Home / ಲೇಖನ / ಇತರೆ / ವಿವಾಹ ಒಂದು ಅನುಬಂಧ

ವಿವಾಹ ಒಂದು ಅನುಬಂಧ

ವಿವಾಹ ಒಂದು ಅನುಬಂಧ. ಜನುಮ ಜನುಮದ ಸಂಬಂಧ ಎಂದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ, ಈಗ ಇದು ಒಂದು ಮಿತ್ ಎಂದು ಅನಿಸುವಷ್ಟರ ಮಟ್ಟಿಗೆ ಅರ್‍ಥ ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ, ಸರಿಯಾಗಿದ್ದರೆ ಉಳಿದುಕೊಳ್ಳುತ್ತದೆ. ಸ್ವಲ್ಪ ಬಿರುಕು ಬಿಟ್ಟರೆ ಕುಸಿದು ಬೀಳುತ್ತದೆ.

ಬಹಳ ಹಿಂದೆ ತೊಟ್ಟಿಲ ಕೂಸುಗಳಿಗೆ ವಿವಾಹಗಳಾಗುತ್ತಿದ್ದುವು. ಅದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಅವರು ದೊಡ್ಡವರಾಗುತ್ತಾ ಎಲ್ಲರೂ ಹೇಳುವುದನ್ನು ಕೇಳಿಯೇ ಈ ಸಂಬಂಧವನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಿ ಒಪ್ಪಿಕೊಂಡು ಜೀವನ ನಡೆಸುತ್ತಿದ್ದರು. ಹೆರಿಗೆಯ ಯಂತ್ರವಾಗುತ್ತಿದ್ದರು. ಇಪ್ಪತ್ತೈದು ಮೂವತ್ತು ವರುಷಗಳಾಗಬೇಕಾದರೆ ಮುದುಕಿಯರೂ ಆಗುತ್ತಿದ್ದರು. ವಿವಾಹ ಎಲ್ಲಾ ವೈರುಧ್ಯಗಳನ್ನೂ ಮೀರಿದ ಹೊಂದಾಣಿಕೆಯಾಗಿರುತ್ತಿತ್ತು.

ಕ್ರಮೇಣ ಆದ ಸಾಮಾಜಿಕ ಸುಧಾರಣೆಗಳಿಂದ ಬಾಲ್ಯವಿವಾಹ ನಿಂತುಹೋದರೂ ಮೈನೆರೆಯುತ್ತಲೇ ಹೆತ್ತವರು ಆರಿಸಿದ ಹುಡುಗನೊಡನೆ ಮದುವೆಯಾಗುತಿತ್ತು. ಇಲ್ಲಿಯೂ ಜನುಮ ಜನುಮದ ಅನುಬಂಧವೆಂದು ಒಪ್ಪಿಕೊಂಡು ಎಲ್ಲಾ ವೈರುಧ್ಯಗಳನ್ನು ಮೀರಿ ಸಾಯುವತನಕ ಈ ಬಂಧನವನ್ನು ನಿಭಾಯಿಸುತ್ತಿದ್ದರು. ಅರ್‍ಧ ಶತಮಾನದ ಹಿಂದೆ ಹೆಣ್ಣು ಮಕ್ಕಳಿಗೆ ಕಾಲೇಜಿಗೆ ಹೋಗಿ ಕಲಿಯುವ ಅವಕಾಶವಿದ್ದರೂ ವಿವಾಹ ಅಂದರೇನು ಎನ್ನುವ ಚಿಂತನೆಗೆ ಅವಕಾಶವೇ ಇಲ್ಲದಂತೆ ಹೆತ್ತವರು ಸೂಚಿಸಿದ ವರನೊಡನೆ ಮದುವೆಯಾಗುತ್ತಿತ್ತು. ಆಯ್ಕೆಯ ಅಥವಾ ವಿರೋಧಿಸುವ ಸ್ವಾತಂತ್ರ್ಯ ಇರದಿದ್ದರೂ ಒಪ್ಪಿಗೆಯೇ ಎಂದು ಕೇಳುತ್ತಿದ್ದರು. ಉತ್ತರಕ್ಕೆ ಕಾಯುತ್ತಿರಲಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವಂತೆ ಆ ತಲೆಮಾರಿನವರೂ ಈ ಸಂಬಂಧಕ್ಕೆ ಅಂಟಿಕೊಂಡಿರುತ್ತಿದ್ದರು. ಬಹಳ ಅಪರೂಪವಾಗಿ ಗಂಡ ಹೆಂಡಿರ ವಿರಸ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿತ್ತು. ಕೋರ್‍ಟು ಕಚೇರಿಗೆ ಹೋಗದೆ ಗಂಡನನ್ನು ಬಿಟ್ಟುಬರುವುದೇ ವಿಚ್ಛೇದನವಾಗಿತ್ತು. ಹೀಗೆ ಆದಾಗ ಕಷ್ಟದ ಸುಳಿಯಲ್ಲಿ ಸಿಕ್ಕಿ ಒದ್ದಾಡುವವರು ಹೆಂಗಸರೇ. ಇವೆಲ್ಲಾ ಹಳೆಯ ಕಥೆಗಳು.

