Home / ಕವನ / ನೀಳ್ಗವಿತೆ / ನನಗೇ ಕುದ್ರಿಗೇ ವಂದೇ ಸೊಡ್ಲೇ

ನನಗೇ ಕುದ್ರಿಗೇ ವಂದೇ ಸೊಡ್ಲೇ

(ಪ್ರತಿ ಸಾಲಿನ ಕೊನೆಗೆ ‘ತಂದೇ ನಾನಾ’ ಎನ್ನಬೇಕು)

ಹಾಲಪಟ್ಟಣದಾ ಹಾಲಪ್ಪ ದೊರೆಯೋ || ತಂದೇ ನಾನಾ ||
ಹಾಲಪ್ಪ ದೊರಿಗೇ ಮೂರು ಜನ ಹುಡುಗ್ರು
ಹಾಲಪ್ಪ ದೊರಿಗೇ ಮುಪ್ಪಿನ ಕಾಲ ||೧||

ಹುಡುಗರಿದ್ದೀ ಬುದ್ದೀ ಯಲ್ಲ
ವಳ್ಳೆ ಉಗ್ಗುರಾಣೀ ಕರಿಸನೆ ನೋಡೂ
“ಕೇಳಲೆ ಕೇಳೋ ಉಗ್ಗೂರಾಣೀ ||೨||

ನನಗೇನಾದ್ರೇ ಮುಪ್ಪಿನ ಕಾಲ
ನನಗೇನಾದ್ರೇ ಮೂರು ಜನ ಹುಡುಗರು
ಇದ್ದಿಲ್ಲಾ ಬುದ್ದೀ ಯೆಲ್ಲಾ ||೩||

ಸಾನಬವ್ರಾ ಕರೆಸಲೇ ಬೇಕು
ವಳ್ಳ ಇದ್ದೀ ಬುದ್ದೀ ಕಲಿಸಲೆ ಬೇಕು”
ಅಟ್ಟೊಂದು ಮಾತಾ ಕೇಳಿದ ಉಗ್ರಾಣಿ ||೪||

ವಳ್ಳ ಸಾನಬವ್ರಾ ಮನೀಗೋದ
“ಕೇಳಲಿ ಕೇಳೀ ಸಾನಬವ್ರೇ
ಹಾಲಪ ದೊರಿಯಾ ಕರಿಯಾ ನಿಮಗೇ” ||೫||

ಅಟ್ಟಂದು ಮಾತಾ ಕೇಳಿರು ಸಾನಬವ್ರು
ಮಾಳುಗಿ ವಳುಗೇ ನಡ್ಡರು ನೋಡೂ
“ಕೇಳಲ್‌ ಕೇಳೇ ನನ್ನಾ ಮಡದೀ ||೬||

