ಒಮ್ಮೆ- ಅಕ್ಷರ ಮಹಾರಾಜ ಸಭೆಯ ಮಧ್ಯದಲ್ಲಿ ವಿನೋದಕ್ಕಾಗಿ “ಕೋಳಿ ಮೊದಲೋ? ಮೊಟ್ಟೆ ಮೊದಲೋ?? ಇದನ್ನು ಜಾಣ್ಮೆಯಲ್ಲಿ ಉತ್ತರಿಸಬೇಕು. ಇಲ್ಲವಾದರೆ ತಲೆ ದಂಡ ಖಂಡಿತ” ಎಂದು ಆಸ್ಥಾನಿಕರೆಲ್ಲರನೂ ಕೇಳುತ್ತಾ ಹೋದ.
ಒಬ್ಬ ಪಂಡಿತ ಎದ್ದು ನಿಂತು – “ಪ್ರಭು ಕೋಳಿ ಮೊದಲು, ಕೋಳಿ ಇದ್ದರಲ್ಲದೇ ಮೊಟ್ಟೆ ಉತ್ಪತ್ತಿಯಾಗುವುದು” ಎಂದ. ಅಲ್ಲಿದ್ದವರೆಲ್ಲಗೊಳ್ಳನೆ ನಕ್ಕರು.
ಅಲ್ಲಿದ್ದ ಕವಿಯೊಬ್ಬ ಎದ್ದು ನಿಂತು “ಪ್ರಭು… ಮೊಟ್ಟೆ ಮೊದಲು. ಮೊಟ್ಟೆಯಿದ್ದರಲ್ಲವೇ ಕೋಳಿ ಜನ್ಮಿಸುವುದು…” ಎಂದು ವಾದ ಮಂಡಿಸಿದ.
ಅಲ್ಲಿದ್ದವರೆಲ್ಲ ಮತ್ತೇ ಬಿದ್ದು ಬಿದ್ದು ನಕ್ಕರು.
ಇನ್ನೊಬ್ಬ ಪಂಡಿತ ಎದ್ದು ನಿಂತು “ಪ್ರಭು… ಕೋಳಿ ಮತ್ತು ಮೊಟ್ಟೆ ಏಕಕಾಲಕ್ಕೆ ಅಸ್ಥಿತ್ವಕ್ಕೆ ಬಂದಿವೆ. ಇಲ್ಲಿ ಯಾವುದು ಮೊದಲು ಯಾವುದು ಆನಂತರ ಎನ್ನುವುದು ಮುಖ್ಯವಲ್ಲ. ಕೋಳಿ ಮತ್ತು ಮೊಟ್ಟೆ ನಮಗೆ ಎರಡೂ ಮುಖ್ಯ” ಎಂದ.
ಆಸ್ಥಾನಿಕರೆಲ್ಲ ತಲೆದೂಗಿ ಕಣ್ಣು ಕಿವಿ ಮೂಗು ಅರಳಿಸಿ ಕುಳಿತರು.
ಅನುಭಾವಿಯೊಬ್ಬ ಎದ್ದು ನಿಂತು “ಮಹಾಪ್ರಭು… ಕೋಳಿ ಎನ್ನುವುದೂ ಸತ್ಯ ಮೊಟ್ಟೆ ಎನ್ನುವುದೂ ಸತ್ಯ. ಯಾವುದು ಮೊದಲು ಯಾವುದು ಅನಂತರ ಎನ್ನುವುದೆಲ್ಲ ಗೊಂದಲ…” ಎಂದು ವಾದ ಮಂಡಿಸುತ್ತಾ ನಿಂತ.
ಅಕ್ಷರ ಮಹಾರಾಜರದ್ದು ತಲೆ ಕೆಟ್ಟು ಹೋಯಿತು.
ಅಷ್ಟರಲ್ಲಿ- ಬೀರಬಲ್ಲ ಎದ್ದು ನಿಂತು ಮಹಾರಾಜರಿಗೆ, ಸಭೆಗೆ, ವಂದಿಸಿ. “ಮಹಾಪ್ರಭು ದೇವರು ಆರಂಭದಲ್ಲಿ ಅನಂತ ಸೃಷ್ಟಿ ಕ್ರಿಯೆಗಳಲ್ಲಿ ಪಕ್ಷಿಗಳನ್ನು ಮೊದಲು ಸೃಷ್ಠಿಸಿದ! ಆ ಪಕ್ಷಿ ಪ್ರಭೇದಗಳಲ್ಲಿ ಕೋಳಿಯೂ ಒಂದು ಎಂದು ಬ್ರಹ್ಮಾಂಡ ಸೃಷ್ಠಿ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ಕೋಳಿಯಿಂದ ಮೊದಲು ಮೊಟ್ಟೆ ! ನಂತರ ಮೊಟ್ಟೆಯಿಂದ ಕೋಳಿ ಹೀಗೆ ಸೃಷ್ಟಿ ಪ್ರತಿ ಸೃಷ್ಠಿಯಾಗುತ್ತಾ ನಿರಂತರವಾಗಿ ಸಾಗಿದೆಯೇ ವಿನಹ… ಕೂದಲು ಸೀಳುವ ಕೆಲಸದಿಂದ ಯಾರಿಗೆ ಲಾಭವಿಲ್ಲ… ಕೋಳಿ ಮೊದಲೋ ಮೊಟ್ಟೆ ಮೊದಲೋ… ಎನ್ನುವ ಪ್ರಶ್ನೆಯೇ ಅಲ್ಲ! ಆದ್ದರಿಂದ – ಗತ್ತಿನಲ್ಲಿ ಕೋಳಿ ಮೊದಲು, ಕೋಳಿಯಿಂದ ಮೊಟ್ಟೆ ಅನಂತರ ಬಂದಿದೆ… ಅದಕ್ಕೆ ಸೃಷ್ಠಿ ಪುರಾಣ ಕಥೆಯೇ ಮೂಲ ಆಧಾರ..” ಎಂದು ತನ್ನ ವಾದ ಮಂಡಿಸುತ್ತಾ ನಿಂತ.
“ಶಹಭಾಶ್… ಬೀರಬಲ್ಲ….! ನಿನ್ನ ವಾದ ಪ್ರೌಢಿಮೆ, ಜಾಣತನ, ನಿನ್ನ ತರ್ಕ ವಿನೋದ ಸದಾ ಚೈತನ್ಯದ ಚಿಲುಮೆ. ಮೆಚ್ಚಿದೆ. ನಿನ್ನ ವಾದವನ್ನು ನಾನೂ ಅನುಮೊದಿಸಿದ್ದೇನೆ” ಎಂದು ಸ್ವತಃ ಪ್ರಭುಗಳೇ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಉಳಿದವರೆಲ್ಲ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಸಭೆಯು ಮುಕ್ತಾಯವಾಗಿತು.
*****


