ಈಗ ಮದುವೆಯ ಇಕ್ವೇಶನ್ ಬಹಳ ಬದಲಾಗಿದೆ. ಮಕ್ಕಳ ಆದ್ಯತೆ ಹಾಗೂ ಆಯ್ಕೆಯ ಮೇರೆಗೆ ಮದುವೆಗಳು ನಡೆಯುತ್ತವೆ. ಅವರ ಆಯ್ಕೆಯನ್ನು ಹೆತ್ತವರು ಮನಸ್ಸಿರಲಿ, ಇಲ್ಲದಿರಲಿ ಒಪ್ಪಿಕೊಳ್ಳಬೇಕು. ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅವಕಾಶಗಳು ಸಾಕಷ್ಟಿವೆ. ಹಿಂದಿನಂತೆ ಒಂದು ಬಾರಿ ನೋಡಿ ಒಪ್ಪುವ ಗಂಡುಗಳೂ ಇಲ್ಲ; ಹೆಣ್ಣುಗಳೂ ಇಲ್ಲ. ಹೀಗಿದ್ದರೂ ನೂರರಲ್ಲಿ ನಲ್ವತ್ತು ಐವತ್ತರಷ್ಟು ಮದುವೆಗಳು ಸೋಲುತ್ತವೆ ಯಾಕೆ ಎನ್ನುವ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಮದುವೆಗಳು ಸೋಲುತ್ತಿರುವ ಈ ಕಾಲದಲ್ಲಿ ಲಿವ್ ಇನ್ ರಿಲೇಶನ್ ಶಿಪ್‌ಗಳ ಕಡೆಗೆ ಇಂದಿನ ಜನಾಂಗದ ಮಕ್ಕಳು ವಾಲುತ್ತಿರುವುದು ಆತಂಕ ತರುವ ಸಂಗತಿಯಾಗಿದೆ.

