Home / ಕಥೆ / ಕಾದಂಬರಿ / ಅವಳ ಕತೆ – ೨

ಅವಳ ಕತೆ – ೨

ಎರಡನೆಯ ಅಧ್ಯಾಯ

ಯಜಮಾನ್‌ ವೀರಪ್ಪಸೆಟ್ಟರು ಇಲ್ಲದಿದ್ದರೆ ವಿಜಯನಗರದಲ್ಲಿ ಯಾವ ದೊಂದು ಮಹಾಜನಕಾರ್ಯವೂ ನಡೆಯುವಂತಿಲ್ಲ. ವಂಶಪಾರಂಪರ್ಯವಾಗಿ ನಡೆದು ಬಂದ ದಾನ ಧರ್ಮಗಳ ಪ್ರಭಾನ ಇರಬೇಕು ಅವರ ಮನೆಯಲ್ಲಿ ಮಹಾಲಕ್ಷ್ಮಿ ನೆಲಸಿದ್ದಳು. ಇತ್ತ ಅಂಗಡಿಯಲ್ಲಿ ನೋಡಿದರೆ, ವಜ್ರ, ವೈಢೂರ್ಯ, ಮುತ್ತು, ಹವಳ ಕೆಂಪು, ಏನು ಬೇಕು ಅದೆಲ್ಲ ಸೇರಿನಲ್ಲಿ ಇರಲಿ, ಕೊಳಗದಲ್ಲಿ ಅಳೆಯುವಷ್ಟು ರಾಶಿ, ರಾಶಿ. ಚಿಲ್ಲರೆ ವರ್ತಕರು ಒಂದು ಸಾವಿರ ಜನವಾದರೂ ಅವರ ಆಶ್ರಯದಿಂದ ಬದುಕಿದ್ದರು. ವರ್ಷಕ್ಕೆ ಒಂದು ಸಲ ಗೋಲ್ಕಂಡದಲ್ಲಿ ವಜ್ರಗಳನ್ನು ಮಾರುವರು. ಯಜಮಾನ್‌ ಸೆಟ್ಟರು ಬಂದಿದ್ದಾರೆ ಎಂದರೆ ಮುಗಿಯಿತು. ಇನ್ನೊಬ್ಬರು ಬಾಯಿಹಾಕುತ್ತಿರಲಿಲ್ಲ. ನನಾಬರೇನೆ ಯಜಮಾನ್‌ ಸೆಟ್ಟರನ್ನು ಕರೆಸಿಕೊಂಡು “ಒಳ್ಳೆಯವು ಆರಿಸಿ. ನಮಗೆ ಅಷ್ಟು ಕೊಡಿ. ನೀವಸು ಇಟ್ಟುಕೊಳ್ಳಿ, ಉಳಿದವುಗಳನ್ನು ನಿಮಗೆ ತೋರಿದಂತೆ ಹಂಚಿಬಿಡಿ? ಎನ್ನುವರು. ಅಂದಿನಿಂದ ಹಾಗೆಯೇ ನಡೆದಿತ್ತು.

ಇತ್ತ ನಾಗಪಟ್ಟ ಣದ ಮುತ್ತಿನ ವ್ಯಾಪಾರವೂ ಹಾಗೆಯೇ! ಚಕ್ರವರ್ತಿ ಗಳ ಅಪ್ಪಣೆಯಾಗಿತ್ತು. ಅದರಂತೆ ಅಧಿಕಾರಿಗಳು ಸಮುದ್ರದಿಂದ ತೆಗೆದ ಸರಕೆಲ್ಲವನ್ನೂ ಅರಮನೆಗೆ ಕಳುಹಿಸುವರು. ಭಂಡಾರಿಯು ಯಜಮಾನರನ್ನು ಕರೆಸಿಕೊಂಡು ಶ್ರೇಷ್ಟವಾದವುಗಳನ್ನು ಅರಮನೆಗೆ ಇಟ್ಟುಕೊಳ್ಳುವನು. ಉಳಿದುದನ್ನೆಲ್ಲ ಅವರಿಗೇ ವಹಿಸಿಬಿಡುವನು. ಅವರು ಮಿಕ್ಕವರಿಗೆ ಹಂಚಿದರುಂಟು. ಇಲ್ಲದಿದ್ದರೆ ಇಲ್ಲ… ಗೋವಾದ ಹವಳದ ವ್ಯಾಪಾರವೂ ಹೀಗೇ! ಧಾರಾಪುರದ ಪಚ್ಚೆಗಳ ವ್ಯಾಪಾರವೂ ಹೀಗೇ! ಅಷ್ಟೇನು ಎಲ್ಲಾ ವ್ಯಾಪಾರವೂ, ವಿಜಯನಗರದ ರತ್ನಪಡಿ ವ್ಯಾಪಾರವೆಲ್ಲವೂ ಅಷ್ಟೇ! ಹೊರಗಿ ನಿಂದ ಬಂದ ವರ್ತಕರು ಕೊಳ್ಳುವುದಕ್ಕೆ ಬರಲಿ, ಮಾರುವುದಕ್ಕೆ ಬರಲಿ, ನೇರವಾಗಿ ಯಜಮಾನರ ಬಳಿ ಹೋದರೆ ಸರಿ, ಇಲ್ಲದಿದ್ದರೆ, ಅದು ಅವರ ಗ್ರಹಚಾರ.

ಹೀಗೆ ಅಂಗಡಿ, ವ್ಯಾಪಾರಗಳಲ್ಲಿ ಅವರಿಗೆ ಒಲಿದಿದ್ದ ಮಹಾಲಕ್ಷ್ಮಿಯೇ ಮನೆಯಲ್ಲಿ ಸ್ತ್ರೀ ರೂಪದಿಂದ ಅವರನ್ನು ಸೇವಿಸುತ್ತಿದ್ದಳು. ಸೆಟ್ಟರ ಕುಟುಂಬ ಗೌರಮ್ಮನು ರೂಪಗುಣ ಎಲ್ಲದರಲ್ಲಿಯೂ ಅಸಮಾನಳು. ಮನೆಗೆ ಬಂದವ ರನ್ನು ಆದರಿಸುವುದರಲ್ಲಂತೂ ಆಕೆಯ ಸರಿದೊರೆ ಇನ್ನಿಲ್ಲ. ಬಂಧುಬಳಗ ದಲ್ಲಂತು ಆಕೆಗೆ ಅದೆಷ್ಟೋ ಆದರ. ತನ್ನ ಬಳಗದವರಿರಲಿ: ತನ್ನ ಗಂಡನ ಕಡೆಯವರ ಮೇಲೂ ಅಷ್ಟೇ ಆದರ. ಎಲ್ಲರಿಗೂ ಆಶ್ಚರ್ಯವೆಂದರೆ ಆಕೆ ಅದು ಹೇಗೆ ಆ ಮನೆಯ ಕೆಲಸಗಳನ್ನೂ ನೋಡಿಕೊಂಡು, ಒಂದು ಝಾವದ ಹೊತ್ತು ಶಿವಪೂಜೆಯನ್ನೂ ಮಾಡಿ, ಬಂದು ಹೋದವರನ್ನೆಲ್ಲ ವಿಚಾರಿಸಿಕೊಳ್ಳು ತ್ತಿದ್ದಳು ಎಂದು. ಸೆಟ್ಟರ ಮನೆಗೆ ಹೋಗಿದ್ದು ಆಕೆಯನ್ನು ಕಂಡವರೆಲ್ಲ “ಸೆಟ್ಟರ ಭಾಗ್ಯದೇವತೆ ಆಕೆ. ಸಂದೇಹವಿಲ್ಲ.” ಎನ್ನುವರು. ಆಕೆಯನ್ನು ಕಂಡವರು ಯಾರೇ ಆಗಲಿ ಆಕೆಗೆ ಕೈಮುಗಿಯುವರು. ಅದು ಆಕೆಯ ಹಣೆಯ ಬರಹ. ಆಕೆಯ ಗಂಡನಿಗಂತೂ ಆಕೆಯ ವಿಚಾರದಲ್ಲಿ ಬಹು ಗೌರವ. ಆದರೆ ಒಂದು ವಿಚಾರದ ಮಾತ್ರ ಆತನಿಗೊಂದು ಪರಮ ಸಂಕಟ. ಆದರದನ್ನು ಯಾರ ಕೈಯಲ್ಲೂ ಹೇಳಿಕೊಳ್ಳುವಂತಿಲ್ಲ. ಹಾಗೆಂದು ಅದನ್ನು ಮನಸ್ಸಿನಿಂದ ದೂರ ಮಾಡಿಯಾ ಇರಲಿಲ್ಲ. ಅದೊಂದು ಕುಟ್ಟೆಯ ಹುಳುವಿನ ಹಾಗೆ ಒಳಗೇ ಕೊರೆಯುತ್ತಿತ್ತು.

