
ಕಾಡಿನೊಳು ನೀನಿಲ್ಲ ,
ಬೀಡಿನೊಳಗಿಲ್ಲ,
ಬಯಸುವೊಡೆ ಬೇಸಗೆಯ
ತೊರೆಯಾದೆಯಲ್ಲ!
ಮತ್ತೆ ಮಳೆ ಕೊಳ್ಳುತಲೆ
ಏನದರ ಮೊಳಗು!
ಇನ್ನು ಜಯ ನಮಗೆಲ್ಲಿ?
ನಿನಗೆಲ್ಲಿ ಬೆಳಗು?
ಕಣದ ಬಳಿ ಕೊಯ್ಯುವುದು
ಜೋಲುತಲೆ ಹೊಡೆಯೆ,
ರಣದೊಳಗೊ ಹೊಯ್ಯುವುದು
ನೆರೆದಾಳ ತೊಡೆಯೆ.
ತೂರುವುದು ಹಿಮಗಾಳಿ
ಹಣ್ಣೆಲೆಯನಾದು.
ಹೊಸ ಅರಳು ನಮ್ಮ ಕಲಿ
ಹೋದನೇ ಸೀದು!
ನಯದೊಳಗೆ ನೀ ಜಾಣ,
ಹುಯಿಲೊಳಗೆ ಬಾಣ,
ಬೇಟೆಯಲಿ ಬರಸಿಡಿಲು,
ಆಟದಲಿ ನವಿಲು.
ಹಗಲೆದಿರ ಮಂಜೆಂತು,
ತೆರೆಯ ನೊರೆಯೆಂತು,
ಮುಗಿಲ ಕುಡಿಮಿಂಚೆಂತು,
ಮರೆಯಾದೆಯಂತು!
*****
SCOTT : Coronach