ಯಾಕೆ ಮದುವೆಗಳು ಸೋಲುತ್ತಿವೆ? ಹಿಂದೆ ಸೋಲುಗಳಿರಲಿಲ್ಲವೇ? ಹಿಂದೆಯೂ ಅಸಮ/ವಿಷಮ ದಾಂಪತ್ಯಗಳು ಇದ್ದುವು. ಆದರೆ ಅವು ಹೊರಪ್ರಪಂಚಕ್ಕೆ ಗೊತ್ತಾಗುತ್ತಿರಲಿಲ್ಲ. ಮನೆಯ ನಾಲ್ಕು ಗೋಡೆಗಳ ಒಳಗೆ ಜಗಳ, ಹೊಡೆತ ಎಲ್ಲವೂ ಮುಚ್ಚಿಹೋಗುತ್ತಿದ್ದುವು. ಹತ್ತು ಹನ್ನೆರಡು ಮಕ್ಕಳು ಇದ್ದಾಗ ಮಕ್ಕಳ ಹೊಣೆಗಾರಿಕೆ ಪತಿ-ಪತ್ನಿಯರ ನಡುವಿನ ಎಲ್ಲ ಅಸಮಾಧಾನಗಳನ್ನೂ ಹಿಂದಕ್ಕೆ ತಳ್ಳುತ್ತಿದ್ದುವು. ಅಸಮಾಧಾನಗಳಿಗೆ ಪರಿಹಾರ ಹುಡುಕುವ ಹಿರಿಯರು ಜೊತೆಗಿದ್ದರು. ಆರ್‍ಥಿಕವಾಗಿ ಮಹಿಳೆ ಪರಾವಲಂಬಿಯಾಗಿದ್ದ ಕಾರಣ ಹೊಂದಿಕೊಂಡು ಬಾಳ್ವೆ ನಡೆಸುವ ಅಗತ್ಯವಿತ್ತು. ಇವತ್ತು ಆ ಅಗತ್ಯ ಇಲ್ಲ. ಸಮಾನ ಸ್ವಾತಂತ್ರ್ಯ, ಸಮಾನ ವಿದ್ಯಾಭ್ಯಾಸ, ಸಮಾನ ವೇತನ ಹೆಣ್ಣನ್ನು ಗಂಡಿನ ಮೇಲೆ ಅವಲಂಬಿಸುವುದರಿಂದ ತಪ್ಪಿಸಿದೆ. ಪರಸ್ಪರ ಗೌರವ ಇದ್ದರೆ ಸರಿ ಇಲ್ಲವಾದರೆ ದೂರವಾಗುವುದೇ ಮೇಲು ಎನ್ನುವ ಭಾವನೆ ಎಲ್ಲರನ್ನೂ ಆವರಿಸಿದೆ. ಹೊಂದಾಣಿಕೆಯ ಪ್ರಯತ್ನವೂ ಇಲ್ಲ. ಪ್ರಶ್ನೆಯೂ ಇಲ್ಲ. ನಾನೇನು ಕಡಿಮೆ ಎನ್ನುವ ಅಹಂ ‘ವಿವಾಹ’ ಎನ್ನುವ ಒಂದು ಮಹತ್ವದ ವಿಧಿಯ ಸೋಲಿಗೆ ಕಾರಣವಾಗಿದೆ. ಅದಕ್ಕೆ ತಕ್ಕ ಹಾಗೇ ಇವತ್ತಿನ ಕಾನೂನುಗಳೂ ಸಹಕಾರಿಯಾಗುತ್ತಿವೆ.