ಆತನಿಗೆ ಮದುವೆಯಾದಾಗ ಒಬ್ಬ ಜೋಯಿಸ ಬಂದಿದ್ದ. ಎಲ್ಲರೂ ಆತನನ್ನು ಬಿಟ್ಟರೆ ಇನ್ನಿಲ್ಲ ಎನ್ನುವವರೇ! ಆತನಿಗೆ ಸೆಟ್ಟರು ತಮ್ಮ ಜಾತಕ ತೋರಿಸಬೇಕೆಂದು ಹೋದರು. ಹಾಗೆಯೇ ಇದೊಂದು ಜಾತಕ ನೋಡಿ ಎಂದು ತಮ್ಮ ಹೆಂಡತಿಯ ಜಾತಕವನ್ನೂ ಎದುರಿಗಿಟ್ಟರು. ಆತನು ಅದನ್ನು ನೋಡಿ, “ಎಲ್ಲಾ ಚಿನ್ನದ ಹಾಗೆ ಇದೆ. ಆದರೇನು ಸಪ್ತಮಶುದ್ಧಿಯಿಲ್ಲ. ಇಲ್ಲಿ ಕುಜ ಕೇತುಗಳಿರುವವುದಿಂದ ಇವಳು ಹಾದರಗಿತ್ತಿಯಾಗಬೇಕು. ಹಾಗಾದರೆ ಗಂಡ ಉಳಿಯುತ್ತಾದೆ. ಆಗ ಗಂಡನಿಗೆ ಬೇಕಾದ ಐಶ್ವರ್ಯ. ಹಾಗಿಲ್ಲದೆ ಪತಿವ್ರತೆಯಾದರೆ ಅವನಿಗೆ ತಪ್ಪದೆ ಮೃತ್ಯು” ಎಂದು ಹೇಳಿಬಿಟ್ಟ. ಆಮೇಲೆ ತಡೆಯಲಾರದೆ ಇದು ತಮ್ಮ ಹೆಂಡತಿಯದು ಎಂದು ಸಾಹುಕಾರ್ರು ಹೇಳಿಬಿಟ್ಟರು. ಆಮೇಲೆ ಏನೇನೋ ಲೆಕ್ಕ ಮಾಡಿ, “ಆ ವ್ಯಭಿಚಾರಯೋಗ ತಪ್ಪಿಹೊಗುತ್ತೆ. ದಿಗಿಲಿಲ್ಲ. ಒಂದು ಶಾಂತಿ ಮಾಡಿಸಿ. ಜ್ಯೋತಿಶ್ಯಾಸ್ತ್ರ ಇರುವುದೇ ಅದಕ್ಕೆ. ಜಾತಕದಲ್ಲಿಸುವ ದೋಷಗಳನ್ಸೆಲ್ಲ ತೋರಿಸಿ ಅವು ಶಾಂತವಾಗುವುದು ಹೇಗೆ ಎಂಬುದನ್ನು ಹೇಳುವುದಕ್ಕೆ”ಎಂದು ಏನೇನೋ ಹೇಳಿ, ಒಂದು ಸಾವಿರ ರೂಪಾಯಿ ಕಕ್ಕಿಸಿದ್ದ.

ಸಾಲದ್ದಕ್ಕೆ ಗೌರಮ್ಮ ಹಳ್ಳಿಯ ಸಾಹುಕಾರರ ಮನೆಯ ಹೆಣ್ಣು. ಆ ಊರಿನ ಪಟೇಲರ ಮಗ ಸಾಹುಕಾರರ ಮನೆಯಲ್ಲಿ ಬಹಳ ಸಲಿಗೆ. ಅವನ ನಡತೆ ಅಷ್ಟು ನೇರವಾಗಿರಲಿಲ್ಲ ಎಂದು ಎಲ್ಲರ ಬಾಯ ಮಾತು ಸೆಟ್ಟರ ಕಿವಿಗೂ ಬಿದ್ದಿತ್ತು. ಅಂತೂ ಜೋಯಿಸನ ಶಾಂತಿಯ ಬಲವೋ, ಆ ಇನ್ನೇನೋ ಅಂತೂ ಸೆಟ್ಟರೂ ಬದುಕಿದ್ದರು. ಐಶ್ವರ್ಯ ವಂತರೂ ಆಗಿದ್ದರು. ಆದ್ದರಿಂದಲೇ ಅವರ ಮನಸ್ಸಿನಲ್ಲಿ ಕರೆಕರೆ.

ಈಚೆಗೆ ಅರಮನೆಯಲ್ಲಿ ಒಟ್ಟಿಗೆ ಐದು ನಾಟಕ ಆದಂದಿನಿಂದ ಅವರ ಕರೆಕರೆಗೆ ಬಣ್ಣ ಹೆಚ್ಚಿ ಅವರ ಮನಸ್ಸು ಕೆಡುವಷ್ಟು ಮಟ್ಟಿಗೂ ಆಗಿತ್ತು. ಸೆಟ್ಟರು ಕುಟುಂಬ ಸಮೇತರಾಗಿ ನಾಟಕಕ್ಕೆ ಬರಬೇಕೆಂದು ಅರಮನೆಯಿಂದ ಕರೆಯೋಲೆ ಬಂದಿತ್ತು. ಇಬ್ಬರೂ ಹೋಗಿದ್ದರು. ದಾರಿಯಲ್ಲಿ ಬರುವಾಗ ಗೌರಮ್ಮ ಸಹಜವಾಗಿ ಆ ನಾಟಕಗಳಲ್ಲಿ ಪ್ರಧಾನ ಪುತ್ರವನ್ನು ವಹಿಸಿದ್ದ ಗೋಪಾಲರಾಯನ ವಿಚಾರವಾಗಿ ಅಭಿಮಾನವಾಗಿ ಮಾತನಾಡಿದ್ದುದು ಸೆಟ್ಟರಿಗೆ ಅಸಹ್ಯವಾಗಿತ್ತು. ಆದರತೆ, ಯಾರ ಕೈಯಲ್ಲೂ ಹೇಳುವಂತಿಲ್ಲ. ಅಂತೂ ಅದುವರೆಗೆ ಅಸಮಾಧಾನ ಯಾವ ಗುರಿಯನ್ನೂ ಕಾಣದೆ ಇದ್ದುದ್ದು ಆಗ ಒಂದು ಗುರಿಯನ್ನು ಕಂಡಂತಾಯಿತು. ಹೌದು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲದಿದ್ದರೂ ಗೋಪಾಲರಾಯ ನಾಟಕದವನ್ನು ಅವನನ್ನು ರಂಗದಲ್ಲಿ ಕಂಡ ಹೆಂಗುಸು ಅಭಿಮಾನಪಡುವಳು ಎನ್ನಿವುದಷ್ಟೇ ಸೆಟ್ಟರಿಗೆ ಸಾಕಾಗಿತ್ತು ಅವನು ಅವರ ಕಣ್ಣಲ್ಲಿ ಅಪಾಧಿಯಾಗುವುದಕ್ಕೆ.

ಜೊತೆಗೆ ಅವನು ಅಪರಾಧಿಯಾಗಲು ಅವನು ಚಿನ್ನಳಿಗೆ ಬೇಕಾದವ ನಾಗಿರುವುದೂ ತಕ್ಕಷ್ಟು ಸಾಕ್ಷ್ಯವಾಗಿತ್ತು. “ಇಬ್ಬರೂ ವಿವ್ಯಾವಂತರರು. ಇಬ್ಬರಿಗೂ ಜೊತೆ ಬಹಳ ಚೆನ್ನಾಗಿದೆ. ಹಾಗೆಂದು, ಆ ಚಿನ್ನಾಸಾನಿಗೆ ಐದು ಯೋಜನ ಉದ್ದ, ಮೂರೂವರೆ ಯೋಜನದಗಲದ ರಾಜಧಾನಿಯಲ್ಲಿ ಇನ್ನಾರೂ ಇಲ್ಲದೆ ಇವನೇ ಗಂಟು ಬೀಳಬೇಕೇ?”ಎಂದು ಏನೇನೋ ಕಾರಣಗಳನ್ನು ಕಲ್ಪಿಸಿಕೊಂಡು, ಸೆ ಸೆಟ್ಟರ ಮನಸ್ಸು ಯಾವುದೋ ನೆರಳು ಕಂಡು, ಅದು ಮನುಷ್ಯನದೇ ಇರಬೇಕು: ಆ ಮನುಷ್ಯನು ಕಳ್ಳನೇ ಇರಬೇಕು ಎಂದು ಕೊಂಡು ಒದ್ದಾಡುವಂತೆ ಆಗಿಹೋಗಿತ್ತು.

