ಅಧ್ಯಾಯ ಒಂದು
೧
ವಿಜಯ ವಿಠ್ಮಲ ದೇವಸ್ಥಾನದಲ್ಲಿ ಇಂದು ಗದ್ದಲವೋ ಗದ್ದಲ. ಕಾರ್ತಿಕ ಶುದ್ಧ ದ್ವಾದಶಿ. ಸ್ವಾಮಿಗೆ ಇಂದು ಬೃಂದಾವನೋತ್ಸವ. ಚಿನ್ನದ ಬೃಂದಾವನದಲ್ಲಿ ಸ್ವಾಮಿಯನ್ನು ಬಿಜಮಾಡಿಸಿದ್ದಾ ರೆ… ರಂಗಮಂಟಪದಲ್ಲಿ ಇಂದು ಸ್ವಾಮಿಯ ಸನ್ನಿಧಾನದಲ್ಲಿ ವಿದ್ಯಾನಗರದ ಪ್ರಸಿದ್ಧ ನರ್ತಕಿ ಚಿನ್ನಾ ಸಾನಿಯ ಅಭಿನಯ.
ಚಿನ್ನಾಸಾನಿಯು ಚಕ್ರವರ್ತಿಗಳ ಆಸ್ಚಾ ನದಲ್ಲಿ ನರ್ತಕಿಯರಿಗೆಲ್ಲ ಶಿರೋಮಣಿಯಂತಿದ್ದಳು. ಅವಳನ್ನು ಕಂಡವರು“ಎಲ್ಲೋ ಅಪ್ಸರಸೆ ಶಾಪದಿಂದ ಬಂದಿದ್ದಾಳೆ. ಇಲ್ಲದಿದ್ದರೆ ಈ ರೂಪ ಮಾನನಿಯರ ಗರ್ಭದಲ್ಲಿ ಬರುವುದೂ ಉಂಟೆ ?” ಎನ್ನುವರು. ಅವಳ ಗಾನವನ್ನು ಕೇಳಿದವರು. “ಇವಳು ಮಾನನಿಯಲ್ಲ. ನಿಜವಾಗಿಯೂ ಯಾವಳೋ ಗಂಧರ್ವಾಂಗನೆ ಮಾನವಿಯ ವೇಷದಲ್ಲಿ ವಿದ್ಯಾನಗರದ ಚಕ್ರವರ್ತಿಗಳ ಅದೃಷ್ಟದ ರೂಪವಾಗಿ ಬಂದಿದ್ದಾಳೆ.” ಎನ್ನುವರು. ‘ ಅವಳ ನರ್ತನವನ್ನು ಕಂಡವರು “ಇವಳು ಮಾನವಿಯಲ್ಲ, ಗಂಧರ್ವಳೂ ಅಲ್ಲ. ಯಾವಳೋ ವಿದ್ಯಾಧರಿಯಿರಬೇಕು; ನರ್ತನ ವಿದ್ಯಾ ದೇವಿಯಿರಬೇಕು. ಅವಳು ಸೂಳೆಯ ಜಾತಿ. ಇಲ್ಲದಿದ್ದರೆ ಅವಳ ವಿದ್ಯೆಗೆ ಅವಳಿಗೆ ಪಾದಪೂಜೆ ಮಾಡಬೇಕು” ಎನ್ನುವರು. ಅವಳು ಹಾಡುವುದು ಚಕ್ರವರ್ತಿಯ ಆಸ್ಥಾನದಲ್ಲಿ ದೇವಸ್ಥಾನಗಳಲ್ಲಿ. ಅಂಗಡಿಗಳಲ್ಲಿ ರತ್ನಗಳನ್ನು ರಾಶಿರಾಶಿಯಾಗಿ ಸುರಿದುಕೊಂಡು ವ್ಯಾಪಾರ ಮಾಡುವ ಧನಿಕ ರಾಜರು ಹಡಗು ವ್ಯಾಪಾರ ಮಾಡುವ ವಣಿಗ್ರತ್ನಗಳು ಸಾಮಂತ ರಾಜರು, ಕೂಡ ಅವಳ ಸಂಗೀತ ತಾಫೆ ಮಾಡಿಸಬೇಕು ಎಂದು ಎಷ್ಟೋ ಪ್ರಯತ್ನ ಪಟ್ಟಿದ್ದರು. ಹತ್ತು ಸಾವಿರ ಕೊಡುತ್ತೇವೆಂದರೂ ಅವಳು ಒಪ್ಪಲಿಲ್ಲ, ಜನದ ಮಾತು ನಿಜವಾದರೆ ಅವಳ ಆ ಮೂರು ಮಹಡಿಯ ಮನೆಯ ಕೆಳಗೆ ಇರುವ ನೆಲ ಮಾಳಿಗೆಯಲ್ಲಿ ಪೆಟ್ಟಿಗೆ ಪೆಟ್ಟಿಗೆ ಚಿನ್ನ ರನ್ನ ತುಂಬಿರುವಾಗ, ಅವಳಿಗೆ ಈ ಹಣದಿಂದ ಆಗಬೇಕಾದುದೇನು ?
ಚಿನ್ನಾಸಾನಿ ತಂಗಿ ರನ್ನಾಸಾನಿ. ಆ ಅಕ್ಕತಂಗಿಯರು ಎದುರಿಗೆ ಬಂದು ನಿಂತುಕೊಂಡರೆ ಹೆತ್ತ ತಾಯಿಗೂ ಕೂಡ ಅಕ್ಕ ಯಾರು? ತಂಗಿ ಯಾರು? ಎಂದು ಗೊತ್ತುಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇನು? ಅವರೇ ಕನ್ನಡಿಯ ಎದುರು ನಿಂತಾಗ ಅಕ್ಕತಂಗಿಯರಲ್ಲೇ ಅವರೇ ಅಕ್ಕ ಯಾರು? ತಂಗಿ ಯಾರು? ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ.
ಅಕ್ಕ ತಂಗಿಯರಿಬ್ಬರೂ ವಿದ್ಯಾವತಿಯರು. ಭರತ ಶಾಸ್ತ್ರ ದಲ್ಲಿ ಅದ್ವಿತೀ ಯರು. ” ಮಾರ್ಗದೇಶಿಗಳೆರಡರಲ್ಲೂ ಪ್ರನೀಣೆಯರು. ವೀಣೆ ಹಿಡಿದು ಕುಳಿತರೆ, ಅಕ್ಕನಿಗೆ ತಂಗಿ, ತಂಗಿಗೆ ಅಕ್ಕ ಜೋಡಿಯೇ ಹೊರತು ಇನ್ನೊಬ್ಬರು ಅವರ ಸಮ ಎನ್ನುವಿದಿರಲಿ, ಅವರ ಹತ್ತಿರವೂ ಸುಳಿಯುವಂತ್ತಲ್ಲ. ಅದರಿಂದಲೇ ಹಂಪೆಗೆ ಹಂಪೆಯೇ ಅವಳ ಸಂಗೀತ ನರ್ತನಗಳೆಂದರೆ ಪ್ರಾಣ ಬಿಡುತ್ತಿದ್ದುದು. ಅವಳ ಕಚೇರಿಯೆಂದರೆ ಬಿಜಾಪುರ ಬಿದರೆ ಚಂದ್ರನಿರಿ ಗಳಿಂದ ಕೂಡ ಜನ ಬಂದುಬಿಡುವರು.
ನರ್ತನದಲ್ಲಂತೂ ಇನ್ನೊಂದು ವಿಶೇಷ. ಅಕ್ಕನು ನರ್ತನಮಾಡುವಾಗ ತಂಗಿಯು ಹಿಮ್ಮೇಳದಲ್ಲಿ ಕೊಳಲು ಊದುವಳು. ಒಮ್ಮೊಮ್ಮೆ ಅಕ್ಕನು ರಾಧೆಯಾಗಿ ತಂಗಿಯು ಕೃಷ್ಣನಾಗಿ ಜಯದೇವ ಮಹಾಕವಿಯ ಅಷ್ಟಪದಿ ಗಳನ್ನು ಅಭಿನಯಿಸುವರು. ಆ ಅಭಿನಯವನ್ನು ಕಂಡವರು “ಜಯದೇವ ನೇನಾದರೂ ಇದನ್ನು ಕಂಡಿದ್ದರೆ, ತಾನು ಅಷ್ಟಪದಿಗಳನ್ನು ಬರೆದುದು ಸಾರ್ಥಕವಾಯಿತು ಎಂದು ಪರಮಾನಂದಪಡುತ್ತಿದ್ದನು” ಎನ್ನುವರು. ಪಾಮರರಿರಲಿ, ಪಂಡಿತರಾದವರು ಕೂಡ ಆ ಅಭಿನಯವನ್ನು ಕಂಡು ತಲ್ಲೀನರಾಗಿ ಮೈಮರೆಯುವರು. ಒಮ್ಮೆ ಅಭಿನಯವನ್ನು ಕಂಡವರು ಇನ್ನೊಮ್ಮೆ ಕಾಣುವುದಕ್ಕೆ ಅವಕಾಶ ಸಿಕ್ಕೀತೆ ಎಂದು ತಪಸ್ಸುಮಾಡುವರು.
