ನಾನೊಬ್ಬ ಭಯೋತ್ಪದಕ
ಏಕೆಂದರೆ ನಾನೊಬ್ಬ ಮುಸಲ್ಮಾನ
ಹೀಗೆಂದು ಲೋಕದ ಠೇಕೇದಾರ
ಅವನು ಹೇಳುತ್ತಿದ್ದಾನೆ.
ನಾನೊಬ್ಬ ಮಾನವ ಪೀಡಕ
ಏಕೆಂದರೆ ನಾನು ಕಾಶ್ಮೀರಿ
ಹಾಗೆಂದು ಸೂತಕದ ಮನೆವಾಸಿ
ಅವನು ಹೇಳುತ್ತಿದ್ದಾನೆ.
ನಾನೊಬ್ಬ ಹಿಂಸ್ರಕ ಪ್ರಾಣಿ
ಏಕೆಂದರೆ ಬದುಕಿಗಾಗಿ ಹೋರಾಡುತ್ತೇನೆ
ಹಾಗೆಂದು ಮದ್ದಿನ ಮನೆಯಲ್ಲಿ ನಿಂತ
ಅವನು ಹೇಳುತ್ತಿದ್ದಾನೆ.
ನಾನೊಬ್ಬ ಕ್ರೂರಿ, ಕೊಲೆಗಡುಕ
ಏಕೆಂದರೆ ಆತ್ಮರಕ್ಷಣೆ ಬೇಕೆನ್ನುವೆ
ಹಾಗೆಂದು ಮನುಜರ ಸುಟ್ಟ ಬೂದಿ ಬೆಟ್ಟ
ಎಲುಬುಗಳ ಗುಡ್ಡೆಯ ಮೇಲೆ ನಿಂತ
ಅವನು ಹೇಳುತ್ತಿದ್ದಾನೆ.
ನಾನೊಬ್ಬ ಯುದ್ಧಕೋರ
ರೊಟ್ಟಿಗಾಗಿ ಮಾರಿಕೊಳ್ಳಲಿಲ್ಲ.
ಹಾಗೆಂದು ನೆರೆಯವರ ತುತ್ತು ಕಿತ್ತು
ರಕ್ತದ ಹೊಳೆ ಹರಿಸುತ್ತಿರುವ
ಅವನು ಹೇಳುತ್ತಿದ್ದಾನೆ.
*****



