ಅವರ ಮನಸ್ಸು ಹೀಗೆ ಹೇಳಿಕೊಳ್ಳಲಾರದ ದುಃಖದಲ್ಲಿ ಒದ್ದಾಡುತ್ತಿರು ವಾಗ ರಾಜಧಾನಿಯ ಪೌರ ಮುಖಂಡರ ಗುಂಪೊಂದು ಅವರ ಬಳಿ ಬಂತು. ಆ ಗುಂಪಿನಲ್ಲಿ ಸೆಟ್ಟರು ಗೌರವಿಸುವ ಅನೇಕರು ಇದ್ದರು. ಜವಳಿ ರಂಗಪ್ಪ ನವರು ಪಾತ್ರೆ ಅಂಗಡಿ ಜಿನದತ್ತಪ್ಪನವರು, ಸರಾಫ್‌ ಕಟ್ಟೆ ಅಮೃತಯ್ಯ ಸೆಟ್ಟರು ಮುಂತಾಗಿ ಕೆಲವು ಜನ ಆಪ್ತರೂ ಇದ್ದರು. ಆ ಗುಂಪಿನವರ ಇಷ್ಟ ಗೋಪಾಲರಾಯನಿಗೆ ಒಂದು ಅಭಿನಂದನೋತ್ಸವ ಮಾಡಬೇಕು ಎಂದು. ಚಕ್ರವರ್ತಿಗಳು ಅವನ ಐದು ನಾಟಕ ನೋಡಿ ಸಂತೋಷಪಟ್ಟು, ಅವನಿಗೆ ನಟರಾಜ ಕಂಠೀರವ ಎಂಬ ಬಿರುದು ಕೊಟ್ಟಿದ್ದಾರೆ. ಅದಕ್ಕಾಗಿ ರಾಜಧಾನಿ ಯವರೆಲ್ಲ ಸೇರಿ ಅವನಿಗೆ ಭುಜ ತಟ್ಟ ಬೇಕು. ಸಾಹಿತ್ಯಕ್ಕೆ ಅಷ್ಟು ಗೌರವ ಕೊಟ್ಟಿದಕ್ಕಾಗಿ ಚಕ್ರವರ್ತಿಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಕೃಷ್ಣದೇವರಾಯರ ಕಾಲದಿಂದ ರಾಜಮರ್ಯಾದೆಯೆಲ್ಲ ಆಂಧ್ರರ ಪಾಲಾಗಿ ಹೋಗಿದ್ದುದು ಈಗ ಏನೋ ಅಪ್ಪಿ ತಪ್ಪಿ ಕನ್ನಡದವರಿಗೆ ಒಂದು ಗೌರವ ಸಿಕ್ಕಿದೆ. ಇದು ಕನ್ನಡದ ಗೌರವ ಕನ್ನಡ ಸಾಹಿತ್ಯಕ್ಕೆ ಲಭಿಸಿರುವ ಗೌರವ. ಆದರಿಂದ ಕನ್ನಡಿಗರು ತಪ್ಪದೆ ಈ ಉತ್ಸವ ನಡೆಸಬೇಕೆಂಬುದು ಆ ಸಮಿತಿಯವರ ಉದ್ದೇಶ.

ಸೆಟ್ಟರಿಗೆ ಇಂತಹ ಕಾರ್ಯಗಳಲ್ಲಿ ಬಹಳ ಉತ್ಸಾಹ. ಅವರಿಗೆ ಹತ್ತು ಜನದ ಜೊತೆ ಸೇರಬೇಕು. ಆ ಹತ್ತು ಜನವೂ ತಮ್ಮನ್ನು ಮುಂದುಮಾಡ ಬೇಕು. ಅವರೆಲ್ಲ ಈ ಕಾರ್ಯ ಇಷ್ಟು ಯಶಸ್ವಿಯಾಗಿ ನಡೆಯಲು ಸೆಟ್ಟರು. ಮುಂದಾಳಾಗಿ ನಿಂತುಕೊಂಡದ್ದೇ ಕಾರಣ ಎನ್ನಬೇಕು. ತಾವು ಬಹಳ ದೊಡ್ಡ ವೇದಾಂತಿಗಳಂತೆ “ಉಂಟೆ? ಎಲ್ಲ ಸಿವನ ಚಿತ್ತ. ಮಹಾಜನರ ಇಷ್ಟ… ಏನೋ ಮಿತ್ರರು ನನಗೆ ಕೀರ್ತಿ ಬರಲಿ ಎಂದು ಮುಂದೆ ನಿಲ್ಲಿಸಿ ದರು“ಎನ್ನಬೇಕು.

ಇಂತಹ ಕಾರ್ಯಗಳನ್ನು ಮಾಡುವುದಕ್ಕೆ ನಿಲ್ಲುವ ಮುಂದಾಳುಗಳಿಗೂ ಗೊತ್ತು, ಸೆಟ್ಟರನ್ನು ಮುಂದಾಳು ಮಾಡದಿದ್ದರೆ ಯಾವುದೂ ನಡೆಯುವು ದಿಲ್ಲವೆಂದು. . ಅನೇಕ ವೇಳೆ ಮಿಕ್ಕವರೆಲ್ಲ ನೂರು ರೂಪಾಯಿ ಚಂದಾ ಕೊಡುವುದಕ್ಕೂ ಹಿಂದೆಗೆಯುವಂತಹ ಕಾಲದಲ್ಲಿ, ಸೆಟ್ಟರು ಒಂದು ಸಾವಿರ ರೂಪಾಯಿ ಕೊಟ್ಟು ಪಟ್ಟಿ ಆರಂಭಿಸುತ್ತಿದ್ದುದೂ ಉಂಟು. ಒಂದೊಂದು ವೇಳೆ ಚಂದಾ ಬಂದುದಕ್ಕಿಂತ ಖರ್ಚು ಹೆಚ್ಚಾದಾಗ, ಅಯ್ಯೋ ಪಾಪ, ನೀವೆಲ್ಲ ಎಷ್ಟು ಕಷ್ಟಪಟ್ಟದ್ದೀರಿ! ದುಡ್ಡಿನ ಭಾರವೂ ನಿಮ್ಮ ಮೇಲೇ ಬಿದ್ದರೆ ಉಂಟೆ? ಎಂದು ತಮ್ಮ ಕೈಯ್ಯಿಂದ ಕೊಟ್ಟು ಬಿಡುವರು. ಈ ಎಲ್ಲ ಕಾರಣಗಳಿಂದ ಮುಖ್ಯವಾಗಿ ಇಂತಹ ಮಹಾಜನ ಕಾರ್ಯಗಳಿಗೆ ಸೆಟ್ಟರ ಚೀಲಕ್ಕೆ ಕೈಯಿಟ್ಟು ತೆಗೆದುಕೊಳ್ಳುವಂತಹ ಸ್ವಾತಂತ್ರ್ಯ ಮಹಾಜನಕ್ಕೆ ಸಹಜವಾಗಿ ಉಂಟು ಎಂದು ಅವರು ಒಪ್ಪಿಕೊಂಡಿದ್ದುದರಿಂದ ಯಾವ ಕೆಲಸವೇ ಆಗಲಿ ಸೆಟ್ಟರನ್ನು ಬಿಟ್ಟು ನಡೆಯುತ್ತಿರಲಿಲ್ಲ.

ಈ ಸಲವೂ ಸೆಟ್ಟರು ಮುಂದೆ ನಿಂತು ಎಲ್ಲವನ್ನೂ ಮಾಡಬೇಕೆಂದು ಮಹಾಜನರ ಪ್ರತಿನಿಧಿಗಳು ಅಪೇಕ್ಷಿಸಿದರು. ಚಕ್ರವರ್ತಿಗಳು ಮಾಡಿರುವವ ಅನುಗ್ರದ ಸಾಮಾನ್ಯವಾದುದಲ್ಲ. ಐದು ಸಾವಿರ ರೂಪಾಯಿ ನಗದು, ಒಂದು ಚಂದ್ರಹಾರ, ಆದವಾಥಿಯ ಹಸ್ತಿರ ಎರಡು ಗ್ರಾಮಗಳ ಜದಗೀರು, ಬಿಟ್ಟಿಯಾಯಿತೆ ? ಈಗ ಮಹಾಜನಶೊ ಅದಕ್ಕೆ ತಕ್ಕಂತೆ ಗೌರವ ಮಾಡಬೇಕು. ಐದು ಸಾವಿನ ರೂಪಾಯಿ. ನಗದು, ಒಂದು ಸಾವಿರ ರೂಪಾಯಿನದು ಒಂದು ವಜ್ರದುಂಗುರ, ಇಷ್ಟೂ ಕೊಡಬೇಕು ಎಂದು ಅವರ ಸಂಕಲ್ಪ.