ಆ ಚಿನ್ನಳ ಗುಣವೂ ಚಿನ್ನ ಎಂದು ರಾಜಧಾನಿಯೆಲ್ಲಾ ಬಲ್ಲುದು. ಮಾಘ ಮಾಸವು ಬಂತೆಂದರೆ ಶಿವರಾತ್ರಿಯ ದಿನ ವಿರೂಪಾಕ್ಷನಿಗೆ ರುದ್ರಾಕ್ಷಿಯ ಮಂಟಪದ ಉತ್ಸವ. ಶಿವರಾತ್ರಿಯ ಉತ್ಸವಕ್ಕೆ ಹದಿನೈದು ದಿನ ಮೊದಲಿಂದ ರುದ್ರಯಾಗಗಳು. ಶಿವರಾತ್ರಿಯ ದಿನ ಪೂರ್ಣಾಹುತಿ. ಮರುದಿನ ತುಂಗಾತೀರದಲ್ಲಿ ಭಾರಿಯ ಸಮಾರಾಧನೆ. ಏನು ಮಹಾ ಎಂದು ಕರುಬುವವರೂ ಕೂಡ ಹೀಗೆ ಮಾಡಲು ಇತರರಿಂದ ಸಾಧ್ಯವಿಲ್ಲ ಎನ್ನುವರು. ಫಾಲ್ಗುಣಮಾಸದಲ್ಲಿ ಕಾಮದೇವೋತ್ಸವ. ಚಿನ್ನಳ ಕಾಮದೇವನು ಮೆರ ವಣಿಗೆ ಹೊರಟರೆ ಉತ್ಸವ ಒಂದು ಗಾವುದ. ಮೈತುಂಬ ಒಡವೆ ಇಟ್ಟು ಕೊಂಡು, ಕೆಂಪು ನಿರಾಜಿಯ ಸೀರೆ ಉಟ್ಟು ಕೊಂಡು ಅವಳು ಮುಂದೆ ಆರು ಚಕ್ರದ ಗಾಡಿಯಲ್ಲಿ ಕುಳಿತು ಕಾಮದೇವನ ಧ್ವಜವನೋ ಎಂಬಂತೆ ಹೊರಡು ವಳು. ಹಿಂದೆ ಹೆಣ್ಣು ಬೊಂಬೆಗಳಿಂದೆ ನಿದ ಕುದುರೆಯ ಮೇಲೆ ಕಾಮದೇವನು ಕಬ್ಬಿನ ಬಿಲ್ಲನ್ನು ಹಿಡಿದು ಕುಳಿತಿದ್ದರೆ ಅವನೆದುರಿಗೆ ಅಂತಹುದೇ ಬೊಂಬೆಗಳಿಂದ ಆದ ಮದ್ದಾನೆಯ ಮೇಲೆ ರತಿಯು ಕಬ್ಬಿನ ಬಿಲ್ಲು ಹಿಡಿದು ಕುಳಿತಿರುವಳು. ಆ ರತೀಮನ್ಮಥರ ಅಲಂಕಾರಕ್ಕೆ ಇಟ್ಟಿದ್ದ ಒಡವೆಗಳೆಲ್ಲ ಕಳ್ಳನ ಕೈಗೆ ಕೊಟ್ಟರೆ ಲಕ್ಷರೂಪಾಯಿಗೆ ಮೋಸವಿಲ್ಲ. ಅಂತೂ ಆ ಉತ್ಸವ ನೋಡುವುದಕ್ಕೆ, ರತೀಮನ್ಮಥರ ದರ್ಶನಕ್ಕಿಂತ ಹೆಚ್ಚಾಗಿ ಚಿನ್ನರನ್ನರ ದರ್ಶನಕ್ಕಾಗಿ ಜನ ಮೊಗಚುವುದು. ದಶಮಿಯಿಂದ ಹುಣ್ಣಿಮೆಯ ವರೆಗೆ ಉತ್ಸವವೋ ಉತ್ಸವ. ಗೋಲ್ಕಂಡ ಬಿಜಾಪುರಗಳ ಸುಲ್ತಾನರೂ ಕೂಡ ವೇಷ ಮರೆಸಿಕೊಡು ಬಂದು ಆ ಉತ್ಸವವು ಮುಗಿಯುವವರೆಗೂ ಅಲ್ಲಿ ಇದ್ದು ಹೋಗುವರು ಎಂದು ವದಂತಿ.
ಚೈತ್ರಮಾಸದಲ್ಲಿ ರಾಮೋತ್ಸವವೂ ಹಾಗೆಯೇ ಅದ್ಭುತವಾಗಿ ನಡೆ ಯುವುದು. ಚೋಳಮಂಡಲದ ವಿದ್ವಾಂಸರು ಬಂದು ಶ್ರೀರಾಮನ ಮುಂದೆ ಹಾಡುವರು. ಆದರೆ ಅವರು ನಿಜವಾಗಿಯೂ ಬಯಸುತ್ತಿದ್ದುದು ಚಿನ್ನರನ್ನರ ಅನುಗ್ರಹವನ್ನೇ ಹೊರತು ಶ್ರೀರಾಮನ ಅನುಗ್ರಹವನ್ನಲ್ಲ. ಆಂಧ್ರ ಕರ್ನಾಟ ಚೋಳ ಕೇರಳ ಮಹಾರಾಷ್ಟ್ರ ಪ್ರಾಂತಗಳ ಹಿಂದೂ ವಿದ್ವಾಂಸರಿರಲಿ, ಷಾಹಿ ಅರಸರ ಮೆಚ್ಚಿನ ಗವಾಯಿಗಳೂ ಕೂಡ ಚಿನ್ನಾಸಾನಿಯ ರಾಮೋತ್ಸವಕ್ಕೆ ಆಹ್ವಾನ ಬಂದರೆ ಅದೊಂದು ಅನುಗ್ರಹನೆಂದು ಭಾವಿಸುವರು. ಚಕ್ರವರ್ತಿ ಗಳ ಅಹ್ವಾನವನ್ನು ತಿರಸ್ಕರಿಸಿದ ಕೊಬ್ಬಿದ ವಿದ್ವಾಂಸರೂ ಚಿನ್ನಾಸಾನಿಯ ಆಹ್ವಾನವನ್ನು ತಿರಸ್ಕರಿಸುತ್ತಿರಲಿಲ್ಲ. ಅವರನ್ನೇ ಕೇಳಿದರೆ, “ಚಕ್ರವರ್ತಿ ಗಳು ಜಂಭಕ್ಕೆ ಮಾಡಿಸುತ್ತಾರೆ. ಅವರ ಮುಂದೆ ಹಾಡಿದರೆ ಕೀರ್ತಿ. ಚಿನ್ನಾಸಾನಿಯಂತದ ವಿದ್ಯಾವಂತೆಯ ಮುಂದೆ ಹಾಡಿದರೆ ವಿದ್ಯಾದೇವತೆ ಒಪ್ಪುತ್ತಾಳೆ” ಎನ್ನುವರು.
ಷಾಹಿ ನವಾಬರು ಚಿನ್ನಾ ಸೋದರಿಯರ ಗಾನನರ್ತನಗಳಿಂದ ಸಂತೋ ಹಿಸಬೇಕೆಂದು ಆಹ್ವಾನವನ್ನು ನೀಡಿದರು. ಐದು ದಿನಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಹೇಳಿ ಕಳುಹಿಸಿದರು. ಅವಳು ಒಪ್ಪಲಿಲ್ಲ. ಚಕ್ರವರ್ತಿಗಳಿಗೇ ಮನವಿ ಕಳುಹಿಸಿದರು. ಅವರೂ ಆಕೆಯನ್ನು ಕರೆಸಿಕೊಂಡು “ಹೋಗಿಬಾ ಚಿನ್ನ, ನಮ್ಮ ಆಸ್ಥಾನದ ಕೀರ್ತಿ ಬೆಳೆಯಲ್ಲಿ” ಎಂದರು. ಚಿನ್ನಳು ಚೊಕ್ಕವಾಗಿ ಕೈಮುಗಿದು “ಮಹಾಪ್ರಭು. ವಿಜಯ ನಗರದ ಚಕ್ರವರ್ತಿಗಳಿಗೆ ಜಯವಾಗಲಿ ಎಂದು ಮುಗಿದ ಕೈ ಮತ್ತೊಬ್ಬರಿಗೆ ಮುಗಿಯುವುದು ಸಾಧ್ಯವಿಲ್ಲ” ಎಂದಳು… ಅವಳ ಅಭಿಮಾನ, ಆ ಬಿಂಕ ಆಗತ್ತು, ಎಲ್ಲವೂ ಚಕ್ರವರ್ತಿಗಳಿಗೆ ಬಹುಮೆಚ್ಚಾಗಿ “ಹುಚ್ಚಿ, ಇದು ವಿದ್ಯಾ ಸ್ಥಾನ. ಗೋಲ್ಕಂಡ ಲಕ್ಷ್ಮಿಸ್ಥಾನ ಎನ್ನುತ್ತಾರೆ. ಗೋಲ್ಕಂಡದ ನವಾಬನಿಗೆ ವಜ್ರದ ಗಣಿಯಿದೆ. ನಿನಗೂ ವಜ್ರದ ಅಂಗಿ ತೊಡಿಸಿ ಕಳುಹಿಸುತ್ತಾನೆ. ಹೋಗಿ ಬಾ” ಎಂದೆರು. ಚಿನ್ನಳು ನಗುನಗುತ್ತಾ ಎಲ್ಲರನ್ನೂ ಕಳುಹಿಸುವಂತೆ ಅರಸನಿಗೆ ಸನ್ನೆಮಾಡಿ ಏಕಾಂತದಲ್ಲಿ ಕುಳಿತ ಅರಸನ ಬಳಿ ಸಾರಿ, “ಹುಚ್ಚು ದೊರೆ, ಆ ತುರುಕನಿಗೆ ಬೇಕಾದ್ದು ನನ್ನ ಸಂಗೀತವಲ್ಲ, ನಿನ್ನ ಚಿನ್ನ.” ಎಂದು ಸೋಟೆ ತಿವಿದಳು. ಅಂದಿನಿಂದ ಚಕ್ರವರ್ತಿಗಳು ಆ ಸುದ್ದಿ ಮತ್ತೆ ಎತ್ತಲಿಲ್ಲ. ಅಂತೂ ರಾಜಧಾನಿಯಲ್ಲೆಲ್ಲಾ ಈ ಸುದ್ದಿ ಹರಡಿ ಚಿನ್ನಳ ಕೀರ್ತಿ ತೆಂಗಿನಮರದಷ್ಟು ಎತ್ತರ ಇದ್ದುದು ಮುಗಿಲು ಮುಟ್ಟಿತ್ತು.