ನನಗೇನಾದ್ರೇ ದೊರಿನ ಕರಿಯೇ
ಗಾಡದಿಂದೇ ಲಡೂಗಿಯ ಮಾಡು”
ಅಟ್ಟೊಂದು ಮಾತಾ ಕೇಳಿತು ಮಡದೀ ||೭||

ಗಾಡಾದಿಂದೇ ಲಡಗೀ ಮಾಡ್ತೂ
“ಕೇಳಲೆ ಕೇಳೀ ನನ್ನಾ ಸ್ವಾಮೀ,
ಅಡ್ಡೀನಾದ್ರೇ ಲಾದಿತು ನೋಡೀ ||೮||

ಉಟಾಕಾದ್ರೇ ಬರಲುಬಹುದು”
ಅಟ್ಟೊಂದು ಮಾತಾ ಕೇಳಿರು ಸಾನಬವ್ರು
ಊಟಾಕಾದ್ರೇ ನೆಡ್ದರು ನೋಡು ||೯||

ಊಟಾ ಲುಪಚರ ಮಾಡವ್ರೇ
“ಕೇಳಲೆ ಕೇಳೇ ನನ್ನಾ ಮಡುದೀ
ನಾನೂ ಬರುಕೇ ಮೂರು ತಿಂಗ್ಳೆ ತಡವೇ” ||೧೦||

ಅಟ್ಟು ಮಾತಿನ್ನೇ ಹೇಳದ್ರೇ
ದಬತರ ಪೆಟಗೀ ಹೋತ್ತವ್ರೇ
ಸಾನಬವ್ರೂ ಮುಂದಾಗೀ ||೧೧||

ಉಗುರಾಣಿ ಹಿಂದಾಗೀ
ಹಾಲಪ್ಪ ದೊರಿಯಾ ಮನೆಗೇ ಬಂದ್ರು
“ಕೇಳಲೆ ಕೇಳೀ ಹಾಲಪ್ಪ ದೊರಿಯೇ ||೧೨||

ನಮ್ಮಾ ಕರದಾ ಕಾರಣವೇನು?”
“ಕೇಳಿ ಕೇಳೀ ಸಾನಬವ್ರೇ
ನನಗೇನಾದ್ರೇ ಮುಪ್ಪಿನ ಕಾಲಾ ||೧೩||

ನನಗೇನಾದ್ರೇ ಮೂರು ಜನ ಹುಡುಗರು
ಇದ್ದೀ ಯಿಲ್ಲಾ, ಬುದ್ದೀ ಯೆಲ್ಲಾ
ಬರವೂ ಇಲ್ಲ, ಸರವೂ ಇಲ್ಲಾ ||೧೪||

ಬರವೂ ಸರವೂ ಕಲಿಸಲು ಬೇಕು
ಇದ್ದೀ ಬುದ್ದೀ ಕಲಿಸಲು ಬೇಕು”
ಲಟ್ಟ ಮಾತಿನ್ನೆ ಕೇಳಿರು ಸಾನಬವ್ರು ||೧೫||