ಸೆಟ್ಟರೂ ಬಂದವರನ್ನು ಬಹಳ ವಿಶ್ವಾಸದಿಂದ ಕಂಡು ಉಪಚಾರ ಮಾಡಿದರು. “ಗೋಪಾಲರಾಯರು ಸರ್ವಪ್ರಕಾರದಿಂದಲೂ ಗೌರವಕ್ಕೆ ಅರ್ಹರು. ಮೊನ್ನೆ ಅರಮನೆಯಲ್ಲಿ ನಾಟಕ ಆದಾಗಲೂ ಆಹಾ! ಆ ಅರ್ಜುನನ ಪಾತ್ರ, ಶಬರಶಂಕರದಲ್ಲಿ ಉದ್ಯೋಗಪರ್ವದಲ್ಲಿ ಆ ಕೃಷ್ಣ ಎರಡೂ ನನ್ನ ಕಣ್ಣಿಗೆ ಕಟ್ಟಿದಂತಿವೆ. ಅದೆಲ್ಲ ಸರಿಯೇ! ಆದರೂ ನೋಡಿ, ನಾಟಕ ಹೆಂಗುಸರು ನೋಡಬಾರದು. ನಾವು ಗಂಡಸರು, ನಾವೇ ಈ ವೇಷಗಳನ್ನು ನೋಡಿ ಭರೇ ಭಲೇ ಎಂದುಬಿಡುತ್ತೇವೆ. ಹೀಗಿರುವಾಗ ಹೆಂಗಸರು ನೋಡಿದರೆ ಕೇಳಬೇಕೆ? ಆದರೆ, ಈ ರಾಜಧಾನಿಯಲ್ಲಿ ನಮಗೆ ತೋರಿದಂತೆ ಮಾತನಾಡುವುದಕ್ಕಾದೀತೇ ? ಅದೆಲ್ಲ ಇರಲಿ ಈಗ ನಮ್ಮಿಂದ ಆಗಬೇಕಾದ ಕೇಲಸ ಏನು? ಚಂದಾಪಟ್ಟಿತಾನೇ? ಏನು ನಿಮ್ಮದೆಲ್ಲ ಒಂದು ಹತ್ತು ಸಾವಿರದ ಖರ್ಚಾದರೆ ಬೇಕಾದಷ್ಟು ಆಯಿತು. ಆಗಲಿ. ನೀವೆಲ್ಲ ಏನೇನು ಹಾಕ ಬೇಕೆಂದಿದ್ದೀರಿ. ಸರಿ. ಪಟ್ಟಿ ಒಂದು ಸಲ ಹಾಗೇ ಸುತ್ತಿಕೊಂಡು ಬರಲಿ. ನಾವು ಇದ್ದೇ ಇದ್ದೇವೆ. ಮತ್ತು ಜನ ಹೆಂಗೆ ಹೋದರೆ ಅದೇ ಹಾದಿ. ಅದಕ್ಕೇನು ?” ಎಂದರು.

ಬಂದವರು ಹಾಗೂ ಹೀಗೂ ಮಾಡಿ ಸೆಟ್ಟರಿಂದ ಇನ್ನೂರಯಿವತ್ತು ಚಂದಾ ಹಾಕಿಸಿಕೊಂಡು, ನೀವೇ ಅವೊತ್ತು ಅಧ್ಯಕ್ಷರಾಗಿರಬೇಕು ಎಂದು ಅವರನ್ನೊಸ್ಪಿಸಿದರು. ಸೆಟ್ಟರಿಗೆ ಒಂದು ತುಂಟ ಯೋಚನೆ ಬಂತು. “ನೀವೇನೋ ನಮ್ಮನ್ನು ಅಧ್ಯಕ್ಷರಾಗಬೇಕು ಎಂದು ಕೇಳಿದ್ದೀರಿ ನೀವು ಕೇಳಿದ ಮೇಲೆ ನಾವೂ ಇಲ್ಲ ಎನ್ನುವುದಕ್ಕಿಲ್ಲ. ಆದರೆ ಒಂದು ಷರತ್ತು. ನೀವು ಆ ದಿನ ಆ ಚಿನ್ನಾಸಾನಿ ಸಂಗೀತ ಇಡಿಸಬೇಕು.” ಎಂದರು. ಎಲ್ಲರಿಗೂ ಸೆಟ್ಟರು ಏಕೆ ಆ ಮಾತನಾಡಿದರು ಎನ್ನುವುದು ತಿಳಿಯಿತು. ಎಲ್ಲರೂ ಕಿಲಕಿಲನೆ ನಕ್ಕರು. ಸೆಟ್ಟರು ತಮಗೂ ಬಂದಿರುವ ನಗು ತಡೆದುಕೊಳ್ಳುತ್ತಾ, ನಡುನಡುವೆ ನಗುವಿನಲ್ಲಿ ಸೇರುತ್ತಾ, “ಅಲ್ರೀ, ಇವರು ಅದೇನಪ್ಪಾ ಬಿರುದು? ನಟರಾಜ ಭಯಂಕರನೋ ? ಅಲ್ಲ ಇನ್ನೇನು- ನಡುವೆ ಯಾರೋ ನಟರಾಜ ಕಂಠೀರವ–ಎಂದು ತಿದ್ದಿದರು. ಹುಂ, ನಟರಾಜ ಕಂಠೀರವರಿಗೆ ಮಹಾ ಜನರು ಅಭಿನಂದನ ಮಾಡುವಾಗ ಹಾಡುವುದಕ್ಕೆ ರಾಜಧಾನಿಯ ಪ್ರಸಿದ್ಧ ಸಂಗೀತಗಾರರೇ ಆಗಬೇಕೋ ಬೇಡವೋ ತಪ್ಪೇನಪ್ಪ?” ಎಂದು ವಿನ್ಯಾಸ ಮಾಡಿದರು… ಸೆಟ್ಟರ ಒಳಮನಸ್ಸಿನಲ್ಲಿ “ಅವಳು ಒಪ್ಪುವುದಿಲ್ಲ… ಈ ಸಭೆ ನಡೆಯುವುದಿಲ್ಲ. ಆಗಲಿ, ಆ ಪ್ರಾರಬ್ಧ ಗೋಪಾಲರಾಯನಿಗೆ ಅವಮಾನ ವಾಗಲಿ.” ಎಂದು ಒಂದು ಆಸೆ. ಹಾಗೂ ಹೀಗೂ ಎಷ್ಟು ಎಳೆದಾಡಿದರೂ ಎಷ್ಟು ಚೌಕಾಶಿ ಮಾಡಿದರೂ ಬಿಡದೆ ಸೆಟ್ಟರು ಪಟ್ಟು ಹಿಡಿದು ಬಂದವರನ್ನೊಪ್ಪಿ ಸಿದರು. ಅವರೂ ದಾಕ್ಷಿಣ್ಯಕ್ಕೆ ಒಪ್ಪಿಕೊಳ್ಳ ಬೇಕಾಯಿತು. ಎಲ್ಲರಿಗೂ ಗೊತ್ತು. ಸೆಟ್ಟರು ಪಟ್ಟು ಹಿಡಿದರೆ. ಜಪ್ಪಯ್ಯಾ ಎಂದರೂ ಬಿಡುವುದಿಲ್ಲ ಎಂದು. ಯತ್ನವಿಲ್ಲವೆಂದು ಒಪ್ಪಿಕೊಂಡರು. ಸೆಟ್ಟರಿಗೆ ಬಹು ದಿನದ ಮಚ್ಚರ ತೀರಿಸಿದಂತೆ ಏನೋ ತೃಪ್ತಿ.