೨
ದೇವಸ್ಥಾನದಲ್ಲಿ ಜನ ಕಿಕ್ಕಿರಿದು ತುಂಬಿದೆ, ಕಲ್ಯಾಣ ಮಂಟಪವೆಲ್ಲ ಅಲಂಕಾರವಾಗಿದೆ. ಕಂಭಕಂಭಕ್ಕೂ ಹೂವಿನ ಶೃಂಗಾರವಾಗಿ ಸ್ವಾಮಿಯನ್ನು ಇದಿರುಗೊಳ್ಳುವುದಕ್ಕೆ ನಿಂತಿರುವ ದೇವಪುರುಷರಂತಿವೆ. ಹೂವಿನ ತೋರಣಗಳು ಹೂವಿನ ಹಂಜರ, ಎಲ್ಲವೂ ಸೇರಿ, ಪುಪ್ಪಸಮುದ್ರದಂತಿದೆ. ಸಣ್ಣ ಗಾಳಿಯಾಡಿ ಆ ಹೂವು ಅಲೆದರೆ ಕ್ಷೀರಸಾಗರದಲ್ಲಿ ಏಳುವ ಅಲೆಗಳಂತೆ ತೋರುತ್ತದೆ. ಅದರ ನಡುವೆ ಒಂದು ಹೂವಿನ ಮಂಟಪ. ಏಳೆಡೆಯ ಹಾವು ಹೆಡೆಯನ್ನು ಬಿಚ್ಚಿ ಕೊಂಡು ತೆಕ್ಕೆ ಯನ್ನು ಹಾಕಿಕೊಂಡು ಕುಳಿತಿರುವ ಆಕಾರದಲ್ಲಿ ಮಾಡಿದೆ. ಕೊಂಚದೂರದಲ್ಲಿ ನಿಂತುಕೊಂಡು ನೋಡಿದರೆ, ಆ ಹೂವಿನ ಹಾವು ಪುರಾಣಗಳಲ್ಲಿ ಹೇಳುವ ಶೇಷನಂತೆ ಕಂಡು, ಕಲ್ಯಾಣಮಂಟಪವೇ ಕ್ರೀರಸಾಗರ, ಆ ಹಾವೇ ಶೇಷ, ಎಂಬ ನಂಬಿಕೆಯನ್ನು ಹುಟ್ಟಸುವಂತಿವೆ. ಅಲಂಕಾರವೆಲ್ಲ ಆಗಿರುವುದು ಜಾಜಿಯೆ ಹೂವಿನಿಂದ. ಜಾಜಿ ಹೂವಿನ ಆ ಸುವಾಸನೆ ಅಲ್ಲೆಲ್ಲಾ ಹಬ್ಬಿಹೋಗಿದೆ. ಅಷ್ಟೇನು? ಹೂವಿನ ಪರಿಮಳ ಅಲ್ಲಿ ಕೆನೆ ಕಟ್ಟಿರುವಂತೆಯೂ, ಆ ಮಂಟಪದಲ್ಲಿ ಒಂದು ಸಲ ಹೋಗಿ ಸುತ್ತಿಕೊಂಡು ಬಂದರೆ ಮೈಗೆಲ್ಲಾ ಹತ್ತಿ ಕೊಳ್ಳು ವಂತೆಯೂ ಇದೆ.
ಜೊತೆಗೆ ಮುದ್ದಾದ ಊದು ಕಡ್ಡಿಗಳು ಕಂಭಕಂಭದಲ್ಲಿಯೂ ಇದ್ದು ಸಜ್ಜನರ ಮನಸ್ಸಿನಿಂದ ಹೊರಡುತ್ತಿರುವ ಶುಭಾಶಯಗಳ ಮಾಲೆಯಂತೆ ಬಿಳಿಯ ಧೂಮವನ್ನು ಚೆಲ್ಲುತ್ತಾ ಆ ಹೂವಿವ ವಾಸನೆಗೆ ಇನ್ನೊಂದು ಸುವಾಸನೆಯನ್ನು ಬೆರಸಿವೆ. ಅಲ್ಲಲ್ಲಿ ಪಚ್ಚೆತೆನೆಯ ವಾಸನೆ, ಪಾರಿಜಾತದ ಪರಿಮಳ, ಸಂಪಗೆಯ ಸೊಗಡು ತಾಳೆಯ ಗಂಧ, ತಾವರೆಯ ಆಮೋದ ಗಳನ್ನು ತೆರೆತೆರೆಯಾಗಿ ಚೆಲ್ಲುತ್ತಾ ಮನೋಹರವಾದ ಸುಗಂಧದ ಮೋಡಗಳನ್ನೆಬ್ಬಿಸುತ್ತಿವೆ. ಇದರ ಜೊತೆಗೆ ಶ್ರೀಗಂಧದ ನೀರು ಚುಮಕಿಸಿ ನೆಲವೆಲ್ಲಾ ಗಂಧಮಯವಾಗಿದೆ. ಆಲ್ಲಿ ಸ್ವಾಮಿಯು ಬಿಜಮಾಡಿಸುವೆಡೆಯಲ್ಲಿ ನೆಲವೆಲ್ಲ ಗಂಧದಿಂದ ಸಾರಣೆಯಾಗಿ ಕುಂಕುಮಕೇಸರಿ, ಪಚ್ಚಕರ್ಪೂರ, ಪುನುಗು ಕಸ್ತೂರಿಗಳ, ರಂಗವಲ್ಲಿಯಿಂದ ಶೋಭಿತವಾಗಿ, ತಾವು ಇರು ವೆಡೆಯಿಂದಲೇ ದೂರಕ್ಕೆ ತಮ್ಮ ಇರುವಿಕೆಯನ್ನು ತಿಳಿಸುವ ದೂತನೆಂಬಂತೆ ತಮ್ಮ ಪರಿಮಳವನ್ನು ಬೀಸುತ್ತಿವೆ. ಒಟ್ಟಿನಲ್ಲಿ ಒಂದು ಸ್ವರ್ಗವಿರುವಾದರೆ ಅದಿಂದು ಆ ಕಲ್ಯಾಣಮಂಟಪಕ್ಕಿಳಿದು ಬಂದಿದೆ.
ಮಂಟಪದಲ್ಲಿ ಸ್ವಾಮಿಯ ಸ್ಥಾನದ ಎಡಗಡೆ ರಾಜ ಸ್ತ್ರೀಯರೇ ಮೊದಲಾದ ಗಣ್ಯರಾದ ಮಹಿಳಾ ವರ್ಗವು ಮಂಡಿಸಿದೆ. ಬಲಗಡೆ, ರಾಜ ಪುರುಷರು, ವಿದ್ವಾಂಸರು, ಸೆಟ್ಟಿಗಳು, ಮೊದಲಾದವರಿಲ್ಲ ಕುಳಿತಿದ್ದಾರೆ. ಸ್ತ್ರೀಯರು ತೊಟ್ಟಿರುವ ಭೂಷಣಗಳ ಕಾಂತಿಯು ಆ ತುಪ್ಪದ ದೀಪಗಳ ಮುಂದೆ ಪ್ರಭೆಯಲ್ಲಿ ಸಣ್ಣ ಸಣ್ಣ ಕಾಮನ ಬಿಲ್ಲುಗಳನ್ನು ಚೆಲ್ಲುತ್ತಿದೆ. ಇತ್ತಕಡೆ ಪುರುಷ ಧರಿಸಿರುವ ಆಭರಣಗಳ ಕಾಂತಿಯು ಆ ಸ್ತ್ರೀ ಮಂಡಲದ ಕಡೆಯಿಂದ ಎದ್ದಿರುವ ಕಾಮನಬಿಲ್ಲುಗಳು ಇತ್ತಲೂ ಪ್ರತಿಫಲಿಸಿ ಒಂದರೊಳ ಗೊಂದು ಬೆರೆದುಹೋದಂತೆ ತೋರುತ್ತಿವೆ. “ಮಂಟಪದ ಈಚೆ ಸಾವಿರಾರು ಜನರು ನಿರೀಕ್ಷೆಯಿಂದ ಕಾದಿದ್ದಾರೆ.
ಸುಮಾರು ಒಂದು ಪ್ರಹರವಾಗಿರಬಹುದು. ದೇವರು ನಗರೋತ್ಸವ ವನ್ನು ಮುಗಿಸಿಕೊಂಡು ಹಿಂತಿರುಗಿದ್ದಾರೆ. ಚಿನ್ನದ ಬೃಂದಾವನವನ್ನು ಹೂವಿನ ಮಂಟಪದಲ್ಲಿಟ್ಟು ಅದರ ಮುಂದೆ ಸ್ವಾಮಿಯನ್ನು ಕುಳ್ಳಿರಿಸಿದ್ದಾರೆ. ಚಿನ್ನದ ಕಡ್ಡಿಗಳು ಪಚ್ಚೆಯ ಎಲೆಗಳೂ ತೆನೆಗಳೂ ಉಳ್ಳ ತುಲಸಿಯ ಗಿಡವು ಒಂದು ಮೊಳ ಎತ್ತರವಾಗಿ ಹರಡಿ, ಸುಮಾರು ಎರಡು ಮೊಳ ಎತ್ತರವಾಗಿರುವ ಬೆಳ್ಳಿಯ ಬೃಂದಾವನದಲ್ಲಿ ಮೆರೆಯುತ್ತಾ ಸ್ವಾಮಿಯ ಮೇಲೆ ಬಾಗಿದೆ. ಸುತ್ತಲಿನ ದೀಪಗಳ ಕಾಂತಿಯಲ್ಲಿ ಪಚ್ಚೆಯ ಎಲೆಗಳೂ ತೆನೆಗಳೂ ತಮ್ಮ ಹಸುರು ಕಾಂತಿಯನ್ನು ಕಕ್ಕುತ್ತಾ ಶ್ಯಾಮಸುಂದರನನ್ನು ಕರೆಯುವಂತಿವೆ ಜಿಗಿಜಿಗಿಸುವ ವಸ್ತ್ರಭೂಷಣಗಳ ಕಾಂತಿಯು ದೇವರ ಪ್ರತಿಮೆಯ ಸುತ್ತಲೂ ಅವರಿಸಿಕೊಂಡಿದ್ದು ಮಹಾವಿಷ್ಣುವಿನ ಸುತ್ತಲೂ ಸಹಜವಾಗಿ ವ್ಯಾಪ್ತವಾಗಿರುವ ಯೋಗಮಾಯೆಯಿದ್ದಂತಿದೆ. ಹತ್ತಿರದಿಂದ ನೋಡಿದರೂ ಇದು ವಿಗ್ರಹ, ಇದು ಒಡವೆ, ಇದು ವಸ್ತ್ರ, ಇದು ಹೂ ಎಂದು ಹೇಳುವಂತಿಲ್ಲ. ಆದರೂ ಭಕ್ತ ಜನ ಆ ತೇಜೋರಾಶಿಯನ್ನು ಕಂಡು ಪರಮಾನಂದದಿಂದ ಮೈಮರೆಯುತ್ತಾರೆ.