ವಿವಾಹ ಅಂದರೇನು? ಒಂದು ಗಂಡು ಒಂದು ಹೆಣ್ಣನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ, ನ್ಯಾಯಯುತವಾಗಿ ಒಂದು ವಿಶಿಷ್ಟ ಬಂಧನಕ್ಕೆ ಒಳಗಾಗಿಸುವುದು. ಅವರು ದೈಹಿಕವಾಗಿ ಸೇರಲು ಲೈಸನ್ಸ್ ಕೊಡುವುದು. ಮೊದಲ ಹಂತದಲ್ಲಿ ಇಷ್ಟೇ. ಇದು ಪ್ರೇಮ ವಿವಾಹವಿರಬಹುದು ಅಥವಾ ಹಿರಿಯರ ಆಯ್ಕೆಯ ವಿವಾಹವಾಗಿರಬಹುದು. ಮೊದಲು ಉತ್ಕಟವಾದ ಪ್ರೀತಿ, ದೈಹಿಕ ಆಕರ್ಷಣೆ ಇಬ್ಬರಲ್ಲೂ ಉಕ್ಕಿ ಹರಿಯುತ್ತದೆ. ಎಷ್ಟು ಸಮಯ ಹಾಗಿರಬಹುದು? ಎಲ್ಲ ಅಬ್ಬರಗಳಿಗೂ, ಉಬ್ಬರಗಳಿಗೂ ಇಳಿತ ಎನ್ನುವುದು ಇದ್ದೇ ಇದೆ. ಭರತ ಇಳಿದ ನಂತರ ವಾಸ್ತವ ಎದುರಾಗುತ್ತದೆ. ಜೀವನ ತನ್ನೆಲ್ಲಾ ಮುಖಗಳೊಡನೆ ಎದುರಾಗುತ್ತದೆ. ಮಕ್ಕಳಾಗುತ್ತವೆ; ಮನೆಯ ಜವಾಬ್ದಾರಿಗಳು ಹೆಚ್ಚುತ್ತವೆ. ಹೆಚ್ಚಿನ ಸಮಯ ಮಕ್ಕಳಿಗಾಗಿಯೇ ಮೀಸಲಾಗುತ್ತದೆ. ದೈಹಿಕ ಆಕರ್ಷಣೆ ಕಡಿಮೆಯಾಗುತ್ತದೆ. ಇಬ್ಬರೂ ದುಡಿಯುತ್ತಿದ್ದರೆ ಒಬ್ಬರಿಗೊಬ್ಬರಿಗೆ ಸಮಯ ಕೊಡುವುದೇ ಅಸಾಧ್ಯವಾಗುತ್ತದೆ. ಆದರೆ ಮಕ್ಕಳ ಬೇಕು-ಬೇಡಗಳನ್ನು ಪೂರೈಸುತ್ತಾ ಸಾಗುವಾಗ ಮಾನಸಿಕ ಅವಲಂಬನೆ ಬೆಳೆಯುತ್ತದೆ. ಮಕ್ಕಳು ಬೆಳೆಯುತ್ತ ಎದುರಾಗುವ ಸಮಸ್ಯೆಗಳು, ಅದಕ್ಕೆ ಹುಡುಕುವ ಉತ್ತರಗಳು ತಂದೆ-ತಾಯಿ ಇಬ್ಬರನ್ನೂ ಹೆಚ್ಚು ಹೆಚ್ಚು ಬೆಸೆಯುತ್ತದೆ. ಆಗ ನಿಜವಾದ ವೈವಾಹಿಕ ಸಂಬಂಧ ಬೆಳೆಯುತ್ತದೆ. ವರುಷಗಳು ಕಳೆದಂತೆ ಬಂಧನ ಬಲವಾಗುತ್ತಾ ಹೋಗುತ್ತದೆ. ಮಕ್ಕಳು ಬೆಳೆದು ಈ ಅವರವರ ದಾರಿ ಹಿಡಿದಾಗ ಎಲ್ಲವೂ ನೀರವವಾದರೂ, ಮಕ್ಕಳ ಸುತ್ತಲೇ ಸುತ್ತುತ್ತಿದ್ದ ಮಾತುಗಳು ಮೌನವಾಗುತ್ತಾ ಹೋಗಿ ಇಬ್ಬರೂ ಮೌನದ ಮೊರೆಹೋದರೂ ಒಬ್ಬರಿಗೊಬ್ಬರು ಇದ್ದೇವೆಯಲ್ಲ ಎನ್ನುವ ಭಾವ ಧೈರ್ಯ ಕೊಡುತ್ತದೆ. ಒಬ್ಬರಿಗೊಬ್ಬರು ಮಗುವಾಗುವ ಕಾಲವಿದು. ಇದೇ ವಿವಾಹ ಎನ್ನುವ ಅನುಬಂಧ. ಈ ಅನುಬಂಧವೇ ಮದುವೆಯ ವಿಧಿಗೆ ಅರ್ಥಕೊಡುವುದು.

ಯಾರ ಜೀವನವೂ ಹೂವಿನ ಹಾಸಿಗೆಯೇ ಆಗಿರುವುದಿಲ್ಲ. ಹೂವಿನ ಜೊತೆಗೆ ಮುಳ್ಳುಗಳೂ ಇರುತ್ತವೆ. ಆ ಮುಳ್ಳುಗಳನ್ನು ಬುದ್ಧಿವಂತಿಕೆಯಿಂದ ಸರಿಸಿ ಹೂವಿನ ಮೇಲೆ ನಡೆಯುವ ಪ್ರಯತ್ನ ವಿವಾಹಗಳನ್ನು ಉಳಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯ ಉಳಿಯಬೇಕಾದರೆ ಈ ವಿವಾಹದ ವಿಧಿಯನ್ನು ಉಳಿಸಬೇಕು. ಇಲ್ಲವಾದರೆ ಒಂಟಿ ಹೆತ್ತವರ ಸಂಖ್ಯೆ ಜಾಸ್ತಿಯಾಗುತ್ತದೆ. ಮಕ್ಕಳಿಗೆ ತಂದೆ-ತಾಯಿ ಇಬ್ಬರ ಪ್ರೀತಿಯೂ ಒಟ್ಟಿಗೆ ಸಿಗದಂತಾಗುತ್ತದೆ. ಸಮಸ್ಯೆಯ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ.