ಇದ್ದೀ ಬುದ್ದೀ ಕಲಿಸವ್ರೇ
ಬರವೂ ಸರವೂ ಕಲಿಸವ್ರೇ
“ಕೇಳಲಿ ಕೇಳೀ ಹಾಲಪ್ಪ ದೊರಿಯೇ, ||೧೬||

ಲಿದ್ದೀ ಬುದ್ದೀ ಕಲಿಸವ್ನೇ
ಬರವೂ ಸರವೂ ಕಲಿಸವ್ನೇ
ಮತ್ತೇನಿನ್ನೊ ಮಾಡಲಿ ಬೇಕು?” ||೧೭||

“ಕೇಳಲೆ ಕೇಳೀ ಸಾನಬವ್ರೇ
ಅಡವೀಗಾದ್ರೇ ಹೋಗಲಿ ಬೇಕೂ
ಗರಡೀ ಕಂಬಾ ಕಡಿಸಲು ಬೇಕೂ ||೧೮||

ಗರಡೀ ಸಾದಕ ಕಲಿಸಲಿ ಬೇಕೂ
ತಲಿಯೇಲಾದ್ರೂ ಕೇಳುಗೇ ಮಾಡೀ
ಕಾಲೇನಾದ್ರೇ ಮೇಲೇ ಮಾಡೀ ||೧೯||

ಗರಡೀ ಕಂಬಾ ಹತ್ತಲೆ ಬೇಕೂ
ಗರಡೀ ಸಾದಕ ಕಲಿಸಲೆ ಬೇಕೂ”
ಅಂದಿಲಿನ್ನೇ ಹೇಳವ್ರೇ; ||೨೦||

ಅಟ್ಟೊಂದು ಮಾತಾ ಕೇಳವ್ರೇ
ಆಳ ಮಕ್ಳಾ ಕರೀಸವ್ರೇ
ಆಳ ಮಕ್ಳು ಮುಂದಾಗೀ ||೨೧||

ಸಾನಬವ್ರೂ ಲಂದಾಗೀ
ಲಡವೀಗಾದ್ರೆ ಹೋಗರೆ ನೋಡೂ
ಗರಡೀ ಕಂಬಾ ಕಡೀಸವ್ರೇ ||೨೨||

ನಾಲ್ಕೂ ಜನ ಹೊತ್ತವ್ರೆ
ಹಾಲಪ್ಪ ದೊರಿಯಾ ಮನಿಗೇ ಬಂದ್ರು
ಗರಡೀ ಕಂಬಾ ಲ್ಹುಗೂದವ್ರೇ ||೨೩||

ಹಾಲಪ್ಪ ದೊರಿಯಾ ಹುಡುಗರಿಗೂ
ಗರಡೀ ಸಾದಕ ಕಲಿಸೂರೂ
ತಲಿಯೇನಾದ್ರೂ ಕೆಳಗೇ ಮಾಡೀ ||೨೪||

ಕಾಲೇನಾದ್ರೇ ಮೇಲೆ ಮಾಡದ್ರೂ
ಗರಡೀ ಕಂಬಾ ಹತ್ತವ್ರೇ
ಮೂರೂ ಜನಾ ಹುಡುಗರೂ ||೨೫||

ಗರಡೀ ಸಾದಕ ಕಲಿತವ್ರೇ
“ಕೇಳಲೆ ಕೇಳೀ ಹಾಲಪ್ಪ ದೊರಿಯೇ
ಗರಡೀ ಸಾದಕ ಕಲಿಸೀದೇ ||೨೬||

ಇನ್ನಾದರ್‍ಯೇನೂ ಮಾಡಾಬೇಕೂ?
ದಂಡಿನ ಸಾದಕ ಕಲಿಸಲು ಬೇಕೂ”
ದಂಡಿನ ಸಾದಕ ಕಲಿಸೀರೂ ||೨೭||

“ನಿತ್ತಿ ಬಂದಾ ದಂಡಿನ್ನೇ
ನಿತ್ತಲ್ಲೇ ಕಡೀ ಬೇಕೊ
ಮುಗುಲರಾ ದಂಡಿನ್ನೇ ||೨೮||

ಮುಡುಗಿನ್ನ ಕಡಿಬೇಕೋ
ತುರುಕೂರಾ ದಂಡಿನ್ನೇ
ತುದಿಗಾಲಲಿ ಕಡೀಬೇಕೋ ||೨೯||

ಹಾರಾವರಾ ದಂಡಿನ್ನೆ
ಹಾರಾಡೀ ಕಡೀಬೇಕೋ”
ಲಂದಿನ್ನೆ ಹೇಳೀರು ||೩೦||

“ಕೇಳೀ ಕೇಳಿ ಹಾಲಪ್ಪ ದೊರಿಯೇ
ದಂಡಿನ ಸಾದಕ ಕಲಿಸವ್ನೇ”
ಲಂದಿನ್ನೇ ಹೇಳಿರು ||೩೧||

ಹಾಲಪ್ಪ ದೊರಿಯೂ ಮನಿಗೇ ಹೋದ್ರೂ
ಹಾಲಪ್ಪ ದೊರಿಯೂ ಯೇನಾ ಮಾಡಾರೇ?
ಅವ್ರ್‌ಗೀನ್ನೇ ಬೇಕಷ್ಟು ಕೊಟ್ಟ ||೩೨||

ಸಂಬಳಾದ್ರೂ ಕೊಟ್ಟಿದ್ದ
ಸಾನಬವ್ರು ಮನೀಗೋದ್ರು
ಹಾಲಪ್ಪ ದೊರಿಯಾ ಹುಡುಗರಿಗೇ ||೩೩||

ಊಟಕಾದ್ರೂ ಕುಂತಿರೂ
ಅರ್ದ ಊಟಾ ಮಾಡವ್ರೇ
ದಂಡೀನ ಕರೆ ಬಂತೂ ||೩೪||

“ಕೇಳಲ್‌ ಕೇಳೋ ನನ್ನ ತಂದೇ
ನಮ್ಗೇ ಆದ್ರೂ ದಂಡಿನ ಕರೆಯಾ”
ಲಂದಿನ್ನೆ ಹೇಳವ್ರೇ ||೩೫||

ಕೈಬಾಯ್‌ ತೊಳುದೀ ಕುಂತವ್ರೇ
ಹಾಲಪ್ಪ ದೊರಿಯಾ ಯೇನ ಮಾಡ್ದಾ?
ಮಾಳೂಗಿ ವಳೂಗೋದ ||೩೬||

ನೆಲಮಾಳುಗಿ ಕದಾ ತೆಗದಾ
ಮೂರೂ ಪಟವಾ ಲೆಕ್ಕಿದಾ
“ಕೇಳಲೆ ಕೇಳೀ ಹೂಡೂಗರಿಯಾ ||೩೭||

ಪಟವಾನಾರೂ ಹಿಡಿ’ರಂದಾ
ಮೂರೂ ಜನಹುಡೂಗರಿಗೂ
ಮೂರು ಪಟವಾ ಕೊಟ್ಟೀದಾ ||೩೮||

“ಕೇಳಲ್‌ ಕೇಳೋ ನನ್ನಾ ತಂದೇ,
ಹೋಗಿ ಬಾರಂದೀ ವೀಳ್ಯಕೊಡೋ”
“ಹೋಗಿ ಬಾರಂ’ದೀ ವೀಳ್ಯ ಕೊಟ್ಟಾ ||೩೯||