ಸ್ವಾಗತ ಸಮಿತಿಯವರು ಯತ್ನವಿಲ್ಲದೆ, ಇಷ್ಟವಿಲ್ಲದೆ, ನೇರವಾಗಿ ಚಿನ್ನಾ ಸಾನಿ ಮನೆಗೆ ಹೋದರು. ಸೆಟ್ಟರದು ಮೂರು ತೊಟ್ಟ ಮನೆ… ಅವಳದು ನಾಲ್ಕು ತೊಟ್ಟಿ ಮನೆ. ಅವರದು ಮೂರು ಮಹಡಿಯ ಮನೆ. ಇವಳದೂ ಮೂರು ಮಹಡಿಯ ಮನೆ. ಅವಳಿಗೆ ಇವರಿಷ್ಟು ಜನವೂ ಬಂದಿರುವುದು ಕೇಳಿ ಆಶ್ಚರ್ಯವಾಯಿತು. ಗೋಪಾಲರಾಯನಿಗೆ ಅಭಿನಂದನ ಸಭೆ ಮಾಡುವುದಕ್ಕೆ ಇವರೆಲ್ಲ ಸೇರಿರುವರು. ಇವರೆಲ್ಲ ರಾಯನ ಮಿತ್ರರು ಎಂಬುದು ಅವಳಿಗೆ ಗೊತ್ತು. ರಾಯನ ನಾಟಕ ಎಂದರೆ, ಇವರಿಗೆ ರಂಗದ ಮುಂದುಗಡೆ ಸಾಲು ಸಾಲು ಗುತ್ತಿಗೆ. ಅಲ್ಲದೆ, ರಾಯನಿಗೆ ಸಮಯ ಎಂದರೆ ಇವರೆಲ್ಲ ಸಹಾಯ ಲೆಕ್ಕವಿಲ್ಲದೆ. ಮಾಡುವವರು. ಎಂಬುದನ್ನು ಅವಳು ಬಲ್ಲಳು. ಇವರಿಷ್ಟು ಮಂದಿ ಈ ಹೊತ್ತಿನಲ್ಲಿ ಬಂದಿರುವುದು ರಾಯನ ಸಂಬಂಧವಾಗಿಯೇ ಎಂಬುದನ್ನು ಅವಳ ಬುದ್ದಿ ಒಂದು ಕ್ಷಣದಲ್ಲಿ ಗ್ರಹಿಸಿತು. ಇರಲಿ, ಎಂದು ಆವರನ್ನೆಲ್ಲ ಮೂರನೆಯ ತೊಟ್ಟಿಗೆ ಬರಮಾಡಿಕೊಂಡು ತಾನೂ ಬಂದು ಕಾಣಿಸಿಕೊಂಡಳು.

ಅವಳು ವಿನಯವಾಗಿ ಬಂದು ಕೈಮುಗಿದು ಗಂಭೀರವಾಗಿ ಕುಳಿತಿದ್ದರೆ, ಅವಳೆದುರಿಗೆ ಮಾತನಾಡುವುದಕ್ಕೆ ಇವರೊಬ್ಬರಿಗೂ ಧೈರ್ಯವಾಗಲೊಲ್ಲದು. ಅಷ್ಟು ಹೊತ್ತು ಎಲ್ಲರೂ ಮೌನವನ್ನು ಸಾಧಿಸಿದ ಮೇಲೆ, ಅವಳೇ, “ತಾವೆಲ್ಲ ಈ ರ ಗಣ್ಯ ಶ್ರೀಮಂತರು. ಸಂಗೀತ ಸಾಹಿತ್ಯಾದಿ ಕುಶಲ ಕಲೆಗಳಲ್ಲಿ ಅಭಿಮಾನ ಉಳ್ಳವರರು. ತಾವು ಇಲ್ಲಿಯವರೆಗೂ ದಯಮಾಡಿದ್ದು ನಮ್ಮ ಪುಣ್ಯೋದಯ. ಯಾವ ರೀತಿಯಲ್ಲಿ ಏನು ಮಾಡಿ ತಮ್ಮನ್ನು ಮೆಚ್ಚಿಸಬೇಕು ಅಪ್ಪಣೆಯಾಗಲಿ, ದಾಸಿ ಸಿದ್ದವಾಗಿದ್ದಾಳೆ“ಎಂದಳು. ಸರಾಫ್‌ ಕಟ್ಟೆ ಅಮೃತಯ್ಯ ಸೆಟ್ಟರು “ಅಮ್ಮಣ್ಣಿ ಸೆಟ್ಟರು ವರ್ತಕರು ವಿದ್ವಾಂಸರೂ ಎಲ್ಲರೂ ಸೇರಿ ಒಂದು ಸಭೆ ಮಾಡಬೇಕು ಎಂದಿದ್ದೇವೆ. ನಟರಾಜ ಕಂಠೀರವ ಗೋಪಾಲರಾಯರಿಗೆ ಸನ್ಮಾನ ಮಾಡಬೇಕು ಎಂದು ಉದ್ದೇಶ. ಆ ದಿನ ವಿದ್ವಾಂಸರ ಪರವಾಗಿ ನೀವು ದೊಡ್ಡ ಮನಸ್ಸು ಮಾಡಿ ಸಭೆಯಲ್ಲಿ ಒಂದಷ್ಟು ಸಂಗೀತ ನಡೆಸಿಕೊಡಬೇಕು. ಈಗ ಆಗಿರುವುದು ಏನು ಎಂದರೆ, ನಾವು ಎಲ್ಲ ಸಿದ್ಧಮಾಡಿಕೊಂಡಿದ್ದೇವೆ. ನೀವು ಒಪ್ಪಿದರೆ ಸಭೆ ನಡೆಯುತ್ತೆ ಇಲ್ಲದಿದ್ದರೆ ಇಲ್ಲ ಎನ್ನುವ ಘಟ್ಟಕ್ಕೆ ಬಂದಿದೆ. ನಾವು ಸಭೆ ಮಾಡುವ ವಿಷಯ ರಾಜ ಧಾನಿಗೆಲ್ಲ ತಿಳಿದು ಹೋಗಿದೆ. ಈಗ ಏನಾದರೂ ಸಭೆ ನಿಂತರೆ ನಾವು ಮೂರು ಜನವೂ ಪೇಟೆಯಲ್ಲಿ ತಲೆಯೆತ್ತಿಕೊಂಡು ತಿರುಗುವ ಹಾಗಿಲ್ಲ.” ಎಂದರು. ಅವರ ದನಿಯೇ ಅವರಾಡಿದ ಮಾತು ಸತ್ಯ, ಆದರಲ್ಲಿ ಎಳ್ಳಷ್ಟೂ ಕಪಟವಿಲ್ಲ ಎಂಬುದನ್ನು ಹೇಳುತ್ತಿತ್ತು. ಇನ್ನಿಬ್ಬರ ಮೊಕಗಳೂ ನೋಟಗಳೂ ಅವರು ಹೇಳಿದುದನ್ನು ಸತ್ಯವೆಂದು ಸಾಕ್ಷಿ ಕೊಡುತ್ತಿದ್ದುವು.

ಚಿನ್ನಳು ಒಂದು ಗಳಿಗೆಯೊಳಗಾಗಿ ಎಲ್ಲಿಯೋ ತುಂಟುನತ ನಡೆದಿದೆ ಎಂಬುದನ್ನು ಗ್ರಹಿಸಿದಳು. ತನ್ನ ರಾಯನ ಸನ್ಮಾನ ಸಭೆಯಲ್ಲಿ ತಾನು ಹಾಡಿದರೆ ಒಂದು ರೀತಿಯಾಗಿ ಸೋತ ಹಾಗೆ. ಒಪ್ಪದಿದ್ದರೆ ತನ್ನ ರಾಯನಿಗೆ ನಡೆಯುನ ಗೌರವ ನಿಂತು ಹೋಗುತ್ತದೆ. ಏನು ಮಾಡಬೇಕು? ಅವಳು ಕೇಳಿದಳು: “ಅಧ್ಯಕ್ಷರು ಯಾರು?”

“ಇನ್ನು ಯಾರು ? ಯಜಮಾನ್‌ ವೀರಪ್ಪಸೆಟ್ಟರು.?

“ನನ್ನ ಸಂಗೀತ ಇಲ್ಲದಿದ್ದರೆ ಅವರು ಆ ದಿನದ ಅಧ್ಯಕ್ಷತೆ ವಹಿಸು ವುದಿಲ್ಲವಂತೋ?” ಹಾ. ಹಾಗಲ್ಲ. ಹಾಲಿಗೆ ಸಕ್ಕರೆ ಬೆರೆಸಿದ ಹಾಗೆ. ರಾಯರು ನಾಟಕದಲ್ಲಿ ಅದ್ವಿತೀಯರು ಹೇಗೋ ಹಾಗೆ ನೀವೂ ಸಂಗೀತದಲ್ಲಿ. ಆದರಿಂದ ಎರಡೂ ಸೇರಬೇಕು ಎಂದು ಅವರ ಇಷ್ಟ?

“ಆಗಲಿ. ಆ ದಿನ ನನ್ನ ಸಂಗೀತ ಇಟ್ಟುಕೊಳ್ಳಿ. ಆದರೆ ಒಂದು ಷರತ್ತು.?

“ಏನು“

“ನೀವು ನನ್ನಿಂದ ಚಂದಾ ತೆಗೆದುಕೊಳ್ಳಬೇಕು. ಅವೊತ್ತು ನನಗೆ ಒಂದು ವೀಳ್ಯ ವಿನಾ ಇನ್ನೇನೂ ಕೊಡಬಾರದು.”