ಸ್ವಾಮಿಯು ಒಳಗೆ ಬಿಜಮಾಡಿ ಬಂದು ಕಲ್ಯಾಣ ಮಂಟಪದಲ್ಲಿ ಶೇಷಾಸನದಲ್ಲಿ ಮುಹೂರ್ತ ಮಾಡಿದರು. ನಿವಾಳಿಕೆಯ ಆರತಿಯಾಗಿ ಆಗಬೇಕಾದ ಉಪಚಾರಗಳೆಲ್ಲ ಆದಮೇಲೆ ಅಭಿನಯದ ಆರಂಭವಾಯಿತು. ಮೃದಂಗದವನು ಛಾಪು ಹೊಡೆದು ಮಂದ್ರಧ್ವನಿಯಿಂದ ಮಂಟಪವನ್ನು ತುಂಬಿದರು. ತಂಬೂರಿಯವನು ಶ್ರುತಿಯನ್ನು ಮೀಟಿ ಝೇಂಕಾರ ಮಾಡಿ ಎಲ್ಲರನ್ನೂ ಮೆಚ್ಚಿಸಿದನು. ಗೋಟು ವಾದ್ಯದವನು ಒಂದು ವರಸೆ ಎಳೆದು ಎಲ್ಲರನ್ನೂ ತಲೆದೂಗಿಸಿದನು. ಅಭಿನಯಕಾರ್ತಿಯರು ಹಿಮ್ಮೇಳದನರೊಡನೆ ಬಂದು ಸ್ವಾಮಿಯ ಎದುರು ನಿಂತರು. ಮಂಗಳಾರತಿಯಾಗಿ ಮೇಳದವರಿಗೆ ಆರತಿಯನ್ನು ಕೊಟ್ಟುದಾಯಿತು. ಚಿನ್ನೆರನ್ನೆಯರು ನಾಟೀ ರಾಗದಲ್ಲಿ ನಾಂದಿಯನ್ನು ಮಾಡಿ ಸಭಾಪತಿಗಳಿಗೆ ಕೈಮುಗಿದು, ಸಭೆಗೆ ಪುಷ್ಪಾಂಜಲಿ ಯನ್ನೆತ್ತಿ ಸಭಾ ಪೂಜೆಯನ್ನು ನೆರವೇರಿಸಿದರು. ಚಿನ್ನೆಯು ರಾಧೆಯ ವೇಷವನ್ನು ಧರಿಸಿದ್ದಾಳೆ. ನೀಲವಸನವನ್ನುಟ್ಟು ನೀಲರತ್ನದ ಒಡವೆಗಳನ್ನು ಧರಿಸಿ, ನೀಲ ಕಬರೀಧಾಮವನ್ನು ಗೊಲ್ಲತಿಯ ಹಾಗೆ ತುರುಬು ಕಟ್ಟ, ನೀಲ ಮಣಿಯ ಬೈತಲೆಯ ಬಟ್ಟು ಹಣೆಯ ಮೇಲೆ ಮೆರೆಯುತ್ತಿರಲು, ಎಣ್ಣೆಗೆಂಪಿನ ಜರತಾರಿಯ ಕತ್ತರಿ ಬೆನ್ನಿನ ಕುಪ್ಪಸವನ್ನು ತೊಟ್ಟಿದ್ದಾಳೆ. ಹಸುರು ಬಣ್ಣದ ಪಟ್ಟೆಗಳ ಜರತಾರಿಯ ಷರಾಯಿ ಅಂದವಾಗಿ ಕಡೆದಿಟ್ಟಿರುವಂತಿರುವ ಕಾಲು ಗಳನ್ನು ಮೆರೆಯುತ್ತಿರಲು ಪಾದದಲ್ಲಿ ಅಂದುಗೆಗಗ್ಗರ ಗೆಜ್ಜೆಪಿಲ್ಲಿಗಳು ಒಂದರೊಡನೊಂದು ಮಾತನಾಡುವಂತೆ ಜಲಿಜಲಿಯೆನ್ನುತ್ತಿರಲು, ಬಿಗಿಯಾಗಿ ಕಟ್ಟಿರುವ ಚಲ್ಲಣವೂ ಕಾಂಚೀದಾಮವೂ ರವಕೆಯೂ ದೇಹದಲ್ಲಿ ಉಬ್ಬಿರುವ ಭಾಗಗಳನ್ನು ಇನ್ನಷ್ಟು ಉಬ್ಬಿಸಿ, ಹಳ್ಳದಲ್ಲಿರುವ ಭಾಗಗಳನ್ನು ಇನ್ನಷ್ಟು ಮುಚ್ಚಿ ಮೆರೆಯುವಿರಲು ಅಭಿನಯ ಶಾಸ್ತ್ರ ದ ಅಧಿದೇವಿಯೆಂಬಂತೆ ನಿಂತಿದ್ದಾಳೆ. ರನ್ನೆಯು ಪುರುಷ ವೇಷವನ್ನು ಧರಿಸಿ ಕೃಷ್ಣನಾಗಿ ಕೊಳಲು ಕೈಯಲ್ಲಿ ಹಿಡಿದು, ತಲೆಯ ಮೇಲೆ ನವಿಲುಗರಿಯನ್ನು ಸೆಕ್ಕಿಸಿಕೊಂಡು ವಿಟಶೇಖರನಾದ ತರುಣನಂತೆ ನಿಂತಿದ್ದಾಳೆ. ಆ ಕಾಶಿಯ ಪೀತಾಂಬರ, ಆ ಹೊದೆದಿರುವ ಜರತಾರಿಯ ಉತ್ತರೀಯ, ತೊಟ್ಟಿರುವ ಆ ಕವಚ, ಆ ನಡುವಿಗೆ ಸುತ್ತಿರುವ ಪಟ್ಟಾಕತ್ತಿ, ಇವು ನೋಟಕರ ಕಣ್ಮನಗಳನ್ನು ಸೆಳೆಯುತ್ತಿವೆ. ನೀಲಿಯ ಬೆಳಕಿನಲ್ಲಿ ಕೃಷ್ಣನು ನಿಂತಿದ್ದಾನೆ.
ಆತನ ಮುರಳಿಯು ಒಮ್ಮೆ ನುಡಿಯಿತು. ಒಂದು ತಾನ ನುಡಿದು ಸೇರಿದ್ದವರನ್ನು ತನ್ನ ಕರೆಯಿಂದ ಮೈ ಜುಮ್ಮೆನ್ನಿಸಿತು. ಆ ರಾತ್ರಿಯಲ್ಲಿ, ಜನರೆಲ್ಲ ಗಟ್ಟಿಯಾಗಿ ಉಸಿರು ಬಿಟ್ಟರೆ ಸಭಾ ಮರ್ಯಾದೆಯು ಕೆಟ್ಟೀತು ಕೇಳಬೇಕಾಗಿದ್ದುದು ಕೇಳಿಸದೆ ಹೋದೀತು ಎಂದು ನಿಶ್ಶಬ್ದವಾಗಿರುವ ಸಮಯದಲ್ಲಿ, ಕೊಳಲಿನ ಆ ಕರೆ ವ್ಯರ್ಥವಾಗಲಿಲ್ಲ. ಕೃಷ್ಣನ ಕೊಳಲು ಸುಮ್ಮನಾಗುತ್ತಿದ್ದ ಹಾಗೆಯೇ ಅವನ ಮೇಲೆ ಬಿದ್ದಿದ್ದ ನೀಲಿಯ ಬೆಳಕು ಮಾಯವಾಯಿತು. ನೀಲಿಯ, ತೆಳ್ಳನೆಯ ಪೊರೆಯಂತಿರುವ, ಒಂದು ಪರದೆಯು ಮೇಲಿನಿಂದ ಇಳಿಯುವ ಮೋಡದಂತೆ ಇಳಿದು ಆ ಕಳ್ಳ ಕೃಷ್ಣನನ್ನು ಮರೆಮಾಡಿತು.
