶದಲ್ಲಿರುವ ಮೈತ್ರಿಯಸಾರ, ಎರಡೂ ಸಭಿಕರ ಹೃದಯವನ್ನು ಪೂರ್ಣವಾಗಿ ಹಿಡಿದು ಬಿಟ್ಟವೆ. ಎಲ್ಲರ ಕಣ್ಣಲ್ಲಿಯೂ ಅಯ್ಯೋ ರಾಧೆ, ಅವಳ ಮಾತನ್ನೇಕೆ ಕೇಳೆ? ಎಂದು ಸಂಕಟಪಟ್ಟೋ ಎಂಬಂತೆ ನೀರು ಹನಿಹನಿಯಾಗಿ ಉದುರುತ್ತಿವೆ.
ಹರಿರಭಿಮಾನೀ ರಜನಿರಿದಾನೀಂ||
ಇಯಮಪಿಯಾತಿ ವಿರಾಮಂ||
ಕುರುಮಮವಚನಂ ಸತ್ವರರಚನಂ||
ಪೂರಯಮಧುರಿಪು ಕಾಮಂ||
ಎಂದಾಗಲಂತೂ ಎಲ್ಲರೂ ಹೌದು ಹೌದು ರಾತ್ರಿಯು ಮುಗಿದು ಹೋಗುತ್ತಾ ಬಂತು ಎಂದುಕೊಂಡು ಬಹಿಃ ಪ್ರಪಂಚವನ್ನು ನೆನೆದಿದ್ದಾರೆ.
ಶ್ರೀ ಜಯದೇವೇ ಕೃತಹರಿಸೇವೇ
ಭಣತಿಪರಮರಮಣೀಯಂ||
ಪ್ರಮುದಿತಹೃದಯಂ ಹರಿಮತಿಸದಯಂ||
ನಮತ ಸುಕೃತಕಮನೀಯಂ||
ಎಂದು ಹಾಡುತ್ತಿದ್ದಾರೆ. ಶ್ರೀಹರಿಯ ನಾಮವನ್ನು ಕೇಳದಿದ್ದವರಿಗೂ ಇರಬೇಕು, ಇರಬೇಕು, ಆ ಹರಿಯು ಅತಿಸದಯನೇ ಆಗಿರಬೇಕು. ಇಲ್ಲದಿದ್ದರೆ ಹರಿಸೇವೆಯನ್ನು ಮಾಡಿದ ಜಯದೇವನವಾಣಿಯು ಇಷ್ಟು ರಮಣೀಯವಾಗಿ ಇರುತ್ತಿತ್ತೆ ! ಅದರಿಂದ ನಮ್ಮ ಸುಕೃತದ ಫಲ; ಜನ್ಮಾಂತರ ಪುಣ್ಯಗಳ ಫಲವಾಗಿ ನಾವೂ ಆತನಿಗೆ ನಮಸ್ಕಾರ ಮಾಡಬೇಕು ಎನ್ನಿಸಿದೆ. ಸುಲ್ತಾನರು ಎದ್ದರು. ಮರುದಿನವೂ ಕಚೇರಿ. ಅಂದೂ ಹಿಂದಿನ ರಾತ್ರಿಯಂತೆಯೇ ಸಭೆಗೆ ಸಭೆಯೇ ರಾಧಾಮಾಧವರ ಪ್ರಪಂಚದಲ್ಲಿ ಬೆರೆತುಹೋಗಿದ್ದಾರೆ. ವಿರಹ ವಿಕ್ಲಾಂತಳಾದ ರಾಧೆಯೊಡನೆ ಕಣ್ಣೀರು ಕರೆಯುತ್ತಾರೆ. ತನಗೆ ಮೋಸ ವಾಯಿತು… “ಸಖೀಜನ ವಚನ ವಂಚಿತಾಹಂ, ಯಾಮಿ, ಹೇ ಕಮಿಹ ಶರಣಂ”ಎಂದು ಅಳುವ ರಾಧೆಯೊಡನೆ ಅಳುತ್ತಾರೆ. “ರಮತೇ ಯಮುನಾ ಪುಲಿನೇ ವಿಜಯೀ ಮುರಾರಿ ರಧುನಾ” ಎಂದು ಅಸೂಯೆ ಪಡುವ ರಾಧೆ ಯೊಡನೆ ತಾವೂ ಅಸೂಯೆಸಡುತ್ತಾರೆ.