ಅಮೃತಯ್ಯಸೆಟ್ಟರು ಆವಾಕ್ಕಾದರು. ಅವರು ಇವಳಿಗೆ ಐದುಸಾವಿರ ವಾದರೂ ಕೊಡಬೇಕಾದೀತು ಎಂದು ಐದರಿಂದ ಹತ್ತರವರೆಗೆ ಸಿದ್ಧವಾಗಿದ್ದರು. ಅವರು ತಾವು ಕಿವಿಯಲ್ಲಿ ಕೇಳಿದ ಮಾತು ನಂಬುವುದು ಕಪ್ಟವಾಯಿತು. ಮಿತ್ರರ ಮುಖ ನೋಡಿ, ತಮ್ಮ ವಿಸ್ಮಯವನ್ನು ತಮ್ಮ ಕಣ್ಣುಗಳೂ ಮುಖ ಮುದ್ರೆಯೂ ಸ್ಪಸ್ಟವಾಗಿ ತೋರುತ್ತಿರಲು “ನೀವು ಹೇಳಿದುದು ಅರ್ಥವಾಗ ಲಿಲ್ಲ.” ಎಂದರು.

ಚಿನ್ನಳು ನಕ್ಕು ಹೇಳಿದಳು : “ತಾವು ಆದಿನ ಏನೇನು ಮಾಡ ಬೇಕೆಂದಿದ್ದೀರಿ ? ಒಂದು ಊಟ, ಒಂದು ಸಂಗೀತ್ಕ ಒಂದು ಮಾನಪತ್ರ, ಒಂದು ಅಭಿಮಾನ ಸೂಚಕವಾದ ಗುರುತು. ಇಷ್ಟಕ್ಕೆ ಎಷ್ಟು ಖರ್ಚು ಮಾಡಬೇಕೆಂದಿದ್ದೀರಿ ? “

“ಹೌದು ನೀವು ಹೇಳಿದ್ದಷ್ಟೆ ! ಅಭಿಮಾನ ಸೂಚಕವಾಗಿ ಒಂದು ವಚ್ರದುಂಗುರ ಕೊಡಬೇಕು ಎಂದಿದ್ದೇವೆ.”

“ವಜ್ರದುಂಗುರ ತಾವು ಕೊಡಿ. ಜೊತೆಗೆ ಒಂದು ಥೋಡಾ ಕೊಡಿ. ಸೆಟ್ಟರು ಏನು ಚಂದಾ ಹಾಕಿದ್ದಾರೆ ?“

“ಇನ್ನೂರೈವತ್ತು.”

ಚಿನ್ನಳು ಬಾಗಿಲಕಡೆಗೆ ತಿರುಗಿ ನೋಡಿದಳು. ಆಳು ಓಡಿಬಂದಳು. ಅವಳ ಕಿವಿಯಲ್ಲಿ ಏನೋ ಹೇಳಿ, ತಾನು ಅವರೊಡನೆ ಮಾತನಾಡುತ್ತಾ ಕುಳಿತಳು.

ಜಿನದತ್ತಪ್ಪನವರು ಲೋಕಾಭಿರಾಮವಾಗಿ ಮಾತನಾಡುತ್ತ “ಆ ದಿನ ಉತ್ಥಾನದ್ವಾದಶಿಯ ದಿನ, ನಿಮ್ಮೆದುರಿಗೆ ಹೇಳುವ ಮಾತಲ್ಲ. ಅಭಿನಯ ಅದ್ಭುತವಾಗಿತ್ತು. ಅವೊತ್ತಿನಿಂದೆ ಏನಾದರೂ ಮಾಡಿ ನಿಮ್ಮ ಅಷ್ಟಪದಿ ಅಭಿನಯ ನೋಡಬೇಕು ಎನ್ನಿಸಿಬಿಟ್ಟಿದೆ. ಅಬ್ಬಾ, ಅವೊಸ್ತಿನ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಹಾಗಿದೆ.?

“ಸಾಹುಕಾರರೇ ತಮ್ಮುಂಥಾವರ ಅನುಗ್ರಹನಿಂದ ಆನ್ನ ಬಟ್ಟೆಗೆ ನೇರವಾಗಿದೆ. ನಮಗಿನ್ನೇನು ಕೆಲಸ? ಕಲಿಯುವುದು, ಕಲಿಯುವುದು. ಅವಕಾಶವಾದಾಗ, ನಮಗೆ ಬಂದಿರುವುದನ್ನು ದೇವರಿಗೆ ಒಪ್ಪಿಸುವುದು. ”

“ಏನು ಮಾಡುವುದು? ನೀವು ಎಲ್ಲೂ ಸಭೆಗಳಿಗೆ ಬರುವುದಿಲ್ಲ. ಇಲ್ಲದಿದ್ದರೆ, ನಿಮ್ಮ ಅಷ್ಟಪದಿ ಅಭಿನಯ ಎಂಟು ದಿನ ಎಲ್ಲಾದರೂ ಇಡಿಸಬಹುದು.?

“ಈಗ ಸಂಗೀತ ಕಚೇರಿ ಇಡಿಸಿದ್ದೀರಲ್ಲ. ಹಾಗೆಯೇ ಒಂದವಕಾಶ ಸಿಕ್ಕಿದಾಗ ಅದೂ ಆಗಲಿ.“

“ಏನೋ ಎಷ್ಟು ದಿನಕ್ಕೋ? ನಮಗೆ ಅದನ್ನು ನೋಡುವುದು ಪಣೆಯಲ್ಲಿ ಬರೆದಿದೆಯೆ: ಇಲ್ಲವೇ ಇಲ್ಲವೋ 1?

“ಈ ದಾಸಿಗೆ ಗರ್ವವಿದೆ. ಆದರೂ ತಮ್ಮಂಥಾ ಮಹನೀಯರು ದಯಮಾಡಿಸಿ ಅಭಿನಯಮಾಡೇ ಎಂದರೆ ಮಾಡುವುದಿಲ್ಲ ಎನ್ನುವುದ ಕ್ಕಾದೀತೆ? ……….“

ಅಷ್ಟರಲ್ಲಿ ದಾಸಿಯರು ಐವರು ಹೋಗಿದ್ದ ಆಳಿನ ಹಿಂದೆ ಬಂದರು. ಆಳು ತಟ್ಟೆಯನ್ನು ತಂದು ಚಿನ್ನಳ ಮುಂದಿಟ್ಟಳು. ಅದರಲ್ಲಿ ಐವರು ದಾಸಿಯರು ತಾವು ತಂದಿದ್ದ ಒಂದೊಂದು ಹಣದ ಥೈಲಿಯನ್ನೂ ಇಟ್ಟರು. ಚಿನ್ನಳು ಅದನ್ನು ಮುಟ್ಟ ವಿನಯದಿಂದ “ದವ ನನ್ನ ಚಂದ. ದಾಸಿಯ ಚಂದಾ ಎಂದೇ ಬರೆದುಕೊಳ್ಳಬೇಕು-“ಎಂದು ಕೈಮುಗಿದಳು.

ಸಾಹುಕಾರರು ಮೂರು ಜನರೂ ಒಬ್ಬರ ಮುಖ ಒಬ್ಬರು ನೋಡಿದರು. ಏನೋ ಹೇಳುವುದಕ್ಕೆ ಹೊರಟರು. ಚಿನ್ನಳು ನಗುನಗುತ್ತಾ ನಿವಾರಿಸಿ “ಇದು ನಮ್ಮ ದೇವರ ಪೂಜೆ, ಒಪ್ಪಿಸಿಕೊಳ್ಲಿರಿ. ಇದಿರಲಿ. ಇನ್ನೊಂದು ಅರಿಕೆಯುಂಟು. ಒಂದುವೇಳೆ ಸೆಟ್ಟರೇನಾದರೂ ಕಾರಣಾಂತರದಿಂದ ಅಂದು ಅಧ್ಯಕ್ಷತನವನ್ನು ವಹಿಸದೇ ಹೋದರೆ, ಆ ಅಧ್ಯಕ್ಷತೆಯನ್ನು ನಮ್ಮ ವಿದ್ಯಾಗುರು ಭರತಾಚಾರ್ಯ ಗೆ ಕೊಡಬೇಕು.”