ಬೆಳಕು ರಾಧೆಯ ಕಡೆಗೆ ತಿರುಗಿತು. ಕೊಳಲನ್ನು ಕೇಳಿದ ರಾಧೆಯು ಒಮ್ಮೆ ಪುಳುಕಿತಳಾದಳು. ಏನೋ ಧ್ಯಾನದಲ್ಲಿದ್ದು ಎಚ್ಚೆತ್ತರವಳಂತೆ ದೊಡ್ಡ ದಾಗಿ ಕಣ್ಣು ಬಿಟ್ಟು ನೋಡಿದಳು. ಪ್ರಿಯವಸ್ತುವನ್ನು ಹುಡುಕುವವಳಂತೆ ಕಣ್ಣನ್ನು ಅತ್ತ ಇತ್ತ ತಿರುಗಿಸಿ ಹುಡುಕಿ ನೋಡಿದಳು. ಇಷ್ಟು ಹೊತ್ತು ಒಂದೊಂದು ಸ್ವರವನ್ನು ಮುಟ್ಟುತ್ತಾ ಅಲ್ಲೊಂದು ಇಲ್ಲೊಂದು ಸ್ವರ ಅನುಸ್ವರಗಳನ್ನು ನುಡಿಯುತ್ತಾ ಇದೆ ಇಲ್ಲ ಎಂಬಂತಿದ್ದ ಗೋಟುವಾದ್ಯವು ಮೊಳಗಿತು. ಮೃದಂಗವು ನುಡಿಯಿತು. ಎರಡೂ ಮಸಲತ್ತು ಮಾಡಿವೆ ಯೆಂಬಂತೆ ಆ ದೊಡ್ಡ ತಂಬೂರಿಯ ದೊಡ್ಡ ಶ್ರುತಿಯನ್ನೂ ಮುಳುಗಿಸಿ ಆ ಸಭಾಂಗಣದಲ್ಲೆಲ್ಲಾ ತಾವೇ ತಾವಾಗಿ ನುಡಿದವು. ರಾಧೆಯು ಹಾಡಿದಳು;-
ಕಣ್ಮರೆಯಾದನೆ ಕೃಷ್ಣಾ
ಕಣ್ಣಿಗೆ ಕಾಣದೆ ಕಾಡುವನೇ ||ಪ||
ಎಲ್ಲಿ ಹುಡುಕುವೆನೋ ?
ಯಾರ ಕೇಳುನೆನೋ? –॥ಅ. ಪ॥
ಕೃಷ್ಣನು ಪೂಸಿದ ಮೈಗಂಧದ
ವಾಸನೆಗಾಶಿಸಿ ಓಡೋಡಿ ಬರುವ ॥
ಗಂದಿಗ ಗಾಳಿಯ ಕೇಳಲೇ ||೧||
ಆತನ ಮುದ್ದಿನ ಮುಖವನು ನೋಡಲು
ಅಲ್ಲಿಂ ಕದ್ದೋಡಿ ಬರುವ ತಂಗದಿರನ ।
ಕಿರಣ ಕನ್ನೆಯ ಕೇಳಲೇ ॥೨॥
ವಿಹ್ವಲೆಯಾದ ರಾಧೆಯು ಒದ್ದಾಡುತ್ತಿದ್ದಾಳೆ. ಆಕೆಯ ಮನಸ್ಸಿನ ಚಾಂಚಲ್ಯವನ್ನು ಕಣ್ಣು, ಮೊಕ, ಮೈ, ದನಿ ಎಲ್ಲವೂ ತೋರಿಸಿ, ಆ ಚಾಂಚಲ್ಯವನ್ನು ಎಲ್ಲರ ಹೃದಯದಲ್ಲೂ ಬಿತ್ತಿದೆ. ಎಲ್ಲರೂ ಹೌದು ಕೃಷ್ಣನ ಕೊಳಲು ಕೇಳಿಸಿತು ಇಲ್ಲಿಯೇ ಎಲ್ಲಿಯೋ ಮರೆಸಿಕೊಂಡು ಆಟವಾಡ ತ್ತಿದ್ದಾನೆ ಆ ಕಳ್ಳ ಎನ್ನುವ ಹಾಗೆ ಆಗುತ್ತಿದೆ. ಆಯಿತು.
ರಾಧೆಯು ಒಂದು ಗಳಿಗೆ ಮೌನವಾಗಿದ್ದು, ರೆಪ್ಪೆ ಹೊಡೆಯುವಷ್ಟು ಕಾಲ ಸೊಪ್ಪಗೆ, ಹಾಗೆ ನಿಂತಿದ್ದು, ಮತ್ತೆ ಸಂಭ್ರಮದಿಂದ ಹೊರಟಳು. ಮತ್ತೆ ವಾದ್ಯಗಳು ಮೊಳಗಿದುವು. ರಾಧೆಯು ಸುತ್ತಮುತ್ತಲಿನವರನ್ನೆಲ್ಲ ಕೇಳಿದಳು: “ನಮ್ಮ ಕೃಷ್ಣನ ಕಂಡಿರೇನಮ್ಮ! ” ಎಂದು ಕೇಳುವ ಆಕೆಯ ಪ್ರಶ್ನೆಯನ್ನು ಕೇಳಿದವರೆಲ್ಲ ನಾವು ಕೃಷ್ಣನನ್ನು ಕಂಡಿದ್ದೆವು. ಅಲ್ಲವೆ? ಅವನ ಕೊಳಲು ಕೇಳಿಸಿತಲ್ಲಾ! ಎಂದು ಅತ್ತಿತ್ತ ನೋಡುವಂತಾಯಿತು. ಕಪ್ಪನೆ ಕುರುಳಿನ ಶ್ಯಾಮಸುಂದರನನ್ನು ಕಂಡಿರಾ ಎಂದಾಗ ಎಲ್ಲರೂ ಹೌದು ಹೌದು ಎಲ್ಲಿಯೋ ನೋಡಿದ್ದೆವು. ತಡೆ. ಎಲ್ಲಿ ಎಂದು ತಲೆ ಕೆರೆದುಕೊಳ್ಳುವಂತಾ ಯಿತು. ಕೊನೆಗೆ ಹೀಗೆಯೇ ಕುರುಳು, ಹಣೆ, ಕಣ್ಣು, ಮೂಗು, ಕೆನ್ನೆ ಮೊಕಗಳನ್ನು ವರ್ಣಿಸಿ ವರ್ಣಿಸಿ ಕೇಳಿ, ಅತ್ತ ಇತ್ತ ಎತ್ತಿತ್ತಲೂ ಬೇಕಾದ ಹಾಗೆ ಸುತ್ತಿ ರಾಧೆಯು ಬಳಲಿ ಬೆಂಡಾದಳು. ಮೊಕದಲ್ಲಿ ಬೆವರು ಮೋಡ ದಿಂದ ಇಳಿಯುವ ಮಳೆಯಂತೆ ಹನಿಹನಿಯಾಗಿ ಇಳಿಯಿತು. ಕೈಕಾಲುಗಳು ಬಳಲಿ ಸೊಪ್ಪಾದುವು. ಅಲ್ಲಿಯೇ, ಮುಂದೆ ಹೋಗಲಾರದೆ, ಮಗ್ಗುಲಲ್ಲಿಯೇ ಇದ್ದ ಮರವನ್ನು ಆಶ್ರಯಿಸಿ, ಅವಲಂಬಿಸಿ, ನಿಂತು ಆಯಾಸದಿಂದ ಕಣ್ಣು ಮುಚ್ಚಿದಳು. ಸಭೆಗೆ ಸಭೆಯೇ ಅವಳ ದೇಹಮನಸ್ಸುಗಳ ಆಯಾಸವನ್ನು ಅನುಭವಿಸಿತು.
ಕೃಷ್ಣನು ತಿರಸ್ಕರಿಣಿಯನ್ನು ಕಿತ್ತೆಸೆದು ಬಂದು ರಾಧೆಯನ್ನು ಮೃದುವಾಗಿ ಭುಜದ ಮೇಲೆ ಕೈಯಿಟ್ಟು ಮುಟ್ಟಿದನು. ಆ ಸ್ಪರ್ಶದಿಂದ ಆಕೆಯು ಸಜೀವಳಾದಂತೆ, ವ್ಯಾಪಾರೋನ್ನುಖಳಾಗಿ, ನಿದಾನವಾಗಿ ಕಣ್ಣು ಬಿಟ್ಟು ತನ್ನ ಹಿಂದೆ ನಿಂತಿರುವ ನಲ್ಲನನ್ನು ನೋಡಿ, ಏನೋ ಬಹು ಕಷ್ಟದಿಂದ ಗುರುತಿಸಿದವಳಂತೆ, ನಿದಾನವಾಗಿ ಗುರುತಿಸಿ, ಗುರತು ಸಿಕ್ಕುತ್ತಲೂ ಥಟ್ಟನೆ ಹಿಂತಿರುಗಿ ಆತನನ್ನು ಆಲಿಂಗಿಸಿದಂತೆ ಮಾಡಿ, ಕೃಷ್ಣನ ಎದೆಯ ಮೇಲೆ ತಲೆಯನ್ನಿಕ್ಕಿ ಕೊಂಡು ಆ ಸುಖವನ್ನು ಒಂದು ಗಳಗೆ ಅನುಭವಿಸಿ, ತಲೆಯೆತ್ತಿ ನೋಡಿ, ಪರಮಾನಂದದಿಂದ “ಬಂದೆಯಾ ಕೃಷ್ಣ, ಬಂದೆಯಾ? ಹೋದ ಜೀವವ ತಂದೆಯಾ? ” ಎಂದು ಮುದ್ದಾಗಿ ಒಂದು ನುಡಿ ಹಾಡಿದಳು. ಆ ವಸಂತ ರಾಗವು ವಸಂತದಂತೆಯೇ ಭೂಮಿಗೆ ಎಲ್ಲವನ್ನೂ ಹೊಸದಾಗಿ ತಂದಂತಾತ್ತಿರಲು “ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿಹನಲ್ಲೇ!” ಎಂದು ಕಾಂಬೋಧಿಯಲ್ಲಿ ಆರಂಭಿಸಿದಳು. ಸಭೆಯವರು ನಿಜವಾಗಿಯೂ ಶ್ರೀ ಕೃಷ್ಣನು ಎದುರು ಬಂದನೆಂದು ಭ್ರಮಿಸಿದರು. ಸಂಭ್ರಮಿಸಿದರು. ರಾಧೆಯು ಕೃಷ್ಣನನ್ನು ಕಂಡು ಆನಂದದಿಂದ ಭ್ರಮರಿಯಂತೆ ಆಡಿದಳು. ಆತನ ಸಿರಿಗುರುಳನ್ನೊಮ್ಮೆ ಸವರುವಳು. ಆತನ ಕರೀಟವನ್ನು ಸರಿಮಾಡಿ ಚೆಲ್ಲಿರುವ ಕುರುಳು ತಿದ್ದುವಳು ಆತನ ಮುಖದ ಮೇಲಿರುನ ಕಿರುಬೆವರನ್ನು ಒರೆಸುವಳು. ಎಷ್ಟೋದೂರದಿಂದ ಬಂದನೆಂದು ಕಾಲು ತೊಳೆದು ಸತಿ ಕೈಹಿಡಿದು ಕರೆದೊಯ್ದು ಕುಳ್ಳಿರಿಸಲು ಹೋಗುತ್ತಿರುವಾಗ, ಪರಮ ವಿಶ್ವಾಸದಿಂದ ಕೃಷ್ಣಾ ಎಂದು ಮೊಕದಲ್ಲಿ ಮೊಕವಿಡುವಾಗ, ಆತನ ಕಣ್ಣ ಕೆಂಪು ಕಾಣಿಸಿತು. ಅವನ ಕಣ್ಣು ಇವಳ ಕಣ್ಣಿಗೆ ಕೆಂಪು ಸಾಲ ಕೊಟ್ಟಂತಾಗಿ, ಆ ಕೆಂಪು ಹರಡಿ ಮೊಕವನ್ನೆಲ್ಲಾ ವ್ಯಾಪಿಸಲು, ಆತನನ್ನು ಹಾಗೆಯೇ ಬಿಟ್ಟು ಗಂಭೀರಳಾಗಿ ನಿಂತಳು. ಕೋಪದ ಮೂರ್ತಿಯು ತಾನಾಗಿ ಮಾನಭಂಗದಿಂದ ನೊಂದ ಮನವು ದಾವಾಗ್ನಿಯಂತೆ ಸುಡುತ್ತಿರುವುದನ್ನು ಸಹಿಸಲಾರದವಳಂತೆ ತಲೆಯನ್ನು ಕೊಡಹಿಕೊಂಡು, ಆ ಕೃಷ್ಣನ ದರ್ಶನವನ್ನೂ ಸಹಿಸಲಾರದವಳಂತೆ, ತಲೆಯನ್ನು ಅತ್ತ ತಿರುಗಿಸಿ ಕೊಂಡು, “ದುರುಳ ಮಾಧವಾ! ತೊಲಗು ಯಾದನಾ!” ಎಂದು ಚೀರಿದಳು.
ರಾಧೆಯ ಕಣ್ಣಿನಲ್ಲಿ ನೀರು ಸುರಿಯಿತು. ಗಂಟಲು ಕಟ್ಟಿಕೊಂಡಿತು. ಮೊಕವು ದುಃಖ ದೈನ್ಯಗಳಿಂದ ಹಿಂಡಿಕೊಂಡು ಕಾಸಿನಗಲವಾಯಿತು. ಒಂದು ಕಣ್ಣು ದೊಡ್ಡದಾಗಿ ಬಿಟ್ಟು ಇನ್ನೊಂದು ಕಣ್ಣು ಕೊಂಕಿ, ಹುಬ್ಬು ಇಳಿದು ಬಂದು ಕಣ್ಣು ಮುಚ್ಚುತ್ತಿರಲು ತನ್ನ ಹೃದಯದ ದುಃಖವನ್ನು. ಕಣ್ಣಿನ ಕವಣೆಯಲ್ಲಿಟ್ಟು ಹೊಡೆಯುವವಳಂತೆ ಕೃಷ್ಣನನ್ನು ನೋಡುತ್ತಾ. ಬಿಕ್ಕಿಬಿಕ್ಕಿ ಬರುವ ಅಳುವನ್ನು ಬಹು ಕಷ್ಟದಿಂದ ತಡೆದುಕೊಳ್ಳುತ್ತ, ಸಣ್ಣ ದನಿಯಲ್ಲಿ “ಆವಳ ತೋಳಿನ ತೆಕ್ಕೆಯೊಳಿರುಳನು ಕಳೆದೆಯೋ ನಡೆಯಲ್ಲಿಗೆ ನಡೆ” ಎಂದು, ತನ್ನ ಹೃದಯಮಂದಿರದಲ್ಲಿ ಬಹುದಿವಸದಿಂದ ಆರಾಧಿಸುತ್ತಿರುವ ಮೂರ್ತಿಯನ್ನು ವಿಸರ್ಜಿಸುವವಳಂತೆ ಕೈಯಿಂದ ನೂಕಿದಳು.
ಕೃಷ್ಣನು ಅಷ್ಟು ಹೊತ್ತು ಅವಳ ಪುನರಾಗಮನವನ್ನು ನಿರೀಕ್ಷಿಸುತ್ತಿದ್ದು ತಾನೇ ಕೈಚಾಚಿ ಪ್ರಾರ್ಥಿಸುತ್ತಾ ಅವಳ ಬಳಿ ಸಾರಿದನು. ಮತ್ತೆಯೂ ರಾಧೆಯು ನೂಕಿದಳು. ಕೃಷ್ಣನು ಭಾರದಿಂದ ಮುಳುಗುವ ದೋಣಿಯು. ಪ್ರವಾಹಕ್ಕೆ ಸಿಕ್ಕಿ ಹೋಗಲಾರದೆ ಹೋಗಲಾರದೆ ಮುಂದೆ ಹೋಗುವಂತೆ, ಎರಡು ಅಡಿಯಿಟ್ಟನು. ರಾಧೆಯು ಹಿಂತಿರುಗಿ ನೋಡಿದಳು. ಅವಳ ಪ್ರೇಮವು ಮತ್ತೆ ಮರುಕಳಿಸಿತು. ಹೊಡೆದ ಚಂಡು ನೆಲಕ್ಕೆ ತಾಗಿ ಮತ್ತೆ ಚಿಮ್ಮಿ ಮೇಲಕ್ಕೆ ನೆಗೆಯುವಂತೆ, ಮತ್ತೆ ಮೋಹಪರವಶಳಾಗಿ ಓಡಿಹೋಗಿ ಕೃಷ್ಣನ ಕಾಲು ಕಟ್ಟಿ ಕೊಂಡು “ಮರಳು ಮಾಧವ, ತಣಿಸು ಜೀವವ ಮನ್ನಿಸೆನ್ನಪರಾಧವ ” ಎಂದು ಮೋಹನದಲ್ಲಿ ಹಾಡುತ್ತ ಆತನನ್ನು ತಡೆದಳು. ಸಭೆಯು ರಾಧೆಯ ಮನಸ್ಸಿನ ಕಾತರತೆಯನ್ನೆಲ್ಲ ವಹಿಸಿಕೊಂಡು ಕೃಷ್ಣನೇ ನೆನ್ನುವನೋ ? ಎಂದು ಆತುರದಿಂದ ಬಗ್ಗಿ ನೋಡಿತು. ಕೃಷ್ಣನೂ ರಾಧೆಯ ಅನುನಯವನ್ನು ತಿರಸ್ಕರಿಸದೆ ಅವಳನ್ನು ಹಿಡಿದೆತ್ತಿ ತಕ್ಕೈಸಿ ತಬ್ಬಿಕೊಂಡಾಗ ಸಭೆಯು ಸಂತೋಷದಿಂದ ಚಪ್ಪಾಳೆಯನ್ನಿಕ್ಕಿತು. ಮಂಗಳದೊಡನೆ ಅಭಿನಯವು ಮುಗಿಯಿತು.
೩
ಆ ವೇಳೆಗೇ ಅರ್ಧರಾತ್ರಿಯಾಗಿತ್ತು. ದೇವರ ಮಂಗಳಾರತಿ ಪ್ರಸಾದ ಗಳನ್ನು ತೆಗೆದುಕೊಂಡು ಸಭಿಕರೆಲ್ಲರೂ ಹಿಂತಿರುಗಿದರು. ಸ್ವರ್ಗದ ಬಾಗಿಲಲ್ಲಿ ಭೂರಿದಕ್ಷಿಣೆ. ಚಿನ್ನಾಸಾನಿಯ ತಾಯಿ ಕಮಲಾಸಾನಿಯು ಒಂದು ಗಾಡಿಯ ತುಂಬಾ ಚಿಲ್ಲರೆ ದುಡ್ಡು, ತಾಮ್ರ ಬೆಳ್ಳಿಯ ನಾಣ್ಯಗಳನ್ನು ತಂದಿದ್ದಾಳೆ. ಅದನ್ನೆಲ್ಲ ವಿನಿಯೋಗ ಮಾಡಿಬರುವುದಾಗಿ ಮಕ್ಕಳನ್ನು ಹೋಗಿಬನ್ನಿರೆಂದಳು. ತಂಗಿಯು ಅಕ್ಕನನ್ನು ಒಂದು ಗಾಡಿಯಲ್ಲಿ ಕುಳ್ಳಿರಿಸಿ, ಅವಳಿಗೆ ಒರಗಿಕೊಳ್ಳು ವುದಕ್ಕೆ ದಿಂಬುಗಳನ್ನೆಲ್ಲಾ ಜೋಡಿಸಿ, “ರಾಯರು ಬಂದಿದ್ದಾರೆ. ನಿನಗೆ ಕೋಪವಿಲ್ಲವೆಂದರೆ ನಾನಿನ್ನೊಂದು ಗಾಡಿಯಲ್ಲಿ ಬರುತ್ತೇನೆ ” ಎಂದಳು.