ಪಟುವನಾದ್ರೇ ತಡುಕಂಡೂ
ವಸ್ತ್ರಗಿಸ್ತ್ರ ದರಿಸಿಕಂಡೂ
ಕುದ್ರೇ ಸಾಲಿಗೆ ನೆಡಿದವ್ರೆ ||೪೦||

ಮೂರು ಜನಿನ್ನೆ ಕುದ್ರೀ ಹೇರದ್ರೂ
ಕಿರಿಯವಿನ್ನೇ ಲೇನ ಮಾಡ್ದಾ?
“ನನ್ನ ಮಂಜನಂಬೂ ಕುದ್ರೀ ಕೇಳೇ ||೪೧||

ಮೂರು ತಿಂಗಳಾದೇ ಮೂರು ದಿವ್ಸಕ್ಕೆ ನೇಡೀ
ಮೂರು ತಿಂಗಳಾದೆ ಮೂರ ದಿವ್ಸಕೆ ನಡಿದಾರೆ
ನನಗೇ ನಿನುಗೇ ವಂದೇ ಸೊಡ್ಲೇ” ||೪೨||

ಲಟ್ಟೊಂದೇ ಹೇಳೀದ
ಕುದ್ರೀನಾರೂ ಹಾರಸಿದ್ರು
ದಂಡೀನ ರಾಜಿಕೋಗಿ ನಿಂತವ್ರೇ ||೪೩||

ಹಾರರ ದಂಡೂ ಹಾರತೆ ಬಂತೂ
ಹಾರರ ದಂಡಾ ಹಾರೇ ಕಡದ್ರೂ
ಮುಗಲರ ದಂಡೂ ಮುಡುಗೇ ಬಂತೂ ||೪೪||

ಮುಗಲರ ದಂಡಾ ಮುಡುಗೇ ಕಡದ್ರೂ
ತುರುಕರ ದಂಡೂ ತುದಿಕಾಲಲಿ ಬಂತೂ
ತುರಕರ ದಂಡಾ ತುದಿಕಾಲಲಿ ಕಡಿದ್ರೂ ||೪೫||

ದಂಡಂಬು ದಂಡಟ್ಟು
ಸವ್ರಾಣೀ ಮಾಡಿರು
ಗಾಳಿ ಹವಕೇ ಹೋಗೇ ನಿಂತ್ರು ||೪೬||

ಕಳ್ಳರು ಕಾಕರು
ಮರುಸಾರಿ ನಿಂದಿರು
ಗುಂಡನಾದ್ರೆ ಹೊಡಿದವ್ರೆ ||೪೭||

ಕಿರಿಯವ್ಗೇ ತಾಗಿತು
‘ಹರಹಾರ’ ನಂದನೇ
ವಳ್ಳಯೆದ್ಯನಾದ್ರೂ ಬಿಗುದಿದಾ ||೪೮||

“ಕಳ್ಳರ ಪೋಕರ
ಮರುಸಾರಿ ನಿಂತಿರೋ
ನನ್ನಂತೆ ಗಂಡೂಸರಾದ್ರೆ ||೪೯||

ನನ್ನೆದುರಿಗೆ ಬರುತಿದ್ರಿ
ಕಳ್ಳರಾಗಿ ಮರುಸಾರಿ ನಿಂತೀ
ಗುಂಡನಾದ್ರೂ ಹೊಡುದಿರೀ ||೫೦||

ಹೆಣ್‌ ಹೆಂಗ್ಲಿಕಿಂತೂ ಕಡ್ಯೋ ನೀವು?”
ಲಂದಿಟ್ಟು ಹೇಳಿದ
“ಕೇಳಲೆ ಕೇಳೆ ಮಂಜಾ ಕುದುರೀ ||೫೧||

ಮೂರು ತಿಂಗಳಾದೀ ಮುರು ದಿವ್ಸಕ್‌ ನೆಡಿಯೇ
ನನಗೇ ನಿನುಗೇ ವಂದೇ ಸೊಡ್ಲೇ”
ಅಂದಿನ್ನೆ ಹೇಳವ್ನೇ ||೫೨||