ಅವರಿಗೆ ಏನು ಹೇಳಬೇಕೋ ತೋರದೆ ಆಗಬಹುದು ಆಗಬಹುದು ಎಂದರು. ಆವರಿಗೆ ಏನು ಹೇಳುವುದಕ್ಕೂ ) ತೋರದೆ ಹೋಗಿತ್ತು. ಬಾಯಿ ಕಟ್ಟಿದಂತಾಗಿತ್ತು. ಅವರು ಹೊರಡುವುದರಲ್ಲಿರುವುದನ್ನು ಕಂಡು ಚಿನ್ನಳು ಚಿನ್ನದ ತಟ್ಟೆಯಲ್ಲಿ ಚಿನ್ನದ ತಗಡಿನಂಸಿದ್ದ ವೀಳೆಯದೆಲೆ, ಚಿನ್ನದ ರೇಖು ಒತ್ತಿದ್ದ ಉಜ್ಜು ಆಡಿಕೆ, ಇವುಗಳ ವೀಳೆಯವನ್ನು ತರಿಸಿ ತಾನೇ ಒಂದೊಂದು ತಟ್ಟೆಯಲ್ಲಿ ಒಬ್ಬೊಬ್ಬರಿಗೆ ಕೊಟ್ಟಳು. ಅವರೂ ಮರ್ಯಾದೆಯಾಗಿ ಎರಡೆಲೆ ಎರಡಡಕೆ ತೆಗೆದುಕೊಂಡು, ಅವಳನ್ನು ಬೀಳ್ಳೊಂಡರು. ದಾಸಿಯರು ಹಣದ ಚೀಲಗಳನ್ನು ತಂದು ಗಾಡಿಯಲ್ಲಿಟ್ಟರು. ಚಿನ್ನಳು ಬಾಗಿಲವರೆಗೂ ಬಂದು ಅವರನ್ನು ಕಳುಹಿಸಿಕೊಟ್ಟಳು. ದಾರಿಯಲ್ಲಿ ಹೋಗುತ್ತ ಜಿನದತ್ತಪ್ಪನವರು “ಏನು ಸೆಟ್ಟರೇ ? “ಎಂದರು. ಅವರು “ಈ ಸೋತವರು ಯಾರು ಎಂದು ಯೋಚಿಸುತ್ತುದ್ದೇನೆ” ಎಂದರು. ರಂಗಯ್ಯನವರು “ಸೆಟ್ಟಿ ಏಕೆ ಹೇಳಿದನೋ? ಸೂಳೆ ಏಕೆ ಒಪ್ಪಿದಳೋ ? ಎರಡೂ ನಾನು ಕಾಣೆ. ಅದೇನಾದರೂ ಆಗಲಿ. ಈ ಸನ್ಮಾನ ಸಭೆ ಅದ್ಭುತವಾಗಿ ನಡೆದುಹೋಗುತ್ತೆ. ಚಿನ್ನಾಸಾನಿ ಸಂಗೀತ. ಬೇಕು ಎಂದರೆ ಚಕ್ರವರ್ತಿಗಳನ್ನೇ ಕರೆದು ತರಬಹುದು. ಇವೊತ್ತೆಲ್ಲೊ ನರೀ ಮೊಕ ನೋಡಿರಬೇಕು ನಾವು.” ಎಂದರು.

ಸನ್ಮಾನ ಸಭೆಗೆ ಎಂಟು ದಿನವಿಂದಲೂ ಬೇಕಾದ ಸಿದ್ಧತೆಗಳು ನಡೆದಿವೆ. ದೊಡ್ಡ ಮಂಟಪ ಅದಕ್ಕಾಗಿ ಸಿದ್ಧವಾಗಿದೆ. ಎಲ್ಲರೂ ಕರೆಯೋಲೆಗಳಿಗೆ ಕೈನೀಡುವವರೇ! ಊರುಊರಗಳಿಂದ ವಿಜಯದಶಮಿಗೆ ಮೊಗಚುವ ಹಾಗೆ ಜನ ಮೊಗಚುತ್ತಿದೆ. ನಾಳೆಯ ದಿನ ಸಭೆ ಎನ್ನುವಾಗ ಅಮೃತಯ್ಯ ಸೆಟ್ಟರಿಗೆ ವೀರಪ್ಪ ಸೆಟ್ಟರಿಂದ ಒಂದು ಕಾಗದ ಬಂತು. ಅದರಲ್ಲಿ ವಿವರಗಳೂ ಹೆಚ್ಚಾಗಿಲ್ಲ. ಶ್ರೀಮಾನ್‌ ರಾಜೇಶ್ವರ ರಾಜಮಾನ್ಯ ಸರಾಫ್‌ ಕಟ್ಟೆ ಅಮೃತಯ್ಯ ಸೆಟ್ಟರಿಗೆ-ಯಜಮಾನ್‌ ವೀರಪ್ಪ ಸೆಟ್ಟಿಯ ಶರಣಾರ್ಥಿಗಳು. ಅದಾಗಿ, ಈ ದಿನ ಗೋಲ್ಕಂಡಕ್ಕೆ ಈ ಕೂಡಲೇ ಹೋಗಬೇಕಾದ ಕಾರ್ಯಗೌರವ ಒದಗಿದೆಯಾಗಿ ನಾನು ಊರು ಬಿಟ್ಟು ಹೊರಟುಬಿಟ್ಟಿದ್ದೇನೆ. ತಮಗೆ ಮೊದಲೇ ಹೇಳಲಿಲ್ಲ ಎಂದು ಕೋಪಮಾಡಿಕೊಳ್ಳಬೇಡಿ. ಕ್ಷಮಿಸಿ. ಇಂತಿ ಶರಣಾರ್ತಿಗಳು ವೀರಪ್ಪ.”

ಅಮೃತಯ್ಯಸೆಟ್ಟರು ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಗಾಬರಿಪಟ್ಟು, ರಂಗಯ್ಯನವರ ಬಳಿಗೆ ಹೋದರು. ಇಬ್ಬರೂ ಜಿನದತ್ತಪ್ಪನವರ ಬಳಿಗೆ ಹೋದರು. ಇವರಿಬ್ಬರ ಗಾಬರಿ ನೋಡಿ ಅವರಿಗೂ ಗಾಬರಿಯಾ ಯಿತು. ಕಾಗದವನ್ನು ನೋಡಿ ಒಂದು ರೆಪ್ಪೆ ಹೊಡೆಯುವಷ್ಟು ಹೊತ್ತು ಕಣ್ಣು ಮುಚ್ಚಿಕೊಂಡಿದ್ದು “ಸೆಟ್ಟರೇ, ಅವೊತ್ತು ಸೋತವರು ಯಾರು? ಎಂದು ಕೇಳಿದಿರಿ. ಸೋತವರು ಸೆಟ್ಟರು. ಗೆದ್ದವರು ಚಿನ್ನಾಸಾನಿ.” ಎಂದರು.

“ಹಾಗೆಂದರೆ”

“ಪಾಪ! ನಿಮಗೇನಾದರೂ ಗೊತ್ತಾಗುತ್ತದೆಯೇ? ಸೆಟ್ಟರು ಕೊಟ್ಟ ಚೆಂದಾಕ್ಕೆ ಒಂದು ಹತ್ತರಷ್ಟು ಕೊಟ್ಟಾಗಲೇ ನನಗೆ ಏನೋ ಅನುಮಾನ ವಾಯಿತು. “ಸೆಟ್ಟಿಗೆ ಕೊಟ್ಟಳು ಸೂಳೆ ಬತ್ತಿ’ ಎಂದುಕೊಂಡೆ. ನಿಜ ವಾಯಿತು.”

ರಂಗಯ್ಯನವರು “ಒಪ್ಪಿದೆ. ಆ ಸೆಟ್ಟಿ ತನಗೆ ಅವಮಾನವಾಯಿತು ಎಂತಲೇ ಇವೊತ್ತು ಚಕ್ರಕೊಟ್ಟದ್ದು. ಅದಿರಲಿ. ಅವಳು ಹೀಗಾಗುತ್ತದೆ ಎಂದು ಆಗಲೇ ಲೆಕ್ಕಹಾಕಿ ಭರತಾಚಾರ್ಯರನ್ನು ಅಧ್ಯಕ್ಷರನ್ನು ಮಾಡಿ ಎಂದು ಆಗಲೇ ಹೇಳಿದ್ದಾಳಲ್ಲ, ಆ ಬುದ್ಧಿ ನೋಡಿ.” ಎಂದರು. ಮೂವರೂ ನಗುನಗುತ್ತಾ ಗಾಡಿ ಹಾಕಿಕೊಂಡು ಚಿನ್ನಳ ಮನೆಗೆ ಹೋದರು. ಅವರ ಗುರುಗಳು ಭರತಾಚಾರ್ಯರೂ ಅಲ್ಲಿಯೇ ಇದ್ದರು. ಮೂವರೂ ಅವಳ ಬುದ್ಧಿಯನ್ನು ಪ್ರಶಂಸಿಸುತ್ತಾ, ಅವಳ ಮುಖವಾಗಿ ಭರತಾ ಚಾರ್ಯರನ್ನು ಮರುದಿನ ಅಧ್ಯಕ್ಷತೆ ವಹಿಸಬೇಕೆಂದು ಪ್ರಾರ್ಥಿಸಿದರು. ಅವರು “ಈ ಚೇಷ್ಟೆಗಳೆಲ್ಲ ದುಡ್ಡಿನವರ ಪಾಲಪ್ಪಾ! ನಾವೇನಿದ್ದರೂ ಶಾಸ್ತ್ದವರು. ಸರಸ್ವತೀ ಕಡೆಯವರಿಗೆ ಯಾವಾಗಲೂ ಕಡೆಯ ಹಾರ. ಮೊದಲನೆಯ ಹಾರ ಲಕ್ಷ್ಮಿ ಕಡೆಯವರಿಗೆ” ಎಂದರು.