ಜೀವನದಲ್ಲಿ ಒಂದಲ್ಲ ಒಂದು ಬಾರಿ ಸಾಕಪ್ಪ ಈ ಬಂಧನ ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಹೋಗಿಬಿಡುವಾ ಎನ್ನುವ ನಕಾರಾತ್ಮಕ ಭಾವನೆಗಳು ಎಲ್ಲರನ್ನೂ ಕಾಡುತ್ತವೆ. ಇಂತಹ ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳುವ ಮನಸ್ಸು, ಪ್ರಯತ್ನ ಎರಡೂ ಬೇಕು. ಆಗ ಅವರನ್ನು ಬೆಸೆಯುವುದು ಮಕ್ಕಳು ಎನ್ನುವುದೂ ಸುಳ್ಳಲ್ಲ. ವಿವಾಹದ ಮಹತ್ವ ಇರುವುದೇ ಮಕ್ಕಳಲ್ಲಿ. ಮಕ್ಕಳು ವೈವಾಹಿಕ ಜೀವನದ ಒಂದು ಉಡುಗೊರೆ, ಮೊಮ್ಮಕ್ಕಳು ವೃದ್ಧಾಪ್ಯದ ಒಂದು ಸುಂದರ ಅನುಭವ. ಇದನ್ನೆಲ್ಲ ಅನುಭವಿಸಬೇಕಾದರೆ ವಿವಾಹ ಎನ್ನುವ ವಿಧಿ ಉಳಿಯಬೇಕು. ಈಗಿನವರ ಹೈಟೆಕ್ ಜೀವನ ಶೈಲಿ ವಿವಾಹವನ್ನು ಶಿಥಿಲಗೊಳಿಸಬಾರದು.

ಒಂದು ಮಾತ್ರ ನಿಜ. ಯಾರೂ ಪರಿಪೂರ್‍ಣರಲ್ಲ. ಎಲ್ಲರಲ್ಲೂ ದೌರ್‍ಬಲ್ಯಗಳಿವೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮನೋಭಾವವಿದ್ದರೆ, ಒಬ್ಬರನ್ನೊಬ್ಬರ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವ, ಅವರನ್ನು ಹಾಗೇ ಸ್ವೀಕರಿಸಿ ಪ್ರೀತಿಸುವ ಪ್ರೌಢಿಮೆಯಿದ್ದರೆ, ಇದ್ದುದರಲ್ಲಿ ಸುಖ ಕಾಣುವ ಮನೋವಿಶ್ವಾಸವಿದ್ದರೆ, ಮದುವೆಯೆಂದರೆ ದೈಹಿಕ ಆಕರ್ಷಣೆ ಮಾತ್ರ ಅಲ್ಲ. ಪರಸ್ಪರ ಮನಸ್ಸಿನ ಅವಲಂಬನೆ ಎನ್ನುವ ಅರಿವು ಇದ್ದರೆ, ಮದುವೆಯನ್ನು ಗೌರವಿಸಿ ಉಳಿಸುವ ಆತ್ಮವಿಶ್ವಾಸವಿದ್ದರೆ ಮದುವೆಗಳು ಸೋಲುವುದಿಲ್ಲ. ಬೆಳ್ಳಿಹಬ್ಬ, ಚಿನ್ನದಹಬ್ಬ, ಮತ್ತೂ ಬದುಕಿದ್ದರೆ ವಜ್ರಮಹೋತ್ಸವ, ಪ್ಲಾಟಿನಂ ಉತ್ಸವ ಎಲ್ಲವನ್ನೂ ಆಚರಿಸಬಹುದು. ಇಲ್ಲದಿದ್ದರೆ ಯಾರಿಗೂ ಯಾರೂ ಇಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...