ಚಿನ್ನಳಿಗೆ ಆಶ್ಚರ್ಯವಾಯಿತು. ರಾಯರು ಅಪ್ರಾರ್ಥಿತವಾಗಿ ಗಾಡಿಯ ಬಳಿ ಬರುವುದೂ ಉಂಟೆ ಎನ್ನಿಸಿ “ಎಲ್ಲಿ?” ಎಂದಳು. ರಾಯರೇ ಮುಂದೆ ಬಂದು “ಇದೋ ಇಲ್ಲಿ. ಆಗಬಹುದು ಎಂದರೆ ನಾನೂ ಗಾಡಿಯಲ್ಲಿ ಬರುತ್ತೇನೆ. ನಮ್ಮ ಗಾಡಿ ರನ್ನಳನ್ನು ಕರೆದುತರುತ್ತದೆ. ಏನಪ್ಪಣೆ?” ಎಂದರು. ಅವಳು ಮೃದುವಾದ ನಗೆ ನಕ್ಕು, ಅದಕ್ಕಿಂತ ಮೃದುವಾದ ನೋಟದಿಂದ ಮೂಕವಾಗಿ ದಯಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತ, ಆತನಿಗೆ ಎಡೆಗೊಟ್ಟು ಮಗ್ಗುಲಿಗೆ ಸರಿದಳು. ರಾಯನೂ ಗಾಡಿ ಹತ್ತಿದನು.
ಜೋಡು ಕುದುರೆಯ ಬಂಡಿಯು ಒಳಗಿದ್ದವರಿಗೆ ಆಯಾಸವಾಗದಷ್ಟು, ಪ್ರಿಯವಾಗುವಷ್ಟು, ವೇಗದಿಂದ ಓಡಿ ಮನೆಗೆ ಬಂತು. ರನ್ನಳೂ ಜೊತೆ ಯಲ್ಲಿಯೇ ಬಂದಳು. ಆಳುಗಳು ಬಂದು ಅಕ್ಫ ತಂಗಿಯರನ್ನು ಗಾಡಿಗಳಿಂದ ಇಳಿಸಿಕೊಂಡರು. ಚಿನ್ನಳು ರಾಯನನ್ನು ಕರೆದುಕೊಂಡು ಮಹಡಿಯ ಮೆಟ್ಟಲು ಹತ್ತಿದಳು. ದಾಸಿಯು ಒಡೆತಿಯ ಚಿತ್ತವನ್ನು ಅರಿತು ದೀಪವನ್ನು ಹಿಡಿದುಕೊಂಡು ಅವರಿಬ್ಬರನ್ನೂ ಮದನಮಂದಿರಕ್ಕೆ ಕರೆದುತಂದಳು.
ಚಿನ್ನಳಿಗೆ ನಿಜವಾಗಿಯೂ ಆಯಾಸವಾಗಿತ್ತು. ಹೋದವಳೇ ನೇಪಥ್ಯ ಗಳನ್ನು ತೆಗೆದಳು. ಅಂಗಮರ್ದನಾದಿ ಉಪಚಾರಗಳನ್ನು ಸ್ವೀಕರಿಸುತ್ತಾ ಸುಖಾಸನದಲ್ಲಿ ಹಾಗೆಯೇ ಒರಗಿಕೊಂಡಳು… ರಾಯನು ಅವಳ ಆ ಭಂಗಿಯನ್ನು ಕಂಡು ಆನಂದಪರವಶನಾಗಿ ಅವಳ ಮುಖನನ್ನು ಕಂಡು ಕಣ್ಣು ಸನ್ನೆಮಾಡಿ ನಕ್ಕನು. ಚಿನ್ನಳು ದಾಸಿಯನ್ನು ” ಮೈಯೊತ್ತಿದುದು ಸಾಕು. ಬಿಸಿನೀರು ನೋಡು. ಮಜ್ಜನಕ್ಕೆ ಹೋಗೋಣ ” ಎಂದಳು. ದಾಸಿಯು ಎದ್ದು ಹೋದಳು.
ರಾಯನು ಮಗ್ಗುಲಲ್ಲಿ ಬಂದು ಕುಳಿತು ಮೃದುವಾಗಿ ಅವಳ ಮೈ ಹಿಸುಕುತ್ತಾ, “ಈ ದಿನ ಏನು ನಿನಗೆ ಆವೇಶ ಬಂದಿತ್ತು ?” ಎಂದನು. ಚಿನ್ನಳು “ಹೌದು ಈ ದಿನ ನಾನು ಬೇಕಾದ ಹಾಗೆ ಮಧುಪಾನ ಮಾಡಿದ್ದೆ” ಎಂದಳು.
“ಸುಮ್ಮನಿರು. ಪಾನ ಮಾAಿದ್ದೆಯೋ? ನಾಲಗೆ ಗಂಟೆಯ ಹಾಗೆ ನುಡಿಯುತ್ತಿತ್ತು ? ”
“ನಾನು ಅಲ್ಲಿಗೇ ಮಧು ಕುಂಭವನ್ನೇ ತಂದಿದ್ದೆ. ನನ್ನ ಎದುರಿಗೇ ಆ ಕಂಭದ ನೆರಳಲ್ಲಿ ಇಟ್ಟಿದ್ದೆ. ಬೇಕೆಂದಾಗ ತಿರುಗಿ ನೋಡಿದರೆ ಸಾಕು, ಕಣ್ಣುಗಳಿಂದಲೇ ಬೇಕಾದಷ್ಟು ಹೀರಿಬಿಡುತ್ತಿದ್ದೆ. ”
“ಎಲೆಲಾ! ನೋಡಿದೆಯಾ? ಸೋತೆನಲ್ಲ. ಆದಕ್ಕೆ ಚಿನ್ನ, ಇವೊತ್ತು ದೇವೇಂದ್ರನೇ ಸಭೆಗೆ ಬಂದಿದ್ದರೆ ಅನನು ಕೂಡ ನಿನ್ನ ಅಭಿನಯಕ್ಕೆ ಮೆಚ್ಚಿ ಬಿಡುತ್ತಿದ್ದ. ಭರತ ಮಹರ್ಷಿಗಳು ನೋಡಿದ್ದರೆ, ಊರ್ವತಶಿಗೆ ಪಾಠ ಹೇಳುವುದಕ್ಕಿಂತ ನಿನಗೇ ಹೇಳಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದರು.”
“ನಾನು ಅಭಿನಯ ಹಿಡಿದುದು ಉಪೇಂದ್ರನ ಸನ್ನಿಧಿಯಲ್ಲಿ. ನನ್ನ ಮಾಧವನ ತೃಪ್ತಿಗಾಗಿ. ನನ್ನ ಪ್ರಭು ಅಲ್ಲಿ ಇರುವಾಗ ನನ್ನ ನೈಪುಣ್ಯವನ್ನೆಲ್ಲ ತೋರಿಸದಿದ್ದರೆ ಆದೀತೆ? ಆಯಿತು. ನನ್ನ ಅಭಿನಯ ಎಲ್ಲಿ ನಡೆದರೂ ಹೀಗೇ ಆಗಬೇಕು ಎಂದು ನಿನಗೆ ಆಸೆಯಿದೆಯೇನು? ಹೇಳು.”
“ಹೌದು ”
ಹಾಗಿದ್ದರೆ, ನೀನು ಎದುರಿಗೆ ಬಂದು ಕುಳಿತುಬಿಡು. ನೋಡು ನನಗೆ ರೆಕ್ಕೆ ಹುಟ್ಟುತ್ತದೆಯೋ ಇಲ್ಲವೋ?
“ಆಯಿತು. ನಾನು ತಲೆ ಮರೆಸಿಕೊಂಡು ಎರಡನೆಯ ಕಂಭದ ನೆರಳಿನಲ್ಲಿ ಸೊಟ್ಟ ರುಮಾಲು ಸುಸ್ತಿಕೊಂಡು ಕುಳಿತಿದ್ದೆನಲ್ಲ. ನಿನಗೆ ಗುರುತು ಹೇಗೆ ಸಿಕ್ಕಿತು?
“ನೀನೂ ಪಂಚದಶಿ ಓದಿದ್ದೀಯಲ್ಲ. ಅದರಲ್ಲಿ ವಿದ್ಯಾರಣ್ಯ ಸ್ವಾಮಿ ಗಳು ಹತ್ತು ಜನ ಅಧ್ಯಯನ ಮಾಡುತ್ತಿದ್ದರೆ ಆ ಕಂಠಧ್ವನಿಗಳಲ್ಲಿ ಮಗನ ಧ್ವನಿ ಯಾವುದು ಎಂದು ತಂದೆಗೆ ತಿಳಿಯುತ್ತದೆ ಎಂದು ಬರೆದಿದ್ದಾರೆ. ಅವರು ಸನ್ಯಾಸಿಗಳು ಅದರಿಂದ ಹಾಗೆಂದರು. ಕಾಮಿಯು ಅದೇ ವಿಷಯಕ್ಕೆ ಉದಾಹರಣ ಕೊಡುತ್ತಿದ್ದರೆ, ಕಾಮಿನಿಯ ಹೈದಯ ತನ್ನ ನಾಯಕನು ಸಾವಿರ ಜನರ ನಡುವೆ ಇದ್ದರೂ ಅನಿರ್ವಚನೀಯವಾದ ರೀತಿಯಲ್ಲಿ ತಿಳಿದು ಕೊಳ್ಳುತ್ತದೆ ಎಂದು ಹೇಳುತ್ತಿದ್ದ. ನೀನು ಸಭೆಯಲ್ಲಿ ಇದ್ದೆ ಎನ್ನುವುದು, ನೀನು ಅಲ್ಲಿಗೆ ಬರುವುದು ಎನ್ನುವುದು ಇವೊತ್ತು ನನಗೆ ತಿಳಿದಿತ್ತು. ಮನೆ ಯಿಂದ ಹೊರಡುವಾಗಲೇ ಎಡಗಣ್ಣು ಅದುರಿತು. ಸುವಾನಿಸಿಯರು ಎದುರಿಗೆ ಬಂದರು. ಸಭೆಯಲ್ಲಿ ಬಂದು ಕುಳಿತಿದ್ದಹಾಗೆಯೇ ಪ್ರಣಿಧಾನ ಮಾಡಿ ನೋಡಿದೆ. ನೀನಿರುವೆಡೆ ಕಂಡುಹೋಯಿತು. ಆಮೇಲೆ ಆಳು ಬಂದು ನಿನ್ನ ಗಾಡಿ ಬಂದಿರುವುದನ್ನು ಹೇಳಿದ. ಅಭಿನಯಕ್ಕೆ ಹದಿನಾರು ಬಣ್ಣ ಬಂತು.”