ಚಿನ್ನಳು ಮುದ್ದಾಗಿ ಕೈಮುಗಿದು, “ಅಯ್ಯಾ ಅವರೆ, ರಾಜಧಾನಿಯ ವರ್ತಕ ಮಂಡಲಿಯವರು ಮೊದಲನೆಯ ಹಾರ ತಾವು ಹೇಳಿದ ಹಾಗೆ ಲಕ್ಷ್ಮೀ ದೇವಿಯ ಭಕ್ತರಿಗೆ ಮೀಸಲು ಮಾಡಿಕೊಂಡು ಬಂದರು. ಆದರೆ ತಮ್ಮ ಮಗಳು ಒಂದಕ್ಕೆ ದತ್ತು ಕೊಟ್ಟು ಅದನ್ನು ಕೊಂಡುಕೊಂಡಳು. ತಾವು ಒಪ್ಪಲೇಬೇಕು. ನಾಳೆ ನನ್ನ ಸಂಗೀತ ಸಭೆಯಲ್ಲಿ ಹೇಗಾಗುತ್ತದೆ ಎನ್ನುವುದನ್ನು ನೋಡ ಬೇಡವೇ?”ಎಂದಳು. ಆಚಾರ್‍ಯರು ತಲೆದೂಗಿ “ಹಾಗಾದರೆ ಚಿನ್ನಮ್ಮನ ಕೈವಾಡ ಇದು? ಆಗಲಿ. ಇನ್ನೂ ಏನು ಇದೆಯೋ ಯಾರು ಬಲ್ಲರು?” ಎಂದರು.

ಮರುದಿನ ಗೊತ್ತಾದ ಹೊತ್ತಿಗೆ ಸರಿಯಾಗಿ ಸಭೆ ಸೇರಿತು. ಭರತಾ ಚಾರ್ಯರು ಅಧ್ಯಕ್ಷರಾದರು. ಚಿನ್ನಾಸಾನಿಯು ಅಭೂತಪೂರ್ವವಾಗಿ, ಆದ್ಭುತ ವಾಗಿ ಹಾಡಿದಳು. ಸಭಿಕರೊಬ್ಬೊಬ್ಬರೂ ತಮ್ಮ ಆನಂದವನ್ನು ಹಿಡಿಯ ಲಾರದೆ ಬಿದ್ದು ಒದ್ದಾಡಿಹೋದರು. ಆಚಾರ್ಯನಂತೂ ಆನಂದಾಶ್ರುಗಳನ್ನು ಧಾರಾಳವಾಗಿ ಕರೆದನು. ಕೊನೆಗೆ ಸನ್ಮಾನದ ಕಾಲವು ಬಂದಾಗ ಗೋಪಾಲ ರಾಯನಿಗೆ ಸಭೆಯವರಿತ್ತ ವಜ್ರದುಂಗುರ, ರತ್ನಖಚಿತವಾದ ಥೋಡಾ, ಉತ್ತಮ ಶಾಲುಜೋಡಿ, ಇವುಗಳನ್ನು ಆಚಾರ್ಯಮುಖವಾಗಿ ಒಪ್ಪಿಸಿದರು. ರಾಯನು ಒಂದು ಗಳಿಗೆ ಹಾಗೆ ಅವುಗಳನ್ನ ಧರಿಸಿಕೊಂಡು ನಿಂತಿದ್ದು, ಗಸ್ತಿನಿಂದ ಸಭೆ ಯವರಿಗೆ ವಂದನೆ ಮಾಡಿ, “ವಿಜಯನಗರದ ಸತ್ಪ್ರಜೆಗಳೇ, ಸಂಗೀತ ಸಾಹಿತ್ಯ ಕಲಾ ಕೋವಿದರೆ, ನಾಟಕಾಭಿಮಾನಿಗಳೇ, ತಾವೆಲ್ಲರೂ ನನ್ನ ಗುಣಲೇಶವನ್ನೇ ಪರ್‍ವತ ಪ್ರಾಯವಾಗಿ ಗಣಿಸಿ ಇಷ್ಟು ಅದ್ಭುತವಾದ ಮರ್ಯಾದೆ ಮಾಡಿದ್ದೀರಿ. ಇದು ನನ್ನ ಮೇಲಿನ ಅಭಿಮಾನವೋ? ಅಥವಾ ರಾಜಾನುಗ್ರದಕ್ಕೆ ಪಾತ್ರನಾದ ನನ್ನನ್ನು ಗೌರವಿಸುವ ನೆಪದಲ್ಲಿ ತಾವು ಪ್ರದರ್ಶಿಸುತ್ತಿರುವ ರಾಜ ಭಕ್ತಿಯೋ ನಾನು ಹೇಳಲಾರೆ, ಅಂತೂ ಈ ಗೌರವದಿಂದ ನಾನು ಬಹು ಮಾನಿತನಾಗಿದ್ದೇನೆ. ಈ ಬಹುಮಾನಕ್ಕೆ ಅರ್ಹನಾಗಲು ನಾನೂ ಪ್ರಯತ್ನ ಮಾಡುತ್ತೇನೆ. ಇವೇ ಸಂದರ್ಭದಲ್ಲಿ ತಮ್ಮ ಅಪ್ಪಣೆ ಪಡೆದು ಒಂದು ಕೆಲಸ ಮಾಡಬೇಕೆಂದಿದ್ದೇನೆ. ಮಳೆಯ ನೀರು ಹಳ್ಳದಲ್ಲಿ ತುಂಬಿ ಹರಿದು, ನದಿಗೆ ಬಿದ್ದು ಸೇರಿ ಸಮುದ್ರಕ್ಕೆ ಸೇರಿ ತೀರ್ಥವಾಗುತ್ತದೆ. ಅದರಂತೆ ತಮ್ಮ ಆಭಿಮಾನವೆಂಬ ಮೋಡ ಕರೆದಿರುವ ಈ ಸದ್ವೃಷ್ಟಿರೂಪ ಬಹುಮಾನವನ್ನು ಈ ಹಳ್ಳ ಹೊತ್ತುಕೊಂಡು ಹೋಗಿ ಈ ಮಹಾನದಿಗೆ ಒಪ್ಪಿಸಿ ತನ್ಮೂಲಕವಾಗಿ ತಮ್ಮ ಈ ದಿನದ ಉತ್ಸವವೆಲ್ಲ ಶಾರದಾಪೂಜೆಯಾಗುವಂತೆ ಮಾಡುವುದಕ್ಕೆ ಅಪ್ಪಣೆಯಾಗಬೇಕು“ಎಂದು ಪ್ರಾರ್ಥನೆ ಮಾಡಿಕೊಂಡರು.

ಸಭೆಯು ಆಗಲಿ ಎಂದಿತು. ರಾಯನು ಮುಂದೆ ಬಂದು ತನಗೆ ತೊಡಿಸಿದ್ದ ಥೋಡಾವನ್ನೂ, ಉತ್ತಮವಾದ ಶಾಲುಗಳನ್ನೂ ಭರತಾಚಾರ್ಯರಿಗೆ ಒಪ್ಪಿಸಿ ದನು. ಜನರು ಸಂಭ್ರಮದಿಂದ ಕೈ ಚಪ್ಪಾಳೆ ತಟ್ಟಿದರು. ಸಭೆಗೆ ಸಭೆಯೇ ಆ ಕಾರ್ಯವನ್ನೊಪ್ಪಿತು. ರಾಯನ ಕಾರ್ಯವನ್ನು ಕಂಡು ಮೆಚ್ಚದವರು ಆ ಸಭೆಯಲ್ಲಿರಲಿಲ್ಲ. ಆದರೂ ಎಲ್ಲರಿಗಿಂತ ಹೆಚ್ಚಾಗಿ ಆ ಕಾರ್ಯವನ್ನು ಒಪ್ಪಿಕೊಂಡು “ಭಲೆ ರಾಯ, ಭಲೆ” ಎಂದು ಒಂದು ಹೃದಯ ಅವನಿಗೆ ತನ್ನನ್ನು ಎರಡನೆಯ ಸಲ ಒಪ್ಪಿಸಿಕೊಂಡಿತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...