ಒಂದು ಪತ್ರನಾರೂ ಬರದವ್ನೇ
ಕುದ್ರೀ ಕೊಳ್ಳಿಗೆ ಕಟ್ಟವ್ನೇ
ಅಲ್ಲಣ್ಣದೀರು ಯೇನ ಮಾಡೆತ್ರೋ? ||೫೩||

“ಕೇಳಲೆ ಕೇಳೋ ನನ ತಮ್ಮ,
ನಾವೂ ಮೂರು ಜನಲುಟ್ಟೀಕಂಡೀ
ನಾವಿಬ್ಬರಿನ್ನೇ ಉಳೀಬೇಕೋ?” ||೫೪||

ಜಪ್ಪಕಂತ್ರು ಹೊಯ್ಕಂತ್ರು
“ಕೇಳಲೆ ಕೇಚುಗ ನನ್ನಲಣ್ಣಾ,
ನಾನ ವಬ್ಬವಾರೂ ಸತ್ತರೆ ||೫೫||

ನೀವಿಬ್ಬರಿನ್ನೇ ಲಿದ್ದೀರಿ
ಮನಿಗೆ ನಾದ್ರೂ ಹೋಗುವ ಲಣ್ಣಾ”
ಲಂದಿನ್ನೇ ಹೇಳವ್ರೇ ||೫೬||

ಮನಿಗೇನಾದ್ರೆ ಬಂದವ್ರೆ
ಮೂರು ತಿಂಗಳಾದೀ ಮೂರು ದಿವ್ಸಕೆ ನೆಡಿತೂ
“ಕೇಳಲೆ ಕೇಳೇ ನನ್ನಾ ತಾಯೇ ||೫೭||

ಜೀಜೀಗಾರುತಿ ತಕಾಬಾರೇ”
ತಾಯಿನಾದ್ರೆ ಯೇನ ಮಾಡ್ತೂ
ಆರುತ್ಯಾರೂ ತಂದಿತು ||೫೮||

ಲಾರುತಿಯಾ ಕಂಡಿರು ನೋಡು
ಕೆಳುಗಿನಾದ್ರೆ ಲಿಳುದಿದಾ
ಲೈದಿಯನಾದ್ರೂ ಬಿಚ್ಚಿದಾ ||೫೯||

ಮರದೀ ನಾದ್ರೇ ಬಿದ್ದವ್ನೇ
ಅವ್ನೇನಾದ್ರೇ ಮೊದ್ಲೇ ಬಿದ್ದಾ
ಕುದ್ರೀ ನಾದ್ರೇ ಕಡಿಗೇ ಬಿತ್ತೂ ||೬೦||

ಯೆಯ್ಡು ಜನರಾ ಜೀವ ಹೋಯ್ತೂ
ತಾಯೀ ತಂದೇ ಜಪಲಾಕಂತ್ರೂ
ಕುದ್ರೀ ಕುತ್ತಗಿನ ಚೀಟಿ ವೋದ್ರೂ ||೬೧||

“ನನಗೇ ಕುದ್ರಿಗೆ ವಂದೇ ಸೊಡ್ಲೇ
ವಂದೇ ಸೊಡ್ಲಿಲಿ ಸುಡಬೇಕೂ”
ಲಂದೀ ನಾದ್ರೇ ಬರುದವ್ನೇ ||೬೨||

ಅದ್ರಿನ್ನೇ ಲೋದೀ ಕಂಡ್ರು
ವಂದೇ ಸೊಡ್ಲೀ ಮಾಡೇ ಸುಟ್ರು
ಲಿದ್ದಾ ಮಗುದೀರು ಮನಿಲೇ ಉಳದ್ರೂ ||೬೩||
*****

ಕೆಲವು ಪದಗಳ ವಿವರಣೆ:

ಇದ್ದಿ = ವಿದ್ಯ
ಗಾಡದಿಂದ = ಬೇಗನೆ, ಗಡಬಡೆಯಿಂದ
ಸುವ್ರಾಣಿ = ಸವರಿದರು, ನಾಶಮಾಡಿದರು
ಯೆದ್ಯ = ಲೈದ್ಯ + ಶಲ್ಯ
ಬರವು = ಬರವಣಿಗೆ
ಲ್ಹುಗೂದವ್ರೆ = ಹುಗಿದರು
ಮರುಸಾರಿ = ಮರೆಯಲ್ಲಿ
ಲೋದಿ = ಜದಿ

ಹೇಳಿದವರು: ಸೌ| ಮಾಸ್ತಿ ರಾಮನಾಯ್ಕ, ಮೂರೂರು, ವಸ್ತಿ: ಹೆಗಡೆ ಊರು.

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...