“ಯಾಹಿ ಮಾಧವ, ಯಾಹಿಕೇಶವ, ಮಾವದ ಕೈತವವಾದಮ್, ತಾಮನುಸರ ಸರಸೀರುಹ ಲೋಚನ ಯಾತನ ಹರತಿ ವಿಷಾದಂ“
ಎಂದು ಮಾನದಿಂದ ಮಾಧವನನ್ನು ವಿಸರ್ಜಿಸುವುದಕ್ಕೂ ಸಿದ್ದವಾಗಿರುವ ರಾಧೆಯ ಮಾನ ಅಭಿಮಾನಗಳನ್ನು ವಹಿಸಿಕೊಂಡು ಸಭೆಯು ನೀರವವಾಗಿ, ಮೂಗನ್ನರ ಳಿಸಿಕೊಂಡು, ಹುಬ್ಬುಗಳನ್ನೆತ್ತಿಕೊಂಡು ಕೆಂಪಗಿರುವಕಣ್ಣುಗಳನ್ನು ಕೊಕ್ಕರಿಸಿಕೊಂಡು, ಬಿಸಿಯಾದ ನಿಟ್ಟುಸಿರುಗಳನ್ನು ಬಿಡುತ್ತಾರೆ.
ಹಾಗೆಯೇ ಮಾಧವನು ರಾಧೆಯ ಕಾಲಿಗೆ ಬಿದ್ದು, “ಪ್ರಿಯೇ, ಚಾರು ಶೀಲೇ, ಪ್ರಿಯೇ ಚಾರುಶೀಲೇ, ಮುಂಚಮಯಿ ಮಾನಮನಿದಾನಂ
ಸಪದಿ ಮದನಾನಲೋ ದಹತಿ ಮಮಮಾನಸಂ
ದೇಹಿ ಮುಖ ಕಮಲ ಮಧು ಪಾನಂ॥”ಎಂದು ಕೇಳಿಕೊಳ್ಳುವಾಗ, ಅವನ ಆರ್ತತೆಯನ್ನೂ, ದೈನ್ಯವನ್ನೂ ಸಭೆಯೇ ವಹಿಸಿಕೊಳ್ಳುತ್ತದೆ. “ಸ್ಮರಗರಳ ಖಂಡನಂ ಮಮಶಿರಸಿ ಮಂಡನಂ’ ದೇಹಿ ಪದ ಪಲ್ಲವ ಮುದಾರಂ ॥ ಪ್ರಿಯೇ” ಎಂದಾಗಲಂತೂ ಸರ್ವರೂ ಆ ವಿರಹ ದಾವಾನಲನ ದಳ್ಳುರಿಯನ್ನು ಅನುಭವಿಸಿ, ಅದರ ಜ್ವಾಲೆಯಲ್ಲಿ ಬೆಂದು, ಉರಿಯನ್ನು ಸಹಿಸಲಾರದೆ, ಆ ಅರ್ಥರಾತ್ರಿಯಲ್ಲೂ ಮೈಯೆಲ್ಲ ಬೆವರಿಡು ತ್ತಿರಲು, ಕರವಸ್ತ್ರಗಳಿಂದ ಗಾಳಿಯನ್ನು ಬೀಸಿಕೊಳ್ಳುತ್ತಾರೆ.
ಕೊನೆಯಲ್ಲಿ “ಕ್ಷಣಮಧುನಾ ನಾರಾಯಣಂ ಅನುಗತಮನುಸರ ರಾಧೇ!”ಎಂದಾಗಲಂತೂ ಸರ್ವರ ಮನಸ್ಸೂ ಏಕತಾನವಾಗಿ ನಾರಾಯ. ಣನನ್ನು ಅನುಸರಿಸಲು ಸಿದ್ಧವಾಗುತ್ತದೆ. ತನ್ನ ಲೋಕ ವ್ಯಾಪಾರಗಳನ್ನೆಲ್ಲ ಗಂಟುಕಟ್ಟಿ ಎಸೆದಂತೆ ಹಿಂದೆ ಬಿಟ್ಟು, ನಾರಾಯಣನ ಅನುಸರಣಕ್ಕೆ, ಶ್ರಿ ಹರಿಯ ಹಿಂದೆ ಹೋಗುವುದಕ್ಕೆ ಸಿದ್ದವಾಗಿ ಹೋಗುತ್ತದೆ. ಅದಾಗುತ್ತಲೂ “ನಿಜಗಾದಸಾ ಯದುನಂದನೇ, ಕ್ರೀಡತಿ ಹೃದಯನಂದನೇ” ಎಂದು ಹಾಡಿ ದಾಗ, ತಮ್ಮ ಹೃದಯವನ್ನು ಆಡುತ್ತಿರುವ ಆ ಯುದುನಂದನಿಗೆ ಸಂತೋಷವಾಗಿ ಒಪ್ಪಿಸಿ, ನನ್ನನ್ನು ಒಪ್ಪಿಸಿಕೋ ಎಂದು ಹೇಳಲು ಸಭೆಗೆ ಸಭೆಯೇ ಸಿದ್ಧವಾಗಿ, ಮೂಕವಾಗ ನಿಶ್ಶಬ್ದವಾಗಿ, ಮಾನಸಿಕವಾಗಿ, ಆ ನುಡಿಯನ್ನು ನುಡಿದುದ ಕ್ಕಿಂತಲೂ ಹೆಚ್ಚಾಗಿ, ಕೃತಿಯಿಂದಲೇ ತನ್ನನ್ನು ಸ್ವಾಮಿಗೊಪ್ಪಿಸಿಕೊಂಡು ಆ ಆತ್ಮಾರ್ಪಣದಲ್ಲಿ ಅಪೂರ್ವವಾದ, ಅಪಾರವಾದ, ಅಗಾಧವಾದ ಆನಂದವನ್ನು ಪಡೆದು ಆ ಆನಂದದಲ್ಲಿ ಮುಳುಗಿ ಕರಗಿಹೋಗಿದೆ. ಸಭೆಯಲ್ಲಿ ಇರುವ ಯಾರಿಗೇ ಆಗಲಿ, ತಮ್ಮ ಅಸ್ತಿತ್ವವೊಂದು ಪ್ರತ್ಯೇಕವಾಗಿ ಇರುವುದೆಂಬ ಭಾವನೆಯೇ ಉಳಿದಿಲ್ಲ.
ಆಭಿನಯವೆಲ್ಲ ಮುಗಿದಮೇಲೆ ಜಯದೇವಕವಿಯು ಮತ್ತೆ ಬಂದು, “ವ್ಯಾಪಾರಾಃ ಪ್ರರುಷೋತ್ತಮಸ್ಯದದತು ಸ್ಫಿತಾಂ ಮುದಾಂ ಸಂಪದಂ” ಎಂದು ಹೇಳಿ ಕೈ ಮುಗಿದು, ಘಂಬಾನಾದದೊಡನೆ ತೆರೆಯು ಮುಚ್ಚಿಕೊಂಡಾಗ, ಯಾವುದೋ ಲೋಕದಿಂದ ಬಲಾತ್ಕಾರವಾಗಿ ಮತ್ತೆ ಈ ಲೋಕಕ್ಕೆ ಬಂದವ ರಂತೆ, ಎಲ್ಲರಿಗೂ ಎಚ್ಚರವಾಗಿದೆ.
ಮತ್ತೊಂದು ದಿನ ಮೇಘಸಂದೇಶದ ಪುರುಷವಿರಹವನ್ನು ತೋರಿಸುವ ಅಭಿನಯವಾಯಿತು. ಅಲ್ಲಿ ಮೇಘವು ಯಕ್ಷಿಣಿಗೆ ಸಂದೇಶವನ್ನು ಹೇಳುವ ಪದ್ಯಗಳು, ಅದಕ್ಕೆ ಪೂರ್ವರಂಗವಾಗಿ ಬರುವ ವಿರಹಿಣಿಯಾದ ಯಕ್ಷಿಣಿಯ ವ್ಯಾಪಾರಗಳನ್ನು ವರ್ಣಿಸುವ ಪದ್ಯಗಳು, ಒಂದೊಂದು ಪದ್ಯವನ್ನೂ ಅಭಿನಯಿಸಿದ ಮೇಲೆ ಧ್ರುವದಿಂದ ಮುಕ್ತಾಯಮಾಡಿ ಮತ್ತೊಂದು ಪದ್ಯವನ್ನು ಆರಂಭಿಸುವುದು, ಈ ಕ್ರಮವೇ ಏನೋ ಹೊಸತಾಗಿ ಸುಲ್ತಾನರಿಗೆ ಬಹುವಾಗಿ ಮೆಚ್ಚಿಕೆಯಾಯಿತು. ಮರುದಿನ ಗೋಪಾಲರಾಯರನ್ನು ಕರೆಯಿಸಿಕೊಂಡು ಮೇಘಸಂದೇಶವನ್ನೆಲ್ಲ ಕೇಳಿದರು. ಮೇಘಸಂದೇಶಕಾವ್ಯ ವನ್ನೆಲ್ಲ ಅಭಿನಯಿಸಬೇಕು ಎಂದು ಅಪ್ಪಣೆಯಾಯಿತು. ಅದೇ ಆರು ದಿನಗಳಾಯಿತು. ಮತ್ತೆ ಆ ಕಾವ್ಯ ಅಭಿನಯವಾಗಬೇಕೆಂದು ಅಪ್ಪಣೆ ಯಾಯಿತು.
