ದೂರದಿಂದ ನೋಡಿದರೆ ಬದುಕು
ಅದೆಷ್ಟು ಸುಂದರ?
ಬಿಚ್ಚಿ ಒಂದೊಂದೇ ಪದರು
ಮುಟ್ಟಿ ನೋಡಿದರೆ ಹೂರಣ
ಕಿಚ್ಚು ಮುಟ್ಟಿದ ಸಂಕಟ
ರಕ್ಕಸನ ವಿಷದ ಹಲ್ಲು
ಚುಚ್ಚಿ ಮಾಡಿದ ಗಾಯ
ಹೆಪ್ಪು ಗಟ್ಟಿದ್ದ ಕೆಂಪು ರಕ್ತ
ತೆರೆದು ತೋರಿದರೆ ಲೋಕಕೆ
ಏಳುವುದು ನನ್ನಡೆಗೇ ಬೆರಳು
ಪಕಕ್ಕೆ ವಾಲಿದ ಕಣ್ಣೀರಿನ
ಉಪ್ಪು ಹನಿ ಹರಳುಗಟ್ಟಿ
ಶಿಲೆಯಾಗಿ ನಿಂತ ಅಹಲ್ಯೆಗೆ
ಕನವರಿಕೆ, ಬೈಗುಳ ಯಾತನೆ
ಹರಿದು ಸೋರಿದ ರಕ್ತಕೆ
ಲೀಟರ್ಗಳ ಲೆಕ್ಕ ಇಟ್ಟವರ್ಯಾರು?
ಹಗಲಿರುಳು ದುಡಿದ ಅವಳ ಶ್ರಮಕ್ಕೆ
ರುಪಾಯಿಗಳ ಲೆಕ್ಕ ಕಟ್ಟುವವರಾರು?
ಹಸಿ ಹಸಿಯಾಗಿ ಮೆತ್ತಿದ
ಅಪಮಾನದ ಕೆಸರು
ಕೊಡ ದೂರ ನಿಂತರೂ
ಸಿಡಿಸಿ, ಗಹಗಹಿಸಿ ನಗುವ
ಕಿರಾತಕ ನಗುವಿನಲಿ ಜೀವರಸವಿಲ್ಲ.
ಅಪಮಾನಕ್ಕೆರಡು ಹನಿಸುರಿಸಿ
ಏತಕೋ ಏಳಲಾಗದು
ಉತ್ತರವಿಲ್ಲ ನಾಲಿಗೆಗೆ
ಬಾಯಿಗೆ ಬೀಗ ಜಡಿದಿದೆ.
ಶಬ್ದಕ್ಕೆ ನಾಚಿ, ಮಾತು ಸಮಾಧಿ
ಬರೀ ಮೌನ ಪ್ರತಿರೋಧ
ಕೆಲವೊಮ್ಮೆ ಗೊಣಗಾಟ ಮಾತ್ರ.
*****


