“ಆಯಿತು. ಆಗಲಿ. ನಿನ್ನ ಅಭಿನಯ ಗೆಲ್ಲುವುದೂ ಸೋಲುವುದೂ ನನ್ನ ಕೈಯಲ್ಲಿದೆ ಎಂದುಕೊಳ್ಳೋಣ. ನಿನ್ನ ಆಯಾಸ ಪರಿಹಾರವಾಯಿತೋ ??
“ಏನು ಆಗಲೇ ಮನೆ ಕಡೆ ಯೋಚನೆಯೋ ? ?
“ಚಿನ್ನಾ ನನಗೆ ಸಾಧ್ಯವಾಗಿದ್ದರೆ, ನಿನ್ನ ತಾಳಿಯ ಗೂಡಿನೊಳಗೆ ಇದ್ದು ಯಾವಾಗಲೂ ನಿನ್ನ ಎದೆಯ ಮೇಲೆ ಆಡಿಕೊಂಡು ಇದ್ದುಬಿಡುತ್ತಿದ್ದೆ. ಏನು ಮಾಡಲಿ? ಮದುವೆಯಾದವಳು. ಬಿಡುವುದು ಹೇಗೆ? ಅವಳೂ ನಿನಗಿಂತ ಹೆಚ್ಚಾಗಿ ಅಳುತ್ತಾಳೆ. ಅದೇ ನನಗೆ ಬಂದಿರುವ ಕಷ್ಟ ! ದೇವರು ನನ್ನನ್ನು ವೀಣೆತಂತಿ ಮಾಡಿ ಈ ಕೊನೆ ಆ ಕೊನೆ ಎರಡೂ ಕಟ್ಟಿ ಬಿಟ್ಟ. ಏನು ಮಾಡಲಿ ಹೇಳು.?
“ಗೋಪು. ದೇವರು ಅಪರಾಧ ಮಾಡಿರುವುದು ನಿನಗಲ್ಲ ನನಗೆ. ನನ್ನ ನಿನಗಾಗಿ ಸೃಷ್ಟಿಮಾಡಿ, ನಿನ್ನನ್ನು ನಿನ್ನ ಹೆಂಡತಿಗಾಗಿ ಮಾಡಿ ನನಗೆ ಅನ್ಯಾಯ ಮಾಡಿಬಿಟ್ಟ. ಅವಳಿಗೆ ಮುಂದಕ್ಕೆ ಮಾತನಾಡಲಾಗಲಿಲ್ಲ. ಕಣ್ಣಿನಲ್ಲಿ ನೀರು ಬಂದುಬಿಟ್ಟಿತು. ಮೊಕ ಮುಚ್ಚಿ ಕೊಂಡು ಅತ್ತಳು.
ಅಯ್ಯೋ! ಪುಣ್ಯಾತ್ಮಗಿತ್ತಿ. ನೀನು ಅಳಬೇಡ. ಇಕೋ, ಇವೊತ್ತಿನ ಹಾಗೆ ನಿನ್ನ ಮೈ ಕೈಕಾಲು ಒತ್ತಿಕೊಂಡು ಬಿದ್ದಿರುತ್ತೇನೆ. ನಿನ್ನ ಕಣ್ಣು ಮಾತ್ರ ಒದ್ದೆ ಮಾಡಬೇಡ.”
“ಹೂಂ, ಕೈಕಾಲು ಒತ್ತಿಕೊಂಡು ಬಿದ್ದಿರುತ್ತೀಯೆ! ಮಂಚದ ಮೇಲೆ ಕುಳಿತುಕೊಂಡು ಕೈಕಾಲು ಒತ್ತಿಸಿಕೊಳ್ಳುತ್ತಿರು ಎಂದರೆ ಕೈಗೆ ಸಿಕ್ಕುವುದಿಲ್ಲ. ಇವೊತ್ತು ಅದೇನು ನಿನ್ನ ಗ್ರಹಚಾರವೋ? ನನ್ನ ಅದೃಷ್ಟವೋ? ಕೈಗೆ ಸಿಕ್ಕಿದ್ದೀಯೆ. ಅಷ್ಟೇ ಅಲ್ಲ. ಇಲ್ಲಿ ನೋಡು” ಎಂದು ಸಣ್ಣ ಬೀಗದ ಕೈಯ್ಯನ್ನು ತೋರಿಸಿದಳು.
“ನೀನು ಮನೆಗೆ ಬಂದ ಮೊದಲು ನಾನು,ಜೊತೆಯಲ್ಲಿಯೇ ಇದ್ದೇನಲ್ಲ. ಆದು ಯಾವ ಮಾಯದಲ್ಲಿ ಬಾಗಿಲು ಬೀಗ ಹಾಕಿಕೊಂಡು ಬಂದೆ.”
“ಅದು ನಮ್ಮ ಗುಟ್ಟು. ನಾವು ಮೋಸ ಮಾಡಬೇಕು ಎಂದರೆ ಕಣ್ಕಟ್ಟು ಮಾಡಬಲ್ಲೆವು. ರಾಯರೇ! ಆದರೇನು ಮಾಡುವುದು ಆ ಹಾಳು ಮನಸ್ಸು ನಮಗೆ ಮೋಸಮಾಡಿ ‘ ಅಸುಲಭವಸ್ತು ಪ್ರಾರ್ಥನಾದುರ್ನಿವಾರಂ ‘ ಆಗಿ ಹೋಗುತ್ತೆ.”
“ಆಗ ‘ಅಸ್ಯಾಸ್ಸಖೇ ಚರಣಯೋಃ ‘ ಆಗಿಹೋಗುವುದು ನಮಗೂ ಮೋಸವಲ್ಲವೇನೋ? ”
“ಆಯಿತು. ಸ್ವಾಮಿ ಏನು ಹೊರಟು ಬಿಡುವುದೋ? ಇಲ್ಲೇ ಇರುವುದೋ? ”
“ಕಣ್ಣು ಚುಚ್ಚಿ ನೀರು ಬಂತೇ ಎನ್ನುವ ಹಾಗೆ ಇದು. ಬಾಗಿಲಿಗೆ ಬೀಗ ಹಾಕಿಸಿ ಬಂದಿಮಾಡಿ ಹೊರಟುಹೋಗುತ್ತೀಯಾ ಎಂದು ಕೇಳುವ ಚಾತುರ್ಯ ನೋಡಿದೆಯಾ ? ಹಾಗೂ ಹೊರಡೋಣ ಎಂದರೂ ಆ ಕಣ್ಣೀರಲ್ಲಿ ಮನಸ್ಸೂ ಕರಗಿಹೋಯಿತು. ಈಗ ನಾನು ಬೇರೆಯಾಗಿ ಇದ್ದೇನೆಯೋ ಅಥವಾ ಚಿನ್ನದಲ್ಲಿ ಬೆರೆದು ಹೋಗಿದ್ದೇನೋ ಎಂದು ನನಗೆ ಅನುಮಾನವಾಗಿ ಹೋಗಿದೆ”
“ಗೋಪು, ತಪ್ತೇನ ತಪ್ತಮಯಸಾ ಘಟನಾಯ ಯೋಗ್ಯಂ. ಅಲ್ಲವೇ?”
“ನೀನು ಪಾಪ, ಯದ್ವಾತದ್ವಾ ಆಯಾಸ ಪಟ್ಟದ್ದೀಯೆ! ”
“ರಾಧೆ ಕೃಷ್ಣನನ್ನು ತಡೆದಾಗ ನೀನು ಕಣ್ಣಲ್ಲಿ ಒಂದು ತೊಟ್ಟು ನೀರು ಬರೆಸಿಕೊಂಡು ತಲೆದೂಗಿದೆಯಲ್ಲ ಆಗಲೇ ನನ್ನ ಆಯಾಸ ಪರಿಹಾರವಾಯಿತು. ಮಂಗಳವನ್ನು ಹಾಡುತ್ತಿದ್ದಾಗಲೇ ನಿನ್ನ ತಲೆ ಹಾಗೆಂದು ನಾನೂ ಬರುವೆ ನೆಂದು ಸೂಚಿಸಿದಾಗಲೇ ಆಯಾಸ ಪರಿಹಾರವಾಯಿತು. ನೀನು ಗಾಡಿಯಲ್ಲಿ ಬಂದು ಕುಳಿತಾಗಲೇ, ನಿನ್ನನ್ನು ಒರಗಿಕೊಂಡಾಗಲೇ ಆಯಾಸ ಪರಿಹಾರ ವಾಯಿತು. ಆಮೇಲೆ ನೀನು ಮಾಡಿರುವ ಉಪಚಾರಗಳು ಒಂದೊಂದೂ ಒಂದೊಂದು ರಸಾಯನ ಪಾನವಾಯಿತು. ಸಾಕೇ? ಇನ್ನೂ ಮಾನ ಬಿಟ್ಟು ಹೇಳಬೇಕೋ? ”
“ಆಯಿತು. ದೇವಿಯರ ಅಪ್ಪಣೆ ಹೇಗಾದರೆ ಹಾಗೆ ಈ ದಾಸನು ಸಿದ್ಧವಾಗಿದ್ದಾನೆ. ”
“ಈ ದೇವರು ಈ ದಾಸಿಯು ಒಪ್ಪಿಸುವ ಸರ್ವೋಪಚಾರ ಪೂಜೆಯನ್ನು ಈ ರಾತ್ರಿ ಸ್ವೀಕರಿಸಿ, ನಾಳೆ ಬೆಳಗ್ಗೆ ಸ್ನಾನಾದಿಗಳಿಂದ ಸಮರ್ಚಿತರಾಗಿ ಊಟದ ಹೊತ್ತಿಗೆ ಮನೆಗೆ ಹೋಗುವುದು. ?
*****
ಮುಂದುವರೆಯುವುದು


