ಹೀಗೆಯೇ ಸುಮಾರು ಮೂರು ವಾರಗಳಾಯಿತು. ಒಂದು ದಿನ ಅನುಕೂಲ ಸಮಯವನ್ನು ನೋಡಿ ಯಜಮಾನ್ ವೀರಪ್ಪಸೆಟ್ಟರು ಸುಲ್ತಾನ ರನ್ನು ಕಾಣಿಸಿಕೊಂಡು “ಭರತಾಚಾರ್ಯರು ಶ್ರೀಶೈಲದ ಯಾತ್ರೆ ಹೊರಟಿದ್ದಾರೆ. ಖಾಂದ್‌ರವರ ಹುಕುಂ ಆದರೆ ಪಯಾಣಮಾಡುವರು “ಎಂದು ಅರಿಕೆ ಮಾಡಿದರು.
ಸುಲ್ತಾನರಿಗೆ ಆಕಾಶವೇ ಕಳಚಿಕೊಂಡು ತಲೆಯಮೇಲೆ ಬಿದ್ದಂತಾ ಯಿತು. “ಏಕೆ, ನಮ್ಮ ದರ್ಬಾರು ಆಚಾರ್ಯರಿಗೆ ಬೇಸರವಾಯಿತೇ ! ಅಥವಾ ನಮ್ಮ ಅಧಿಕಾರಿಗಳು ಅವರಲ್ಲಿ ತಪ್ಪಿ ನಡೆದಿದ್ದಾರೆಯೇ?”ಎಂದು ವಿಚಾರಿ ಸಿದರು.
ಸೆಟ್ಟರು “ಖಾವಂದ್, ಅದೇನೂ ಇಲ್ಲ. ಆದರೂ ಅವರು ರಾಜಧಾನಿ ಯನ್ನು ಬಿಟ್ಟು ತಿಂಗಳಾಗುತ್ತ ಬಂತು. ಇನ್ನೂ ಶ್ರೀಶೈಲಕ್ಕೆ ಹೋಗ ಬೇಕಾದುದೂ ಒಂದು ಇದೆ. ಆದರಿಂದ ಈ ಅವಸರ. ಸನ್ನಿಧಾನದಲ್ಲಿ ಯಾವುದಕ್ಕೂ ಕಡಿಮೆಯಿಲ್ಲವಾದರೂ ಜನ್ಮಭೂಮಿಯ ಕಡೆಗೆ ಮನಸ್ಸು ತಿರುಗುವುದು. ಸಹಜವಲ್ಲವೇ? ಎಂದು ಅರಿಕೆಮಾಡಿದರು.
ಸುಲ್ತಾನರು ಒಂದು ಗಳಿಗೆ ಯೋಚನೆಮಾಡಿ. “ನಿಜ, ನಾವು ಅವರ ಸಂಗೀತಕ್ಕೆ ವಶವಾಗಿರುವಂತೆ ತಮ್ಮ ಪಾದ್‌ಷಾ ಅವರು ಕೂಡ ಆಗಿರಬೇಕು. ಅವರಿಗೆ ಎಷ್ಟು ಬೇಸರವಾಗಿದೆಯೋ? ಸೆಟ್ಟಿಸಾಹೇಬ್ ಇನ್ನು ಎರಡು ಮೂರು ದಿನ ಅವರು ಇಲ್ಲಿ ಇರಬೇಕು. ಒಂದುದಿನ ತಮ್ಮ ಚಿನ್ನಾಸಾನಿಯವರು ಬಂದು ನಮ್ಮೊಡನೆ ಮಾತನಾಡುವುದು ಸಾಧ್ಯವೆ? ನಾವು ತಮಗೆ ಮೊದಲೇ ಹೇಳಿದ್ದೇವೆ. ಆವರು ಅವರ ಉಸ್ತಾದರೊಡನೆ ಬರಲಿ. ತಾವು ಅವರನ್ನು ಕರೆದುಕೊಂಡು ಬನ್ನಿ, ರಾವ್‌ಸಾಹೇಬರೂ ಬರಬೇಕು” ಎಂದು ಅಪ್ಪಣೆ ಮಾಡಿದರು. ಸೆಟ್ಟರು ಸರಿಯೆಂದು ಬಿೀಳ್ಕೊಂಡುಬಂದರು.
*****
ಮುಂದುವರೆಯುವುದು


















