ಘಮಟುಗಟ್ಟಿದ ಅಡುಗೆ ಕೋಣೆಗಳಿವೆ
ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ
ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ!
ಸೂರ್ಯ ಕಿರಣಗಳೇ ಕಾಣದ ನಮ್ಮ
ಕತ್ತಲು ಕೋಣೆ ಗವಿಗೊಮ್ಮೆ
ನೀನು ದಯಮಾಡಿಸಬಾರದೇ?
ಪೇಟೆಗೆ ಹೋದ ಮಗ
ಎನ್‌ಕೌಂಟರ್‌ನಲ್ಲಿ ನಲುಗಿದ
ಯುದ್ಧಕ್ಕೆ ಹೋದ ಪತಿಯ
ರಕ್ತಸಿಕ್ತ ಬಟ್ಟೆಗಳೇ ಹಿಂತಿರುಗಿದವು.
ಅತ್ಯಾಚಾರಕ್ಕೊಳಗಾದ ಮಗಳು
ಅಪಮಾನ ಸಹಿಸದೇ ನೇಣಿಗೆ
ಶರಣಾದಳು ಪ್ರಭುವೇ
ನನ್ನ ನೋವಿನ ಆಳ ಅರಿಯಲು
ನೀನೊಮ್ಮೆ ಹೆಣ್ಣಾಗಿ ಅವತರಿಸಬಾರದೇ?
ತುತ್ತುಗಳಿಸಲು ಹೊರಗೆ ಬಂದರೆ
ಪರದೆಯ ಹಿಂದೆ ದೂಡುವ
ಧರ್ಮದ ಕಾಣದ ಕೈಗಳು
ಬಂದೂಕು ಗುರಿಯಿಟ್ಟಿದೆ ನನ್ನ ತಲೇ
ಸಣ್ಣ ಶಬ್ದಕ್ಕೂ ಬೆಚ್ಚಿಬೀಳುವೆ
ಬಿಳಿಚಿಕೊಳ್ಳುವೆ. ಉಸಿರು ಗಕ್ಕನೆ
ನಿಂತು, ಕರುಳು ಬಾಯಿಗೆ ಬರುವುದು
ಎಲ್ಲ ಕಳೆದುಕೊಂಡಿರವೆ.
ಹೇಗೆ ಬದುಕಲಿ ಹೇಳು ಪ್ರಭುವೇ?
ಯುದ್ಧ ಸಾರಿದ್ದಾನೆ ಗಡಿಯಲಿ
ಲೋಕದ ಠೇಕೇದಾರನು
ಹೇಗೆ ವಿವರಿಸಲಿ ನಿನಗೆ
ತಲ್ಲಣದ ಕ್ಷಣಗಳನು
ನನ್ನ ನೋವಿನ ಪರಿಹರಿಯಲು
ಶಬ್ದ ಮೀರಿದ ನೋವ ತಿಳಿಯಲು
ಓ ಪ್ರಭುವೇ!
ನೀನೊಮ್ಮೆ ಹೆಣ್ಣಾಗಬಾರದೇ?
*****



















