ಸಾವರ್ ಜನಕೆ ಸಾವರ್ ದೇವ್ರು !
ಬಡವನ ದೇವ್ರು ವೊಟ್ಟೆ !
ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು !
ಸತ್ಯಕ್ ನಾ ಬಾಯ್ ಕೊಟ್ಟೆ ! ೧
ತಿನ್ನದ್ ಕಲ್ಲಿನ್ ದೇವರ್ ಮುಂದೆ
ತಿಂಡಿ ತುಂಬಿದ ತಟ್ಟೆ !
ಕಾಲಿ ತಿಂದು ಕಾಲಿ ತಿಂದು
ಕೆರಳುರಳೈತೆ ವೊಟ್ಟೆ ! ೨
ಬಡವನ್ ದೇವ್ರನ್ ಕೆರಳಿಸ್ಬಾರ್‍ದು-
ಲೋಕಕ್ ಒಳ್ಳೇದಲ್ಲ !
ಬಡವನ್ ದೇವ್ರಿಗ್ ನೆರಳಿಸ್ತಿದ್ರೆ-
ಲೋಕಕ್ ಬೆಳಕೇ ಇಲ್ಲ ! ೩
ನೀ ಮುಗ್ದ್ ಪೂಜೇ ಮಾಡೋ ದೇವ್ರು
ಮುನ್ನೂರು ಮುವ್ವತ್ ಕೋಟಿ
ಇದ್ರೂ, ಬಡವನ್ ದೇವ್ರೀಗೂನೆ
ತೋರ್‍ಸು ಆ ಪೈಪೋಟಿ. ೪
ತಿನ್ಲೂನಾರ್‍ವು ದುಡಿಲೂನಾರ್‍ವು
ಕಲ್ಲಿನ್ ದೇವರ್ ಗುಂಪು !
ಬಡವನ್ ದೇವಿರ್‍ಗ್ ನೀನ್ ಇಕ್ಕಿದ್ರೆ
ನಿನ್ಗೆ ಬಾಳ ತಂಪು ! ೫
ನಂ ದೇವರ್‍ಗೆ ಬೋನ ನೀಡು-
ದರ್‍ಮ ಬರತೈತ್ ನಿಂಗೆ ;
ದುಡ್ಡಿನ್ ಡಬ್ಬಿ ಕರಗೀತ್ ಅಂತ
ಸುಂಕೆ ಕುಂತ್ರೆ ಯೆಂಗೆ ? ೬
ಅಗ್ನಾನೀಗೆ ಮೆಲ್ಗ್ ಯೋಳ್ತಾರೆ
ಎಂಟ್ ಅತ್ತ್ ಸಾರಿ ಬುದ್ದಿ;
ಕೇಳ್ದೆ ವೋದ್ರೆ ಗೊತ್ತೈತಲ್ಲ-
ಯಿಡಕೊಂಡ್ ಮಾಡ್ಸೋದ್ ಒದ್ದಿ ! ೭
ಬಡವನ್ ದೇವ್ರನ್ ಕೆಣಕ್ಲೆ ಬಾರ್‍ದು-
ನೀ ಕಂಡಿಲ್ ಅದರ್ ಯೇಟ !
ಬಡವನ್ ದೇವ್ರು, ಲೋಕಾನ್ ನುಂಗೋ
ಜೋಲಾಮುಕಿ ! ಬೇಟ ! ೮
ಬಡವನ್ ದೇವ್ರು ಗರ್‍ಜಿಸ್ತಿದ್ರೆ
ಕೇಳಿಸ್ತಿದ್ರ್, ಆ ಸದ್ದು-
ಕಲ್ಲಿನ್ ದೇವ್ರು ಗಿಲ್ಲಿನ್ ದೇವ್ರು
ಪೇರಿ ಕಿತ್ತಾರ್ ಎದ್ದು! ೯
ಬೆನ್ನಿನ್ ಚರ್‍ಮ ಬದ್ರಾಗ್ ಇರಲಿ !
ಬಡವನ್ ದೇವ್ರಿಗ್ ಬೊಗ್ಗು !
ಕಲ್ಲಿನ್ ದೇವಿರ್ಗ್ ಉಲ್ನೆ ತಿನ್ಸಿ
ಸದ್ಯಕ್ ಉಳದೇಂತ್ ಯಿಗ್ಗು ? ೧೦
ಲೋಕಕ್ ಸಾಂತಿ-ಬಡವನ್ ದೇವ್ರು
ಮಲಗಿರೋವರಗೂನೆ !
ಬಡವನ್ ದೇವ್ರು ಎದ್ದ್ ನಿಂತಾಂದ್ರೆ
ಪ್ರಳಯ ಅದಕೇ ತಾನೆ ! ೧೧
ಪ್ರಳಯ ಬಂದ್ರೆ ಯಾರ್‍ಗ್ ಏನ್ ಸುಕ ?
ನಾಸ-ಅರಸೂ ಆಳೂ !
ಸಾಯೋರ್ ಜತೆಗೇ ಸಾಯೋ ಬದಲು
ಎಲ್ಲಾರ್ ಸಂಗ್ಡ ಬಾಳು ! ೧೨
*****



















